ಖಾಲಿ ಬೆಂಚುಗಳ ಪ್ರಶ್ನೆ
ದೇವು ಮಾಕೊಂಡ
ನರೇಂದ್ರ, ನರೇಂದ್ರ!
ಆಗ ಕೂಗಿನಲಿ
ಏಕನಾದವಿತ್ತು
ಹಾಳೆಗಳು ಮೆಲುಕು ಹಾಕುತ್ತಲೇ ಇದ್ದವು
ಕವಿತೆಯಾಗಿ
ಹಾಡಾಗಿ
ಈಗ
ಆತ
ಕಥೆಯಾಗಿದ್ದಾನೆ
ಉಪಮೇಯಗಳ ನಡುವೆ ಸಿಲುಕಿ
ಅಂತೆಕಂತೆಗಳ ಸಾಲು ಸೇರಿ
ಅವನು ಕಟ್ಟಿ ಮೇಯಿಸಿದ ಧರ್ಮ
ಹಗ್ಗ ಹರಿದುಕೊಂಡು
ಗೂಟ ಬದಲಿಸಿಕೊಂಡಿದೆ
ಬಾಲಿಶ ಮೋಹ ಮಹಲುಗಳಿಗೆ ಅಂವ ನೆಟ್ಟ ಪಡಿ ಪದಾರ್ಥಗಳು
ಹಸಿಮಣ್ಣಿನ ಹುಸಿ ಬೀಜಗಳಾಗಿವೆ
ನಾವೀಗ ಖಾಲಿ ಮೇಜುಗಳ ಹಿಂದೆ ನಿಂತು
ಕಪ್ಪು ಹಲಗೆಯ ಮೇಲೆ ಬರೆಯುವ ಹಾಗಿಲ್ಲ
ಸಂತನೆಂದು
ಸನಾತನ ಪರಿಚಾರಕನೆಂದು
ಈಗ
ಖಾಲಿ ಬೆಂಚುಗಳೆ ಪ್ರಶ್ನೆ ಕೇಳುತ್ತಿವೆ
ಅವನ ಮನೆಗೆ ಬಾಗಿಲುಗಳು ಎಷ್ಟೆಂದು
ಹಾಗಾಗಿ
ನನ್ನ ತರಗತಿಯಲ್ಲಿ ನೀನೊಬ್ಬ ಪ್ರಶ್ನಾರ್ಥಕ ಚಿಹ್ನೆ
************************
ಕವಿತೆ ತುಂಬಾ ಚೆನ್ನಾಗಿದೆ.. ಸರ್
ಅಭಿನಂದನೆಗಳು ಗುರುಗಳೇ
ಖಾಲಿ ಬೆಂಚುಗಳಲ್ಲಿ ಉತ್ತರ ಸಿಗದ ಪ್ರಶ್ನಾರ್ಥಕ ಚಿಹ್ನೆ??
ಸೂಪರ್ ಸರ್
Thank you sir