ಎಷ್ಟೊಂದು ಕಾಳಜಿ..!?
ರುಕ್ಮಿಣಿ ನಾಗಣ್ಣವರ
ಹರವಾದ ಎದೆಯ
ನೀಳ ತೋಳುಗಳ
ಬರಿ ಮೈಯ ಮಹಾಭುಜನೇ
ಬಾಣ ಹೆದೆಗೇರಿಸಿ
ಸಂಚು ಹೂಡಿದ
ನಿನ್ನ ಕಣ್ಣೋಟದ ಮೊನಚಿಗೆ
ನಾನೆಂದೂ ಒಲಿದವಳಲ್ಲ
ರದ್ದಿ ಸಾಲದೆ
ಕಿಂಗುಸೈಜು ಪುಸ್ತಕಗಳೆದೆ ತುಂಬ
ಅದೆಷ್ಟು ಕೈಗಳು
ಎಷ್ಟೋ ನಮೂನೆಯ
ನಿನ್ನ ಹೆಸರು ಬರೆದು
ಜೈಕಾರ ಗೈದು
ಉಸಿರ ಹಿಡಿದು ಜಪಿಸಿದರೂ
ನೀನು ಒಲಿದವನಲ್ಲ
ಕಾಡಿನಲಿ ಆಡಿಕೊಂಡಿದ್ದ
ಮೊಲದ ಮರಿಗಳು
ನಿನ್ನವೇ ಬೀಜಗಳು ಎಂಬ-
ಸಬೂಬು ದೊರೆತು
ಲೋಕವನು
ಗೆದ್ದೆನೆಂದು ಬೀಗಿದವ ನೀನು
ಮರ್ಯಾದೆ ಪುರುಷೋತ್ತಮನೇ
ನಿನ್ನ ಅಸಲಿತನದ
ಖಾತರಿ ಮಾಡಿಕೊಂಡೇ
ಮತ್ತೆಂದೂ ನಿನ್ನ ಬಯಸದೆ
ಮೂಲ ನೆಲೆಗೆ ಮರಳಿದವಳಿಗೆ
ತನ್ನತನದ ಹುಡುಕಾಟವಿತ್ತು
ತನ್ನನ್ನು ಮಾತ್ರ ಭಜಿಸಿ
ನನ್ನನ್ನು ನನ್ನಜ್ಜಿ, ಮುತ್ತಜ್ಜಿಯರನ್ನು
ಹೀನರೆಂದು ಬಗೆದ
ತರತಮಗಳನು ತೂಗುವ
ನಿನ್ನವರ ಕಣ್ಣೋಟ
ಮೊದಲು ಸರಿಪಡಿಸು
ನನಗೆ ನಂಬಿಕೆ
ಸಮತೆಯನು
ಯೋಗವೆಂದು ಸಾಧಿಸುವ
ರಕ್ತ ಮಾಂಸ ತುಂಬಿರುವ
ದೇಹಗಳ ಮೇಲೆ
ಯಾವೊಂದರಲೂ
ಆದರ್ಶವಾಗದವರ
ಆರಾಧಿಸುವ ಮೂಢತನ
ನನ್ನಲ್ಲಿಲ್ಲ ಕ್ಷಮಿಸು
ಇಲ್ಲೀಗ
ಯಕಶ್ಚಿತ ಕ್ಷುದ್ರ ಜೀವಿಯೊಂದು
ಶ್ವಾಸಕೋಶಗಳಲಿ ಮನೆಮಾಡಿ
ಅಟ್ಟಹಾಸ ಮೆರೆದಿದೆ
ಸಂಬಂಧಿ ಇಲ್ಲದ ಶವಗಳ ಮೇಲೆ
ಅನಾಥತೆ ಹೊದ್ದು ಮಲಗಿ
ಮನುಷ್ಯತ್ವದ ಪರೀಕ್ಷೆ ನಡೆಸಿದೆ
ದುಡಿಯುವ ಕೈಗಳ ಕಟ್ಟಿ
ಹಸಿವುಗಳದೇ ರಣಕೇಕೆ
ಮಾಮೂಲಿಯಾಗಿದೆ ಕೇಳಿಸಿಕೊಳ್ಳುವುದು
ಈ ನಡುವೆ
ಬಂಡವಾಳ ಬಡಾವಣೆ ಜನರಿಗೆ ಹಬ್ಬವಂತೆ
ಮನೆಮನೆಯಿಂದ ಹೊರಟುನಿಂತಿವೆ
ಕೆಜಿಗಟ್ಟಲೇ ತೂಗುವ
ಅರಿಷಿಣ, ಬಿಳಿ ಲೋಹಗಳು
ಹಸಿದೊಡಲಗಳ ಕೂಗು ಕೇಳದ ಇವರಿಗೆ
ಉಣ್ಣದ ಲಿಂಗದ ಮೇಲೆ
ಎಷ್ಟೊಂದು ಭಕುತಿ
ಎಷ್ಟೊಂದು ಕಾಳಜಿ!?
**********************************
ಕೊರೋನಾ ಪ್ರಸ್ತಾಪವಿರದೇ ಇದ್ದರೆ ಚೆನ್ನಾಗಿರುತ್ತಿತ್ತು. ವಿಷಯಾಂತರ ಆದಂತೆ ಆಗಿದೆ.ಉಳಿದಂತೆ ಚೆನ್ನಾಗಿದೆ
ಧನ್ಯವಾದಗಳು ತಮ್ಮ ಪ್ರತಿಕ್ರಿಯೆಗೆ… 🙂
Super medam
ಧನ್ಯವಾದಗಳು ತಮ್ಮ ಪ್ರತಿಕ್ರಿಯೆಗೆ
Superr madam
ಧನ್ಯವಾದಗಳು ತಮ್ಮ ಪ್ರತಿಕ್ರಿಯೆಗೆ
ಕಾಲಕ್ಕೆ ತಕ್ಕಂತೆ ಸರಿಯಾಗಿ ಬರಿದಿರಿ
ಧನ್ಯವಾದಗಳು ತಮ್ಮ ಪ್ರತಿಕ್ರಿಯೆಗೆ
ವಾಸ್ತವದ ನೆಲೆಗಟ್ಟಿಗೆ ಹೆದರಿ ಒಣ ಮೌಢ್ಯದ ಭಕ್ತಿ ಬಿತ್ತಿದ ಅವನಿಗೆ ಕಾವ್ಯದ ಚಾಟಿಯೇಟು.
ಅಭಿನಂದನೆಗಳು.
ಡಿ.ಎಂ. ನದಾಫ; ಅಫಜಲಪುರ