ಕವಿತೆ
ಕನ್ನಡದ ದಿವ್ಯೋತ್ಸವ
ವೀಣಾ. ಎನ್. ರಾವ್
ಕನ್ನಡದಾ ಮನಗಳೆ ಎದ್ದು ನಿಲ್ಲಿ
ಹರಿಸೋಣ ಅಮೃತದ ಸುಧೆಯನ್ನಿಲ್ಲಿ
ಸಿರಿಗನ್ನಡದ ಶರಧಿಯೊಳಗಿನ ಮಾಧುರ್ಯ
ಸವಿದು ನೋಡಲು ಬೇಕು ಔದಾರ್ಯ !
ಬೆನ್ನೀರ್ ಮುನ್ನೀರ್ ಪನ್ನೀರ ಸಿಂಚನಕೆ
ಧ್ಯಾನಸ್ಥ ತುಷಾರ ಗಿರಿಯ ಸಿಂಚನಕೆ
ಕನ್ನಡದಾ ಮಣ್ಣಲಿ ಚಿಗುರೊಡೆದಾ ಹಸಿರೇ
ಶತಮಾನದ ಸಂಸ್ಕೃತಿಗೆ ನೀನಿದ್ದರೆ ಊಸಿರೇ !
ಮೈಲಿ ಮೈಲಿಗೂ ಕನ್ನಡದಾ ಶೈಲಿಯು
ಮೂಡಿದೆ, ಕೂಡಿದೆ ಪೃಥ್ವಿಯ ಕೈಯಲ್ಲಿಯು
ಮುಕುಟ ಮಣಿಯು ಎಂದೂ ನರ್ತಿಸುತ್ತಿರುವುದಲ್ಲಿ
ಹೊನ್ನುಡಿಯ ಪಾಂಚಜನ್ಯ ಮೊಳಗುತಿಹುದಲ್ಲಿ !
ಮರೆಮಾಡದಿರು ಪರಕೀಯರೆದುರು ನಿನ್ನ ಕನ್ನಡ
ಸರಳ ವಿರಳವಾಗಲು ಬಿಡದಿರು ನಿನ್ನ ಕನ್ನಡ
ಕಾವ್ಯದ ಕಲೆಗಳಿಗೆ ರಸಸೃಷ್ಟಿ ಈ ಕನ್ನಡ
ಭಾರತಾಂಬೆಯ ಹೆಗ್ಗಳಿಕೆಗೆ ಹೊಸ ಉಕ್ತಿ ಈ ಕನ್ನಡ !
ಕನ್ನಡವೆಂಬ ದಿವ್ಯೋತ್ಸವ
ಆಗಲಿ ನಿತ್ಯೋತ್ಸವ
ಕನ್ನಡವೆಂಬ ದಿವ್ಯೋತ್ಸವ ಆಗಲಿ ನಿತ್ಯೋತ್ಸವ !!
***************************