ಕಾಯಕದ ಮಹತ್ವ.

ಲೇಖನ

ಕಾಯಕದ ಮಹತ್ವ.

ಜಯಶ್ರೀ ಭ.ಭಂಡಾರಿ.

Shri Shivakumar Swami's death: Tumakuru soaks in 'anna dasoha' spirit- The  New Indian Express

ದಾಸೋಹ ಕಾಯಕವೆಂಬ ನಾಣ್ಯದ ಇನ್ನೊಂದು ಮುಖ.ಸಮಾಜದಲ್ಲಿ ಸಂಪತ್ತು ಉತ್ಪತ್ತಿಯಾಗಲು ಸತ್ಯಶುದ್ಧ ಕಾಯಕ ಬೇಕು.ಆದರೆ,ಸಂಪತ್ತು ಕೇಂದ್ರೀಕತವಾದರೆ ಎಲ್ಲಾ ಬಗೆಯ ಅಸಮಾನತೆಗಳು ಹುಟ್ಟುತ್ತವೆ.ಆದ್ದರಿಂದ ಬಸವಾದಿ ವಚನಕಾರರು ದಾಸೋಹ ತತ್ವವನ್ನು ಆವಿಷ್ಕರಿಸಿ ಆಚರಣೆಯಲ್ಲಿ ತಂದರು.ಅಣ್ಣನವರ ಸುಪ್ರಸಿದ್ಧ ವಚನ “ಕಾಗೆಯೊಂದಗುಳ ಕಂಡಡೆ ಕೂಗಿ ಕರೆಯದೆ ತನ್ನ ಬಳಗವ….”. ಸಮಾಜದಲ್ಲಿ ಸಂಪತ್ತಿನ ವಿತರಣೆಯಾಗಲೇಬೇಕೆಂದು ವಿಧಿಸುವ ನಿಯಮ. ಕಾಯಕ ಸಾರ್ಥಕವಾಗುವದೇ ದಾಸೋಹದಲ್ಲಿ.ಆದ್ದರಿಂದಲೇ “ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ್ಯ” ಎಂದು ದೇವರಲ್ಲಿ ಪ್ರಾರ್ಥಿಸುತ್ತಾರೆ ಅಣ್ಣ.”ತನು ಮನ ಬಳಲಿಸಿ ತಂದು ದಾಸೋಹ ಮಾಡುವವ”ರನ್ನು ಸದ್ಭಕ್ತರೆನ್ನುತ್ತಾರೆ ಅಣ್ಣ. ಸಂಪತ್ತನ್ನು ಕೂಡಿಡುವ ,ಮಣ್ಣಿನಲ್ಲಿ ಹೂತಿಡುವ,ಕಂಗಳಲ್ಲಿ ನೋಡಿ ಹಿಗ್ಗುವ ಮರುಳರನ್ನು ಎಚ್ಚರಿಸಿ “ಕೂಡಲ ಸಂಗನ ಶರಣರಿಗೊಡನೆ ಸಂಪತ್ತನ್ನು ಸವೆಸಬೇಕು” ಎಂದು ಹೇಳುತ್ತಾರೆ.ಇನ್ನೊಂದು ಲೋಕೋತ್ತರ ವಚನದಲ್ಲಿ:


” ನಾನ್ಯಾವ ಕರ್ಮವ ಮಾಡಿದರೆಯೂ
ನೀ ಕೊಟ್ಟ ದ್ರವ್ಯವ ನಿಮಗಲ್ಲದೆ ಮತ್ತೊಂದು ಕ್ರೀಯೆಯ ಮಾಡೆನು
ನಿಮ್ಮ ಸೊಮ್ಮಿಂಗೆ ಸಲಿಸುವೆನು ನಿಮ್ಮಾಣೆ
ಕೂಡಲ ಸಂಗಮದೇವಾ”


ಎಂದು ಹೇಳುವಾಗ ಅಸಂಗ್ರಹಾದುದನ್ನು ಸ್ಪಷ್ಟವಾಗಿ ವಿವರಿಸುತ್ತಾರೆ.ಆದ್ದರಿಂದಲೇ ಅಣ್ಣನವರನ್ನು 12 ನೇ ಶತಮಾನದ ಮಾರ್ಕ್ಸ ಎಂದು ಕೆಲವರು ಕರೆಯುತ್ತಾರೆ.

ಬಸವಣ್ಣನವರ ಪ್ರಕಾರ ಐಹಿಕ ವಸ್ತುಗಳ ಮೋಹಕ್ಕೆ ಒಳಗಾಗುವವನು ಭವಿ. ಐಹಿಕ ವಸ್ತುಗಳೆಲ್ಲ ಶಿವನ ಪ್ರಸಾದವೆಂದು ಭಾವಿಸಿ ದಾಸೋಹಂ ಭಾವದ ಮೂಲಕ ಇವೆಲ್ಲ ಜಗತ್ತಿನ  ಜೀವಿಗಳಿಗೆ ಸೇರಿದ್ದು ಎಂದು ನಂಬಿದವನು ಭಕ್ತ. ಲಿಂಗಧಾರಣೆಯಿಂದ ಶರೀರವು ಭಕ್ತನ ಹಾಗೆ ಕಾಣಬಹುದೇ ಹೊರತು ವ್ಯಕ್ತಿ ಭಕ್ತ ಆಗಲಾರ. ಭಕ್ತಿ ಎಂಬುದು ಸರ್ವ ಸಮತ್ವ ಭಾವದಿಂದ ಬರುವಂಥದ್ದು.ಅಂತೆಯೇ ಬಸವಣ್ಣನವರು ‘ಎನ್ನ ತನು ಭಕ್ತ, ಮನ ಭವಿ’ ಎಂದು ಸೂಚ್ಯವಾಗಿ ಖಂಡಿಸಿದ್ದಾರೆ.ಯಾರು ಆತ್ಮಸಾಕ್ಷಿಯಾಗಿ ಬದುಕುವದಿಲ್ಲವೋ ಅವರೇ ಭವಿಗಳು ಎಂದು ಅವರು ಸೂಚಿಸಿದ್ದಾರೆ.

ಕಾಯಕದಿನದ ಬಂದ  ಹಣವನ್ನು ದಾಸೋಹಕ್ಕೆ ವಿನಿಯೋಗಿಸುತಿದ್ದ ಕಕ್ಕಯ್ಯನನ್ನು ಪರೀಕ್ಷೀಸಲೆಂದು  ಬಂದ ಶಿವ ಕಂಕರಿಯ ನಾದಕ್ಕೆ ಮಾರುಹೋಗಿ ಕುಣಿಯತೊಡಗಿದ.ಕಕ್ಕರಿಯ ಕಕ್ಕಯ್ಯ ಶಿವ ಕುಣಿಯುವದನ್ನು ನೋಡಿ ಕಂಕರಿಯನ್ನು ಇನ್ನಷ್ಟು ಜೋರಾಗಿ ಸೊಗಸಾಗಿ ಬಾರಿಸಲು ಇಬ್ಬರಲ್ಲೂ ಸ್ಪರ್ಧೆ ಏರ್ಪಟ್ಟಿತು.ಮೂರು ದಿನಗಳ ನಿರಂತರ ನರ್ತನದ ಕೊನೆಗೆ ಶಿವನೇ ಸೋತು ಕುಣಿಯಲಾರದೆ ನೆಲಕ್ಕೊರಗಿದ.ಅವನ ಕೈ ಹಿಡಿದು ಎಬ್ಬಿಸಿದ ಕಕ್ಕಯ್ಯ ಕುಣಿಯುವಂತೆ ಹೇಳಿದ.ಜಂಗಮರೂಪದ ಶಿವ ತನ್ನ ನಿಜರೂಪ ತೋರಿ “ಈ ಲೋಕದ ಹಂಗು ಸಾಕು,ನನ್ನ ಜೊತೆ ಕೈಲಾಸಕ್ಕೆ ಬಾ” ಅಂದನಂತೆ.ಶಿವ ಮತ್ತು ಕೈಲಾಸ ಎರಡನ್ನೂ ಧಿಕ್ಕರಿಸಿದ ಕಕ್ಕಯ್ಯ “ಮೂರು ದಿನ ತಪ್ಪಿಹೋದ ಕಾಯಕದ ಆಯ ಕೊಡದೆ ನಿನ್ನನ್ನು ಬಿಡಲಾರೆ” ಎಂದನಂತೆ. ನಾನೂ ಮೂರು ದಿನ ಕುಣಿದೆ.ನಿಜವಾಗಿ ನೋಡಿದರೆ ನೀನೆ ನನಗೆ ಕಾಯಕದ ಪ್ರತಿಫಲವನ್ನು ಕೊಡಬೇಕು” ಎಂದ ಶಿವ.”ಕಾಯಕ ಸಿಕ್ಕುವದು ಈ ಭೂಮಿಯಲ್ಲಿ ಇರುವವರಿಗೆ ಮಾತ್ರ, ನಿನ್ನ ಕೈಲಾಸದವರು ಸೋಮಾರಿಗಳು, ನೀನು ಕಾಯಕವೆಂಬ ಪವಿತ್ರ ಭಾವನೆಯಿಂದ ಕುಣಿಯಲಿಲ್ಲ.ನನ್ನನ್ನು ಪರಿಕ್ಷಿಸಲು ಕುಣಿದೆ….ಕಾಯಕ ತೆಗೆದುಕೊಂಡು ನೀನು ಯಾರಿಗಾಗಿ ದಾಸೋಹ ಮಾಡುವೆ? ನಿನಗೆ ಕಾಯಕ ಬೇಕಾಗಿದ್ದರೆ ಈ ಭೂಮಿಯಲ್ಲಿ ವಾಸಮಾಡು. ಸತ್ಯಶುದ್ಧನಾಗಿ ದುಡಿ” ಎಂದು ಸವಾಲೆಸೆದು ಮುಲಾಜಿಲ್ಲದೆ ಕಾಯಕದ ಹಣವನ್ನು ವಸೂಲು ಮಾಡಿ ದಾಸೋಹಕ್ಕೆ ತೆರಳಿದ.

  ಇದೇ ರೀತಿ ಶಿವನಿಂದ ಕಾಯಕವನ್ನು ಪಡೆದ ಮತ್ತೊಬ್ಬ ಶರಣನೆಂದರೆ ನಗೆಯ ಮಾರಿತಂದೆ.ಮುಖದಲ್ಲಿ ನಗೆಮಲ್ಲಿಗೆ ಅರಳಲು ಯಾರ ಅಪ್ಪಣೆಯೂ ಬೇಕಿಲ್ಲ.ನಗೆಯನ್ನು ದುಡ್ಡುಕೊಟ್ಟು ಕೊಳ್ಳಬೇಕಿಲ್ಲ ಆದರೂ ನಗೆ ನಮ್ಮ ಬಾಳಿನಲ್ಲಿ ಅಪರೂಪವಾಗುತ್ತಿದೆ.ನರನ ಬಾಳಿನಲ್ಲಿ ನಗೆಗಿಂತ ಹೊಗೆ,ಧಗೆಗಳೇ ಜಾಸ್ತಿ.ನಗುವ ಮನಸ್ಸಿದ್ದರೂ ಜಗದ ವೈಚಿತ್ರ್ಯದಿಂದ  ಮಿಡುಕುತ್ತ,ಸಿಡುಕುತ್ತ ದುಡಿಯುವ ಜನರಿಗೆ ನಕ್ಕು ನಗಿಸುವ ನಗೆಗಾರರು ಬೇಕಾಗುತ್ತಾರೆ. ಮಾರಿತಂದೆ ಅಂಥ ನಗೆಗಾರರಿಗೆಲ್ಲ ಗುರು.ಮ್ಲಾನಮುಖದಲ್ಲಿ ಮಂದಹಾಸವನ್ನು ಉಕ್ಕಿಸುವದೇ ಅವನ ಕಾಯಕವಾಗಿದ್ದಿತು.ಅವನ ವಿನೋದ ವಿನ್ಯಾಸದಿಂದ ನಕ್ಕು ಆನಂದ ಹೊಂದಿದ ಭಕ್ತರು ಸ್ವಸಂತೋಷದಿಂದ ಏನಾದರೂ ಕೊಟ್ಟರೆ ಅದನ್ನು ಭಕ್ತಿಯಿಂದ ಸ್ವೀಕರಿಸಿ ಅದರಲ್ಲಿಯೇ ಉದರ ನಿರ್ವಹಣೆ ಪೂರೈಸಿ,ಉಳಿದುದರಲ್ಲಿ ದಾಸೋಹ ಮಾಡುತ್ತಿದ್ದ. ಇಂಥಹ ದಾಸೋಹದ ಶರಣಸಂಕುಲವೇ ನಮ್ಮ ಮುಂದಿದೆ. ನಮಗೆ ಬಿಟ್ಟುಹೋದ ದಾಸೋಹ ಸಂಸ್ಕ್ರತಿಯನ್ನು ನಾವು ಚಾಚೂತಪ್ಪದೆ ಪಾಲಿಸೋಣ ಹಾಗೂ ಶರಣ ಸಂಸ್ಕ್ರತಿಯಲ್ಲಿ ನಡೆದು ಧನ್ಯರಾಗೋಣ.

******************************

Leave a Reply

Back To Top