ನಾಗರೇಖಾ ಗಾಂವಕರ್ ಕಾವ್ಯಗುಚ್ಚ
ಅಸ್ವಸ್ಥ ಮಂಚದ ಮೇಲೆ
ಬೆಳದಿಂಗಳ ರಾತ್ರಿಯಲ್ಲಿ
ಕೊಳ್ಳಿ ದೆವ್ವವೊಂದು
ಮನೆಯ ಮೂಲೆಯೊಳಗೆ ನುಸುಳಿಬಂದಂತೆ
ತಬ್ಬಿದ ಜಾಡ್ಯ.
ಆಸ್ಪತ್ರೆಯ ಮಂಚದ ಮೇಲೆ
ಸೂರು ನೋಡುತ್ತಾ ಬೆದರಿ ಮಲಗಿದಾಗ,
ಮೊಣಕೈಗೆ ದಪ್ಪ ಬೆಲ್ಟೊಂದನ್ನು
ಸುತ್ತಿ, ನರ ಹುಡುಕಲು ಬೆರಳಿಂದ
ಮೊಟಕುವ ದಪ್ಪ ಕನ್ನಡಕದ ನರ್ಸಮ್ಮ
ತತ್ತರಿಸಿ ಬಿದ್ದ ರಕ್ತನಾಳಗಳು ಜಪ್ಪಯ್ಯ ಎನ್ನದೇ
ಅಂಟಿಕೊಂಡು ಸೀರಿಂಜಿಗೂ
ರಕ್ತ ನೀಡಲು ಒಲ್ಲೆ,ಎನ್ನುವಾಗಲೇ
ಕಂಬನಿಯ ತುಟಿಯಲ್ಲಿ
ನುಡಿಯುವ ಕಣ್ಣುಗಳು
ಒಸರಿದ ರಕ್ತದ ಅಂಟಿದ ಕಲೆಗಳು
ಆಯಾಸದ ಬೆನ್ನೇರಿ ಬಂದ
ಗಕ್ಕನೇ ಕಕ್ಕಬೇಕೆನ್ನುವ ಇರಾದೆ
ತರಗುಡುತ್ತಿದ್ದ ದೇಹವನ್ನು
ಸಂಭಾಳಿಸಲಾಗದೇ ಇರುವಾಗಲೇ
ಮುಲುಗುಡುವ ದೇಹಗಳು ಖಾನೆ ಖಾನೆಗಳಲ್ಲಿ
ಬೇನೆ ತಿನ್ನುವ ವೇದನೆಯ ನರಳಾಟ
ನೋವು ತಿಳಿಯದಂತೆ ಬರಲಿ
ನಿರಾಳ ಸಾವು.
ಸಾವೆಂದರೆ ಸಂಭ್ರಮದ ಹಾದಿ
ಎಂದವರೇಕೆ ಅಂಜುತ್ತಲೇ
ಇದಿರುಗೊಳ್ಳುವರೋ? ನಿನ್ನ ಹೆಗಲ
ಮುಟ್ಟಲೇಕೆ ಹಿಂಜರಿಯುವರೋ?
ಮನದ ಅಸ್ವಸ್ಥ ಮಂಚದ ಮೇಲೂ ಪ್ರೀತಿಯ
ನಿರಾಕರಣೆಗೆ, ನಿರ್ಲಕ್ಷ್ಯಕ್ಕೆ ತುಟಿ ತೆರೆಯದೇ
ಉಗುಳು ನುಂಗಿ ಸಹಿಸುವುದೆಂದರೆ
ಸಾವಲ್ಲವೇ?
ಕಣ್ಣಲ್ಲಿ ಮೂಡಿದ ಚಿತ್ರವನ್ನು
ಸತ್ಯವಾಗಿಸಲಾಗದ ಅಸಹಾಯಕತೆ
ಸಾವಲ್ಲವೇ?
ಬದುಕೆಂದರೆ ಹೀಗೆ
ಹುಚ್ಚಾಗಿ ಹಲಬುವಿಕೆ ಪ್ರೀತಿಗೂ
ಪ್ರೇಮಕ್ಕೂ ಮತ್ತು ಸಾವಿಗೂ.
ಇಕೋ,
ಗಿರಿಗವ್ವರದ ಹಸಿರೆಲೆಗಳ
ಸಂದಿ ಸಂದಿನಲ್ಲೂ ತೊಟ್ಟ,
ನಿತ್ಯ ಸುತ್ತಾಟದಲ್ಲೂ ಹೂವರಳಿಸುವ
ಕಲೆಯಲ್ಲೂ ಬೆರೆತುಹೋದ ಚೆಂದುಳ್ಳಿ ನೀ.
ಮೆಲುನಡೆಯ ನಲ್ನುಡಿಯ ಸೊಗಸೇ
ನರಳುತ್ತಲೇ ಇರುವೆ
ತಿರಸ್ಕಾರದ ತೇರು ಹೂ
ಮುಡಿಯಲ್ಲಿ ಹೊತ್ತು
ಆಯಾಸ ಬಳಲಿಕೆಗಳ
ಮೈ ತುಂಬಾ ಹೊದ್ದು
ಹೆಣ್ಣ ಸೌಂದರ್ಯ,ಸಂಗವನ್ನೇ ದ್ವೇಷಿಸಿದವನ
ಪ್ರೀತಿಯ ಆಳದಲ್ಲಿ ಬಿದ್ದು
ಯುಗಯುಗಗಳಿಂದ ಪರಿತಪಿತೆ, ಪ್ರಲಾಪಿತೆ
ಸ್ವ ಸಂಗತಗಳ ಅಸಂಗತಗಳಲ್ಲಿ ಮರುಳಾದವನ
ಮೋಹದ ಸದ್ದು
ಸದ್ದಾಗಿಯೇ ಉಳಿದುಹೋದೆ.
ನೆಮಿಸೆಸ್ ನಿನ್ನ ನೋವಿಗೆ ಮಿಡಿದಳು
ನಾರ್ಸಿಸಿಸ್ ತನ್ನ ಪ್ರತಿಬಿಂಬ ಕಂಡು
ಮರುಳಾಗುವಂತೆ ಮಾಡಿದಳು.
ಆತನೋ ಮುದ್ದುಕ್ಕಿ ತನ್ನನ್ನೇ ಮೋಹಿಸಿದ
ಸ್ವಮೋಹಿತ ಮರುಳುತನಕ್ಕೆ ಮದ್ದುಂಟೇ?
ಅದೊಂದು ವಿಚಿತ್ರ ಸಮ್ಮೋಹನ ಜಾಲದಂತೆ.
ಈಗ ಜಗದ ತುಂಬಾ ಅವನಂತೆ
ಸುರ ಸುಂದರಾಂಗರು,
ಪ್ರೀತಿಯ ನೆಪದಲ್ಲಿ ತಮ್ಮ ಹೊರತು
ಯಾರನ್ನೂ ಪ್ರೀತಿಸರು
ತಮ್ಮದೇ ಸಾಮ್ರಾಜ್ಯದ ಸುಖದಲ್ಲಿ
ಇತರರ ಸುಖಕಾಣದವರು.
ಇಕೋ, ಅಪಾತ್ರನ ಪಾಲಾದ ಪ್ರೀತಿ
ಪಲ್ಲವಿಸಿಸುವುದೆಂತು,
ಕಾದಿರುಳು ಕಣ್ಣು ಮುಚ್ಚದೇ
ನಿನ್ನಂತೆ ಬೇಗೆಯಲ್ಲಿ ಬೇಯುವುದೇ ಬಂತು.
ಎದೆ ಬೆಳಕು ಮತ್ತು ಕಣ್ಣ ಕಾಡಿಗೆ
ನಿನ್ನ ಉತ್ತರೀಯಕ್ಕೆ
ಅರಿವಿಲ್ಲದೇ ಬಳಿದ ನನ್ನ ಕೆಂಪು
ತುಟಿರಂಗು ಇನ್ನೂ ಹಸಿಹಸಿ
ಆಗಿಯೇ ಇದೆ
ಇಳಿಸಂಜೆಗೆ ಹಬ್ಬಿದ ತೆಳು
ಮಂಜಿನಂತಹ ಹುಡುಗ
ಮಸುಕಾಗದ ಕನಸೊಂದು
ಕಣ್ಣಲ್ಲೇ ಕಾದು ಕೂತಿದೆ
ನೀನೊಲಿದ ಮರುಗಳಿಗೆ
ಭವದ ಹಂಗು ತೊರೆದೆ
ಮುಖ ನೋಡದೇ
ಮಧುರಭಾವಕ್ಕೆ ಮನನೆಟ್ಟು
ಒಳಹೃದಯದ ಕವಾಟವ
ಒಪ್ಪಗೊಳಿಸಿ ಮುಗ್ಧಳಾದೆ
ಈಗ ನೆನಪುಗಳ ಮುದ್ದಾಡುತ್ತಿರುವೆ
ಮುದ್ದು ಹುಡುಗ, ನಿನ್ನ ಒಲವಿಂದ
ಬರಡಾದ ಒರತೆಗೂ ಹಸಿಹಸಿ ಬಯಕೆ
ಒಣಗಿದ ಎದೆಗೂ ಲಗ್ಗೆ ಇಡುವ
ಹನಿ ಜಿನುಗಿನ ಕುಪ್ಪಳಿಸುವಿಕೆ
ಗೊತ್ತೇ ನಿನಗೆ?
ಈ ತಂಗಾಳಿಯೂ ತೀರದ ದಿಗಿಲು
ಹತ್ತಿಸಿಕೊಂಡ ಏಕಾಂಗಿ ಮೃಗದಂತೆ
ಸುಂಯ್ಯನೇ ಹಾಗೇ ಬಂದು
ಹೀಗೆ ಹೊರಟುಹೋಗುತ್ತದೆ
ಮರೆತ ಕನಸುಗಳಿಗೆ ಕಡ
ಒದಗಿಸಿ ಬೆನ್ನು ಹತ್ತುತ್ತದೆ
ಈ ಮಳೆಗೂ ಕರುಣೆಯಿಲ್ಲ
ಹಸಿಮನಗಳಲಿ
ಹುಸಿ ಬಯಕೆಗಳ
ಕುದುರಿಸಿ ಕಾಡುತ್ತದೆ
ಇದೆಲ್ಲವನೂ ಹೇಗೆ ಉಲಿಯಲಿ?
ಕಂಪು ಹೆಚ್ಚಾಗಿ ಜೋಂಪು
ಹತ್ತಿದೆ, ಕಣ್ಣುಗಳು ಮತ್ತೇರಿ
ಪಾಪೆಯೊಳಗೆ ಮುದುರಿದೆ
ಕಣ್ಣ್ಗತ್ತಲ ಗುಹೆಯಲ್ಲಿ ಮಿಣುಕು
ಹಚ್ಚುವ ನಿನ್ನ ಬಿಂಬವ
ಹೇಗೆ ಮರೆಮಾಚಲಿ ಹುಡುಗ?
ನೀನಾದರೋ ಭೂವ್ಯೋಮಗಳ ತಬ್ಬಿ
ನಿಂತ ಬೆಳಕ ಕಿರಣ
ಕಣ್ಣ ಕಾಡಿಗೆಯ ಕಪ್ಪು,
ಅದಕ್ಕೆ ಎದೆಯೊಳಗೆ ಬೆಳಕ ಹಚ್ಚಿದೆ,
ಕಣ್ಣ ಮುಂದೆ ಇಲ್ಲದೆಯೂ ಕಣ್ಣ ಕಾಡಿಗೆಗೆ
ಬಣ್ಣ ಬಳಿದೆ.
ಮುದ್ದು ಹುಡುಗ,
ಹೀಗಾಗೇ ದಿನಗಳೆದಂತೆ
ನನ್ನ ಕಣ್ಣ ಕೆಳಗಡೆ ಕಪ್ಪು ಬರೀ ಕಪ್ಪು
*************************************
ಎಂದಿನಂತೆ ಕಾಡುವ ಕವಿತೆಗಳು ರೇಖಾ
Soooper Nagarekha