ಕವಿತೆ
ನಮ್ಮ ಮನೆ
ಡಾ. ಅರಕಲಗೂಡು ನೀಲಕಂಠ ಮೂರ್ತಿ
ಅರಮನೆಯಂತಿಲ್ಲ ಈ ನನ್ನ ಮನೆ
ಮಧ್ಯಮವರ್ಗದ
ಅತೀ ಸಾಮಾನ್ಯ ಅನುಕೂಲದ
ಸಣ್ಣದೊಂದು ಸೂರು ಅಷ್ಟೆ!
ಹಜಾರವಿದೆ
ಅದೂ ಮಧ್ಯಮ
ಒಂದೆರಡು ರೂಮು
ತಲೆಯಿಂದ ಕಾಲ ಉದ್ದುದ್ದ
ಧಾರಾಳ ನೀಡುವಷ್ಟು!
ಊಟಕ್ಕೆ ನೆಲ
ಮತ್ತು ಅಡುಗೆಗೊಂದು ದೊಡ್ಡ ಬಿಲ!
ಬನ್ನೀ ಸ್ವಾಮಿ
ಯಾರು ಬೇಕಾದರೂ ಬನ್ನಿ
ಎಷ್ಟು ಜನರಾದರೂ ಬನ್ನಿ
ಒಳಗೆ ಹಿಡಿಸುವಷ್ಟು…
ಅಥಿತಿಗಳಾಗಿ
ಅಥವಾ ಹಿತೈಷಿಗಳಾಗಿ
ಸ್ನೇಹದಿಂದ…
ಬಂದು ಇದ್ದು ಹೋಗಿ
ನಿಮಗಿಷ್ಟವಾದಷ್ಟು ದಿನ
ನೆಮ್ಮದಿಯಿಂದ…
ದಿನದಿನವೂ ಸುತ್ತಿ ಬನ್ನಿ
ನಮ್ಮೂರ ಸುತ್ತಮುತ್ತ
ಅನತಿ ದೂರದಲ್ಲೇ ಇವೆ
ಅನೇಕ ಪ್ರವಾಸಿ ಸ್ಥಳ
ಕಣ್ಣು ತುಂಬಿಸಿಕೊಂಡು ಬನ್ನಿ ಎಲ್ಲ
ಊರೊಳಗೆ ಬೀಡು ಬಿಟ್ಟಿರುವ ಅನೇಕಾನೇಕ ಥರದ ಮೇಳ…
ಕಾಯ್ದಿರುವೆವು ದಿನವೂ ನಿಮಗಾಗಿ
ನಮ್ಮದೇ ಮನೆಯ ನಮ್ಮ ಸಮ ಊಟಕ್ಕೆ
ಮತ್ತು ಹಂಚಿಕೊಳ್ಳರಿ
ನಮ್ಮದೇ ಹಜಾರ ಕೊಠಡಿ
ನಿಮ್ಮ ನಿಶ್ಚಿಂತೆಯ ಶಯನಕ್ಕೆ…
ಹೊರಡುವ ದಿನ
ಹೊರಡಿ ತೃಪ್ತಿ ನೆಮ್ಮದಿಯಲಿ
ನಮಗೂ ನಿಮಗೂ ಇರಲಿ
ವಿಶ್ವಾಸ ಮೊದಲಿನಂತೆ ಈಗಲೂ
ಇನ್ನೂ ಖುಷಿ ಈಗದು ಮತ್ತೂ ಹೆಚ್ಚಿದ್ದರೂ…
ಹಾಗೂ ಬಿಟ್ಟು ಹೋಗಿ ಎಲ್ಲ
ಒಳಾಂಗಣ ಇದ್ದ ಹಾಗೇ ಮೊದಲು
ಅಲ್ಲಲ್ಲಿ ಗೋಡೆ ಕಟ್ಟುವ ಬದಲು…
ಮತ್ತು…ಉಳಿಸಿ ಹೋಗದಿರಿ
ನಮ್ಮೊಳಗೆ ಕರಾಮತ್ತಿನ ಕಿಷ್ಕಿಂಧ…
******************************
ಕವಿತೆ ಚೆನ್ನಾಗಿದೆ. ಅಭಿನಂದನೆಗಳು
Good poem
ಚೆನ್ನಾಗಿದೆ ಕವನ