ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸುಮತಿಯ ಎರಡನೇ ಮಗಳು ತನ್ನ ಬಟ್ಟೆ ಬರೆ ಪುಸ್ತಕಗಳು ಹಾಗೂ ತನಗೆ ಅತ್ಯವಶ್ಯಕವಾಗಿ ಬೇಕಾದ ವಸ್ತುಗಳನ್ನು ತೆಗೆದುಕೊಂಡು ಅನಾಥಾಶ್ರಮಕ್ಕೆ ಹೊರಡಲು ಅನುವಾದಳು. ಸುಮತಿ ಹಾಗೂ ಮೂರನೇ ಮಗಳು ಒಲ್ಲದ ಮನಸ್ಸಿನಿಂದ ಅವಳನ್ನು ಬೀಳ್ಕೊಟ್ಟರು. 

ಏಕೋ ಮಗಳನ್ನು ಬೀಳ್ಕೊಡುವಾಗ ಸುಮತಿಯ ಮನಸ್ಸು ಬಹಳ ಭಾರವಾಯಿತು. ಏನೋ ಅವ್ಯಕ್ತವಾದ ನೋವೊಂದು ಅವಳ ಹೃದಯವನ್ನು ಹಿಂಡಿತು….”ವಾರಕ್ಕೊಮ್ಮೆ ನಾನು ಬರುತ್ತೇನೆಲ್ಲವೇ ಅಮ್ಮಾ …. ವಾರದಲ್ಲಿ ಒಂದು ದಿನ ನಿಮ್ಮ ಜೊತೆ ಕಳೆಯುತ್ತೇನೆ….ದಯವಿಟ್ಟು ನೊಂದುಕೊಳ್ಳದೆ ನಸುನಗುತ್ತಾ ನನ್ನನ್ನು ಕಳುಹಿಸಿ ಕೊಡು”…. ಎಂದು ಮಗಳು ಹೇಳಿದಾಗ, ಅವಳನ್ನು ಅಪ್ಪಿ, ಹಣೆಗೊಂದು ಹೂಮುತ್ತನ್ನು ಕೊಟ್ಟಳು. ತಂಗಿಯು ಅವಳನ್ನು ಬಿಗಿಯಾಗಿ ಅಪ್ಪಿಕೊಂಡು ಸ್ವಲ್ಪ ಹೊತ್ತು ಹಾಗೇ ನಿಂತು ಬಿಟ್ಟಳು. ಗೇಟಿನ ಬಳಿ ಡ್ರೈವರ್ ಬಂದು….”ಬಾ ಮಗು ಹೊರಡೋಣ”…. ಅಮ್ಮ ಅಲ್ಲಿ ಕಾಯುತ್ತಿದ್ದಾರೆ… ಎಂದು ಹೇಳಲು, ಮಗಳು ಅವರ ಜೊತೆ ಹೊರಟಳು. ಮೆಟ್ಟಿಲುಗಳನ್ನು ಏರುತ್ತಾ ಅಮ್ಮನನ್ನು, ತಂಗಿಯನ್ನು ನೋಡಿ ಕೈಬೀಸಿದಳು. ಮಗಳು ಹೊರಟು ಹೋದ ನಂತರ ಸುಮತಿ ಮನೆ ಒಳಗೆ ಬಂದು ಕೆಲವು ನಿಮಿಷಗಳ ಕಾಲ ಸುಮ್ಮನೆ ಕುಳಿತುಬಿಟ್ಟಳು. ಮೂರನೇ ಮಗಳು ಸುಮತಿಯ ಪಕ್ಕ ಬಂದು ಕುಳಿತು ಹೆಗಲ ಮೇಲೆ ಕೈ ಇಟ್ಟು ತಾಯಿಗೆ ಸಮಾಧಾನ ಮಾಡುವಂತೆ ಹೆಗಲನ್ನು ತಟ್ಟಿದಳು.

ದಿನಗಳು ಉರುಳಿದವು. ನಾಲ್ಕನೇ ಮಗಳು ಬೇಸಿಗೆ ರಜೆಯಲ್ಲಿ ಮನೆಗೆ ಬಂದಳು. 

ಅವಳು ಬಂದ ಮೇಲೆ ಮೂರನೇ ಮಗಳು ಲವಲವಿಕೆಯಿಂದ ಇರುವಂತೆ ಆಯ್ತು. ಸುಮತಿಯ ಜೊತೆ ಇಬ್ಬರೂ ಶಾಲೆಗೆ ಹೋಗುತ್ತಿದ್ದರು. ಶಾಲೆಯ ಕೆಲಸದಲ್ಲಿ ಮತ್ತು ಮನೆಯ ಕೆಲಸಗಳಲ್ಲಿ ಸುಮತಿಗೆ ಸಹಾಯ ಮಾಡುತ್ತಿದ್ದರು. ಇತ್ತೀಚೆಗೆ ಯಾಕೋ ಸುಮತಿ ಇನ್ನೂ ಹೆಚ್ಚು ಬಳಲಿದಂತೆ ತೋರುತ್ತಿದ್ದಳು. ಶನಿವಾರ ಸಂಜೆಯಾದರೆ ಬಸ್ಸು ಬರುವ ವೇಳೆಗೆ ಮಗಳನ್ನು ಕಾಯುತ್ತಾ ಗೇಟಿನ ಬಳಿ ಇರುವ ಕಲ್ಲಿನ ಮೆಟ್ಟಿಲಿನ ಮೇಲೆ ಕುಳಿತುಕೊಳ್ಳುವಳು…. “ಅಮ್ಮಾ….ಅಕ್ಕ ಇಲ್ಲಿಗೇ ಬರುತ್ತಾಳಲ್ಲವೇ?…. ಮತ್ತೇಕೆ ನೀನು ಅಲ್ಲಿ ಗೇಟಿನ ಬಳಿ ಕುಳಿತಿರುವೆ…. ಬಾ ಒಳಗೆ”…. ಎಂದರೂ ಕೇಳದೇ ಸಂಜೆಯ ಬಸ್ಸು ಬರುವುದನ್ನೇ ಕಾಯುತ್ತಾ ಕುಳಿತುಕೊಳ್ಳುವಳು. ಬಸ್ಸು ಬರುವುದು ಕೊಂಚ ತಡವಾದರೂ ಚಡಪಡಿಸುವಳು. ಎಷ್ಟು ಬೇಗ ಮಗಳನ್ನು ನೋಡುವೆನೋ ಎನ್ನುವ ಕಾತರದಲ್ಲಿ ಅವಳ ಕಣ್ಣುಗಳು ಕಾಯುತ್ತಿದ್ದವು. ಬಸ್ಸು ಬಂದು ನಿಂತ ಕೂಡಲೇ ಎದ್ದು ನಿಂತು ಜನರು ಇಳಿಯುದನ್ನೇ ನೋಡುತ್ತಾ, ಮಗಳು ಇಳಿದು ಬಂದ ಕೂಡಲೇ ಅವಳನ್ನು ಅಪ್ಪಿಕೊಂಡು ಅವಳೊಂದಿಗೆ ನಿಧಾನವಾಗಿ ಮೆಟ್ಟಿಲು ಇಳಿಯುವಳು.

ಅಕ್ಕ ಬಂದಿದ್ದು ತಿಳಿದುಕೊಡಲೆ ತಂಗಿಯರು ಒಳಗಿನಿಂದ ಓಡೋಡಿ ಬಂದು ಖುಷಿಯಿಂದ ಅಕ್ಕನನ್ನು ಅಪ್ಪಿಕೊಳ್ಳುತ್ತಿದ್ದರು. ಅವಳು ಸಕಲೇಶಪುರದಿಂದ ಬರುವಾಗ ತಂಗಿಯರಿಗಾಗಿ ತಿಂಡಿ ಮತ್ತು ಅಮ್ಮನಿಗೆ ಹಣ್ಣುಗಳನ್ನು ತರುವಳು. ಅವಳು ಬಂದಳೆಂದರೆ ಮನೆಯಲ್ಲಿ ಹಬ್ಬದಂತೆ ಸಂಭ್ರಮ ಪಡುವರು. 

ರಾತ್ರಿ ಎಲ್ಲಾ ನಿದ್ರೆ ಮಾಡದೆ ನಾಲ್ವರೂ ಕುಳಿತು ಮಾತನಾಡುವರು. ಅವಳ ಕೆಲಸದ ಬಗ್ಗೆ, ಅವಳ ಓದಿನ ಬಗ್ಗೆ ಕೇಳಿ ತಿಳಿದುಕೊಳ್ಳುವರು. ಇವಳು ಕೂಡ ಎಲ್ಲರ ದಿನಚರಿಗಳನ್ನು ಕೇಳಿ ತಿಳಿದುಕೊಳ್ಳುವಳು. ಅಮ್ಮ ಇತ್ತೀಚೆಗೆ ಕ್ಷೀಣಿಸುತ್ತಿರುವುದನ್ನು ಗಮನಿಸಿ….. ಏಕಮ್ಮಾ… ಏನಾಯ್ತು?… ನಾನು ನಾಡಿದ್ದು ಹೊರಡುವಾಗ ನನ್ನ ಜೊತೆ ಬನ್ನಿ…. ನಾನು ಆಸ್ಪತ್ರೆಗೆ ನಿಮ್ಮನ್ನು ಕರೆದುಕೊಂಡು ಹೋಗುತ್ತೇನೆ…. ಎಂದರೆ, ನನಗೇನೂ ಆಗಿಲ್ಲಪ್ಪಾ…. ಸ್ವಲ್ಪ ಆಯಾಸ ಇದೆ ಅಷ್ಟೇ…, ಎಂದಿನಂತೆ ಪಥ್ಯದಲ್ಲಿದ್ದೇನೆ… ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದೇನೆ…. ನನಗೇನಾಗಿದೆ? ನೀವು ಮೂವರೂ ನನ್ನ ಜೊತೆ ಇದ್ದರೆ ಅದೇ ನನಗೆ ಸ್ವರ್ಗ…. ಅದಕ್ಕಿಂತ ಹೆಚ್ಚಿನದು ನನಗೇನು ಬೇಡ…. ಎನ್ನುವಳು ಸುಮತಿ. ಅವಳ ತಂಗಿ….ಹೌದು ಅಕ್ಕ… ಅಮ್ಮ ಈ ನಡುವೆ ಮೊದಲಿನಂತೆ ಲವಲವಿಕೆಯಿಂದ ಇಲ್ಲ….ಯಾಕೋ ತುಂಬಾ ಆಯಾಸವಾದಂತೆ ಕಾಣಿಸುತ್ತಾರೆ…. ಶಾಲೆಗೆ ಹೋಗುವಾಗಲೂ ಅಷ್ಟೇ, ಇಲ್ಲಿಂದ ಅಷ್ಟು ದೂರ ಹೋಗಬೇಕು…. ನಾವು ಅಲ್ಲೇ ಇದ್ದಿದ್ದರೆ ಚೆನ್ನಾಗಿತ್ತು…. ಅಮ್ಮ ಅಷ್ಟೊಂದು ದೂರ ನಡೆದುಕೊಂಡು ಹೋಗಿ ಬರುವುದು ಕಷ್ಟವಾಗುತ್ತಿದೆ… ಅಲ್ಲಿ ಗುಡ್ಡ ಹತ್ತಿ ಬರುವಾಗ ಉಸಿರಾಡಲು ತುಂಬಾ ಕಷ್ಟಪಡುತ್ತಾರೆ…. ಸ್ವಲ್ಪ ಹೊತ್ತು ಅಲ್ಲಿ ದೇವಸ್ಥಾನದ ಆ ಮಾವಿನ ಮರದ ನೆರಳಲ್ಲಿ ಕುಳಿತು ದಣಿವಾರಿಸಿಕೊಂಡು ನಂತರ ನಿಧಾನವಾಗಿ ಹೆಜ್ಜೆ ಹಾಕುತ್ತಾರೆ”…. ಎಂದು ತಂಗಿ ಹೇಳಿದ್ದನ್ನು ಕೇಳಿ ಅವಳ ಮುಖ ಬಾಡಿತು…. ಇನ್ನೂ ಸ್ವಲ್ಪ ದಿನ ಅಷ್ಟೇ… ನನ್ನ ಓದು ಮುಗಿಯಲಿ ಯಾವುದಾದರೂ ಒಳ್ಳೆಯ ಕೆಲಸಕ್ಕೆ ಸಿಗುತ್ತದೆ…. ಅಮ್ಮನನ್ನು ಕೆಲಸಕ್ಕೆ ಕಳುಹಿಸುವುದು ಬೇಡ….ನಿಮ್ಮೆಲ್ಲರನ್ನು ನಾನು ನೋಡಿಕೊಳ್ಳುತ್ತೇನೆ….. ಎಷ್ಟೊಂದು ವರ್ಷಗಳಿಂದ ಅಮ್ಮ ಕಷ್ಟ ಪಟ್ಟು ದುಡಿದು ನಮ್ಮನ್ನು ಸಾಕುತ್ತಿದ್ದಾರೆ. 

ಈಗ ನೀನು ಅಮ್ಮನ ಜೊತೆ ಇರುವುದು ನನಗೆ ದೊಡ್ಡ ಸಮಾಧಾನ…. ಅಮ್ಮನ ಸಹಾಯಕ್ಕೆ ಜೊತೆಗೆ ನೀನಿರುತ್ತೀಯ ಎನ್ನುವ ಧೈರ್ಯ….. ಇನ್ನೂ ಒಂದೆರಡು ವರ್ಷಗಳಷ್ಟೇ…. ನನ್ನ ಡಿಗ್ರಿ ಮುಗಿಯಲಿ….. ಸರ್ಕಾರಿ ಕೆಲಸ ಸಿಗಲಿ ಎಂದು ನಾನು ಕಾಯುವುದಿಲ್ಲ…. ಯಾವುದಾದರೂ ಸಣ್ಣ ಸಂಸ್ಥೆಯಲ್ಲಿ ಕಡಿಮೆ ಸಂಬಳ ಸಿಕ್ಕರೂ ಸೇರಿಕೊಳ್ಳುತ್ತೇನೆ…. ನಂತರ ನೀನು ಕಾಲೇಜಿಗೆ ಹೋಗುವೆಯಂತೆ…. ಕೆಲವು ವರ್ಷಗಳಲ್ಲಿ ನೀನೂ ದುಡಿಯಲು ಪ್ರಾರಂಭಿಸುತ್ತೀಯಾ…. ಆಗ ಅಮ್ಮನಿಗೆ ಸಂಪೂರ್ಣ ವಿಶ್ರಾಂತಿ ಸಿಕ್ಕಂತಾಗುತ್ತದೆ….. ಇವಳೂ ಕೂಡ ನವೋದಯ ಶಾಲೆಯಲ್ಲಿ ಪಿಯುಸಿ ಯವರೆಗೂ ವಿದ್ಯಾಭ್ಯಾಸ ಮುಗಿಸಿ ಬಂದರೆ, ನಂತರ ಇವಳ ಮುಂದಿನ ವಿದ್ಯಾಭ್ಯಾಸಕ್ಕೆ ನಾವಿಬ್ಬರೂ ಇರುತ್ತೇವೆ…. ಎಂದು ಮಗಳು ಹೇಳಿದಾಗ, ಸುಮತಿ ಮೂವರು ಮಕ್ಕಳನ್ನು ಅಪ್ಪಿಕೊಂಡು,….”ನೀವಿರುವಾಗ ನನಗೇನು ಚಿಂತೆ ಮಕ್ಕಳೇ….. ನನ್ನ ಕೈಲಿ ಆಗುವರೆಗೂ ನಾನು ದುಡಿಯುತ್ತೇನೆ…. ನಿಮ್ಮ ಈ ಮಾತುಗಳನ್ನು ಕೇಳಿ ನನ್ನ ಹೃದಯ ಹಗುರವಾಯಿತು…. ಇಷ್ಟು ವರ್ಷ ಕಷ್ಟಪಟ್ಟಿದ್ದು ಸಾಕಾಗಿದೆ…. ನಿಮ್ಮ ಕಾಲದಲ್ಲಾದರೂ ಒಂದಿಷ್ಟು ನೆಮ್ಮದಿಯಿಂದ ಕಳೆಯುವಂತಾದರೆ ಸಾಕು…. ಬನ್ನಿ ಎಲ್ಲರೂ ಊಟ ಮಾಡೋಣ…. ನಿಮಗೆಲ್ಲರಿಗೂ ಇಷ್ಟವಾದ ಅಡುಗೆಯನ್ನು ಮಾಡಿದ್ದೇನೆ”…. ಎಂದು ಹೇಳಿ ಸುಮತಿ ಅಡುಗೆ ಮನೆಯ ಕಡೆ ನಡೆದಳು. ಮೂವರು ಹೆಣ್ಣುಮಕ್ಕಳೂ ಅಮ್ಮನನ್ನು ಹಿಂಬಾಲಿಸಿದರು. 


About The Author

Leave a Reply

You cannot copy content of this page

Scroll to Top