ಒಂದು ಸುಖದ ಹಾಡು.

ಕವಿತೆ

ಒಂದು ಸುಖದ ಹಾಡು.

ನಂದಿನಿ ಹೆದ್ದುರ್ಗ

Wooden hearts 2 - free stock photo

ಪ್ರತಿ ಭೇಟಿಗೂ ಅವನುಳಿಸಿ
ಹೋಗುತ್ತಿದ್ದ ಒಂದಾದರೂ
ಕೊರತೆಯ ಕಾವಿನಲಿ
ಬೇಯುತ್ತಾ ಬದುಕಿಕೊಳುವ
ಸುಖದ
ಅಭ್ಯಾಸವಾದವಳು ನಾನು.

ಮರೆತೇ ಬಿಟ್ಟ ಈ ಬಾರಿ
ಯಾಕೋ.
ತೃಪ್ತ ಎದೆಯಲ್ಲಿ ಚಿಮ್ಮುವವೆ
ತಪ್ತ ಹಾಡುಗಳು.?
ಬೇಸರಕೆ ಆಕಳಿಕೆ.

ಕತ್ತಿನೆತ್ತರದಲಿ ಅವನಿತ್ತ
ಮುತ್ತುಗಳ
ಅದೋ..ಆ ಮರದಡಿ ಹರಡಿಬಿಟ್ಟೆ..
ಅವನ ಹಂಗಿರದೆ
ಹಲವು ನಿಮಿಷ
ಹಾಯೆನಿಸಿತು.

ಹೊರಗೆ ಸಣ್ಣಗೆ ಸೋನೆ.
ಅವನಿರದ ಎದೆಯೊಳಗೆ
ಮತ್ತವನದೇ ಕಾಮನೆ.

ಮೊಳಕೆಯೊಡೆಯುತಿದೆ
ಬಿಸುಟ ಮುತ್ತೊಂದು.
ಎರಡೆಲೆಯೆದ್ದು ಕಣ್ಣ ಪಿಳುಕಿಸಿದ
ಒಡನೆ
ಚಿಗುರು ಚಿವುಟಿ ಬಿಸುಟಲು
ಠರಾವು ಮಾಡಿರುವೆ.

ಪಾತಾಳಕಿಳಿಯುತಿದೆ ಬೇರು.
ಅವರಿವರಿಗೆ ಅಲ್ಲೊಂದು ಸಸಿ
ಇರುವ ಕುರುಹೂ ಇರದೆ.
ಎತ್ತರಕ್ಕಿಂತಲೂ ಆಳದ
ಹುಚ್ಚಿನವಳು ನಾನು.

ಅವನ ಸಣ್ಣಗೆ ನೋಯಿಸುತ್ತ
ಒಳಗೊಳಗೆ ನಗುವಾಗೆಲ್ಲಾ
ಕಿರುಬೆರಳ
ನೆರಳೊಂದು ನವುರಾಗಿ ಕೊರಳ
ತಾಕಿ ಹೋಗುತ್ತದೆ.
ನಾನೀಗ ಸುಖವಾಗಿರುವೆ..
****************************

4 thoughts on “ಒಂದು ಸುಖದ ಹಾಡು.

Leave a Reply

Back To Top