ಕಾಡುಹರಟೆ ಮತ್ತು ಕವಿಗೋಷ್ಠಿ.
ವಿಜಯಶ್ರೀ ಹಾಲಾಡಿ
ವಾರವಿಡೀ ಕಾಡುಮುನಿಯ
ಹಕ್ಕಿಗಳು ಮರಿಗಳಿಗೆಂದು
ಗೂಡುನೇಯುತ್ತಿದ್ದವು
ಕಟ್ಟಿರುವೆಗಳು ಹುಲ್ಲಿನ
-ಬೀಜಕ್ಕಾಗಿ ಜಗಳಾಡಿದವು
ಗೋಡೆಗಳನ್ನು ಕಾಲುದಾರಿ
ಮಾಡಿಕೊಂಡ ಅಳಿಲು
ಮುಂಗುಸಿ ಮತ್ತದರ ಮಗು
ಪಕ್ಕದ ಖಾಲಿ ಸೈಟಿನಲ್ಲಿ
ವಿಹರಿಸುತ್ತಿದ್ದವು..
ಹುಲ್ಲುಗಾವಲಲ್ಲಿ ಕಿವಿಗಳು
ಕಂಡದ್ದಷ್ಟೇ ಬೆಚ್ಚನೆಯ
ಪಾದವನ್ನು ಎದೆಯೊಳಗೆ
ಊರಿ ಮೊಲವೊಂದು
ನಾಗಾಲೋಟ ಹೂಡಿತು
ಹಿಂದಿನ ಮನೆಯ ಕಿಟಕಿ
ಗಾಜನ್ನು ಮರಕುಟಿಕವೊಂದು
ಬಡಿದದ್ದೇ ಬಡಿದದ್ದು
ಅದರ ತಲೆಯೊಳಗೆ ಮೆದುಳು
ಕದಡಲೇ ಇಲ್ಲವಲ್ಲ ಎಂದು
ಅಚ್ಚರಿಪಡುತ್ತ ಕಾಲಹರಣಮಾಡಿದೆ..
ನನ್ನ ರಜಾದಿನಗಳು
ಹೀಗೇ ಕವಿತೆ ಹುಟ್ಟಿಸುತ್ತ
ಶುದ್ಧ ಕಾಡುಹರಟೆಯಾಗಿ
ಸದ್ದಲ್ಲದ ಸದ್ದಿನ ಹನಿಗಳಾಗಿ
ಖಾಲಿಯಾದವು ಗೆಳತೀ
ಹೇಳು
ನಿನ್ನ ಕವಿಗೋಷ್ಟಿಯಲ್ಲಿ
ಇಂತವೆಲ್ಲ ಇದ್ದುವೇ!?
==============
Nice