ಕವಿತೆ
ಹಾಳೆ ತಿರುವಿದರೆ ಅಧ್ಯಾಯ ಮುಗಿಯದು
ಧರ್ಮಸ್ಥಾಪನೆಗೆ ಮತ್ತೆ ಮತ್ತೆ ಬರುತ್ತೇನೆಂದವ
ಹೇಳಿದ್ದೂ ಅದನ್ನೇ
ಎಲ್ಲವೂ ಮುಗಿಯದ ಅಧ್ಯಾಯ
ದಾರಿಗಳು ಎಂದೋ ಕವಲೊಡೆದವು
ಎಲ್ಲ ಮರೆತಂತೆ ಹೆಜ್ಜೆಗಳೂ ನಡೆದವು
ಉಸಿರು ಭಾರದ ಜೋಕಾಲಿ
ಜೀಕಿದಷ್ಟೂ ಎಳೆದಾಡುತ್ತಿತ್ತು
ಕಟಕಟೆಯ ತೀರ್ಪಿನಲ್ಲಿ
ಇವರು ಬೇರೆ ಬೇರೆ
ಉಳಿಯುವುದು ಏನಿದ್ದರೂ ಲೆಕ್ಕಾಚಾರ
ಉತ್ತರ ಹುಡುಕುವ ಪುಟ್ಟ ಕಂಗಳಲ್ಲಿ
ಪ್ರಶ್ನೆಗಳ ಮಹಾಪೂರ
ಹಾಳೆಗಳೂ ನಾಳೆಗಳಂತೆ
ಕರೆದಷ್ಟೂ ತೆರೆಯುತ್ತವೆ
ಚುಕ್ಕೆಯಿಡುವ ಮುನ್ನ ಅಲ್ಪವಿರಾಮ
ಮುಗಿಸಲು ಮನಸ್ಸಿಲ್ಲ
ಹೇಗೆಂದರೂ
ಇದು ಮುಗಿಯದ ಅಧ್ಯಾಯ.