ಅಂಕಣ ಸಂಗಾತಿ
ವೃತ್ತಿ ವೃತ್ತಾಂತ
ಸುಜಾತಾ ರವೀಶ್
ವೃತ್ತಿ ಬದುಕಿನ ಹಿನ್ನೋಟ-32
ಫೆಬ್ರವರಿ ಕಡೆಯ ವಾರದಲ್ಲಿ ನಮಗೆ ವರ್ಗಾವಣೆಯ ಆದೇಶ ಬಂದದ್ದು ಮಾರ್ಚ್ ಆರನೆಯ ತಾರೀಕು ರಿಲೀವ್ ಆಗಬೇಕಿತ್ತು. ಯಾವಾಗಲೂ ಶನಿವಾರ ಮಧ್ಯಾಹ್ನ ರಿಲೀಫ್ ಆಗುವಂತೆ ಬರುತ್ತಿದ್ದ ಆದೇಶ ಈ ಬಾರಿ ಸೋಮವಾರ ಸಂಜೆ ರಿಲೀವ್ ಆಗುವ ಹಾಗೆ ಬಂದಿತ್ತು. ಐದನೆಯ ತಾರೀಕು ಶಿವರಾತ್ರಿ ಬಂದಿದ್ದರಿಂದ ನಾವು ಮೈಸೂರಿಗೆ ಹೋಗಲೇಬೇಕಿತ್ತು. ಹಾಗಾಗಿ ಅಂದೇ ಬಂದು ಅಂದೆ ವಾಪಸ್ ಆಗುವ ಸರ್ಕಸ್ ಸಹ ಮಾಡಿ ಬಿಟ್ಟೆವು. ಆರನೆಯ ತಾರೀಕು ಬೆಳಿಗ್ಗೆ 5:30 ಬಸ್ಸಿಗೆ ಹೊರಟು ಸಕಲೇಶಪುರಕ್ಕೆ ಬಂದೆವು. ಅಂದೇ ನಾವು ಶಾಖಾ ಸಿಬ್ಬಂದಿಗೆ ಊಟ ಕೊಡಿಸುವ ಕಾರ್ಯಕ್ರಮ ಸಹ ಇತ್ತು .ಬೆಳಿಗ್ಗೆ ಹೋಟೆಲ್ನಲ್ಲಿ ತಿಂಡಿ ತಿಂದು ಮಧ್ಯಾಹ್ನ ನಮ್ಮದೇ ಆತಿಥ್ಯದ ಊಟ ಮಾಡಿ ಶಾಖಾಧಿಕಾರಿಗಳನ್ನು ವಿನಂತಿಸಿಕೊಂಡು ನಾಲ್ಕು ವರೆಗೆ ವಿದಾಯ ಸಮಾರಂಭವನ್ನು ಆಯೋಜಿಸಿಕೊಂಡು ಅಂತೂ ಇಂತೂ ಆರು ಗಂಟೆ ಬಸ್ಸಿಗೆ ಮೈಸೂರಿಗೆ ಹತ್ತಿದೆವು ಬಂದು ತಲುಪಿದಾಗ ರಾತ್ರಿ 11:00 ಗಂಟೆ. ಸುಲೋಚನ ಅವರ ಅಕ್ಕನ ಮನೆಯಲ್ಲಿ ಉಳಿದುಕೊಂಡು ಬೆಳಿಗ್ಗೆ ಎದ್ದು ನಂಜನಗೂಡಿಗೆ ಹೋಗಿ ಅಲ್ಲಿಂದ ಚಾಮರಾಜನಗರಕ್ಕೆ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳಬೇಕಿತ್ತು . ನಾನು ಸೋಮವಾರ ಬೆಳಿಗ್ಗೆ ಅಂದರೆ ಏಳನೆಯ ತಾರೀಕು ಮಾರ್ಚ್ 2000 ರಂದು ನಂಜನಗೂಡಿಗೆ ಡ್ಯೂಟಿ ರಿಪೋರ್ಟ್ ಮಾಡಿಕೊಂಡೆ. ಮಾಮೂಲಿನಂತೆ ಒಂದು ಕೈಯಲ್ಲಿ ಬ್ಯೂಟಿ ರಿಪೋರ್ಟ್ ಮತ್ತೊಂದು ಕೈಯಲ್ಲಿ ಮೈಸೂರಿಗೆ ವರ್ಗಾವಣೆಗೆ ಅರ್ಜಿ.
ಅಶೋಕಪುರಂ ರೈಲ್ವೆ ಸ್ಟೇಷನ್ ಗೆ ಹೋಗಿ ಮೂರು ತಿಂಗಳ ಪಾಸ್ ರೆಡಿ ಮಾಡಿಸಿಕೊಂಡು ಹಿಂದಿನ ಕಹಿ ಅನುಭವದ ಆಧಾರದ ಮೇಲೆ ಅಲ್ಲಿಯೇ ಸಹಿ ಮಾಡಿ ಮಹಿಳಾ ಭೋಗಿಗೆ ಹತ್ತಿದೆ. ಅಲ್ಲಿಯೇ ನಮ್ಮ ಶಾಖೆಯ ಜಯಲಕ್ಷ್ಮಿ ಅವರ ಭೇಟಿಯು ಆಯಿತು.
ಈಗ ಶಾಖೆ ಮೊದಲಿನಂತೆ ದೇವಸ್ಥಾನದ ಬಳಿಯ ಬಜಾರ್ ರಸ್ತೆಯಲ್ಲಿ ಇರದೆ ತನ ಸ್ವಂತ ಕಟ್ಟಡಕ್ಕೆ ಶಿಫ್ಟ್ ಆಗಿತ್ತು .ನಂತರ ಸಂತೆಗೆ ಹೋಗುವ ದಾರಿಯಲ್ಲಿ ಮಧ್ಯೆ ಬಲಗಡೆ ನಮ್ಮ ಶಾಖಾ ಕಚೇರಿ ಇತ್ತು. ಮುಖ್ಯ ರೈಲ್ವೆ ಸ್ಟೇಷನ್ ನಿಂದ ಶಾಖೆಗೆ ಬರಲು ತಡವಾಗುತ್ತಿದ್ದ ಕಾರಣ ಎಲ್ಲರೂ ಸುಜಾತಪುರಂ ರೈಲ್ವೆ ಸ್ಟೇಷನ್ ನಲ್ಲಿಯೇ ಇಳಿದು ಅಲ್ಲಿ ಓಡಾಡುತ್ತಿದ್ದ ಖಾಸಗಿ ಟೆಂಪೋಗಳಲ್ಲಿ ಹುಲ್ಲಹಳ್ಳಿ ಸರ್ಕಲ್ಗೆ ಬಂದು ಇಳಿಯುತ್ತಿದ್ದೆವು. ಆಗ ಆ ಟೆಂಪೋಗಳಲ್ಲಿ ಚಾರ್ಜ್ ಒಂದು ರೂಪಾಯಿ ಮಾತ್ರ ಇತ್ತು .
ಹುಲ್ಲಹಳ್ಳಿ ಸರ್ಕಲ್ ನಿಂದ 3-4 ನಿಮಿಷದ ನಡಿಗೆ ನಮ್ಮ ಶಾಖೆಗೆ. ಸಂಜೆ ಮಾತ್ರ ಮುಖ್ಯ ಸ್ಟೇಶನ್ಗೆ ನಡೆದು ಹೋಗಲು ಸಮಯ ಇತ್ತು. ಕೆಲವೊಮ್ಮೆ ಸುಸ್ತಾಗಿದ್ದಾಗ ಹೊರಡಲು ತಡವಾದರೆ ಅಥವಾ ಸಂತೆಯಲ್ಲಿ ಕೊಂಡ ತರಕಾರಿಗಳಿದ್ದರೆ ಆಗ ಮೂರು ನಾಲ್ಕು ಜನ ಸೇರಿ ಆಟೋದಲ್ಲಿ ಸ್ಟೇಷನ್ನಿಗೆ ಬರುತ್ತಿದ್ದೆವು.
ಮೊದಲಿನಿಂದ ಪರಿಚಯವಿದ್ದ ಜಯಲಕ್ಷ್ಮಿ ಮತ್ತು ನಾಗಮಣಿ ಜೊತೆಗೆ ಹೊಸ ಪರಿಚಯವಾದ ಕವಿತಾ ನಿಕ್ಕಮ್ ವಿದ್ಯಾ ಚಂದ್ರಶೇಖರ್ ಮೊದಲಾದವರು. ಆಂಧ್ರಪ್ರದೇಶದ ರಜನಿ ಸಹ ಇಲ್ಲಿಯೇ ಇದ್ದಳು .ಮುಂದೆ ಅವಳು ಪದೋನ್ನತಿ ತೆಗೆದುಕೊಂಡು ಈಗ ಹೈದರಾಬಾದ್ ನಲ್ಲಿ ದೊಡ್ಡ ಹುದ್ದೆಯಲ್ಲಿ ಇದ್ದಾಳೆ. ಅಲ್ಲಿಯೇ ಪರಿಚಯವಾದದ್ದು ನಮ್ಮದೇ ಯೂನಿಯನ್ ನಲ್ಲಿ ಇದ್ದ ಇಂದುಮತಿ. ಮೊದಲು ಬಸ್ ನಲ್ಲಿ ಓಡಾಡುತ್ತಿದ್ದಳು ನಂತರ ಅವರ ಸ್ವಂತ ಮನೆ ನಮ್ಮ ಮನೆಯ ಬಳಿಗೆ ಇದುದರಿಂದ ಅಲ್ಲಿಗೆ ಶಿಫ್ಟ್ ಆದ ಮೇಲೆ ನನ್ನ ಜೊತೆಗೆ ರೈಲಿನಲ್ಲಿ ಓಡಾಡಲು ಆರಂಭಿಸಿದಳು. ನನಗೆ ತುಂಬಾ ಆಪ್ತ ಗೆಳತಿ. ಈಗಲೂ ನಮ್ಮ ಸ್ನೇಹ ಅಷ್ಟೇ ಸದೃಢವಾಗಿದೆ ನಂಜನಗೂಡು ನನಗೆ ಕೊಟ್ಟ ಅನರ್ಘ್ಯ ಸ್ನೇಹ ರತ್ನಗಳಲ್ಲಿ ಅವಳು ಒಬ್ಬಳು. ಈ ಹಿಂದೆ ಮಂಡ್ಯದಲ್ಲಿ ನನ್ನೊಂದಿಗೆ ಕೆಲಸ ಮಾಡಿದ್ದ ಮಂಜುಳಾ ಮತ್ತು ಮೊದಲೇ ಪರಿಚಿತರಾಗಿದ್ದ ಶಶಿಕಲಾ ಗಿರಿಜಾ ಇವರೆಲ್ಲ ಇದೇ ಶಾಖೆಯಲ್ಲಿ ಇದ್ದರು ತುಂಬಾ ಸ್ನೇಹ ಮಯ ವಾತಾವರಣ ತುಂಬಾ ಖುಷಿಯಾಗಿತ್ತು.
ಹುಲ್ಲಹಳ್ಳಿ ಸರ್ಕಲ್ ನಲ್ಲಿ ಇಳಿದ ತಕ್ಷಣ ಅಲ್ಲಿ ಒಬ್ಬ ಕಾಯಂ ಆಗಿ ಸೈಕಲ್ಲಿನಲ್ಲಿ ಹೂವ ಮಾರುತಿದ್ದ .ಅವನ ಬಳಿ ಹೂವು ಕೊಂಡು ಮುಂದೆ ನಮ್ಮ ಪ್ರಯಾಣ .ಅಲ್ಲೇ ಮಧ್ಯದಲ್ಲಿ ಇದ್ದದ್ದು ಸುಬ್ಬಣ್ಣನ ಹೋಟೆಲ್ ಇಡ್ಲಿ ಚಟ್ನಿ .ಜೊತೆಗೆ ಟೊಮ್ಯಾಟೋ ಗೊಜ್ಜು ಕೊಡುತ್ತಿದ್ದರು ತುಂಬಾ ರುಚಿಯಾಗಿರುತ್ತಿತ್ತು. ಕೆಲವೊಮ್ಮೆ ತಿಂಡಿ ಸರಿಯಾಗಿ ತಿನ್ನದೆ ಬರುತ್ತಿದ್ದಾಗ ಅಥವಾ ತಿಂಡಿ ತಿನ್ನದೇ ಬಂದಾಗ ಅಲ್ಲಿ ಇಡ್ಲಿ ತಿಂದು ಮುಂದುವರೆಯುವುದು. ಇಲ್ಲದಿದ್ದರೆ ವೈಟು ಕಾಫಿ ಕುಡಿದು ಹೋಗುತ್ತಿದ್ದೆವು. ಮಧ್ಯಾಹ್ನ 12 ಗಂಟೆ ಹಾಗೂ ಅಪರಾಹ್ನ ನಾಲ್ಕು ಗಂಟೆಯ ಕಾಫಿ ಅಲ್ಲಿಯೇ ಪಕ್ಕದಲ್ಲಿ ಇದ್ದ ಒಂದು ಮಲಯಾಳಿ ಬೇಕರಿಯಲ್ಲಿ ಬೇಸಿಗೆ ಕಾಲವಾದರೆ ವಿವಿಧ ಹಣ್ಣುಗಳ ಜ್ಯೂಸ್ ಸಹ ಸಿಗುತ್ತಿತ್ತು. ಅಲ್ಲದೆ ಶಾಖೆಯ ಮುಂದೆಯೇ ಒಬ್ಬ ಎಳನೀರು ಮಾರುತ್ತಾ ನಿಂತಿರುತ್ತಿದ್ದ. ಒಟ್ಟಿನಲ್ಲಿ ನಮ್ಮ ಹೊಟ್ಟೆ ಪೂಜೆಗೆ ಮೋಸ ಬಂತು ಇರಲಿಲ್ಲ.
ಸ್ವಲ್ಪ ದಿನಗಳಾದ ನಂತರ ಟೆಂಡರ್ ಕರೆದು ನಮ್ಮ ಶಾಖೆಯಲ್ಲಿಯೇ ವಾಹನ ನಿಲುಗಡೆ ಜಾಗದಲ್ಲಿ ಒಂದು ಕ್ಯಾಂಟೀನ್ ಓಪನ್ ಆಯಿತು. ಸತೀಶ್ ಎನ್ನುವವರು ಅದನ್ನು ಆರಂಭಿಸಿದ್ದರು ಬೆಳಗಿನ ಹೊತ್ತು ಏನಾದರೂ ಒಂದು ತಿಂಡಿ ಮಧ್ಯಾಹ್ನ ಅಣ್ಣ ಸಾಂಬಾರ್ ಮಜ್ಜಿಗೆ ಹಾಗೂ ಸಂಜೆಯ ಹೊತ್ತು ಏನಾದರೂ ಕರಿದ ತಿಂಡಿ ಸಿಗುತ್ತಿತ್ತು ಕಾಫಿ ಟೀ ಮಜ್ಜಿಗೆ ಯಾವಾಗಲೂ ಸಿಗುತ್ತಿತ್ತು.
ಯಾರಾದರೂ ಒಬ್ಬರು ಊಟ ತರದಿದ್ದರೆ ಕ್ಯಾಂಟೀನ್ ನಲ್ಲಿಯೇ ತರಿಸಿಕೊಳ್ಳುತ್ತಿದ್ದೆವು. ಇಬ್ಬರು ಮೂವರು ತಂದಿಲ್ಲದಿದ್ದಾಗ ಹುಲ್ಲಹಳ್ಳಿ ಸರ್ಕಲ್ ನಲ್ಲಿ ಇದ್ದ ರಾಮಪ್ರಸಾದ್ ಹೋಟೆಲಿಗೆ ಹೋಗುತ್ತಿದ್ದೆವು. ಶನಿವಾರ ಮಧ್ಯಾಹ್ನದ ಹೊತ್ತು ಮೂರು ಗಂಟೆಗೆ ರೈಲು ಇದ್ದುದರಿಂದ ಪ್ರತಿ ಶನಿವಾರ ಯಾವುದಾದರೂ ಹೋಟೆಲ್ ಗೆ ಅಥವಾ ಕ್ಯಾಂಟೀನ್ ನವರು ಚೆನ್ನಾಗಿರುವ ತಿಂಡಿ ಮಾಡಿದರೆ ಅದನ್ನೇ ತಿಳಿದುಕೊಳ್ಳುತ್ತಿದ್ದೆವು ಅಂದು ಡಬ್ಬಿ ತರುವುದು ನಮಗೆಲ್ಲಾ ನಿಷಿದ್ಧ.
ಹೊಸ ವ್ಯವಹಾರಗಳ ವಿಭಾಗದಲ್ಲಿ ಇದ್ದ ಉನ್ನತ ದರ್ಜೆ ಸಹಾಯಕರು ವರ್ಗಾವಣೆಯಾಗಿ ಹೋಗಿದ್ದರಿಂದ ಮಾರ್ಚ್ ವರ್ಷಾಂತ್ಯದ ಬಿಜಿ ಸಮಯವೂ ಆಗಿದ್ದರಿಂದ ನನ್ನನ್ನು ಹೊಸ ವ್ಯವಹಾರ ವಿಭಾಗಕ್ಕೆ ನಿಯುಕ್ತಿಗೊಳಿಸಿದರು. ಅಲ್ಲಿ ಶ್ರೀವತ್ಸ ಮತ್ತು ಮಹಾದೇವನ್ ಅವರು ಸಹಾಯಕರು. ನಾಗರಾಜ್ ಅವರು ಸಹಾಯಕ ಆಡಳಿತ ಅಧಿಕಾರಿಗಳು ಆಗ ತುಂಬಾ ಪ್ರಪೋಸಲ್ಗಳು ಬರುತ್ತಿತ್ತು ಕೆಲಸವು ಹೆಚ್ಚು ಇರುತ್ತಿತ್ತು ವರ್ಷಾಂತ್ಯವಾದ್ದರಿಂದ ಕೆಲವೊಂದು ರಜೆಯ ದಿನ ಭಾನುವಾರಗಳಲ್ಲೂ ಬರಬೇಕಿತ್ತು. ಶನಿವಾರವಂತೂ ಸಂಜೆಯ ರೃಲಿಗೇ ವಾಪಸ್ ಆಗುತ್ತಿದ್ದುದು. ಆದರೂ ಸಹ ತುಂಬಾ ಖುಷಿಯ ವಾತಾವರಣ. ಎಲ್ಲರೂ ಹೊಂದಿ ಕೆಲಸ ಮಾಡುತ್ತಿದ್ದರಿಂದ ಹೆಚ್ಚು ಹೊರೆ ಎನಿಸುತ್ತಿರಲಿಲ್ಲ.
ನಾಲ್ಕೈದು ತಿಂಗಳ ಬಳಿಕ ಶಾಖಾಧಿಕಾರಿಗಳು ಅವರ ಕೊಠಡಿಗೆ ಕರೆಸಿ ನನ್ನನ್ನು ವಿಕ್ರಯ ವಿಭಾಗದಲ್ಲಿ ಕೆಲಸ ಮಾಡಲು ಸೂಚಿಸಿದರು. ಆಗ ಆ ವಿಭಾಗದಲ್ಲಿ ಒಬ್ಬರೇ ಉನ್ನತ ಶ್ರೇಣಿ ಸಹಾಯಕರು ಪ್ರಸಾದ್ ಎಂಬುವವರು ಇದ್ದು ಸಹಾಯಕರು ಯಾರು ಇರಲಿಲ್ಲ. ಹಾಗಾಗಿ ನನ್ನನ್ನು ಅಲ್ಲಿಯೇ ಕೆಲಸ ಮಾಡಲು ವಿನಂತಿಸಿರು. ನನಗೆ ಹೊಸ ವ್ಯವಹಾರ ಹಾಗೂ ವಿಕ್ರಯ ವಿಭಾಗಗಳಲ್ಲಿ ಕೆಲಸ ಮಾಡಿ ಅನುಭವ ಇದ್ದುದು .ಸಕಲೇಶಪುರದಲ್ಲಿ ಸ್ವಲ್ಪ ದಿನಗಳ ಕಾಲ ಕಚೇರಿ ಸೇವಾ ವಿಭಾಗದಲ್ಲಿ ಮಾಡಿದ್ದೆ. ಆದರೆ ಪಾಲಿಸಿ ಸೇವಾ ವಿಭಾಗದಲ್ಲಿ ಕೆಲಸ ಮಾಡುವ ಅವಕಾಶವೇ ದೊರೆತಿರಲಿಲ್ಲ .ಹಾಗಾಗಿ ಶಾಖಾಧಿಕಾರಿಗಳಿಗೆ ಮುಂದಿನ ಬದಲಾವಣೆಯ ಸಮಯದಲ್ಲಿ ನನಗೆ ಪಾಲಿಸಿ ಸೇವಾ ವಿಭಾಗವನ್ನೇ ಕೊಡಬೇಕು ಎಂದು ಕೋರಿಕೊಂಡೆ ಅವರು ಸಹ ಒಪ್ಪಿಕೊಂಡರು.
ವಿಕ್ರಯ ವಿಭಾಗದಲ್ಲಿ ಪ್ರಸಾದ್ ಮತ್ತು ನಾನು ಒಳ್ಳೆಯ ಸೇವೆ ಸಲ್ಲಿಸಿದ್ದೆವು. ಇಬ್ಬರೂ ಒಳ್ಳೆಯ ಕೆಲಸಗಾರರಾದ್ದರಿಂದ ಹಂಚಿಕೊಂಡು ಮಾಡುತ್ತಿದ್ದೆವು.
೨೦೦೦ ನನಗೆ ಅಷ್ಟೇನೂ ಖುಷಿಯದ್ದಾಗಿರಲಿಲ್ಲ. ಅಮ್ಮನ ಆರೋಗ್ಯ ಆಗಾಗ್ಗೆ ಹದಗೆಟ್ಟು ಆಸ್ಪತ್ರೆಗೆ ಸೇರಿಸುವುದು ಕರೆದುಕೊಂಡು ಬರುವುದು ನಡೆದೇ ಇತ್ತು. ಆದರೂ ಛಾಯ ಮತ್ತು ಪ್ರಸನ್ನ ಅವರು ಪಿರಿಯಾಪಟ್ಟಣದಲ್ಲಿ ಮಾಡಿದ್ದ ಮನೆಗೆ ಹೋಗಿ ಸ್ವಲ್ಪ ದಿನ ಇದ್ದು ಬಂದಿದ್ದರು. ನಾವೂ ಒಂದೆರಡು ಬಾರಿ ಹೋಗಿ ಬಂದಿದ್ದೆವು. ಕೊನೆಗೆ ಯಾವ ಪ್ರಯತ್ನವೂ ಫಲ ಕೊಡದೆ ಜನವರಿ ೬ ೨೦೦೦ ದಂದು ನಮ್ಮನ್ನೆಲ್ಲಾ ಬಿಟ್ಟು ಅಮ್ಮ ಹೊರಟೇ ಬಿಟ್ಟಳು. ಅಂದು ಸೋಮವಾರ . ಹಿಂದಿನವಾರ ರಜೆ ಹಾಕಿ ಅಮ್ಮನ ಜೊತೆಯಲ್ಲೇ ಇದ್ದೆ. ಅಂದು ರೈಲಿನಲ್ಲಿ ಹೊರಟು ಕಛೇರಿ ತಲುಪುವಷ್ಟರಲ್ಲಿ ಫೋನ್ ಬಂದಿದೆ. ನಾನು ತಲುಪಿದ ಕೂಡಲೇ ತುಂಬಾ ಸೀರಿಯಸ್ ವಾಪಸ್ ಹೋಗಿ ಎಂದು ಸ್ಕೂಟರ್ ನಲ್ಲಿ ಕರೆದುಕೊಂಡು ಬಂದು ಬಸ್ ಹತ್ತಿಸಿದರು. ಮೈಸೂರಲ್ಲಿ ರವೀಶ್ ಬಂದು ಮನೆಗೆ ಕರೆದುಕೊಂಡು ಬಂದರು.ಊರುಗಳಿಂದ ಎಲ್ಲಾ ಬಂದು ಸೇರಿ ಅಮ್ಮನನ್ನು ಅಂತಿಮ ಬಾರಿಗೆ ಕರೆದುಕೊಂಡು ಹೊರಟಾಗ ಸಂಜೆ. ನಾನು ದಿನಾ ವಾಪಸಾಗುವ ರೈಲು ಕೂ ಅಂತ ಕೂಗ್ತಿತ್ತು. ಶಾಖಾಧಿಕಾರಿಗಳು ಕೆಲವರು ಸ್ನೇಹಿತರು ಸುಲೋಚನಾ ಎಲ್ಲ ಬಂದಿದ್ದರು.
ಈಗಲೂ ಸಂಜೆ ರೈಲಿನ ಕೂಗು ಕಿವಿಗೆ ಬಿದ್ದಾಗಲೆಲ್ಲಾ ಅಂದಿನ ಆ ಸಂಜೆಯ ಮಡುಗಟ್ಟಿದ ದುಃಖ ಮರುಕಳಿಸುತ್ತದೆ.ಈಗಲೂ ಇದನ್ನು ಬರೆಯುವಾಗ ಕಣ್ಣು ತುಂಬಿ ನೀರು ಹರಿದು ಮಂಜಾಗುತ್ತಿದೆ. ಸಧ್ಯಕ್ಕೆ ನಿಲ್ಲಿಸುವೆ.(ಮುಂದಿನ ವಾರಕ್ಕೆ ಮುಂದುವರೆಯುವುದು)
ಸುಜಾತಾ ರವೀಶ್





