ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಕೋಗಿಲೆ ಸುಜಾತಾ ಗುಪ್ತಾ ಮಾಮರದ ಕೊಗಿಲೆಯೇ ಒಲವಿನ ಯಾವ ಭಾವವಿಲ್ಲಿ ಇಹುದೆಂದು.. ಕೊರಳೆತ್ತಿ ರಾಗಾಲಾಪಿಸುವೆ ಏತಕೀ ವ್ಯರ್ಥಾಲಾಪನೆ.. ಇನಿಯನಾ ಬಾಹುಬಂಧನದಲ್ಲಿ ಜಗಮರೆತು ನಾನಿರಲು ಅಂದು ನಿನ್ನ ಕುಹೂ ಕುಹೂ ರಾಗಕೆ ನನ್ನ ಮನ ಪಲ್ಲವಿ ಹಾಡಿತ್ತು.. ಇನಿಯ ಸನಿಹದಲಿರಲಂದು ಜೀವನದೆ ನಾದಮಯ ಉಸಿರಿರಲು.. ನಿನ್ನ ಕಂಠದಾ ಸಿರಿ ಆಗಿತ್ತು ನನ್ನೆದೆಗೆ ಒಲವಿನ ರಾಗಸುಧೆ.. ಇಂದು ನೀನೂ ನಾನೂ ಒಂಟಿ ಪ್ರೇಮ ಯಾನದೆ.. ಪುರ್ರೆಂದು ಹಾರಿಹೋಯಿತೇನು ನಿನ್ನೊಲವಿನ ಜೋಡಿ,ಭರಿಸದೆ ಆಲಾಪಿಸುತಿರುವೆಯಾ ಈ ವಿರಹ ಗೀತೆ.. ನಿನ್ನೀ ಕಂಠದಿಂದ ವಿರಹಗೀತೆ ನಾ ಕೇಳಲಾರೆ.. ಒಲವಿನ ಖಜಾನೆಯ ಮುತ್ತುಗಳ ನಾ ಹೊರ ಚೆಲ್ಲಿದರೆ ಎಂದೂ.. ಶೂನ್ಯತೆಯಲಿ ನಾ ಭವ್ಯತೆಯ ಸೃಷ್ಟಿಸಲಾರೆ.. ಶ್ರುತಿ ತಪ್ಪಿದ ವಿರಹಗೀತೆ ನಾ ಒಲ್ಲೆ ಹೇ ಕೋಗಿಲೇ ಸಾಕು ಮಾಡು ಈಗಲೇ.. ನೀ ಕಣ್ಮರೆಯಾಗಿ ಹೋಗೇ ಕೂಡಲೇ.. ಮರುಕಳಿಸದಿರಲೆನ್ನ ಪ್ರೇಮಭಾವ… ***************************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಬಂಧಿ ನಾನಲ್ಲ ವೀಣಾ ರಮೇಶ್ ನಿನ್ನ ನೆನಪುಗಳೇ ನನ್ನ ಬಂಧಿಸಿರುವಾಗ ಈ ಗ್ರಹಬಂಧನ ನನ್ನನೇನೂ ಕಾಡಲಿಲ್ಲ ಹುಡುಕುವ ಪದಗಳು ಬಾವನೆಗಳಲೇ ಬಂಧಿಸಿರುವಾಗ ನಾ ಬಂಧಿ ಅನ್ನಿಸಲಿಲ್ಲ ಎದೆಯ ಬಡಿತದ ಪ್ರತಿ ಸದ್ದಲ್ಲೂ ಕಾವಲಿರಿಸಿದ,ನಿನ್ನುಸಿರು ಈ ಗ್ರಹಬಂಧನ ನನಗೆ ಹಿಂಸೆ ಅನ್ನಿಸಲಿಲ್ಲ ನಿನ್ನ ನೆನಪುಗಳೇ ನನ್ನ ಜೊತೆಯಿರುವಾಗ ಪ್ರತಿ ಮೂಲೆಗೂ ನನ್ನ ಕರೆದೊಯ್ಯುವಾಗ ನಾ ಬಂಧಿ ಅಂತ ಅನ್ನಿಸಲಿಲ್ಲ ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಅಸ್ವಸ್ಥ ಅಭಿಪ್ರಾಯ –ನೂರುಲ್ಲಾ ತ್ಯಾಮಗೊಂಡ್ಲು ವಟಗುಡುವ ಕಪ್ಪೆಗಳಂತಿರುವ ಕೆಲ ಮೂರ್ಖ ಆಂಕರರು; ನೋಟಿನಲಿ ಮೈಕ್ರೊ ಚಿಪ್ಪುಕಂಡುಕೊಂಡ ವಿಜ್ಞಾನ ದೇವಿ ಪುರುಷರು ! -ಎಂದಿನಂತೆ ವಟಗುಡುವುದೇ ಅವರ ಕೆಲಸವೆಂದು ನಾನೂ ಸುಮ್ಮನಿರಲಾರದೆ ಕಪ್ಪಗೆ ಜಿನುಗುವ ಬಿಸಿಲು ಮಳೆಯ ಹಾಗೆ ಒಂದೆರಡು ಕವಿತೆಯ ತುಣುಕುಗಳನ್ನು ಹಾಳೆಯ ಮೇಲೆ ಹರಿಸುತ್ತೇನೆ ನನಗೆ ಗೊತ್ತಿದೆ ಮತ್ತೆ ಎಲ್ಲರಿಗೂ ಗೊತ್ತಿರುವ ವಿಷಯವೇ ; ಈ ಶತಮಾನದ ಪೆಂಡಮಿಕ್ ರೋಗ ! ‘ಕೊರೊನಾ’ ಚೈನಾದಿಂದ ವಕ್ಕರಿಸಿದ್ದೆಂದು ಆದರೆ , ಅದು ನಮ್ಮ ದೇಶದ ಸರಹದ್ದುಗಳನ್ನು ದಾಟಿದ್ದು ಹೇಗೆಂದು ಗುಪ್ತಾಚಾರದವರಿಗೆ ತಲೆ ಬಿಸಿಯ ವಿಷಯ ಪಾಪ ಅವರೇನೊ ತಲೆಕೆಡಿಸಿಕೊಂಡಂತಿಲ್ಲ ! ಹಾಗೆ ತಲೆ ಕೆದರಿ ಕೊಂಡಿದ್ದರೆ ಒಂದು ಕೋಮಿನವರಿಗೆ ವರ್ಣ ಬೇಧದ ಕ್ವಾರಂಟೈನ್ ಗಳನ್ನು ರಚಿಸಲಿಕ್ಕೆ ಅವಕಾಶ ಕೊಡುತ್ತಿರಲಿಲ್ಲ ನನ್ನ ಬೃಹತ್ ಪ್ರಜಾಸತ್ತಾತ್ಮಕ ದೇಶದಲಿ ಇಂಥ ಅಮಾನವೀಯ ಕೃತ್ಯಗಳನ್ನು ಖಂಡಿಸದ ಆಶಾಢಭೂತಿ ನಾಯಿಗಳು ಆಂಕರುಗಳ ನಡುವೆ ಫೋಸು ಕೊಟ್ಟು ಚಪ್ಪಾಳೆ ಹೊಡೆಯುತ್ತಾರೆ ಮನೆ ದೀಪ ಆರಿಸಿ ಹೊರಗಿನ ಕತ್ತಲಿಗೆ ಮೇಣ ಉರಿಸಿ, ಕರಗುವ ಮೇಣ ದಂತೆ ಕಿಟಕಿಯಲೇ ಕರಗಿಹೋಗುತ್ತಾರೆ… ************************************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ವಿಧಾಯ ಹೇಳುತ್ತಿದ್ದೇವೆ ದೇವವರ್ಮ ಮಾಕೊಂಡ(ದೇವು) ಮಧುರ ಸ್ಪರ್ಷವಿತ್ತ ನೆನಪುಗಳು ಮುಳುಗುತ್ತಿವೆ ಕಣ್ಣುಗಳ ಮುಂದೆ ಹಾದು ಹೋಗುತ್ತಿವೆ ದಿನ ದಿನ ಕಳೆದ ಘಟನೆಗಳು ಭಯವಿದೆ ನನಗೀಗ ನೂರಾರು ವರುಷಗಳಿಂದ ಪಕ್ಕೆಲುಬುಗಳಲಿ ಬಚ್ಚಿಟ್ಟಿದ್ದ ನೆನಪುಗಳು ಅಭದ್ರಗೊಳ್ಳುತ್ತಿವೆ ಎಂದು ಹೇರಳವಾಗಿರುವ ಸಿಡಿಲು ಮಳೆ ಹನಿಗಳಿಂದ ನಾನು ಏಕಾಂಗಿಯಾಗಿದ್ದೇನೆ ಸ್ವರ್ಗದ ಹಾದೀಲಿ ದುಃಖಗಳ ಗುರುತ್ವಾಕರ್ಷಣೆಯ ತುದಿಗೆ ಒರಗಿಕೊಂಡು ನಾನೀಗ ಕಳೆದು ಹೋದ ಜೋತಿರ್ವರ್ಷಗಳ ಮೆಲಕು ಹಾಕುತ್ತ ನಿಂತಿರುವೆ ಲಿಖಿತ ಡೈರಿಗಳು ಶೀರ್ಷಿಕೆ ರಹಿತ ಪದ್ಯಗಳು ರಾತ್ರಿ ಮಂಡಿಸಿದ ಕನಸುಗಳು ಕಳೆದುಕೊಂಡು ಬರಿ ಅರೆಬರೆ ತಿದ್ದಿದ ನಂಬಿಕೆ ಹದೀಸ್ ಪುರಾಣಗಳ ನಡುವೆ ನಿಂತಿದ್ದೇನೆ ನೋಡಿ ವರ್ಷಕ್ಕೊಂದೆರಡು ಸಲ ತ್ರಿವರ್ಣ ಧ್ವಜದ ಕೆಳಗೆ ಮಸುಕಾದ ಹೆಜ್ಜೆಗುರುತುಗಳು ಉಸಿರು ಕಟ್ಟಿದ ಗಂಟಲಿಂದ ಬರುವ ಶುಭಾಶಯ ಸಹಾನುಭೂತಿಗಳು ಮಿನುಗುತ್ತಿವೆ ಮರುದಿನ ಮತ್ತೆ ಅಸಮ ಉಸಿರು ಎದೆಬಡಿತ ! ಬನ್ನಿ ನೋಡಬನ್ನಿ ನಾವು ಎಷ್ಟೊಂದು ನಿಧಾನವಾಗಿ ಎಷ್ಟೊಂದು ಅಭಾರವಾಗಿ ಸಾಯುತ್ತಿದ್ದೇವೆ ಗಲ್ಲಿಯಲಿ ಕನಸು ಕಂಡ ಆತ್ಮಗಳು ಷಹರನಲಿ ಅಳಿಯುತ್ತಿವೆ ಭಯ ಬೆನ್ನುಮೂಳೆ ಸುತ್ತುವಾಗ ಖುಷಿಯನ್ನು ರಕ್ತನಾಳ ಸುಡುತ್ತಿದೆ ಹೀಗೆ… ದಿನೇ ದಿನೆ ವಿಧಾಯ ಹೇಳುತ್ತಿದ್ದೇವೆ ನಾವು ನೋಡಬನ್ನಿ ನೀವು ——–

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಆಸ್ಪತ್ರೆಗಳು ಸಿ ವಾಣಿ ರಾಘವೇಂದ್ರ ರೋಗಗಳ ಭೀತಿ ಮನ-ಮನೆಗಳಲ್ಲಿ ಆಸ್ಪತ್ರೆಗಳಲ್ಲಿ ಮೂರು ನಾಲ್ಕು ರೋಗಗಳು ನೂರಾರು ರೋಗಿಗಳಲ್ಲಿ ಬಿಡದು ರೋಗಗಳು ಮೊಲೆ ಹಾಲುಗಳನ್ನು ನವಜಾತ ಶಿಶುಗಳನ್ನು ಎಲ್ಲ ಕಲೆತ ಜಗದ ವೈದ್ಯರು ಒಟ್ಟಾಗಿ ಚಿಕಿತ್ಸೆ ನೀಡಿದರೂ ಮತ್ತಷ್ಟು ಅಸಾಧ್ಯ ರೋಗಗಳು ರೋಗ ನಾಶವಾಗುವ ತನಕ ಆಸ್ಪತ್ರೆಗಳು ರೋಗಿ ನಾಶವಾಗುವ ತನಕ ರೋಗಗಳು *****

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನನಸಿನೊಳಗೊಂದು ಕನಸು ಹುಳಿಯಾರ್ ಷಬ್ಬೀರ್ ನನ್ನ ಕವಿತೆಯೊಳಗೆ ಬದುಕು ಮಾತಾಡುತ್ತಿದೆ ನಿಜವಾಗಿಯೂ ನಾವು ಬಡವರು ಎಂದು ನೀವು ಕರೆದವರು ದಲಿತರು ಶ್ರಮಿಕರು ಅಲ್ಪ ಸಂಖ್ಯಾತರು ನೀವು ಹಾಕಿದ ಚೌಕಗಳೊಳಗೆ ನಡೆಸಲ್ಪಡುವ ಚದುರಂಗದ ದಾಳಗಳು.. ನನ್ನ ಕವಿತೆಯೊಳಗೆ ಬದುಕು ಮಾತಾಡುತ್ತಿದೆ ನಾನು ಮಾತಾಡುವಾಗ ನಿಮ್ಮ ಕಿವಿ ಗಬ್ಬುನಾತದ ಸಂಡಾಸಿನೊಳಗೆ ಕೂತು ತುಕ್ಕು ಹಿಡಿದ ತಗಡಿನ ಮೇಲಿನ ಅತೃಪ್ತ ಸಾಲುಗಳಲ್ಲಿ ಕಣ್ಣು ಹೂತು ಸೋತು ಹೋದ ನಿಮ್ಮ ಪಂಚೇಂದ್ರಿಯಗಳ ಪ್ರಜ್ಞಾವಂತಿಕೆಗೆ ಅಕಾಲಿಕ ಆಮಶಂಕೆ….! ಈ ಅಯೋಮಯದೊಳಗೆ ನಿಮಗೆ ಬಿತ್ತಂತೆ ಒಂದು ಕನಸು ನಿಮ್ಮದೇ ಮಗು ದಿಢೀರನೇ ಬಾಗಿಲು ಒದ್ದು ಕಟ್ಟಿದ “ಉಚ್ಚೆ ” ನುಗ್ಗಿಸಿ ಹಿಂಡಿದ ನಿಮ್ಮ ಮುಖದ ಬೆವರಲ್ಲಿ ಬೆರೆಸಿ ಉಪ್ಪೊಳಗೆ ಉಪ್ಪಾದಂತೆ. ನನ್ನ ಕವಿತೆಯೊಳಗೆ ಬದುಕು ಮಾತಾಡುತ್ತಿದೆ ನಾವು ಬಡವರು ಕತ್ತಲೆಯ ಕಂಬಳಿಯನ್ನು ಹಾಸಿ ಹೊದ್ದು ಮಕ್ಕಳಿಗೂ ಹೊದಿಸಿದವರು ಖೋಟಾ ಬೌದ್ಧಿಕತೆಯ ಬಿಟ್ಟಿ ಬೆಳಕಿನಲ್ಲಿ ಹೇಳ ಹೆಸರಿಲ್ಲದೆ ಕೊಚ್ಚಿ ಹೋದವರು.. ಖುಲ್ಲಾ ಆಗಿರುವ ಅಟ್ಟದಲ್ಲಿ ಮರ್ಯಾದೆಗೆಟ್ಟು ಆಟವಾಡುತ್ತಿರುವ ಇಲಿಗಳ ಸದ್ದು ಬಂದರೂ ಬರಬಹುದು ತಿಂದು ತೇಗುವುದಕ್ಕೆ ದಾಸೀಮಯ್ಯನ ಇನ್ನೊಂದು ಬೆಕ್ಕು ಕದ್ದು… ನನ್ನ ಕವಿತೆಯೊಳಗೆ ಬದುಕು ಮಾತಾಡುತ್ತಿದೆ… ! *******

ಕಾವ್ಯಯಾನ Read Post »

ಕಥಾಗುಚ್ಛ

ಕಥಾಯಾನ

ಸಂತೆಯಲಿ ಕಂಡ ರೇಣುಕೆಯ ಮುಖ ಮಲ್ಲಿಕಾರ್ಜುನ ಕಡಕೋಳ ಸಂತೆಯಲಿ ಕಂಡ ರೇಣುಕೆಯ ಮುಖ ಸಂತೆಯಲಿ ಕಂಡ ರೇಣುಕೆಯ ಮುಖ   ಒಂದಲ್ಲ, ಎರಡಲ್ಲ, ಬರೋಬ್ಬರಿ ಎಂಟು ವರುಷಗಳ ಕಾಲ ಅವಳ ಕಣ್ಣಲ್ಲಿ  ಕಣ್ಣಿಟ್ಟು ನಿರಂತರವಾಗಿ ನೋಡಿದ ನನ್ನ ನೆನಪಿಗೆ ಸಾವಿಲ್ಲ. ಮರೆತೆನೆಂದರೂ  ಮರೆಯಲಾಗದ ಮೃದುಲ ಮುಖವದು.  ಅದೊಂದು ಅನಿರ್ವಚನೀಯ ಮಧುರ ಸ್ಮೃತಿ. ಹೌದು, ಅವಳ ” ಆ ಮುಖ ” ನನ್ನ  ಸ್ಮೃತಿಪಟಲದಲ್ಲಿ ಕಳೆದ ಶತಮಾನದಿಂದ ಹಾಗೇ ಅನಂತವಾಗಿ ಸಾಗಿ ಬರುತ್ತಲೇ ಇದೆ. ನನ್ನ ಪಾಲಿಗೆ ಅದೊಂದು ಬಗೆಯ ಸಂವೇದನಾಶೀಲ ಪ್ರ(ತಿ)ಭೆಯ  ಸುಮಧುರ ಸಮಾರಾಧನೆ. ಅವಳನ್ನು  ಅದೆಷ್ಟು ಬಾರಿ ಭೆಟ್ಟಿ ಮಾಡಿ,  ಅವಳೊಂದಿಗೆ ಮಾತಾಡಿ, ಜೀವಹಗುರ  ಮಾಡಿಕೊಂಡಿದ್ದೇನೆಂಬುದು ಲೆಕ್ಕವಿಟ್ಟಿಲ್ಲ. ಯಡ್ರಾಮಿಯ ಶಾಲಾದಿನಗಳು  ಮುಗಿಯುವ ಮುಜೇತಿ… ಅವಳ ನನ್ನ  ಭೆಟ್ಟಿ. ಅವಳನ್ನು ಮಾತಾಡಿಸುವ ದಿವ್ಯ  ಕುತೂಹಲ ನನಗೆ. ಆದರೆ ಅವಳು  ಹುಂ..ಹೂಂ.. ನನ್ನನ್ನು ಕಣ್ಣೆತ್ತಿಯೂ  ನೋಡುತ್ತಿರಲಿಲ್ಲ. ಆಕೆಗೆ ನಾನ್ಯಾವ ಲೆಕ್ಕ, ಹೇಳಿಕೇಳಿ ನಾನು ‘ಹಸೀಮಡ್ಡ’ ಎಂದು ನನಗೆ ನಾನೇ ಅಂದುಕೊಳ್ಳುತ್ತಿದ್ದೆ. ಹೀಗೆ ವರುಷ ನಾಲ್ಕು ಕಳೆದಿರಬಹುದು.   ಅದೊಂದು ಮಟಮಟ ಮಧ್ಯಾಹ್ನ . ದುಡಿದು, ದಣಿದು ಬಂದಿದ್ದಳು. ಕಂದು ಬಣ್ಣದ ಸೀರೆಯುಟ್ಟಿದ್ದಳು. ಕಡಲೇಬೇಳೆ ಬಣ್ಣದ ಹಣೆಯ ಮೇಲಿದ್ದ ಗಂಧ ಕುಂಕುಮದ ಬೊಟ್ಟೆಲ್ಲ ಕರಗಿ ಕಟಿನೀರು ಬಸಿದು ಮೃದುಮಲ್ಲಿಗೆ ಮುತ್ತಿನಂತೆ, ಹವಳದ ತುಟಿದಾಟಿ ಅವಳೆದೆಯ ದಾಸವಾಳಗಳ ಮೇಲೆ ತಟಕು ತಟಕೆಂದು ಹನಿಸುತ್ತಿದ್ದವು. ಬಾವಾಗೋಳ ತೆಕ್ಕೆಯ ಪಕ್ಕದ ಹಣಮಂದೇವರ  ಗುಡಿಯ ಬಾಜೂಕೆ ರುದ್ರಯ್ಯ ಮುತ್ಯಾನ ಹೊಟೇಲ್. ಜೋಡು ಬಸರಿ ಗಿಡದ ದಟ್ಟನೆರಳು : ಪತರಾಸಿನ  ಹೊಟೇಲಿಗೂ ಹಣಮಪ್ಪನ ಗುಡಿಯ  ಪೌಳಿಗೂ.    ಗುಡಿಕಟ್ಟೆಯ ಮೇಲೆ ಕುಂತಿದ್ದಾಕೆ.., ಇನ್ನೇನು ನಾನು ಬಂದು  ” ತನ್ನ  ಮಾತಾಡಿಸಿ ಬಿಡುತ್ತೇನೆಂಬಂತೆ ”  ಕಮಟಾದ ಹರಕು ಸೀರೆಯ ಸೆರಗಿನಿಂದ  ಮುಖದ ಮೇಲಿಂದುದುರುವ ಕಟ್ನೀರು  ಒರೆಸಿಕೊಂಡಳು. ಸೆರಗ ಮರೆಯಲಿದ್ದ  ಅರಿಶಿಣ ಉಂಡೆದ್ದ ಕೆಂಪು ಕುಪ್ಪಸದ  ದಾಸವಾಳಗಳ ಮೇಲೆ ಬಿದ್ದ ಕಟಿನೀರಿನ  ಹಸಿ ಹಸಿ ಗುರುತುಗಳು..!  ಆ ಹಸಿ ಗುರುತುಗಳ  ಮೇಲೆ  ಬಿಸಿ ಬಿಸಿ ಹಾಡಿನ ಚಿದ್ವಿಲಾಸದ ಸಾಲುಗಳನ್ನು  ಬರೆಯಲು  ನನ್ನ ಬರಹಗಣ್ಣು ಕನಸಿದವು. ಅಭಿಜಾತ ಪ್ರೀತಿಯ ಪ್ರಥಮವಾಂಛೆ ಅರಳಿ ನಿಂತ ಕವಿಸಮಯ. ” ಅವು” ನನ್ನ ಕಳ್ಳಗಣ್ಣಿಗೆ ಬಿದ್ದುದು ಗೊತ್ತಾಗಿ ನನ್ನತ್ತ ಮಿಂಚಿನ ಕಣ್ಣುಹಾಯಿಸಿ, ಸೆರಗು ಸರಿಪಡಿಸಿಕೊಂಡಳು. ಆಹಾ..! ಅದೆಂಥ ಮಾಧುರ್ಯದ  ಕಣ್ಣುಗಳವು…! ಒಂದೊಂದು ಕಣ್ಣಲ್ಲೂ  ಪೂರ್ಣಚಂದಿರಿನ ಹಾಲ್ಬೆಳದಿಂಗಳು…   ನನಗೆ ಮಧ್ಯಾಹ್ನವೇ ಮರೆತು ಹೋಗಿತ್ತು.  ಏನಿಲ್ಲವೆಂದರೂ ವಯಸಿನಲ್ಲಿ ನನಗಿಂತ  ಒಂದೆರಡು ವರುಷವಾದರೂ ಹಿರೀಕಳು. ಅದ್ಯಾವುದು ಅಡ್ಡಿಯಾಗಿ  ಇಬ್ಬರನು ಕಾಡಲಿಲ್ಲ, ಕಾಣಲಿಲ್ಲ. ಕಣ್ಣಿಗೆ ಕಾಣದ  ವಯಸು. ಕೊರಳ ಮೋಹದ ಬಲೆಗೆ ಕರುಳಬಳ್ಳಿ ಸುತ್ತಿಕೊಂಡ, ಬ್ರಹ್ಮಾಂಡ ಬೀಜಗಳ ಖಂಡುಗ ಕನಸು. ಹೇಳು, ಕನಸುಗಳಿಗೆ ಒಡತಿಯಾಗುವೆಯಾ…ಎಂದು ಕೇಳುವುದನ್ನ ತಡೆ ಹಿಡಿದು  ಹೆಸರು ಕೇಳಿದೆ. ” ರೇಣುಕ ” ಎಂದಳು. ನಾನು ಈ ಊರಿನವಳಲ್ಲ…ನನ್ನ ಅಪ್ಪ  ಯಾರಂತ ನನಗೇ ಗೊತ್ತಿಲ್ಲ. ಅವ್ವ  ಜೋಗೇರ ಚೆಂಗಳಿ…ದೇವರಿಗೆ  ಬಿಟ್ಟವಳು… ನಾನವಳ ಮಗಳು.  ನಾನು ಪ್ರಶ್ನಿಸದಿದ್ದರೂ ತಾನೇ ಕತೆ  ಹೇಳಿದಂತೆ  ಹೇಳ ತೊಡಗಿದಳು. ” ನಂಗೊತ್ತಿಲ್ಲ… ಅದೇಕೋ ನಿಮ್ಮುಂದೆ  ಎಲ್ಲ ಹೇಳಿಕೊಳ್ಳಬೇಕನಸ್ತಿದೆ ” ಎನ್ನುತ್ತಾ ತನ್ನ ಜೀವದ ಗೆಳತಿ ಲಂಬಾಣಿ ತಾಂಡಾದ  ನಿಂಬೆವ್ವ  ತನಗೆ ಮಾಡಿದ ಸಹಾಯ, ಸಹಕಾರ ಕುರಿತು  ಹೇಳುತ್ತಾ., ಮಠದ ಬೀಜದಹೋರಿ ಯೊಂದು ತನ್ನನ್ನು  ಬೆನ್ನಟ್ಟಿ ದಾಳಿ ಮಾಡಿ, ಹೆಣ್ತನದ ಜೀವಶಿಲ್ಪಕ್ಕೆ ಕೈಹಾಕಲು ಬಂದಾಗ ತನ್ನನ್ನು ಕಾಪಾಡಿದಾಕೆ. ಹೀಗೆ ಲಮಾಣೇರ ನಿಂಬೆವ್ವ ತನ್ನ ಕುಟುಂಬದ “ಜೀವದ ಜೀವ” ಎಂದಳು.    ಅಂದು ಸೋಮವಾರ ಯಡ್ರಾಮಿ ಸಂತೆಯದಿನ,  ಅಮ್ಮನ ಕೊಡ ತುಂಬಿ ತುಳುಕುವಷ್ಟು ರೊಕ್ಕ. ಹಣಮಂದೇವರ ಮುಂದಿಟ್ಟ ತುಂಬಿದ ತಾಮ್ರದ ಕೊಡ, ಬಿಚ್ಚಿಟ್ಟ ತನ್ನ  ಕಾಲ್ಗೆಜ್ಜೆ,  ಭಂಡಾರದ ಚೀಲ  ತೋರಿಸಿದಳು. ಅದು ನನ್ನ  ತಾಯಿಗೇ ಕಡೆಯಾಗಲಿಲ್ಲ. ನನಗೂ  ಕೊಡ ಹೊರಿಸಿದಳು ಗುಡ್ಡದ ಅಮ್ಮ. ಮೂರು ವರುಷಗಳಿಂದ ಗುಡ್ಡಕ್ಕೆ ಹರಕೆ  ತೀರಿಸುತ್ತಿದ್ದೇನೆ. ಅಮ್ಮನ ಶಕ ಸಣ್ಣದಲ್ಲ  ಮತ್ತು ಸುಮ್ಮನಲ್ಲ..  ಡೇಕರಿಕೆ ಶುರುವಾಗಿ., ಕಾಲಿಗೆ ಗೆಜ್ಜೆ  ಕಟ್ಟಿಕೊಂಡಳು. ಕುಣಿಯುತ್ತಾ  ಲೋಕಾಕರ್ಷಣೆಯ ಝಲಕಿನಲಿ  ಹಾಡ ತೊಡಗಿದಳು. ನೋಡ ನೋಡುತ್ತಿದ್ದಂತೆ  ಸಂತೆಯ ಜನ  ಗಿಜಿಗುಡತೊಡಗಿದರು. ರೊಕ್ಕದ ಝಣ ಝಣ. ಕನಸು ಮತ್ತು ಕಣ್ಣೀರು ಬಿಕರಿಯ ಕ್ಷಣ. ಹಾಗನಿಸಿದ್ದು ನನಗೆ. ಎಡ ಬಗಲಿಗೆ ದಾರೂ ತುಂಬಿದ ಸಣ್ಣ ತತ್ರಾಣಿ ಕಟ್ಟಿಕೊಂಡ ಎಣ್ಣೆಗಮಟಿನ ಜಡೆಯ ಮುದುಕನೊಬ್ಬ ತುಂತಣಿ, ಚೌಡಿಕೆ  ನುಡಿಸುತ್ತ ಜನರ ಹಣೆಗೆ ಭಂಡಾರ  ಹಚ್ಚುತ್ತಾ, ಬೇವಿನ ಸೊಪ್ಪಿನ ಸಡಿಲ ಸಿವುಡು ಸವರುತಾ ಉಧೋ..ಉಧೋ..ಉಧೋ.. ಉದ್ಘೋಷಣೆಗಳೊಂದಿಗೆ… ಜನ ಜಂಗುಳಿಯ ನಡುವೆ ಸೇರಿಕೊಂಡ.  ಆರಂಭಕ್ಕೆ ಅದೆಷ್ಟೋ ವರಗಳು  ರೇಣುಕೆಯ ಮದುವೆ ಮಾಡಿಕೊಳ್ಳಲೆಂದು ಮುಂದೆ ಬಂದರೂ, ಗುಡ್ಡದ ಅಮ್ಮ ಹಾಗೂ ತನ್ನ ತಾಯಿಗೋಸ್ಕರ ರೇಣುಕ ಮದುವೆ ನಿರಾಕರಿಸಿದಳು. ಈಗೀಗಂತು ಐಹಿಕ ಸುಖದ ಮಾತುಗಳಿಂದ ವಿಮುಕ್ತಳು. ಅಬ್ಬಾ..! ಆಕೆ ಗೆಜ್ಜೆ ಕಟ್ಟಿಕೊಂಡು ಲಯಬದ್ದವಾಗಿ ಕುಣಿಯುತ್ತಾ  ಹಾಡುತ್ತಿದ್ದರೆ ಉತ್ತರಾದಿಯ ರಾಧೆ -ಕೃಷ್ಣರ ಹಾಡಿನ ಮೋಡಿ..!  ಆಹಾ!! ಮಣ್ಣ ನಾದದಲಿ ಕಲೆತು ಹೋದ ಅವಳೆದೆಗಣ್ಣುಗಳ ಕುಣಿತ. ಅಭಿಜ್ಞಾನ ಪ್ರೀತಿ ಹುಟ್ಟಿಸುವ ಅವಳ ಸಿರಿಕಂಠದ ಲೋಕ ಸಂಗೀತಕೆ ಮಾರು ಹೋಗದವರಿಲ್ಲ. ಅಂದಿನ ಆ ಪಾರಿಜಾತದ ಅಮಲು – ಘಮಲಿನ ಗಂಧರ್ವ ಗುಂಗಿನಿಂದ ನಾನಿನ್ನೂ  ಪಾರಾಗಿ ಬಂದಿಲ್ಲ. ಅದೆಲ್ಲ ಮಹಾ ಸ್ವಪ್ನದಂತೆ ನನ್ನೆದೆಯಲ್ಲಿ ಸ್ಥಾಯಿಗೊಂಡಿದೆ. ಅದೊಂದು ಮರೆಯಲಾಗದ ಸ್ಥಾಯೀಸ್ಮರಣೆ. ***********************

ಕಥಾಯಾನ Read Post »

ಪುಸ್ತಕ ಸಂಗಾತಿ

ಪುಸ್ತಕ ವಿಮರ್ಶೆ

ಮೂರು ದಾರಿಗಳು ಯಶವಂತ ಚಿತ್ತಾಲ ಮೂರು ದಾರಿಗಳು ಕಾದಂಬರಿ ಯಶವಂತ ಚಿತ್ತಾಲ ಸಾಹಿತ್ಯ ಭಂಡಾರ ಮೂರು ದಾರಿಗಳು ಯಶವಂತ ಚಿತ್ತಾಲರ ಮೊದಲ ಕಾದಂಬರಿ.ಭೀತಿ, ಪ್ರೀತಿ ಮತ್ತು ಭಂಡಾಯ ( ಆತ್ಮನಾಶ) ; ಇವು ಈ ಕೃತಿಯಲ್ಲಿ ಉದ್ಭವಿಸಿದ ಒಂದು ಪ್ರಶ್ನೆಯನ್ನು ಮುಂದಿಟ್ಟುಕೊಂಡು ಮೂರು ವ್ಯಕ್ತಿತ್ವಗಳು ಕಂಡುಕೊಳ್ಳುವ ದಾರಿಗಳು. ಹನೇಹಳ್ಳಿ, ಸಾಣಿಕಟ್ಟಾ, ಗೋಕರ್ಣ ಮತ್ತು ಕುಮಟಾದ ಸುತ್ತಲಿನ ಪರಿಸರದ ಚಿತ್ರಣ, ಭಾಷೆ ಈ ಕಾದಂಬರಿಯಲ್ಲಿ ಸಮೃದ್ಧವಾಗಿ ಮೂಡಿಬಂದಿದೆ. ವಿಶ್ವನಾಥ ಶಾನಭಾಗರು ಸಾಣೇಕಟ್ಟೆಯ ಧಕ್ಕೆಯಿಂದ ಕುಮಟೆಯ ಕಡೆಗೆ ಹೋಗುವ ಬೋಟಿಯನ್ನು ಹತ್ತುವುದರೊಂದಿಗೆ ಕತೆ ಆರಂಭವಾಗುತ್ತದೆ. ವಿಶ್ವನಾಥ ಶಾನಭಾಗರು ಅನುಕೂಲಸ್ಥರು ಮತ್ತು ಅಂಗಡಿಯ ಮಾಲೀಕರು. ಅವರಿಗೆ ನಿರ್ಮಲಾ ಎಂಬ ಒಬ್ಬಳೇ ಮಗಳು. ಅವಳ ಮೇಲೆ ಒಂದು ಅಪವಾದ ಬಂದಿದೆ. ಅದು ಅವಳಲ್ಲಿ, ಪಾಲಕರಲ್ಲಿ, ಕುಟುಂಬದಲ್ಲಿ, ಸಮಾಜದಲ್ಲಿ ಹೇಗೆ ತಲ್ಲಣಗಳನ್ನು ಸೃಷ್ಟಿಸಿದೆ ಎಂಬುದೇ ಇಲ್ಲಿನ ಕಥಾಹಂದರ. ಶಾರದ ಮತ್ತು ವಿಶ್ವನಾಥರ ಮಗಳಾದ ನಿರ್ಮಲೆ ವಿದ್ಯಾಭ್ಯಾಸಕ್ಕಾಗಿ ಕಾರವಾರದ ಚಂದ್ರಭಾಗಿ ಮತ್ತು ಜೋಶಿಯವರ (ಅತ್ತೆ- ಮಾವ) ಮನೆಯಲ್ಲಿದ್ದವಳು. ರಾಮನಾಥ ಅವಳ ಬಾವ. ನಿರ್ಮಲೆ – ರಂಗಪ್ಪನ ಪ್ರಕರಣವನ್ನು ಮಾವನ ಮನೆಗೆ ತಿಳಿಸುವವರು ದೇವಪ್ಪ ನಾಯ್ಕ ಮಾಸ್ತರರು. ಈ ಫೋಟೋಶಾಪಿನ ರಂಗಪ್ಪ,ಪ್ರಿಯಾಗಿ, ವಲ್ಲಿಗದ್ದೆ ಸುಬ್ಬ ಇವರುಗಳಿಗೆ ಊರಿನಲ್ಲಿ ಹೀನ ಸುಳಿಯವರು ಎಂಬ ಹೆಸರಿದೆ.ಅಂತಹ ರಂಗಪ್ಪನ ಅಂಗಡಿಯಲ್ಲಿ ಶಾಲೆಯ ಗೆದೆರಿಂಗ್ ನ ರಾತ್ರಿ ನಿರ್ಮಲಾ ಕಾಣಿಸಿಕೊಂಡ ಸುದ್ದಿ ಊರಲ್ಲಿ, ನೆಂಟರಿಷ್ಟರಲ್ಲಿ ಧಿಗ್ಗನೆ ಹೊತ್ತಿಕೊಳ್ಳುತ್ತದೆ. ಆಗ ಆತಂಕಕ್ಕೆ ಒಳಗಾಗುವ ಶಾನುಭಾಗರು, ಸೀತಾ ಮತ್ತು ದಿ.ಉಪೇಂದ್ರ ಕೇಣಿಯವರ ಮಗ ವಾಸುದೇವನಿಗೆ ಮಗಳ ಮದುವೆ ಮಾಡಿಕೊಡುವ ಪ್ರಸ್ತಾಪ ಇಡುತ್ತಾರೆ. ಇದು ಸಮಾಜದಲ್ಲಿ ಮತ್ತಷ್ಟು ಅನುಮಾನವನ್ನು ಮೂಡಿಸುತ್ತದೆ. ವಾಸುದೇವ ಮಾಸ್ತರಿಕೆ ಮಾಡುತ್ತಿರುವವನು. ಅಂತಸ್ತಿನಲ್ಲಿ ವಿಶ್ವನಾಥರಿಗೆ ಸಾಟಿಯಿಲ್ಲ.ಮದುವೆಯ ಪ್ರಸ್ತಾಪ ಬಂದಾಗ ಸಹಜವಾಗಿ ಸಮಯ ಕೇಳುತ್ತಾನೆ. ನಂತರ ನಿರ್ಮಲೆಯ ಗುಲ್ಲು ತುಂಗಕ್ಕನ ಮೂಲಕ ಸರ್ವವ್ಯಾಪಿಯಾಗುತ್ತದೆ. ಅದು ಬಾಲ್ಯದಿಂದಲೂ ಗೆಳೆಯನಾದ ಶಿನ್ನನ ಮೂಲಕ ಇವನ ಕಿವಿಯನ್ನೂ ತಲುಪುತ್ತದೆ. ಸಾಹಿತಿಯಾದ ವಾಸುದೇವ ಇದಕ್ಕೆಲ್ಲ ತಲೆಕೆಡಿಸಿಕೊಳ್ಳುವುದಿಲ್ಲ. ಮದುವೆಗೆ ತಯಾರಾಗುತ್ತಾನೆ. ಈ ಮಧ್ಯೆ ಸಂಬಂಧಿಕನಾದ ವೆಂಕಟರಮಣ ಹೆಚ್ಚಿನ ವಿಷಯ ತಿಳಿಯಲು ಶಿರಸಿಯಲ್ಲಿ ಖಾನಾವಳಿ ಮಾಡಿಕೊಂಡಿರುವ ಪ್ರಿಯಾಗಿಯ ಬಳಿ ತೆರಳುತ್ತಾನೆ. ಆಗ ಆತ ನೋಡುವುದು ಲೈಂಗಿಕ ರೋಗ ತಗುಲಿಸಿಕೊಂಡು ಹಾಸಿಗೆ ಹಿಡಿದ ವಲ್ಲಿಗದ್ದೆ ಸುಬ್ಬನನ್ನು.ಭಯಂಕರ ಅಸಹ್ಯನಾದ ಆತನನ್ನು ನೋಡಿ ಹೆದರಿ ಮನೆ ಸೇರಿದ ವೆಂಕಟರಮಣ ಮುಂದೆ ಜನರ ಬಾಯಿಗೆ ಆಹಾರವಾಗುತ್ತಾನೆ. ನಿರ್ಮಲಾಳ ಪ್ರಕರಣ ಹಿಂದೆ ಸರಿಯುತ್ತದೆ. ಈ ಮಧ್ಯೆ ನಿರ್ಮಲೆಯ ಮನಸ್ಥಿತಿಯಲ್ಲಿ ಬದಲಾವಣೆ ಉಂಟಾಗುತ್ತದೆ. ಒಂದು ದುರಂತ ಅಂತ್ಯದೊಂದಿಗೆ ಕಾದಂಬರಿ ಕೊನೆಯಾಗುತ್ತದೆ. ಶಿಕಾರಿ, ಕೇಂದ್ರವೃತ್ತಾಂತ ಕಾದಂಬರಿಗಳನ್ನು ಮತ್ತು ಅವರ ಕಥಾಸಂಕಲನಗಳನ್ನು ಓದಿ ಈ ಕೃತಿಯನ್ನು ಓದುವವರು ನೀವಾಗಿದ್ದರೆ ಕೊಂಚ ನಿರಾಸೆಯಾಗಬಹುದು. ಅದೇ ನೀವು ಚಿತ್ತಾಲರ ಅಭಿಮಾನಿಯಾಗಿದ್ದರೆ ಇದನ್ನು ಸವಿಯಲು ಮರೆಯದಿರಿ. ****** ಡಾ. ಅಜಿತ್ ಹರೀಶಿ

ಪುಸ್ತಕ ವಿಮರ್ಶೆ Read Post »

ಕಾವ್ಯಯಾನ

ಕಾವ್ಯಯಾನ

ನೆನಪಿಗೆ ಅಂಜನಾ ಹೆಗಡೆ ಎಲ್ಲ ಮರೆತೆನೆಂದು ಮೈಮರೆತರೂ ಆಗೊಮ್ಮೆ ಈಗೊಮ್ಮೆ ನೆನಪಾಗುವ ಮುಖಗಳಿಗೆ ಮುಖಕೊಟ್ಟು ಮುಂದಕ್ಕೋಡುವಾಗ ಮೈಯೆಲ್ಲ ಮುಳ್ಳು! ನನ್ನದೇ ನೆರಳು ಅಪರಿಚಿತ ಬೆನ್ನಿಗಂಟಿದ ಹಸ್ತಗಳು ಹತ್ತಾರು ದೃಷ್ಟಿಗಳು ಎಲ್ಲ ಅಸ್ಪಷ್ಟ! ಹಳೆಯದನ್ನೆಲ್ಲ ಹರಿದು ಹರಿದು ಹಂಚಿದಂತೆ ಕಾಲಿಗಡರಿದ ಕಲ್ಲು ಕತೆ ಹೇಳುತ್ತಲೇ ಮಣ್ಣಾಗಿ ಹೋದದ್ದು ಅದೇ ವರುಷ ಮಳೆ ಧಾರಾಕಾರ ಸುರಿದದ್ದು ಎಲ್ಲ ಇತಿಹಾಸವೇ ಇರಬೇಕು ಮುಖಗಳೆಲ್ಲ ಕತೆಗಳು ಈಗ! ದೃಷ್ಟಿಗಳೆಲ್ಲ ಬರಿದೇ ನೋಟಗಳು! ಮಣ್ಣಿದ್ದಲ್ಲಿ ಮರ ಮರದ ತುಂಬೆಲ್ಲ ಹೂವು ಹಣ್ಣು ಮಳೆ ಮಾತ್ರ ನಿಂತಿಲ್ಲ ನೆನಪಿಗೆ ತೀರವಿಲ್ಲ ********

ಕಾವ್ಯಯಾನ Read Post »

ಇತರೆ

ವಿದಾಯ

ಚಂದ್ರಕಾಂತ ಕುಸನೂರು ಖ್ಯಾತ ಸಾಹಿತಿ, ಚಿತ್ರ ಕಲಾವಿದ ಮತ್ತು ಹೈಕು ಗಾರುಡಿಗ ಚಂದ್ರಕಾಂತ ಕುಸನೂರು..! ಖ್ಯಾತ ಕಾದಂಬರಿಕಾರ ಚಂದ್ರಕಾಂತ ಕುಸನೂರ ಇಂದು ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು. ಕನ್ನಡ ಸಾಹಿತ್ಯದಲ್ಲಿ ಅಸಂಗತ ನಾಟಕ ಮತ್ತು ಜಪಾನಿ ಮಾದರಿಯ ಹೈಕುಗಳನ್ನು ಪರಿಚಯಿಸಿದ್ದರು ಅವರು. ಹೈಕು ಮಾದರಿಯ ಕವಿತೆಗಳನ್ನು ಸಹ ಕನ್ನಡಕ್ಕೆ ಪರಿಚಯಿಸಿದ್ದರು… ಖ್ಯಾತ ಕಾದಂಬರಿಕಾರ ಚಂದ್ರಕಾಂತ ಕುಸನೂರ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು. ಅವರು ಪತ್ನಿ, ನಾಲ್ವರು ಗಂಡುಮಕ್ಕಳು ಹಾಗೂ ಒಬ್ಬ ಮಗಳನ್ನು ಅಗಲಿದ್ದಾರೆ. ಕಲಬುರಗಿ ಮೂಲದ ಅವರು ಕೆಲ ದಶಕಗಳಿಂದ ಬೆಳಗಾವಿಯಲ್ಲಿ ವಾಸವಾಗಿದ್ದರು. ಚಂದ್ರಕಾಂತ ಕುಸನೂರ ಅವರು ಕನ್ನಡದ ಖ್ಯಾತ ಸಾಹಿತಿಗಳು ಹಾಗೂ ರಂಗಕರ್ಮಿಗಳು. ಅವರು 1931ರಲ್ಲಿ ಕಲಬುರ್ಗಿಯ ಕುಸನೂರಲ್ಲಿ ಜನಿಸಿದವರು. ಎಂ.ಎ; ಬಿ.ಇಡಿ ಪದವಿಗಳನ್ನು ಪಡೆದಿದ್ದಾರೆ ಅವರು. ಕಲಬುರ್ಗಿ ಹಿಂದಿ ಶಿಕ್ಷಣ ತರಬೇತಿ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರು. ಕಲಬುರ್ಗಿಯಲ್ಲಿ “ರಂಗ ಮಾಧ್ಯಮ”ಎಂಬ ನಾಟಕ ಸಂಸ್ಥೆಯ ಸ್ಥಾಪಕರೂ ಅವರು. ಕನ್ನಡದಲ್ಲಿ ಅಬ್ಬರ್ಡ್ ಮಾದರಿ ನಾಟಕಗಳನ್ನು ರಚಿಸಿದ್ದಾರೆ ಅವರು… 1975ರಲ್ಲಿ “ಯಾತನಾ ಶಿಬಿರ” ಕಾದಂಬರಿಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಪುರಸ್ಕಾರವೂ ಲಭಿಸಿದೆ. 1992ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಗೌರವ ಪ್ರಶಸ್ತಿಯೂ ಲಭಿಸಿಗಿದೆ ಅವರಿಗೆ. 2006ನೆಯ ಸಾಲಿನಲ್ಲಿ ನಾಡೋಜ ಪ್ರತಿಷ್ಠಾನದ ಅರವಿಂದ ಪ್ರಶಸ್ತಿ ಕೂಡ ದೊರೆತಿದೆ… ಬಹುಮುಖಿ ಸಾಹಿತಿ ಅವರು– ವಿದೂಷಕ’, ‘ಆನಿ ಬಂತಾನಿ’, ‘ದಿಂಡಿ’ಯಂಥ ಅಸಂಗತ ನಾಟಕಗಳಿಂದ; ‘ಯಾತನಾ ಶಿಬಿರ’, ‘ಚರ್ಚ್‌ಗೇಟ್‌’, ‘ಗೋಹರಜಾನ್‌’, ‘ಮಾಲತಿ ಮತ್ತು ನಾನು’ ಇತ್ಯಾದಿ ಕಾದಂಬರಿಗಳಿಂದ; ಸಣ್ಣ ಕತೆಗಳಿಂದ; ಅನುವಾದಗಳಿಂದ ಸಹೃದಯರಲ್ಲಿ ಸ್ಥಾನ ಪಡೆದಿರುವ ಚಂದ್ರಕಾಂತ ಕುಸನೂರ ಅವರು ಚಿತ್ರಕಲಾವಿದರೆಂಬುದೂ ಬಹುಜನರಿಗೆ ಗೊತ್ತಿರಲಿಕ್ಕಿಲ್ಲ… ಅವರು ಯಾರೆದುರೂ ಹಾಗೆ ಹೇಳಿಕೊಳ್ಳುವ ಸ್ವಭಾವದವರಲ್ಲ ಎಂದ ಮೇಲೆ ಗೊತ್ತಾಗುವುದಾದರೂ ಹೇಗೆ? ಅವರ ನಿಕಟವರ್ತಿಗಳು, ಗೆಳೆಯರು ಮುಂದಾಗಿದ್ದರಿಂದ ಅವರು ಬರೆದ ಕೃತಿಗಳು ಪ್ರಕಟವಾದವು. ಕಲಾಕೃತಿಗಳು ಪ್ರದರ್ಶನಗೊಂಡವು..! ಇನ್ನೂ ಪ್ರಕಟವಾಗದ ಹಸ್ತಪ್ರತಿಗಳು, ಕಲಾಕೃತಿಗಳು ಅವರ ಭಂಡಾರದಲ್ಲಿ ಇವೆ. ಜಾಗದ ಕೊರತೆಯಿಂದ ಎಷ್ಟೋ ಚಿತ್ರಗಳನ್ನು ಸುಟ್ಟು ಹಾಕಿದ್ದೂ ಇದೆ. ಕುಸನೂರರು ಹೇಳುವುದೇನೆಂದರೆ ‘ನಾನು ವೈಯಕ್ತಿಕ ಖುಷಿಗಾಗಿ ಬರೆಯುತ್ತೇನೆ. ಚಿತ್ರ ಬಿಡಿಸುತ್ತೇನೆ. ನನ್ನ ಪಾಲಿಗೆ ಭಾಷೆ, ಬಣ್ಣದ ಜೊತೆಗಿನ ಅಭಿವ್ಯಕ್ತಿಯೇ ಲಿಬರೇಶನ್‌. ಕಲೆಯ ಅನುಸಂಧಾನದಲ್ಲಿ ನಾನು ದೈಹಿಕ, ಮಾನಸಿಕ ಒತ್ತಡಗಳಿಂದ ಬಿಡುಗಡೆಯಾಗುತ್ತೇನೆ. ಆನಂದ ಅನುಭವಿಸುತ್ತೇನೆ. ತುಂಬ ಕಷ್ಟದ ಸಂದರ್ಭದಲ್ಲಿ, ಬದುಕಿನ ಅತಂತ್ರ ಸ್ಥಿತಿಯಲ್ಲಿ ಈ ಕಲೆಗಳು ನನ್ನ ಕೈಹಿಡಿದಿವೆ. ನನ್ನ ವ್ಯಕ್ತಿತ್ವ ರೂಪಿಸಿವೆ’ ಎಂದು ಸಾದರಪಡಿಸಿದ್ದರು ಚಂದ್ರಕಾಂತ ಕುಸನೂರವರು..! ಈ ನಿಲುವಿನಿಂದಾಗಿಯೇ ಅವರು ತಾನು ಸಾಹಿತಿ, ಕಲಾವಿದನೆಂದು ಹೇಳಿಕೊಳ್ಳುವುದಕ್ಕೂ ಮುಜುಗರ ಪಡುದ್ದತ್ತಿರು. ಅವರು ಬರೆದ ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ, ನಾಟಕ ಅಕಾಡೆಮಿ, ಲಲಿತಕಲಾ ಅಕಾಡೆಮಿಗಳಿಂದ ಪುಸ್ತಕ ಬಹುಮಾನಗಳು ಬಂದಿವೆ. ಜೊತೆಗೆ ಮೂರೂ ಅಕಾಡೆಮಿಗಳ ಗೌರವ ಪ್ರಶಸ್ತಿಗಳೂ ಬಂದಿವೆ. ಈ ತರಹದ ಗೌರವಕ್ಕೆ ಪಾತ್ರರಾದ ಸಾಹಿತಿ, ಕಲಾವಿದ ಇವರೊಬ್ಬರೇ ಇರಬಹುದು..! ಚಂದ್ರಕಾಂತ ಕುಸನೂರ ಎತ್ತರದ ನಿಲುವು. ಗಂಭೀರ ಮುಖ. ಸಮೀಪಕ್ಕೆ ಹೋಗಿ ಮಾತಾಡಿದರೆ ಗೊತ್ತಾಗುವುದು ಅವರ ಮೃದುವಾದ ಮಾತು, ಸ್ನೇಹಕ್ಕೆ ಹಂಬಲಿಸುವ ಮನಸ್ಸು. ಕುಸನೂರರು ಹುಟ್ಟಿ ಬೆಳೆದದ್ದು ಕಲಬುರ್ಗಿಯಲ್ಲಿ. ತಂದೆ ಪ್ರಾಥಮಿಕ ಶಾಲೆಯ ಶಿಕ್ಷಕರು. ಒಂದು ಸಣ್ಣ ಹಳ್ಳಿಯಲ್ಲಿ ಇರುತ್ತಿದ್ದರು. ಇವರು ಕಲಬುರ್ಗಿಯ ಕಕ್ಕನ ಅಂದರೆ ಚಿಕ್ಕಪ್ಪನ ಮನೆಯಲ್ಲಿದ್ದು ಓದಿದರು. ದೊಡ್ಡ ಕುಟುಂಬ, ದುಡಿಯುವವ ಒಬ್ಬನಾದರೆ, ಕೂತು ಉಣ್ಣುವವರು ಬಹಳ. ಕಷ್ಟದಲ್ಲಿಯೇ ಓದಿದವರು ಅವರು. ಆಗ ಆ ಊರಿನಲ್ಲಿ ಉರ್ದು ಮುಷಾಯರ್‌, ಹಿಂದಿ ಕವಿಗೋಷ್ಠಿಗಳು ಬಹಳ. ಆ ಪರಿಸರದ ಪ್ರೇರಣೆಯಿಂದ ಕುಸನೂರರು ಹಿಂದಿಯಲ್ಲಿ ಕವಿತೆ, ಕತೆ ಬರೆಯಲು ಪ್ರಾರಂಭಿಸಿದರು… ಒಮ್ಮೆ ಧಾರವಾಡದಲ್ಲಿ ಜರುಗಿದ ಬಹುಭಾಷಾ ಕವಿಗೋಷ್ಠಿಗೆ ಹೋದರು. ಇವರ ಹಿಂದಿ ಕವಿತೆ ಕೇಳಿದ ವರಕವಿ ಬೇಂದ್ರೆಯವರು ‘ಕನ್ನಡದಲ್ಲಿ ಕವಿತಾ ಬರಿ’ ಎಂದು ಅಪ್ಪಣೆ ಮಾಡಿದರು. ಅಲ್ಲಿವರೆಗೆ ಕನ್ನಡ ಓದಲು, ಬರೆಯಲು ಬಾರದ ಕುಸನೂರರು ಕನ್ನಡ ಕಲಿತು, ಕವಿತೆ ಬರೆದರು. ಶಾಂತರಸರ ಸ್ನೇಹ, ಸಹಕಾರದಲ್ಲಿ ‘ನಂದಿ ಕೋಲ’ ಎಂಬ ಮೊದಲ ಕವನ ಸಂಕಲನ ಪ್ರಕಟವಾಯಿತು..! ಹಿಂದಿ, ಉರ್ದು ಕವಿತೆಗೆ ಹೋಲಿಸಿದರೆ ಅವರಿಗೆ ಕನ್ನಡ ಅಭಿವ್ಯಕ್ತಿ ಕಷ್ಟವೆನಿಸುತ್ತಿತ್ತು. ಅದಕ್ಕಾಗಿಯೇ ಆರಂಭದಲ್ಲಿ ಕಡಿಮೆ ಕಾವ್ಯ ಪಂಕ್ತಿಯ ಜಪಾನಿನ ಹೈಕುವಿನಂಥ ರೂಪದಲ್ಲಿ ಪ್ರಯೋಗ ಮಾಡಿ ಕನ್ನಡಕ್ಕೆ ಹೈಕುಗಳನ್ನು ಪರಿಚಯಿಸಿದರು… ಹಾಗೆಯೇ ಅಸಂಗತ ನಾಟಕಗಳ ರಚನೆ, ಪಾಶ್ಚಾತ್ಯ ಸಾಹಿತ್ಯದ ವಿಪುಲ ಓದಿನಿಂದಾಗಿ ಕುಸನೂರರ ಬರವಣಿಗೆ ಹೊಸ ಮೆರುಗು ಪಡೆಯಿತು. ನವ್ಯ ಸಾಹಿತ್ಯದ ಸಂದರ್ಭದಲ್ಲಿ ಗಮನಾರ್ಹ ಎನಿಸಿತು… ಕುಸನೂರ ಅವರು ಉರ್ದು, ಹಿಂದಿ, ಕನ್ನಡ, ಮರಾಠಿ, ಇಂಗ್ಲಿಷ್‌ ಭಾಷೆಗಳನ್ನು ಚೆನ್ನಾಗಿ ಮಾತನಾಡುತ್ತಿದ್ದರು. ಓದುತ್ತಿದ್ದರು. ಬರೆಯುತ್ತಿದ್ದರು ಕೂಡ. ಸಂಸ್ಕೃತದ ಅಭ್ಯಾಸವೂ ಇತ್ತು. ಬೆಳಗಾವಿಗೆ ಬಂದ ಮೇಲೆ ಮರಾಠಿ ಕಲಿತು, ಕವಿತೆ, ಕಥೆ ಬರೆದರು ಚಂಕಾಂತ ಕೂಸನುರರು. ಅನಂತಮೂರ್ತಿಯವರ ‘ಸಂಸ್ಕಾರ’, ಆಲನಹಳ್ಳಿಯವರ ‘ಕಾಡು’ ಕೃತಿಗಳನ್ನು ಹಿಂದಿಗೆ ಅನುವಾದಿಸಿದ್ದಾರೆ ಅವರು… ಕನ್ನಡದಲ್ಲಂತೂ ಎಪ್ಪತ್ತಕ್ಕೂ ಹೆಚ್ಚು ರಚನೆಗಳನ್ನು ಮಾಡಿದ್ದಾರೆ. ಬಹುಭಾಷೆಗಳ ಜೊತೆಗಿನ ಈ ಹೊಕ್ಕು ಬಳಕೆ, ಆಟ ಒಡನಾಟವಿದ್ದಾಗಲೂ ನಿವೃತ್ತಿಯ ನಂತರ ಚಿತ್ರಕಲೆ ಅವರನ್ನು ಆವರಿಸಿಕೊಂಡಿತು. ವಿದ್ಯಾರ್ಥಿಯಾಗಿದ್ದಾಗಲೇ ಈ ಕಲೆ ಅವರನ್ನು ಆಕರ್ಷಿಸಿತು. ನೂತನ ವಿದ್ಯಾಲಯದಲ್ಲಿ ಓದುವಾಗ ಚಿತ್ರಕಲೆ ಕಡ್ಡಾಯ ವಿಷಯವಾಗಿತ್ತು. ಅದನ್ನು ಶಂಕರರಾವ್‌ ಆಳಂದಕರ ಕಲಿಸುತ್ತಿದ್ದರು. ಅವರು ಸುಪ್ರಸಿದ್ಧ ಕಲಾವಿದ ಎಸ್‌.ಎಂ.ಪಂಡಿತರಿಗೆ ಗುರುಗಳಾಗಿದ್ದರು. ಅವರ ಬಣ್ಣ, ರೇಖೆಗಳ ಆಟ ಸುಂದರವಾಗಿತ್ತಂತೆ. ಅವರ ಚಿತ್ರ ನೋಡಿ ಇವರಿಗೂ ಬಿಡಿಸಬೇಕು ಎನಿಸುತ್ತಿತ್ತು. ಆದರೆ ಬಣ್ಣ, ಬ್ರಷ್‌ ಖರೀದಿಸುವ ಸ್ಥಿತಿ ಅವಗಿರಲಿಲ್ಲ..! ಸಹಪಾಠಿ ಗುರುಪಾದಪ್ಪ ಧಂಗಾಪುರ (ಈಗ ಇವರು ಮುಂಬಯಿಯಲ್ಲಿ ಪ್ರಸಿದ್ಧ ಕಲಾವಿದರಾಗಿದ್ದಾರೆ) ನೆರವಾಗುತ್ತಿದ್ದರು. ಅಲ್ಲಿಂದ ಆ ಕಲೆಯ ಆಸಕ್ತಿ ಅವರಲ್ಲಿ ಗುಪ್ತಗಾಮಿನಿಯಾಗಿಯೇ ಉಳಿಯಿತು. ಅದು ಪ್ರಕಟವಾಗಿ ಧುಮ್ಮಿಕ್ಕುವಂತಾದದ್ದು ನಿವೃತ್ತಿಯ ನಂತರ. ಕುಸನೂರರ ಚಿಂತನೆ, ಸೃಜನಶೀಲತೆಗೆ ಒಗ್ಗಿದ್ದು ಅಮೂರ್ತ ಚಿತ್ರಕಲೆ. ಕೆಂಪು, ಹಸಿರು, ಹಳದಿ ಬಣ್ಣಗಳ ರಭಸ. ಅವುಗಳ ಸಂಯೋಜನೆಯಿಂದ ಅವರ ಕಲಾಕೃತಿಗಳು ಆಕರ್ಷಕವಾಗಿರುತ್ತವೆ, ಕಣ್ಣಿಗೆ ಸುಖ ನೀಡುತ್ತವೆ. ತಮ್ಮಷ್ಟಕ್ಕೇ ತೆಗೆದು ಮನೆಯಲ್ಲಿ ಪೇರಿಸಿಡುತ್ತಿದ್ದರು. ಒಂದು ಸಾರಿ ತರುಣ ಕಲಾವಿದರು ಅವರ ಮನೆಗೆ ಹೋಗಿ ನೋಡಿ ಬೆರಗಾದರು… ಪ್ರದರ್ಶನವಿಲ್ಲದೇ ಹಾಗೇ ದೂಳು ತಿನ್ನುತ್ತ ಬಿದ್ದುಕೊಂಡಿದ್ದ ಅವುಗಳನ್ನು ಹೊರಕ್ಕೆ ಎಳೆದು ಅಲ್ಲಲ್ಲಿ ಪ್ರದರ್ಶನಕ್ಕೆ ಏರ್ಪಾಟು ಮಾಡಿದರು. ಬೆಂಗಳೂರು, ಮುಂಬಯಿ, ಕೋಲ್ಕತ್ತ, ದೆಹಲಿಗಳಲ್ಲಿ ಕಲಾಕೃತಿಗಳು ಪ್ರದರ್ಶನಗೊಂಡಿವೆ. ಕೆಲವು ಮಾರಾಟವಾಗಿವೆ. ಬಂದ ದುಡ್ಡಿನಲ್ಲಿ ಮತ್ತೆ ಬಣ್ಣ, ಕ್ಯಾನ್ವಾಸ್‌ ಖರೀದಿಸಿ ಕಲಾಕೃತಿಗಳ ರಚನೆಯಲ್ಲಿಯೇ ಆನಂದ ಅನುಭವಿಸುವುದು ಕುಸನೂರರ ಸ್ವಭಾವ. ಅವರ ಪ್ರಕಾರ ಅನುಭವದ ಅಭಿವ್ಯಕ್ತಿ ಚಿತ್ರಕಲೆಯಲ್ಲಿ ಹೇಗೆ ಸಾಧ್ಯವೋ ಹಾಗೆ ಭಾಷೆಯಲ್ಲಿ ಸಾಧ್ಯವಿಲ್ಲ. ಒಂದೊಂದು ಭಾಷೆಗೂ ನಿರ್ದಿಷ್ಟ ವ್ಯಾಕರಣವಿದೆ. ಒಂದು ಶಿಸ್ತು ಇದೆ. ಸಾಹಿತಿಯಾದವನು ಅದರ ಮಿತಿಯಲ್ಲಿಯೇ ಬರೆಯಬೇಕು… ಅದಕ್ಕಿರುವ ಓದುಗರ ಬಳಗವೂ ಸೀಮಿತವಾಗಿರುತ್ತದೆ. ಇದಕ್ಕೆ ಹೋಲಿಸಿದಾಗ ಚಿತ್ರಕಲೆ ಅಭಿವ್ಯಕ್ತಿಯ ಸಶಕ್ತ ಮಾಧ್ಯಮ ಎನಿಸುತ್ತದೆ. ಅದನ್ನು ನೋಡುವ ರಸಿಕರ ಬಳಗವೂ ದೊಡ್ಡದು ಇದೆ… ‘ ‘ಚಿತ್ರಕಲೆಯಲ್ಲಿ ನಾನು ಹೆಚ್ಚು ಸ್ವಾತಂತ್ರ್ಯ ಅನುಭವಿಸುತ್ತೇನೆ. ಸಂತೋಷವನ್ನು ಕೂಡ’ ಎಂದು ಕುಸನೂರ ಚಿತ್ರಕಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಕಲಾಕೃತಿಗಳು, ಬಣ್ಣದ ಹೊಂದಾಣಿಕೆ, ಅವುಗಳ ಪರಿಣಾಮ, ಕಲಾವಿದರ ವ್ಯಕ್ತಿತ್ವದ ಬಗ್ಗೆ ಪ್ರೇಕ್ಷಕರ ರಸಗ್ರಹಣ ಕುರಿತು ಕುಸನೂರರು ಸೊಗಸಾಗಿ ಮಾತನಾಡುತ್ತಿದ್ದರು. ಆ ಕುರಿತು ಆಳವಾಗಿ ಅಧ್ಯಯನ ಮಾಡಿದ್ದರು ಅವರು… ಇವರು ಬರೆದ ‘ಕಲೆ: ಅನುಭವ, ಅನುಭಾವ’ ಕೃತಿಗೆ ಲಲಿತ ಕಲಾ ಅಕಾಡೆಮಿಯ ಪುಸ್ತಕ ಬಹುಮಾನವೂ ದೊರೆತಿದೆ. ಇವರ ‘ಕಲಾನುಭವ’ ಎಂಬ ಕೃತಿಯನ್ನು ಅಕಾಡೆಮಿಯೇ ಪ್ರಕಟಿಸಿತು..! ಚಂದ್ರಕಾಂತ ಕುಸನೂರರಿಗೆ ಅಂತಿಮ ನಮನ— ಬೆಳಗಾವಿಯ ರಾಣಿ ಚನ್ನಮ್ಮ ನಗರದ ಎರಡನೇ ಹಂತದಲ್ಲಿರುವ ಸ್ವಗೃಹದಲ್ಲಿ ಶನಿವಾರ ರಾತ್ರಿ ನಿಧನರಾಗಿದ್ದ ನಾಡಿನ ಹಿರಿಯ ಸಾಹಿತಿ ಚಂದ್ರಕಾಂತ ಕುಸನೂರ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಭಾನುವಾರ ಬೆಳಗಿನ ಜಾವ 2ಗಂಟೆ ಸುಮಾರಿಗೆ ಶಾಹಪುರ ಸ್ಮಶಾನ ಭೂಮಿಯಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅಗ್ನಿಸ್ಪರ್ಶ ಮಾಡಿ ನೆರವೇರಿಸಲಾಯಿತು. ಕಿರಿಯ ಮಗ ಗುರುರಾಜ ಕುಸನೂರ ಅಗ್ನಿಸ್ಪರ್ಶ ಮಾಡಿದರು. ಕೊವಿಡ್-,19 ನಿಯಮಾವಳಿಗಳನ್ನು ಗಮನದಲ್ಲಿಟ್ಟುಕೊಂಡು ಧಾರ್ಮಿಕ ವಿಧಿಗಳನ್ನು ಪೂರೈಸಲಾಯಿತು. ಕುಟುಂಬ ವರ್ಗದವರು, ಸಾಹಿತಿಗಳು, ಒಡನಾಡಿಗಳು, ಚಿತ್ರಕಲಾವಿದ ಬಾಳು ಸದಲಗೆ, ಸಾಹಿತಿಗಳಾದ ಶಿರೀಶ ಜೋಶಿ, ಬಿ.ಕೆ. ಕುಲಕರ್ಣಿ, ಬ್ಯಾಂಕ್ ನ ನಿವೃತ್ತ ಅಧಿಕಾರಿ ರಘುನಾಥ ಮುತಾಲಿಕ, ಮಾಜಿ ನಗರ ಸೇವಕಿ ಶೀಲಾ ದೇಶಪಾಂಡೆ ಮತ್ತು ನಾಗರಿಕರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ನಮನ ಸಲ್ಲಿಸಿದರು. ಚಂದ್ರಕಾಂತ ಕುಸನೂರ ಅವರ ನಿಧನಕ್ಕೆ ಹಲವಾರು ಗಣ್ಯರು ಕಂಬನಿ ಮಿಡಿದಿದ್ದಾರೆ… ********* ಕೆ.ಶಿವು.ಲಕ್ಕಣ್ಣವರ –

ವಿದಾಯ Read Post »

You cannot copy content of this page

Scroll to Top