ಅಂಕಣ ಸಂಗಾತಿ
ವೃತ್ತಿ ವೃತ್ತಾಂತ
ವೃತ್ತಿ ಬದುಕಿನ ಹಿನ್ನೋಟ-30
ಸುಜಾತಾ ರವೀಶ್

ವೃತ್ತಿ ವೃತ್ತಾಂತ
ವೃತ್ತಿ ಬದುಕಿನ ಹಿನ್ನೋಟ
ನೋಟ ~ ೩೦
ಬುಕ್ ಮಾಡಿದ್ದ ಬೈಕ್ ಬಂದಿದ್ದು ಅಷ್ಟರೊಳಗೆ ಪರ್ಮನೆಂಟ್ ಲೈಸೆನ್ಸ್ ಸಹ ಸಿಕ್ಕಿತ್ತು . ಆದರೆ ನನಗೆ ಗಾಡಿ ಓಡಿಸಲು ಬರುತ್ತಿರಲಿಲ್ಲ. ಬೈಕ್ ಪೂಜೆ ಮಾಡಿಸಿ ಮೈಸೂರಿನಿಂದ ರವೀಶ್ ಬೈಕ್ ಓಡಿಸಿಕೊಂಡು ಸಕಲೇಶಪುರಕ್ಕೆ ಬಂದಿದ್ದರು. ಕೆಲವೊಮ್ಮೆ ಹಾಗೆ ಶುಕ್ರವಾರ ಸಕಲೇಶಪುರಕ್ಕೆ ಬರುತ್ತಿದ್ದರು ಶನಿವಾರ ಮಧ್ಯಾಹ್ನ ಆಫೀಸ್ ಮುಗಿದ ನಂತರ ಅವರ ಊರಿಗೆ ಬೈಕ್ ನಲ್ಲೆ ಹೋಗುತ್ತಿದ್ದೆವು. ಕೆಲವೊಮ್ಮೆ ಅವರು ಮೊದಲೇ ಬಂದು ಮೈಸೂರಿಗೆ ಸಹ ಬೈಕ್ ನಲ್ಲಿ ನಾಲ್ಕು ಐದು ಬಾರಿ ಬಂದಿದ್ದೇವೆ .ಹಾಗೆ ಬರುವಾಗ ಒಮ್ಮೆ ಸಕಲೇಶಪುರದಿಂದ ರಾಮನಾಥಪುರದ ಬಳಿ ಇರುವ ಇವರ ಊರಿನ ತನಕವೂ ಒಂದೇ ಸಮ ಮಳೆ. ಪಕ್ಕದಲ್ಲಿ ನದಿ ಹರಿಯುತ್ತಿದ್ದು ಆ ಅನುಭವ ಇಂದಿಗೂ ಮರೆಯಲಾಗದಷ್ಟು ಮನಸ್ಸಿನಲ್ಲಿ ನಿಂತುಬಿಟ್ಟಿದೆ.
ಇನ್ನು ಸಕಲೇಶಪುರದ ಮಳೆಯ ಬಗ್ಗೆ ಹೇಳದಿದ್ದರೆ ಖಂಡಿತ ಆಗುವುದಿಲ್ಲ. ಜೂನ್ ತಿಂಗಳಿನಲ್ಲಿ ಆರಂಭವಾಗುವ ಮಳೆ ಕೆಲವೊಮ್ಮೆ ರಭಸ ಕೆಲವೊಮ್ಮೆ ಮೆತ್ತಗೆ ಅಷ್ಟೇ ದಿನವಿಡೀ ಸುರಿಯುತ್ತಲೇ ಇರುತ್ತಿತ್ತು ಮಳೆ ಅಂದರೆ ಪ್ರಾಣ ಬಿಡುವ ನನಗಂತೂ ಅಲ್ಲಿದ್ದ ಎರಡು ವರ್ಷವೂ ಒಂದು ರೀತಿ ಖುಷಿ ಕೊಟ್ಟಿತ್ತು. ಆದರೆ ಬಟ್ಟೆಗಳು ಒಣಗುತ್ತಿರಲಿಲ್ಲ ಒರೆಸಿಕೊಂಡ ಟವಲ್ ಹರವದಿದ್ದರೆ ಸಂಜೆಯ ವೇಳೆಗೆ ಕಪ್ಪಗೆ ಬೂಸ್ಟು ಬರುತ್ತಿತ್ತು .ಸಾಮಾನುಗಳಂತೂ ಸ್ವಲ್ಪವೇ ತೆಗೆದುಕೊಂಡು ಬರಬೇಕಿತ್ತು. ಅಕಸ್ಮಾತ್ ಊರಿಗೆ ಹೋಗಿ ಬಿಟ್ಟರೆ ಬರುವ ವೇಳೆಗೆ ಅವೆಲ್ಲ ಬೂಸ್ಟ್ ಹಿಡಿದದ್ದೇ ಹೌದು. ತರಕಾರಿಗಳು ಅಷ್ಟೇ ಆಗ ಫ್ರಿಜ್ ಸಹ ಇರಲಿಲ್ಲ .ತಂದ ತರಕಾರಿಗಳನ್ನು ಕ್ಲೀನಾಗಿ ಒರೆಸಿ ಒಂದಕ್ಕೊಂದು ತಾಗದಂತೆ ಹರವಿ ಇಟ್ಟರೆ ಬಚಾವ್. ಇಲ್ಲದಿದ್ದರೆ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಬೆಳ್ಳನೆಯ ಬೂಸ್ಟು ಅವುಗಳನ್ನು ಅಲಂಕರಿಸಿ ಬಿಟ್ಟಿರುತ್ತಿತ್ತು.
ಆ ಮಳೆಯ ಆರ್ಭಟಕ್ಕೆ ಎಲ್ಲೋ ಬಿದ್ದ ಮರ ವಿದ್ಯುತ್ ತಂತಿ ಕಟ್ಟಾಗಿ ದಿನವಿಡೀ ಏನು! ವಾರವಿಡೀ ವಿದ್ಯುತ್ ಸರಬರಾಜು ಬಂದಾಗುತ್ತಿತ್ತು. ಆಗೆಲ್ಲಾ ನೀರು ಹೊತ್ತು ಹೊತ್ತು ಸಾಕಾಗುತ್ತಿತ್ತು. ಮಹಡಿಯ ಮೇಲಿನ ಮನೆ ಎಂದು ಹೇಳಿದ್ದೆ ಅಲ್ಲವೇ ಆ ಮೆಟ್ಟಲುಗಳು ಸಹ ಪಾಚಿ ಕಟ್ಟಿಕೊಂಡು ಬಿಡುತ್ತಿದ್ದವು. ಸದ್ಯ ಒಂದು ಬಾರಿಯೂ ಬಿದ್ದಿಲ್ಲ ಅದು ನನ್ನ ಪುಣ್ಯ.
ಈ ಎಲ್ಲಾ ತೊಂದರೆಗಳ ಮಧ್ಯೆಯೂ ಆ ಜಿಟಿ ಜಿಟಿ ಸುರಿಯುವ ಮಳೆಯ ಸದ್ದು ಒಂದು ರೀತಿ ಜೋಗುಳದ ಹಾಗೆ ಕೇಳಿಸುತ್ತಿತ್ತು. ಸದಾ ಕಚೇರಿಗೆ ಹೋಗುವಾಗ ಬರುವಾಗ ಛತ್ರಿ ಎಡೆಬಿಡದ ಆಪ್ತ ಸಂಗಾತಿಯಾಗಿ ಬಿಟ್ಟಿತ್ತು. ಆದರೆ ಮೈಸೂರಿನಲ್ಲಿ ಇದ್ದಾಗ ಆಗಾಗ ಕಾಡುತ್ತಿದ್ದ ಮೈಗ್ರೇನ್ ಸಕಲೇಶಪುರಕ್ಕೆ ಹೋದಮೇಲೆ ಎಲ್ಲೋ ಮಾಯವೇ ಆಗಿಬಿಟ್ಟಿತ್ತು . ಆ ಚಳಿ ಪ್ರದೇಶದಲ್ಲಿ ತಲೆನೋವು ಇನ್ನೂ ಹೆಚ್ಚಾಗಬಹುದು ಎಂದ ಎಂದು ಹೆದರಿದ್ದ ನನಗೆ ಇದೊಂದು ನಿರಾಳತೆ.
ಊರಿನಿಂದ ಆಚೆ ಒಂದೆರಡು ಕಿಲೋಮೀಟರ್ ಹೋದರೆ ಸಾಕಿತ್ತು ಕಣ್ಣಿಗೆ ರಾಚುವಷ್ಟು ಹಸಿರು .ತುಂಬಾ ಸುಂದರ ವಾತಾವರಣ ಬೈಕಿನಲ್ಲಿ ಸುತ್ತೆಲ್ಲಾ ಓಡಾಡಿದ್ದೆವು.
ಹೀಗೆ ಬಂದು ಶನಿವಾರ ಸುಲೋಚನಾ ಅವರು ಮೈಸೂರಿಗೆ ಹೋಗಿದ್ದರು. ರವೀಶ್ ಸಕಲೇಶಪುರಕ್ಕೆ ಬಂದು ನಾವು ಧರ್ಮಸ್ಥಳ ಸುಬ್ರಹ್ಮಣ್ಯಕ್ಕೆ ಹೋಗುವ ಪ್ರೋಗ್ರಾಮ್ ಆಗಿತ್ತು ಆದರೆ ಆ ಬುಧವಾರವೇ ನನಗೆ ಮದ್ರಾಸ್ ಐ ಬಂದು ವಕ್ಕರಿಸಿ ಬಿಟ್ಟಿತ್ತು. ಆಫೀಸಿನ ಬಳಿಯೇ ಇದ್ದ ಒಂದು ಡಾಕ್ಟರ್ ಶಾಪ್ ಗೆ ತೋರಿಸಿ ಔಷಧಿ ಅಯಿಂಟ್ಮೆಂಟ್ ತೆಗೆದುಕೊಂಡಿದ್ದೆ. ಅದೇನೋ ಭಂಡ ಧೈರ್ಯದಲ್ಲಿ ಕಣ್ಣಿಗೆ ಕೂಲಿಂಗ್ ಗ್ಲಾಸ್ ಧರಿಸಿ ಬಸ್ಸಿನಲ್ಲೇ ಧರ್ಮಸ್ಥಳಕ್ಕೆ ಹೋಗಿ ಬಂದಿದ್ದೆವು. ಅಲ್ಲೇ ಒಂದು ಮೂಲೆಯಲ್ಲಿ ಕುಟೀರದಂತೆ ಇದ್ದ ಹೋಟೆಲ್ ನಲ್ಲಿ ತಿಂದ ಮಂಗಳೂರು ಬಜ್ಜಿಯ ರುಚಿ ಇನ್ನು ಸ್ಮೃತಿ ಪಟಲದಲ್ಲಿ ಹಸಿರಾಗಿಯೇ ಇದೆ. ಅಲ್ಲಿ ದರ್ಶನ ಮುಗಿಸಿ ಸುಬ್ರಹ್ಮಣ್ಯಕ್ಕೆ ಬಂದು ಸಂಜೆಯ ವೇಳೆಗೆ ಸಕಲೇಶಪುರಕ್ಕೆ ವಾಪಸಾಗಿದ್ದೆವು. ಸುಬ್ರಹ್ಣಣ್ಯದ ಅವಲಕ್ಕಿ ತುಂಬಾ ಫೇಮಸ್. ತುಂಬಾ ರುಚಿಕರ ಕೂಡ. ಕಟ್ಡಿಸಿಕೊಂಡು ಬಂದಿದ್ದೆವು.
ಒಂದು ಬಾರಿ ಮೈಸೂರಿಗೆ ಬಂದಾಗ ಅಮ್ಮನನ್ನು ಸ್ವಲ್ಪ ದಿನ ಇರಲು ಕರೆದುಕೊಂಡು ಬಂದಿದ್ದೆ ಬೆಂಗಳೂರಿಗೆ ಹೋಗಿದ್ದ ನಮ್ಮ ತಂದೆ ಅಲ್ಲಿಂದ ನೇರವಾಗಿ ಬಂದರು. ನಮ್ಮ ಸುಮಿತ್ರ ದೊಡ್ಡಮ್ಮ ಅವರ ಪತಿ ಶಿವಾನಂದ್ ದೊಡ್ಡಪ್ಪ ಸಹ ಬಂದು ನಮ್ಮೊಡನೆ ಹದಿನೈದು ದಿನಗಳ ಕಾಲ ಇದ್ದಿದ್ದು ನಿಜಕ್ಕೂ ಮರೆಯಲಾಗದ ಒಂದು ಸುಂದರ ನೆನಪು.
ಬಂದು ರಿಪೋರ್ಟ್ ಮಾಡಿಕೊಂಡ ಮಾರನೆಯ ದಿನವೇ ಅಲ್ಲೇ ಮುಖ್ಯರಸ್ತೆಯಲ್ಲಿದ್ದ ಸಾರ್ವಜನಿಕ ಗ್ರಂಥಾಲಯಕ್ಕೆ ಹೋಗಿ 2 ಸದಸ್ಯ ಕಾರ್ಡುಗಳನ್ನು ಮಾಡಿಸಿಕೊಂಡಿದ್ದೆವು ಅಲ್ಲಿನ ಗ್ರಂಥಪಾಲಕರು ಚಂದ್ರಶೇಖರ್ ಧೂಲೇಕರ್ ಅನ್ನುವವರು. ಅವರು ಸಹ ಲೇಖಕರು. ನಮ್ಮ ಆಸಕ್ತಿ ನೋಡಿ ಅವರಿಗೂ ಖುಷಿಯಾಗಿತ್ತು. ಕೆಲವೊಮ್ಮೆ ಪೇಯಿಂಗ್ ಗೆಸ್ಟ್ ನಲ್ಲಿ ಇದ್ದಾಗ ಮಾಡಲು ಬೇರೆ ಕೆಲಸವಿಲ್ಲದೆ ಓದುವುದೊಂದೇ ಹವ್ಯಾಸ. ಪ್ರತಿದಿನ ಪುಸ್ತಕ ಬದಲಾಯಿಸಿ ಕೊಂಡು ಬರುತ್ತಿದ್ದೆವು. ಬಹಳಷ್ಟು ಪುಸ್ತಕಗಳನ್ನು ಅಲ್ಲಿ ಓದಿದ್ದೇವೆ. ಹಾಗೆಯೇ ಕಚೇರಿಯ ನಿಯತಕಾಲಿಕೆಗಳು ಸಹ ಬಸ್ಟ್ಯಾಂಡ್ ಎದುರಿಗೆ ಇದ್ದ ಒಂದು ಗೂಡಿನ ಅಂಗಡಿಯಿಂದ ತೆಗೆದುಕೊಳ್ಳುತ್ತಿದ್ದು ಒಂದು ಪುಸ್ತಕ ಇಟ್ಟು ಅದರಲ್ಲಿ ಎಂಟ್ರಿ ಮಾಡಿಸಿ ಸಹಿ ಹಾಕುತ್ತಿದ್ದು ಅಷ್ಟೇ, ಅಲ್ಲಿಯೂ ಬಹಳ ಜನ ಪುಸ್ತಕ ಓದುತ್ತಿದ್ದು ಒಂದು ರೀತಿ ಸಾಹಿತ್ಯಕ ವಾತಾವರಣ ಇತ್ತು. ಇನ್ನು ಸುಲೋಚನಾ ನಾನು ಅಂತೂ ಸರಿ ಒಂದೇ ತರಹದ ಪುಸ್ತಕದ ಹುಳುಗಳು ತುಂಬಾ ಚೆನ್ನಾಗಿತ್ತು. ಈ ವಿಷಯದಲ್ಲಿ ನಿಮ್ಮಿಬ್ಬರಿಗೂ ಒಂದೇ ಗುಣ ಎಂದು ಹೇಳಿ ಪದೋನ್ನತಿ ತೆಗೆದುಕೊಳ್ಳಲು ಕಾರಣರಾದ ಟಿ ಎಂ ಪರಶಿವಮೂರ್ತಿಯವರಿಗೆ ಧನ್ಯವಾದಗಳನ್ನು ತಿಳಿಸಲೇ ಬೇಕು.
ಸುಲೋಚನಾ ಅವರು ಅಷ್ಟೇ ತುಂಬಾ ಹೊಂದಾಣಿಕೆಯ ಗುಣದವರು. ನಮ್ಮಿಬ್ಬರಿಗೂ ಒಂದೇ ಒಂದು ಬಾರಿಯಾದರೂ ಬಿನ್ನಾಭಿಪ್ರಾಯ ಬರಲಿಲ್ಲ. ಕಡೆಯವರೆಗೂ ಮೊದಲ ದಿನದ ಸ್ನೇಹ ಮುಂದುವರೆದುಕೊಂಡು ಬಂದಿತು. ನಿಜಕ್ಕೂ ಅವರ ಅಗಲಿಕೆ ನನಗಂತೂ ಒಂದು ತುಂಬಲಾರದ ನಷ್ಟ .ಇದುವರೆಗೂ ಅವರ ಬಗ್ಗೆ ಬರೆಯಲೇ ಸಾಧ್ಯವಾಗಿರಲಿಲ್ಲ ಈಗಲೇ ಅವರ ವಿಷಯ ಕಣ್ಣೀರಿಲ್ಲದೆ ಬರೆಯಲು ಸಾಧ್ಯವಾಗುತ್ತಿರುವುದು.
ನಮ್ಮ ಮನೆಯಿದ್ದ ಕುಶಾಲನಗರ ಬಡಾವಣೆ ಎತ್ತರದಲ್ಲಿ ಇದ್ದುದರಿಂದ ಊರಿನ ದೇವಸ್ಥಾನ ನದಿ ತೀರ ಎಲ್ಲಾ ಕಿಟಕಿಯಿಂದಲೇ ತುಂಬಾ ಚೆನ್ನಾಗಿ ಕಾಣಿಸುತ್ತಿತ್ತು ಆ ಹಸಿರು ಮೇಲೆ ಜಿಟಿಪಿಟಿ ಮಳೆ ಕಿಟಕಿಯ ಬಳಿ ಕುಳಿತರೆ ಸಾಕು ಒಳ್ಳೆಯ ಸುಮನೋಹರ ದೃಶ್ಯ.
ಅಲ್ಲಿದ್ದಾಗಲೇ ಸೆಪ್ಟೆಂಬರ್ 1998ರಲ್ಲಿ ನನ್ನ ತಂಗಿ ವೈಶಾಲಿಯ ಮಗ ನಿಶ್ಚಯ್ ಹುಟ್ಟಿದ್ದು ಆ ಸಮಯದಲ್ಲಿ ನಾನು 15 ದಿನ ರಜೆ ಹಾಕಿ ಮೈಸೂರಿಗೆ ಬಂದಿದ್ದೆ. ನಮ್ಮ ಮನೆಯ ಮೊಟ್ಟ ಮೊದಲ ಮೊಮ್ಮಗು ಅವನು ಎಲ್ಲರಿಗೂ ತುಂಬಾ ಖುಷಿಯಾಗಿತ್ತು. ಗರ್ಭಿಣಿಯಾಗಿದ್ದಾಗ ವೈಶಾಲಿ ಒಮ್ಮೆ ಅವಳ ಪತಿಯೊಂದಿಗೆ ಬೈಕ್ ನಲ್ಲೆ ಸಕಲೇಶಪುರಕ್ಕೆ ಬಂದಿದ್ದಳು ಎಲ್ಲರಿಂದ ಬೈಗುಳಗಳನ್ನು ತಿಂದಿದ್ದಳು.
ಇನ್ನು ಫೆಲೋಶಿಪ್ ಪರೀಕ್ಷೆಗಳ ವಿಷಯಕ್ಕೆ ಬಂದರೆ ಓದಲು ಮನಸೇ ಬಂದಿರಲಿಲ್ಲ ಆದರೆ ಮೂರು ಪರೀಕ್ಷೆಗಳನ್ನು ತೆಗೆದುಕೊಂಡಾಗ ಮಧ್ಯೆ ಸಕಲೇಶಪುರಕ್ಕೆ ಹೋಗಲು ಸಾಧ್ಯವಿರದ ಕಾರಣ ರಜೆ ಸಿಗುತ್ತಿತ್ತು ಹಾಗಾಗಿ ಒಂದು ವಾರ ಮೈಸೂರಿನಲ್ಲಿ ಇರಬಹುದು ಎಂಬ ಆಸೆಗೆ ಅಲ್ಲಿದ್ದ ಎರಡು ವರ್ಷವೂ ನಾಮಕಾವಸ್ತೆಗೆ ಪರೀಕ್ಷೆ ತೆಗೆದುಕೊಂಡು ಬಂದು ಅರ್ಧ ಗಂಟೆ ಪರೀಕ್ಷೆ ಅಟೆಂಡ್ ಮಾಡಿ ವಾಪಸ್ ಹೋಗುತ್ತಿದ್ದುದು.
ಹೀಗೇ ನಡೆದುಕೊಂಡು ಹೋಗುವಾಗ ನಾವಿದ್ದ ಮನೆಯ ಓನರ್ ರಾಜಮ್ಮ ಅವರ ಕಿರಿಕ್ ಆರಂಭವಾಯಿತು ಯಾರೋ ಅವರಿಗೆ ಆಫೀಸಿನಿಂದ ಮನೆಯನ್ನು ಲೀಸ್ ಮಾಡಿಸಿದರೆ ಎಲ್ ಐ ಸಿ ಇಂದಲೇ ಬಾಡಿಗೆ ಪಾವತಿ ಆಗುತ್ತದೆ. ಈಗ ಇರುವವರು ಬಿಟ್ಟರೂ ತಕ್ಷಣ ಮತ್ತೆ ಎಲ್ಐಸಿಯವರೆ ಬರಬಹುದು ಎಂಬ ವಿಷಯ ತಿಳಿದಿತ್ತು .ಹಾಗಾಗಿ ಮನೆಯನ್ನು ಲೀಸ್ ಮಾಡಿಸಿ ಎಂದು ಒಂದೇ ವರಾತ ಹಚ್ಚಿದರು. ಹಾಗೆ ಲೀಸ್ ಮಾಡಿಸಿದರೆ ನಮಗೆ ತೊಂದರೆ ಆಗುತ್ತಿತ್ತು. ನಾವು ಕೊಡುವ ಬಾಡಿಗೆಗಿಂತ ಮನೆಭತ್ಯ ಹೆಚ್ಚು ಬರುತ್ತಿತ್ತು .ಆರ್ಥಿಕವಾಗಿ ನಷ್ಟವಾಗುತ್ತಿತ್ತು. ಆದರೆ ಅವರಿಗೆ ಬರುವ ಹಣಕ್ಕಂತೂ ಏನು ವ್ಯತ್ಯಯ ಆಗುತ್ತಿರಲಿಲ್ಲ ನಾವು ಕೊಟ್ಟರೆ ಏನು ಎಲ್ಐಸಿ ಇಂದ ಬಂದರೆ ಏನು? ಆದರೆ ಆಕೆ ಕೇಳಲೇ ಸಿದ್ಧವಿರಲಿಲ್ಲ. ಲೀಸ್ ಮಾಡಿಸದಿದ್ದಲ್ಲಿ ಮನೆ ಬಿಟ್ಟುಬಿಡಿ ಎಂದು ಖಡಾ ಖಂಡಿತವಾಗಿ ಹೇಳಿದರು .ಮತ್ತೆ ಮಾಡುವುದೇನು ಬೇರೆ ಮನೆಯ ಹುಡುಕಾಟಕ್ಕೆ ತೊಡಗಿದೆವು. ಈ ಬಾರಿ ರವೀಶ್ ಅವರೇ ಬಂದು ಮನೆ ಹುಡುಕಲು ಸಹಾಯ ಮಾಡಿದರು.
ಸಕಲೇಶಪುರದ ದೇವಸ್ಥಾನದ ಬೀದಿ ಸಂತೆಗೆ ಹತ್ತಿರದ ಗಾಯತ್ರಿ ಟೆಂಟ್ ಪಕ್ಕದ ಬಿಲ್ಡಿಂಗ್. ಮುಖ್ಯರಸ್ತೆಯಲ್ಲಿ ಬೇಕರಿ ನಡೆಸುತ್ತಿದ್ದವರು ಈ ಮನೆಯನ್ನು ಕಟ್ಟಿಸಿದ್ದರು .ಎರಡನೆಯ ಅಂತಸ್ತಿನಲ್ಲಿ ಎರಡು ಮನೆಗಳು. ಎದುರು ಬದುರು. ಅದರಲ್ಲಿ ಬೀದಿಯ ಕಡೆಗೆ ಮುಖ ಮಾಡಿದ ಮನೆಗೆ ನಾವು ಹೋಗುವುದು ಎಂದು ನಿರ್ಧಾರವಾಯಿತು ಹೊಸ ಮನೆ ಚೆನ್ನಾಗಿತ್ತು. ಹೋಗುತ್ತಲೇ ಇದ್ದ ಹಾಲ್ ವರಾಂಡದಷ್ಟೇ ಚಿಕ್ಕದಿತ್ತು .ಒಂದು ರೂಮ್ ಸ್ವಲ್ಪ ಪರವಾಗಿಲ್ಲ ಅಡುಗೆ ಮನೆ ಮಾತ್ರ ಹಾಲ್ ನಷ್ಟೇ ದೊಡ್ಡದಾಗಿ ಇತ್ತು. ಪಾತ್ರೆ ತೊಳೆಯಲು ಸಿಂಕ್ ಕಟ್ಟೆ ಎಲ್ಲಾ ಒಂದು ರೀತಿ ಚೆನ್ನಾಗಿ ಅನುಕೂಲಕರವಾಗಿ ಈಗಿರುವ ಮನೆಗಿಂತ ಚೆನ್ನಾಗಿಯು ಇತ್ತು. ಮೈಸೂರಿನಿಂದ ಬರುವಾಗ ದೇವಸ್ಥಾನದ ಬಳಿಯೇ ತಿಳಿದುಕೊಂಡರೆ ಮನೆಗೆ ಹೋಗಿ ನಂತರ ಆಫೀಸಿಗೆ ಬರಲು ಅನುಕೂಲವಾಗಿತ್ತು. ಇಲ್ಲಿ ಕೊಡುತ್ತಿದ್ದಷ್ಟೇ ಬಾಡಿಗೆ ಅಷ್ಟೇ ಅಡ್ವಾನ್ಸ್ ಇದ್ದಿದ್ರಿಂದ ಆರ್ಥಿಕವಾಗಿಯೂ ಏನು ತೊಂದರೆ ಅನಿಸಲಿಲ್ಲ. ಮನೆ ಬಿಡುತ್ತೇವೆ ಎಂದು ಹೇಳಿದಾಗ ಆಕೆಗೆ ಒಂದು ತರಹ ಆಯಿತು ನಾವು ಅವಳು ಹೇಳಿದಂತೆ ನಡೆಯಲಿಲ್ಲ ಎಂದು ಬೇಸರ ಇದ್ದರೂ ತೋರ್ಪಡಿಸಿಕೊಳ್ಳದೆ ಅಡ್ವಾನ್ಸ್ ಅನ್ನು ಸಕಾಲಕ್ಕೆ ಕೊಟ್ಟು ಸಹಕರಿಸಿದರು ಪಾಪ. ಆದರೆ ಅವರ ಲೆಕ್ಕಾಚಾರ ತಪ್ಪಿತಲ್ಲ ನಮಗೆ ಬೇಗ ಮನೆ ಸಿಕ್ಕಿತಲ್ಲ ಅದು ನಮ್ಮ ಪುಣ್ಯ. ಈ ಮನೆಗೆ ರಸ್ತೆಯ ಕಡೆ ಒಂದು ಸಣ್ಣ ಬಾಲ್ಕನಿ ಸಹ ಇದ್ದು ಸಂಜೆಯ ವೇಳೆ ಕುಳಿತುಕೊಳ್ಳಲು ಅಲ್ಲೇ ಕುಳಿತು ಓದಲು ಎಲ್ಲಾ ಅನುಕೂಲವಿತ್ತು. ಆದರೆ ಕರೆಂಟು ಇಲ್ಲದಿದ್ದಾಗ ಮಾತ್ರ ಎರಡೆರಡು ಅಂತಸ್ತು ನೀರು ಬರಬೇಕಾಗಿದ್ದು ಮಾತ್ರ ದೊಡ್ಡ ಪನಿಶ್ಮೆಂಟ್. 3 _ 4 ಬಾರಿ ಆ ರೀತಿ ವಿದ್ಯುತ್ ನಿಲುಗಡೆಯಾಗಿ ನೀರು ಹೊರುವಂತಾಗಿತ್ತು.
ಈ ಸಮಯದಲ್ಲಿ ನಮ್ಮ ತಂದೆಯವರಿಗೆ 60 ವರ್ಷ ತುಂಬಿತು ಷಷ್ಠ್ಯಬ್ದಿ ಸಮಾರಂಭವನ್ನು ಸಹ ಮೈಸೂರಿನಲ್ಲಿ ನಾವು ಮೂರು ಜನ ಅಕ್ಕ-ತಂಗಿಯರು ಸೇರಿ ಆಚರಿಸಿದೆವು. ವೈಶಾಲಿ ಆಗ ೩ ತಿಂಗಳ ಬಾಣಂತಿ. ನಮ್ಮ ತಾಯಿಗಂತೂ ತುಂಬಾ ಸಂತೋಷವಾಗಿತ್ತು.
ಆನಂತರ ನಿಶ್ಚಯ್ ನಾಮಕರಣ. ಹೀಗೆ ಒಂದರ ಹಿಂದೊಂದು ಶುಭ ಸಮಾರಂಭಗಳು ನಡೆಯುತ್ತಿದ್ದವು. ನಮ್ಮ ಸೋದರತ್ತೆಯ ಮಗ ಶ್ರೀನಾಥನ ಮದುವೆ ಆಗಲೇ ನಡೆದದ್ದು. ಆ ಸಮಯದಲ್ಲಿ ನಮಗೆ ಆಡಿಟ್ ನಡೆಯುತ್ತಿದ್ದುದರಿಂದ ನಾನು ಮದುವೆಗೆ ಹೋಗಲಾಗಲಿಲ್ಲ. ಸೋದರಮಾವ ಸೋಮುಮಾವನ ಮಗಳು ನಂದಿನಿ ಮದುವೆಗೆ ಅಮ್ಮ ಹೋಗಲೇಬೇಕಿತ್ತು. ನನ್ನ ತಂಗಿ ಬಾಣಂತಿ. ನಾನು ರಜೆ ಹಾಕಿ ಮೈಸೂರಿಗೆ ಹೋಗಿ ಅಮ್ಮನನ್ನು ಮದುವೆಗೆ ಕಳಿಸಿದೆ.ಚಿಕ್ಕಪ್ಪನ ಮಗ ಸಂಜೀವನ ಮದುವೆ ಬೆಂಗಳೂರಲ್ಲಿ ಆಯಿತು. ಶನಿವಾರ ಮಧ್ಯಾಹ್ನ ಆಫೀಸು ಮುಗಿಸಿ ಹೊರಟಿದ್ದು. ಗೊತ್ತಾಗದೆ ಷಟಲ್ ಬಸ್ನಲ್ಲಿ ಕೂತು ತಡವಾಗಿ ಬೆಂಗಳೂರು ತಲುಪಿದ್ದೊಂದು ದೊಡ್ಡ ಸಾಹಸ.
ನಮ್ಮ ನಿಗಮದಲ್ಲಿ ಹೊಸದಾಗಿ ಪದೋನ್ನತಿ ಹೊಂದಿದವರಿಗೆ ತರಬೇತಿ ಕಾರ್ಯಕ್ರಮ ಇರುತ್ತದೆ .ಹೀಗಾಗಿ ನನಗೆ 25 5 98 ರಿಂದ 28 5 98ರ ವರೆಗೆ ಹೈದರಾಬಾದಿನ ಡೆಕ್ಕನ್ ಕಾಂಟಿನೆಂಟಲ್ ಹೋಟೆಲ್ ನಲ್ಲಿ ತರಬೇತಿಗೆ ಕರೆ ಬಂದಿತ್ತು .ನನ್ನೊಂದಿಗೆ ನಂದ ಶ್ರೀ ಕಟ್ಟಿ ಅಂದರೆ ಈ ಮುಂಚೆ ವಿಭಾಗೀಯ ಕಚೇರಿಯಲ್ಲಿ ನನ್ನ ಜೊತೆಗಿದ್ದ ನನ್ನದೇ ಬ್ಯಾಚ್ನ ಗೆಳತಿ. ಅವಳಿಗೆ ಮದುವೆಯಾಗಿ ಬೆಳಗಾವಿಗೆ ವರ್ಗವಾಗಿ ಹೋಗಿದ್ದಳು. ನಂತರ ಅವರ ಪತಿಗೆ ಮತ್ತೆ ಮೈಸೂರಿಗೆ ವರ್ಗವಾದಾಗ ಅವಳಿಗೂ ವರ್ಗವಾಗಿ ಕೆ ಆರ್ ಪೇಟೆಗೆ ವರ್ಗಾವಣೆ ದೊರಕಿತ್ತು .ನನ್ನೊಂದಿಗೆ ಅವಳಿಗೂ ಪದೋನ್ನತಿ ಆಗಿ ಕೆ ಆರ್ ಪೇಟೆಯಿಂದ ಕೆ ಆರ್ ನಗರಕ್ಕೆ ಪೋಸ್ಟಿಂಗ್ ಸಿಕ್ಕಿತ್ತು. ಈಗ ನಮ್ಮಿಬ್ಬರಿಗೂ ಒಟ್ಟಿಗೆ ತರಬೇತಿ. ಈ ಬಾರಿ ನಾಲ್ಕು ದಿನಗಳ ಕಾಲ ತರಬೇತಿ ಇತ್ತು ಹಿಂದಿನ ದಿನ ಬೆಳಿಗ್ಗೆಯೇ ಹೋಟೆಲ್ಗೆ ತಲುಪಿಯಾಗಿತ್ತು. ಅಂದು ಬೆಳಿಗ್ಗೆ ಬಿರ್ಲಾ ಮಂದಿರ ದರ್ಶನ ಮುಗಿಸಿ ಅಲ್ಲಿನ ಕಾಮತ್ ಹೋಟೆಲ್ ನಲ್ಲಿ ಊಟ ಮಾಡಿ ಸಂಜೆ ಚಾರ್ಮಿನಾರ್ ಪ್ರದೇಶವನ್ನು ಸುತ್ತಿದೆವು. ಮಾರನೆಯ ದಿನ ಸಂಜೆ ಬೇಗಮ್ ಪೇಟ್ ನಲ್ಲಿ ಸುತ್ತಿ ಸೀರೆಗಳ ಖರೀದಿ ನಡೆಯಿತು. ಒಂದು ದಿನ ರಾತ್ರಿ ಬೇಕರಿ ಪುಲ್ಲಾರೆಡ್ಡಿಗಳ ಸಿಹಿತಿಂಡಿಗಳ ಖರೀದಿ. ಹಾಗೆಯೇ ಕಡೆಯ ದಿನ ಮತ್ತೆ ಪೇಟೆ ಬೀದಿಗೆ ಹೋಗಿ ಶಾಪಿಂಗ್. ಅಂತು ತರಬೇತಿಯ ಜೊತೆ ಜೊತೆಗೆ ಈ ಎಲ್ಲ ಕಾರ್ಯಕ್ರಮಗಳು ನಡೆದು ಒಂದು ರೀತಿ ಸಂಪನ್ನವಾದಂತೆ ಆಯಿತು. ಒಳ್ಳೆಯ ಕಂಪನಿ ಇದ್ದಾಗ ಸಮಯ ಸರಿದು ಹೋಗುವುದೇ ತಿಳಿಯುವುದಿಲ್ಲ .ಹಾಗೆಯೇ ಆಗಿತ್ತು. ಆಗ ಅಲ್ಲಿ ಹ್ಯಾಂಡ್ಪ್ರಿಂಟ್ನ ಜಾರ್ಜೆಟ್ ಸೀರೆ ಕೊಂಡಿದ್ದೆ. ಅದನ್ನು ರೋಲ್ ಐರನ್ ಮಾಡಿಸಿದ ನೆನಪಿದೆ. ಅಮ್ಮ ತಂಗಿಯರು ಅತ್ತೆ ಮತ್ತು ವಾರಗಿತ್ತಿ ಇವರಿಗೆಲ್ಲಾ ಸೀರೆ ಮೂವರು ನಾದಿನಿಯರಿಗೆ ಮುತ್ತಿನ ಸರ ತಂದಿದ್ದೆ. ಸ್ವಲ್ಪ ಆರ್ಥಿಕ ಅಡಚಣೆ ಇದ್ದ ಸಮಯ. ಸುಲೋಚನ ಅವರಿಂದ ಸಾಲ ಪಡೆದಿದ್ದು. ಅದರ ಮುಂದಿನ ತಿಂಗಳು ಯಾವುದೋ ಹಣ ಬರುವುದಿತ್ತು. ಆಗ ಅದನ್ನು ತೀರಿಸಿದೆ.
ಆ ವೇಳೆಗೆ ನನ್ನ ಮತ್ತೊಬ್ಬ ತಂಗಿ ಛಾಯಾ ಗೆ ಸಂಬಂಧವನ್ನು ಹುಡುಕುತ್ತಿತ್ತು ಭಾರತೀಯ ಜೀವ ನಿಗಮ ಭ ನಿಗಮದಲ್ಲೇ ಇದ್ದ ಹಾಸನದ ಮೂಲದ ಪ್ರಸನ್ನ ಅವರ ಜಾತಕ ಹೊಂದಿ ಹೆಣ್ಣು ನೋಡಲಿ ಕರೆದುಕೊಂಡು ಹೋಗಬೇಕಿತ್ತು, ನನ್ನ ತಂದೆ ತಾಯಿ ಮತ್ತು ಛಾಯ ಹಿಂದಿನ ದಿನವೇ ನಮ್ಮ ಮನೆಗೆ ಬಂದು ನಾವು ನಾಲ್ಕು ಜನವೂ ಹಾಸನಕ್ಕೆ ಅವರ ಮನೆಗೆ ಹೋದೆವು. ಎಲ್ಲವೂ ಕೂಡಿಬಂದು ಮದುವೆ ಸಹ ನಿಶ್ಚಯವಾಯಿತು.
ಹಾಗೆ ಹೀಗೆ ಒಂದು ವರ್ಷ ಕಳೆದೇ ಹೋಗಿತ್ತು ಆದರೆ ನಾನು ನೇರ ನಂಜನಗೂಡಿಗೆ ವರ್ಗಾವಣೆ ಕೇಳಿದ್ದರಿಂದ ಆ ವರ್ಷ ನನಗೆ ವರ್ಗಾವಣೆ ಸಿಗಲಿಲ್ಲ ಸುಲೋಚನ ಕೆ ಆರ್ ನಗರಕ್ಕೂ ವರ್ಗಾವಣೆ ಕೇಳಿದ್ದರು ಆದರೆ ಅವರಿಗೂ ವರ್ಗಾವಣೆ ಸಿಕ್ಕಿರಲಿಲ್ಲ ಹಾಗಾಗಿ ಮತ್ತೊಂದು ವರ್ಷ ಸಕಲೇಶಪುರದಲ್ಲಿ ಕಳೆಯಬೇಕಾಯಿತು.
ಈ ಮಧ್ಯೆ ನನಗೆ ಹೊಸ ವ್ಯವಹಾರ ವಿಭಾಗದಿಂದ ಕಚೇರಿ ಆಡಳಿತ ವಿಭಾಗಕ್ಕೆ ಬದಲಾವಣೆ ಕೊಟ್ಟಿದ್ದರು ಅಲ್ಲಿ ನನಗೆ ರಘು ಎನ್ನುವವರು ಸಹಾಯಕ. ಇದುವರೆಗೂ ನಾನು ಆ ವಿಭಾಗದಲ್ಲಿ ಕೆಲಸ ಮಾಡದೇ ಇರುವುದರಿಂದ ಹೊಸ ಕೆಲಸ ಕಲಿತು ಮಾಡಬೇಕಿತ್ತು. ಆದರೆ ಆಸಕ್ತಿಯುತವಾಗಿದ್ದುದರಿಂದ ಚೆನ್ನಾಗಿತ್ತು. ಅಲ್ಲಿ ಅಪ್ಪಣ್ಣ ನಾಯಕ್ ಎನ್ನುವವರು ಸಹಾಯಕ ಆಡಳಿತ ಅಧಿಕಾರಿಯಾಗಿದ್ದರು ಲಕ್ಷ್ಮೇಂದ್ರ ಕುಮಾರ್ ಎನ್ನುವವರು ಪಾಲಿಸಿ ಸೇವಾ ವಿಭಾಗದಲ್ಲಿ ಇದ್ದು ಸುಲೋಚನಾ ಅವರಿಗೆ ಅಧಿಕಾರಿಯಾಗಿದ್ದರು. ಮುಂದೆ ಈಗಿರುವ ಶಾಖೆಯಲ್ಲೂ ನನ್ನೊಂದಿಗೆ ಕಾರ್ಯ ನಿರ್ವಹಿಸಿದ್ದರು. ಕಚೇರಿಯ ವಾತಾವರಣ ತುಂಬಾ ಚೆನ್ನಾಗಿತ್ತು ಎಲ್ಲರೂ ಒಬ್ಬರಿಗೆ ಒಬ್ಬರು ಸಹಕಾರ ಕೊಟ್ಟು ಕೆಲಸ ಮಾಡುವುದರಿಂದ ಹೆಚ್ಚು ಹೊರೆ ಅನ್ನಿಸಿರಲಿಲ್ಲ.
ಅದೇ ಸಮಯದಲ್ಲಿ ಎಲ್ಲವೂ ಕಂಪ್ಯೂಟರಿಕರಣ ಆಗಬೇಕಾಗಿದ್ದರಿಂದ ಪಾಲಿಸಿ ಸೇವೆಯ ಕಡತಗಳೆಲ್ಲವೂ ಕಂಪ್ಯೂಟರಿಗೆ ದಾಖಲಾಗಬೇಕಾಗಿತ್ತು ಅವುಗಳ ಶುದ್ದೀಕರಣ (ಪ್ಯೂರಿಫಿಕೇಶನ್) ಕಾರ್ಯ ಕೈಗೊಳ್ಳಬೇಕಾಗಿತ್ತು. ನಾನು ಮತ್ತು ಸುಲೋಚನ ದಿನ ಸಂಜೆ ಕಚೇರಿಯ ಸಮಯದ ನಂತರ ಸ್ವಲ್ಪ ಹೊತ್ತು ಕುಳಿತು ಪಾಲಿಸಿ ಸಾಲದ ಮಾಹಿತಿಗಳನ್ನು ಶುದ್ಧೀಕರಣ ನಡೆಸುತ್ತಿದೆವು. ಕೆಲವೊಮ್ಮೆ ಮನೆಗೆ ತೆಗೆದುಕೊಂಡು ಹೋಗಿ ಮಾಡಬಹುದಾದುದನ್ನು ತೆಗೆದುಕೊಂಡು ಹೋಗುತ್ತಿದ್ದೆವು.
ಅಲ್ಲಿ ವಿದ್ಯುತ್ ಕಡಿತ ಬಹಳವೇ ಸಾಮಾನ್ಯ ಆಗಿದ್ದರಿಂದ ಸದಾ ಮೊಂಬತ್ತಿಯ ಬೆಳಕಿನಲ್ಲಿ ಕೆಲಸ. ಆದ ನಮ್ಮ ಮಾತುಕತೆ ಓದಿದ ಪುಸ್ತಕಗಳ ಬಗ್ಗೆ. ಅಂತ್ಯಾಕ್ಷರಿಯಲ್ಲಿ ಸ್ಪರ್ಧೆ ನಡೆಸುತ್ತಿದ್ದರಿಂದ ಆ ಬಗ್ಗೆ ಅನೇಕ ವಿಷಯಗಳನ್ನು ಒಂದು ಡೈರಿಯಲ್ಲಿ ಬರೆದಿಟ್ಟುಕೊಳ್ಳುತ್ತಿದ್ದೆವು. ಒಂದೇ ಪದಕ್ಕೆ ಸಂಬಂಧಿಸಿದಂತಹ ಹಾಡುಗಳು ಚಲನಚಿತ್ರದಲ್ಲಿ ಬಳಸಿಕೊಂಡಿದ್ದ ಕವಿಗಳ ಕೃತಿಗಳು ಹೀಗೆ ಅನೇಕ. ಮೊಂಬತ್ತಿ ಬೆಳಕಿನಲ್ಲಿ ಪುಸ್ತಕ ಓದುತ್ತಾ ಓದುತ್ತಾ ಮುಂದೆಲೆ ಕೂದಲು ಸುಟ್ಟುಕೊಂಡ ಪ್ರಸಂಗಗಳು ಒಂದೆರಡು ಇವೆ.
ಎರಡನೆಯ ಅಂತಸ್ತಿನಲ್ಲಿ ನಮ್ಮ ಎದುರು ಇದ್ದ ಇನ್ನೊಂದು ಮನೆಯಲ್ಲಿ ಮಾರವಾಡಿಗಳ ಕುಟುಂಬ ಇತ್ತು .ಮನೆ ತುಂಬಾ ಜನ ಯಾರು ಯಾರಿಗೆ ಹೇಗೆ ಸಂಬಂಧವೋ ಕಡೆಯವರೆಗೂ ನನಗೆ ಅರ್ಥವೇ ಆಗಲಿಲ್ಲ. ಕೆಲವೊಂದು ಸಿಹಿ ತಿಂಡಿಗಳನ್ನು ಅವರು ಕೊಡುತ್ತಿದ್ದರು. ನಮ್ಮ ಕಡೆಯ ರೊಟ್ಟಿ ವಾಂಗಿಬಾತ್ ಇತ್ಯಾದಿಗಳು ಅವರಿಗೆ ಇಷ್ಟವಾಗುತ್ತಿದ್ದುದರಿಂದ ವಿನಿಮಯ ನಡೆಯುತ್ತಿತ್ತು .ವಾಂಗಿಬಾತ್ ಪುಡಿ ಮಾಡಿದಾಗ ಅವರಿಗೆ ಸ್ವಲ್ಪ ಕೊಡುತ್ತಿದ್ದೆ. ಅವರಿಗೆ ಆಗ ಕನ್ನಡ ಬಾರದೆ ಇದರಿಂದ ಹಿಂದಿಯಲ್ಲಿ ಮಾತನಾಡುತ್ತಾ ಅವರಿಗೆ ಕನ್ನಡ ಕಲಿಸಲು ಪ್ರಯತ್ನಿಸಿದ್ದು ಒಂದು ಖುಷಿಯ ವಿಷಯ ನನಗೆ. ರಥೋತ್ಸವ ನಡೆದಾಗ ನಮ್ಮ ಮನೆಯಲ್ಲಿ ಕುಳಿತು ತೇರೆಳೆಯುವುದನ್ನು ನೋಡಬಹುದಿತ್ತು. ಇನ್ನು ರಾತ್ರಿ ಮಲಗಿ ಕೊಂಡಾಗ ಪಕ್ಕದ ಟೆಂಟಿನ ಸಿನಿಮ ಡೈಲಾಗುಗಳು ಚೆನ್ನಾಗಿ ಕೇಳಿಸುತ್ತಿದ್ದವು. ಸಿನಿಮಾ ನೋಡದಿದ್ದರೂ ನೋಡಿದ ಹಾಗೆಯೇ ಆಗುತ್ತಿತ್ತು ಆದರೆ ನಿದ್ರೆ ಬಾರದಿದ್ದಷ್ಟು ಗಲಾಟೆ ಏನು ಆಗುತ್ತಿರಲ್ಲ. ಅಥವಾ ತಿಂಡಿಗೆ ತಲೆ ಇತರದೇವಿಗೆ ವಶವಾಗುತ್ತಿದ್ದ ನಮಗೆ ಏನು ಗೊತ್ತಾಗುತ್ತಿರಲಿಲ್ಲವೋ ಏನೋ…..(ಮುಂದುವರೆಯುವುದು)
ಸುಜಾತಾ ರವೀಶ್




