ಮಹಿಳಾ ವಿಶೇಷ ದಿನ
ರಶ್ಮಿ ಶಮಂತ್
ಪ್ರೇಮಕುಸುಮ


ಅಲೆವಳು ಅವಳು
ಜವಾಬ್ದಾರಿಗಳ ಸಂತೆಯಲಿ
ಕನಸಿನ ಅಂಗಡಿಯ ಹುಡುಕುತ
ಪರಿಚಿತರ ಮುಖವಾಡದೊಳಗೆ
ತನ್ನವರೆಂಬುವರ ಅರಸುತ
ಹೊರುವಳು ಆಕೆ
ಹೊಣೆಯ ಮೂಟೆಗಳ
ದೊರಕದವಳಿಗೆ ಸನ್ಮಾನ
ಅಲಂಕರಿಸುವುದು
ಕೊಂಕು ಬಿರುದುಗಳ ತಾತ್ಸಾರ
ಮನದ ಬಯಲಿನಲಿ
ಸುಂಟರಗಾಳಿ ತಾಂಡವವಾಡುತಿರಲು
ತಾಳ್ಮೆ ಸಹನೆಗಳ ಕಡಿವಾಣವದಕೆ
ಬೆನ್ನೆಲುಬಾಗಿಹಳು
ತನ್ನದಲ್ಲದ ಕನಸುಗಳ ಸಾಕಾರಕೆ
ನಗುನಗುತಲೇ ಬದುಕುವಳು
ತನ್ನದಲ್ಲದ ಜೀವನದಲಿ
ಪ್ರವಾಹಗಳನೇ ಎದುರಿಸುವಳು
ಸಂಸಾರದ ಹೊನಲಿನಲಿ
ಸುಗಂಧವ ಬೀರುವ ಪ್ರೇಮಕುಸುಮವಾಕೆ….

ರಶ್ಮಿ ಶಮಂತ್



