ಓಲೆ
ಮರೆತರೆ ನಿನ್ನ ಮಡಿವೆನು ಚಿನ್ನ!
ಜಯಶ್ರೀ.ಜೆ. ಅಬ್ಬಿಗೇರಿ
ಬೆಳದಿಂಗಳ ರಾತ್ರಿಯ ಪೂರ್ಣ ಚಂದಿರನ ಮೊಗ ನೋಡಿದಾಗೊಮ್ಮೆ ನಿನ್ನ ಮುಖವನ್ನೇ ನೋಡಿದಂತೆ ಅನಿಸುತ್ತದೆ. ನೀನೇನು ಚಂದಿರನ ಮಗಳಾ ಎನ್ನುವ ಸಂಶಯ ಮನದಲ್ಲಿ ಕಾಡುತ್ತದೆ. ನಿನ್ನ ಹತ್ತಿರ ಅದೇನೋ ಮಾಯಾ ಶಕ್ತಿ ಇದೆ ನಿನ್ನನ್ನೇ ನೋಡೋಕೆ ಮನಸ್ಸು ಕಾತರಿಸುತ್ತದೆ. ಈ ಹಿಂದೆ ನೂರು ನೂರು ಸುಂದರಿಯರನ್ನು ಕಂಡ ಕಣ್ಣು ಹೀಗೆ ಹಟ ಹಿಡಿದಿರಲಿಲ್ಲ. ಸ್ವಭಾವದಲ್ಲಿ ತುಂಬಾ ಮೌನಿ ನಾನು. ಮರುಭೂಮಿಯಲ್ಲಿ ಗುಲಾಬಿ ಹೂ ಅರಳಿದಂತೆ ಅರಳಿದ ನಿನ್ನ ಕೆಂದುಟಿಗಳ ಕಂಡಾಗಿನಿಂದ ಅರಳು ಹುರಿದಂತೆ ಮಾತಾಡ್ತಿದೀನಿ. ಇದನ್ನು ಕಂಡು ನನ್ನ ಗೆಳೆಯರೆಲ್ಲ ನನಗೆ ಏನೋ ಆಗಿದೆ ಅಂತ ಚುಡಾಯಿಸ್ತಿದಾರೆ. ನೀನು ಕೈಗೆ ಸಿಗುತ್ತಿಯೋ ಇಲ್ಲವೋ ಎನ್ನುವ ಚಿಂತೆಯ ನೂರಾರು ಹಕ್ಕಿಗಳು ಮೊಟ್ಟೆಯಿಡತೊಡಗಿವೆ. ಪ್ರೀತಿಯ ಗಾಳಕ್ಕೆ ಬಿದ್ದಿದ್ದೇನೆ. ಹಾಗಂತ ಮೊದಲ ಪ್ರಯತ್ನದಲ್ಲೇ ಪ್ರೀತಿ ಫಲಿಸುತ್ತದೆ ಅನ್ನೋ ಖಾತ್ರಿ ಇರಲಿಲ್ಲ. ಎಷ್ಟು ಕೋಟಿ ಕ್ಷಣಗಳನ್ನು ನಿನ್ನ ಒಲವಿನ ಕೊಳದಲ್ಲಿ ಎಸೆಯಬೇಕೋ ಗೊತ್ತಿಲ್ಲ. ನಾನೀಗ ಮತ್ತಷ್ಟು ಒಲವಿನ ಬಲೆಯಲ್ಲಿ ಬೀಳಲಿದ್ದೇನೆ ಎನ್ನುವುದಷ್ಟೇ ಸದ್ಯಕ್ಕೆ ಖಾತ್ರಿಯಿರುವ ಏಕ ಮಾತ್ರ ಸಂಗತಿ. ನಿನಗಾಗಿ ಕಾಯುವ ಈ ಸಮಯದಲ್ಲಿ ಗಡಿಯಾರ ಯಾರು ಕಂಡು ಹಿಡಿದರು ಅಂತ ಕೋಪಿಸಿಕೊಳ್ಳುತ್ತೇನೆ. ಅದಾವುದೋ ಗಳಿಗೆಯಲ್ಲಿ ಸೋಕಿದ ನಿನ್ನ ನವಿರಾದ ಬೆರಳುಗಳ, ತಾಕಿದ ಭುಜಗಳ ದೃಶ್ಯ ಕಣ್ರಪ್ಪೆಯಲ್ಲಿ ಜೋಕಾಲಿಯಂತೆ ಇಂದಿಗೂ ಓಲಾಡುತ್ತಿದೆ.
ಮಳೆಗಾಲದ ಒಂದು ದಿನ ತುಂಬಾ ಚಳಿಯಿತ್ತು. ಚಿಕ್ಕ ಮಲ್ಲಿಗೆ ಮಾಲೆಯ ನೀಳ ಜಡೆಯೊಡತಿ ನೀನು ಎದುರಾಗಿ ಕಾಲೇಜಿನ ಪಾರ‍್ಕಿನಲ್ಲಿ ಕುಳಿತಿದ್ದೆ. ಮೊದಲ ನೋಟದಲ್ಲೇ ನಿನ್ನ ಮೇಲೆ ಒಲವಿನ ಭಾವಕೋಶದ ಅಂಶವೊಂದು ಅಂಕುರಿಸಿತು. ಕಲ್ಪನೆಯ ಸುಂದರಿ ಒಮ್ಮೆಲೇ ಎದುರಾದರೆ ಈ ಬಡ ಹೃದಯದ ಗತಿ ಏನಾಗಬೇಡ? ಜಡಿ ಮಳೆಯ ಮುನ್ಸೂಚನೆಯಂತೆ ಒಂದೊಂದೇ ತುಂತುರು ಹನಿ ಶುರುವಾಗಿತ್ತು.ಪಕ್ಕದಲ್ಲಿಯೇ ಇದ್ದ ಗೆಳೆಯನನ್ನು ಆತುರದಿಂದ ತಿವಿಯ ತೊಡಗಿದೆ. ನಾನು ತುಂಬಾ ತಳಮಳಕ್ಕೆ ದುಗುಡಕ್ಕೆ ಯೋಚನೆಗೆ ಒಳಗಾಗಿದ್ದೇನೆ ಎಂದು ತಿಳಿದ ಗೆಳೆಯ,’ಈ ಹಿಂದೆ ಎಂದೂ ನೀ ಹೀಗೆ ಆಡಿರಲಿಲ್ಲ. ನಿನಗೂ.. . . .’ ಎಂದು ಕಿಚಾಯಿಸಿ ಅಲ್ಲಿಂದ ಕಾಲ್ಕಿತ್ತ. ಮಲ್ಲಿಗೆ ಗಂಧ ಒಂದೆಡೆ ಬೆರೆಯಲು ಸಿಹಿ ಜೇನು ಮನಸ್ಸುಗಳು ಮಿಡಿಯಲು ಅನುವು ಮಾಡಿ ಹೋದನೇನೋ ಎನಿಸಿತು.ಈಗಲೇ ವಯಸ್ಸು ಇಪ್ಪತ್ತೈದಕ್ಕೆ ಮೂರು ಮೆಟ್ಟಿಲು ದೂರದಲ್ಲಿದೆ. ಇದೇ ಒಲವಿನ ಗಾನಕೆ ತಲೆದೂಗುವ ವಸಂತಕಾಲ ಎಂದು ನಕ್ಕಿತು ಒಳ ಮನಸ್ಸು. ಮೊದ ಮೊದಲು ನೋಟ್ಸ್ಗಾಗಿ ಮಾತು ಕತೆ ನಡೆಯುತ್ತಿತ್ತು. ನಂತರ ಅದು ಇದು ಮಾತು ಬೆಳೆಯಿತು. ಸಂಕೋಚವಿಲ್ಲದ ಮಾತುಗಳು ಶುರುವಾದವು. ಗೆಳತನವಾದ ಮೇಲೆ ಇಬ್ಬರೂ ಸಾಕಷ್ಟು ಆತ್ಮೀಯರಾಗ ತೊಡಗಿದೆವು. ತಂಪಾದ ದಿನವೊಂದರಲ್ಲಿ ಅನುರಾಗದ ಕೋರಿಕೆ ಮುಂದಿತ್ತಾಗ ನಗುವಿನಲ್ಲೇ ಒಪ್ಪಿಗೆ ಸೂಚಿಸಿದ್ದೆ. ಮನವು ಒಲವಿನ ಕಡಲಲ್ಲಿ ತೇಲಿದಂತೆನಿಸಿತು. ಬಾನೆತ್ತರಕ್ಕೆ ಹೃದಯ. ಹಾರಿತು ಆನಂದ ಕಂಬನಿ ಸುರಿಯಿತು. ‘ಬಿಡದಿರು ಎಂದೆಂದೂ ಈ ಕೈಯನು ಹೃದಯದ ಹಸಿರು ತೋಟದಲ್ಲಿ ಒಲವಿನ ವಿನಿಮಯಕೆ ಕಾಯುವೆ.’ ಎಂದೆ ನೀನು. ಯಾವ ಕೋನದಲ್ಲೂ ನೀನಾಡಿದ ಮಾತು ನಾಟಕೀಯ ಅನಿಸಲೇ ಇಲ್ಲ. ಅಂದಿನಿಂದ ನನ್ನೆದೆಯ ತೋಟದ ಹೂವಾದೆ. ಉಸಿರನು ನಿನ್ನ ಹೆಸರಿಗೆ ಬರೆದೆ.
ಅಕ್ಕನ ಮದುವೆಗಾಗಿ ಅಪ್ಪ ಮಾಡಿಟ್ಟ ಸಾಲ ತೀರಿಸುವುದು ನನ್ನ ತಲೆ ಮೇಲೆ ಬಿದ್ದಿತ್ತು. ಯಾರನ್ನು ಕೇಳುವುದು? ಗೆಳೆಯರ‍್ಯಾರು ಅಷ್ಟು ಹಣ ಕೊಡುವಷ್ಟು ಸ್ಥಿತಿವಂತರಲ್ಲ. ಸ್ಥಿತಿವಂತ ಬಂಧುಗಳನ್ನು ಕೇಳಬೇಕೆಂದರೆ ಹಣಕ್ಕಾಗಿ ಹಲ್ಲು ಗಿಂಜುತ್ತಾನೆ ಎನ್ನುತ್ತಾರೇನೋ ಎಂಬ ಸ್ವಾಭಿಮಾನ. ಬಾಯ್ತೆರೆದು ಕೇಳುವಂಥ ಆತ್ಮೀಯರೆದರು ನಿಲ್ಲಲು ಧರ‍್ಯ ಸಾಲುತ್ತಿಲ್ಲ.ಇನ್ನು ಬ್ಯಾಂಕ್ ಕೌಂಟರ್‌ಗಳಿಗೋ ಇಲ್ಲ ಫೈನಾನ್ಸ್ ಬಾಗಿಲಿಗೆ ಎಡತಾಕೋಣವೆಂದರೆ ಆ ಪಾಟಿ ಬಡ್ಡಿ ನನ್ನಿಂದ ಭರಿಸಲು ಸಾಧ್ಯವಿಲ್ಲ. ಹೀಗಾಗಿ ಈ ಚಿಂತೆಯ ಹೊದಿಕೆಯನ್ನು ಸರಿಸಿ ಹೊರ ಬರುವುದು ಹೇಗೆ ಎಂಬುದು ತಲೆಯಲ್ಲಿ ಕಟ್ಟಿಗೆ ಹುಳುವಿನಂತೆ ಕೊರೆಯುತ್ತಿತ್ತು. ಅಪ್ಪ ಕೊಡುತ್ತಿದ್ದ ಹಣದಲ್ಲಿ ಬದುಕುತ್ತಿದ್ದ ದಿನಗಳಿಗೆ ಕೊನೆಗೊಂಡು ಪೈಸೆ ಪೈಸೆಗೂ ಲೆಕ್ಕಾಚಾರ ಹಾಕುವ ಬದುಕು ಕಣ್ಮುಂದಿತ್ತು.ಕಾಡಿನಲ್ಲಿ ಕಳೆದು ಹೋದ ಒಂಟಿ ಸಣ್ಣ ಮಗುವಿನಂತಾಗಿತ್ತು ನನ್ನ ಸ್ಥಿತಿ. ಇದನ್ನೆಲ್ಲ ಸಣ್ಣನೆಯ ದನಿಯಲ್ಲಿ ಪರಿಹಾರಕ್ಕಾಗಿ ಕೊನೆಯ ಪ್ರಯತ್ನವೆಂಬಂತೆ ನಿನ್ನ ಮುಂದೆ ಒಂದೇ ಉಸಿರಲ್ಲಿ ಉಸಿರಿದೆ.
‘ಸಂಯಮ ಮೀರಿದವನು ಜಡ ವಸ್ತುವಿಗೆ ಸಮ.’ ನನ್ನ ಮಾತಿನಿಂದ ನಿನಗೆ ಕೊಂಚ ನೋವಾಗಬಹುದು. ಅದನ್ನು ಭರಿಸುವ ಶಕ್ತಿ ನಿನ್ನಲ್ಲಿದೆ ಎಂದು ನನಗೆ ಗೊತ್ತು. ಆರ‍್ಥಿಕವಾಗಿ ಸುಭದ್ರವಾಗಿದ್ದರೆ ಸಂತಸದಲ್ಲಿರುತ್ತೇವೆ ಎನ್ನುವುದನ್ನು ಮನಸ್ಸಿನಿಂದ ತೆಗೆದು ಹಾಕು. ‘ಕಷ್ಟಗಳೇ ಮನುಷ್ಯನನ್ನು ಸಂತಸದ ಕಡಲಿಗೆ ನೂಕುತ್ತವೆ.’ಆರ‍್ಥಿಕ ಸಮಸ್ಯೆಗಳಿಗೆ ದುಡಿಮೆ ಬಿಟ್ಟು ಬೇರೆ ದಾರಿ ಯಾವುದೂ ಫಲಿಸುವುದಿಲ್ಲ. ಕಾಲೇಜು ಹೇಗಿದ್ದರೂ ಮಧ್ಯಾಹ್ನ ಒಂದು ಗಂಟೆಗೆ ಮುಗಿಯುತ್ತದೆ.ಅದರಾಚೆಗೆ ಅಲ್ಲಿ ಇಲ್ಲಿ ಹಾಳು ಹರಟೆ ಬಿಟ್ಟು ಪಾರ‍್ಟ್ ಟೈಂ ಕೆಲಸಕ್ಕೆ ಸೇರಿಕೋ.ನಿನ್ನಲ್ಲಿರೋ ಬುದ್ಧಿವಂತಿಕೆಗೆ ಒಳ್ಳೆಯ ಕೆಲಸ ಸಿಕ್ಕೇ ಸಿಗುತ್ತದೆಂದು ನನ್ನ ಮನಸ್ಸಿನ ಗೊಂಬೆಗೆ ಕೀಲಿ ಕೊಟ್ಟೆ. ಕೆಲಸ ಹುಡುಕುವ ಕೆಲ ಪ್ರಯತ್ನಗಳು ವಿಫಲವಾದಾಗ ಧೈರ‍್ಯವನ್ನೂ ತುಂಬಿದೆ.ಒಂದು ಶುಭ ದಿನ ಕೆಲಸ ಕೈಯಲ್ಲಿತ್ತು. ಪ್ರತಿಷ್ಟಿತ ಸಂಸ್ಥೆಯಾದ್ದರಿಂದ ಸಂಬಳವೂ ಚೆನ್ನಾಗಿಯೇ ಇತ್ತು. ಸಾಲ ಬರಬರುತ್ತ ಕರಗತೊಡಗಿತು. ನನ್ನ ಶ್ರದ್ಧೆಯ ದುಡಿಮೆಗೆ ಸಂಸ್ಥೆಯ ಯಜಮಾನರು ನೌಕರಿ ಖಾಯಂಗೊಳಿಸಿದರು. ಪ್ರೀತಿಸಿದವಳು ಬರೆದ ಜೀವನದ ಕಥೆಯಲ್ಲಿ ಮೂರು ವರ‍್ಷದಲ್ಲಿ ಬದುಕು ನಡೆಸುವ ನಾವಿಕನಾದೆ ಎನ್ನೋದೇ ಹೆಮ್ಮೆ.ಭದ್ರತೆ ಸಾಧಿಸಿದ ಬದುಕಿನ ಪ್ರತಿಬಿಂಬದಂತೆ ಬೀಗುತ್ತಿದ್ದೇನೆ. ಬಾಳ ದೀವಿಗೆ ಹಚ್ಚಿದ ಪ್ರೀತಿ ದೇವತೆ ನೀನು ಎಂದು ಉಲಿಯುತ್ತಿದ್ದೇನೆ.
ಆ ಮೊಹಕ ಮುಸ್ಸಂಜೆ ನನಗಿನ್ನೂ ನೆನಪಿದೆ. ನಮ್ಮ ಮಾಮೂಲಿ ಪಾರ‍್ಕಿನಲ್ಲಿ ನಿನಗಾಗಿ ಕಾಯುತ್ತಿದ್ದೆ. ಕರಿ ಮೋಡಗಳು ವಿಚಿತ್ರ ಶಾಖದಲ್ಲಿ ಹನಿ ಹನಿ ಮಳೆ ಸುರಿಸತೊಡಗಿದ್ದವು.ಇದ್ದಕ್ಕಿದ್ದಂತೆ ಸುಮಧುರ ಘಮ ಸೂಸುತಿರುವಂತೆ ಭಾಸವಾಯಿತು.ಗಿಡದಂಚಿನಲ್ಲಿ ಮೈಬಿರಿಯಲು ಸಿದ್ಧವಾಗಿರುವ ಮೊಗ್ಗಿನಂತೆ ದೂರದಲ್ಲೇ ನಿಂತಿದ್ದ ನಿನ್ನ ಪಕ್ಕ ಬಂದು ನಿಂತೆ. ಇಷ್ಟು ಹೊತ್ತಿನಿಂದ ತಯಾರಿ ಮಾಡಿಕೊಂಡ ಮಾತೊಂದನ್ನು ನನಗಷ್ಟೇ ಕೇಳುವಂತೆ ‘ಮನೆಯಲ್ಲಿ ನನಗೆ ಗಂಡು ನೋಡುತ್ತಿದ್ದಾರೆ.’ ಎಂದು ಪಿಸುಗುಟ್ಟಿ ನನ್ನ ಕೈ ಹಿಡಿದೆ. ನಿನ್ನ ಹಿತವಾದ ಸ್ಪರ್ಶ ಮೈಗೆ ವಿದ್ಯತ್ ಪುಳಕವನ್ನು ಕೊಟ್ಟಿತು. ಸಟ್ಟನೆ ಹೆಗಲ ಮೇಲೆ ಕೈ ಹಾಕಿ ಇನ್ನೊಂದು ಕೈಯಿಂದ ಬಳಸಿದೆ. ಕೊರಳಿಗೆ ಎರಡೂ ಕೈಗಳನ್ನು ಜೋತು ಹಾಕಿದೆ. ಸ್ನೇಹದಿ ಸಮ್ಮೋಹಿಸಲು ಮುದ್ದಾಡಲು ಮುಂದಾದಾಗ ‘ತಂಟೆ ಮಾಡುವ ತುಂಟ ನೀನು.’ ಮನಸ್ಸು ಹೇಗೇಗೋ ಜಾರುವುದು ಅದರ ಕೈಗೊಂಬೆ ಆಗುವುದು ಬೇಡ ಚೆಲುವ. ಆತುರ ಬೇಡ ಅವಸರ ಬೇಡ ಪ್ರೀತಿಗೆ. ತುಟಿಗಳೆರಡು ಭಯದಲ್ಲಿ ನಿಂತು ಹೆಚ್ಚಿಸಲಿ ಹೃದಯಗಳ ವೇಗ ಎಂಬ ಕನಸಿನ ಚಿಗುರು ನನ್ನಲ್ಲೂ ಇದೆ. ಒಲವಿನ ಹೊನ್ನ ಹೊಳೆ ನನ್ನೆದೆಯಲ್ಲೂ ಹರಿಯುತಿದೆ. ಎನ್ನುತ್ತ ಕೈ ಬಿಡಿಸಿಕೊಂಡು ಓಡಿದೆ. ‘ಎಷ್ಟಾದರೂ ಹೆಣ್ಣು ಜೀವವಲ್ಲವೇ ನಾಚಿಕೆಯೇ ಆಭರಣ ಈ ಜೀವಕೆ.’ ಎಂದುಕೊಂಡೆ. ದೇವರ ಕೃಪೆಯಿರಬಹುದು ನೀ ನನಗಾಗಿ ಮೀಸಲಿರುವೆ. ನನ್ನತ್ತೆ ಮಾವನೊಂದಿಗೆ ಮಾತು ಕತೆ ಆಗಿದೆ. ಹಸಿರು ನಿಶಾನೆಯೂ ದೊರೆತಾಗಿದೆ. ಸಿಗುವೆ ಮದುವೆ ಮಂಟಪದಲ್ಲೇ ‘ಜನುಮದ ಗೆಳತಿ ಉಸಿರಿನಾ ಒಡತಿ ಮರೆತರೆ ನಿನ್ನ ಮಡಿವೆನು ಚಿನ್ನ.’ ಎಂಬುದು ಮನದ ಹಾಡಾಗಿದೆ. ನಿನ್ನ ಸ್ನಿಗ್ದ ಸೌಂದರ‍್ಯದ ಸುಮಧುರ ಪರಿಮಳದ ತನುವಿನೊಂದಿಗೆ ಪ್ರತಿ ಇರುಳು ಬಿಡದೇ ಒಲವಿನಾಟದಲಿ ಬೆರೆಯುವೆ.ಆ ಖುಷಿಯಲಿ ಒಂದಾಗಲು ನೀನೂ ಸಿದ್ಧಳಾಗಿರು ಚೆಲ್ವಿ.
****************************************
“ಮರೆತರೆ ನಿನ್ನ ಮಡಿವೆನೆ ಚಿನ್ನ “ನನ್ನ ಉಸಿರೇ ಪ್ರೇಮ ಸಿಂಚನ ಯೌವನದ ಸುಂದರ ಕ್ಷಣಗಳನ್ನು ಸಂತೋಷದಿಂದ ಅನುಭವಿಸಿ ಅ ಧೈರ್ಯ ದಿಂದ ಗೆಳೆತಿಗೆ ನಿವೆಧನೆ
Super