ಸಾಹಿತಿ ಸಂಗಾತಿ “ಡಾ.ಹೇಮಾ ಪಟ್ಟಣಶೆಟ್ಟಿಯವರಿಗೆ ಒಲಿದು ಬಂದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಗೌರವ” ಸಮಾಜ ಮುಖಿ ಸಂವೇದನಾಶೀಲ ಲೇಖಕಿ ಡಾ. ಹೇಮಾ ಸಿ. ಪಟ್ಟಣಶೆಟ್ಟಿಯವರಿಗೆ ಧಾರವಾಡ ಕನ್ನಡ ಸಾಹಿತ್ಯ ಸಮ್ಮೇಳನದ ಸಾರಥ್ಯ (ಕೌಟುಂಬಿಕ ಜನತಾ ನ್ಯಾಯಾಲಯದ ಪ್ರಥಮ ಆಯೋಜಕಿ, ಸಾಹಿತ್ಯ ಮತ್ತು ಸಂಘಟನೆಯ ರಾಯಭಾರಿ, ಉತ್ತರ ಕನ್ನಡ ಲೇಖಕಿಯರ ಸಂಘದ ಅಧ್ಯಕ್ಷೆಯಾದಿಯಾಗಿ ಬಹುಶೃತ ಕಾರ್ಯಫಲದಾತೆ, ಅನನ್ಯ ಪ್ರಕಾಶನದ ಒಡತಿ, ಸಮರ್ಥ ಅನುವಾದಕಿ, 4೦ ವೈವಿಧ್ಯಮಯ ಕೃತಿತಾರೆಗಳ ಧಾರನಗರಿಯ ಹೆಸರಾಂತ ಲೇಖಕಿ, ರಂಗನಟಿ, ಸಮಾಜಮುಖಿ ಸಕ್ರಿಯ ಕಾರ್ಯಕರ್ತೆ, ಬಹುಭಾಷಾ ಕವಯತ್ರಿ, ಮನಃಶಾಸ್ತ್ರದ ಕನ್ನಡ ಉಪನ್ಯಾಸಕಿ, ಮಕ್ಕಳ ನಾಟಕ ರಚನಾಕಾರ್ತಿ, ಸಶಕ್ತ ಸಮಾಜದ ಸಂಸ್ಕೃತಿ ಚಿಂತಕಿ, ಸ್ತ್ರೀ ದೌರ್ಜನ್ಯದ ವಿಮೋಚಕಿ, ಸಬಲ ಮಹಿಳಾ ಲೋಕದ ಸಂಚಾಲಕಿ, ನೊಂದ ವನಿತೆಯರ ಸಾಂತ್ವನ ಸಮಾತಾ ಸಶಕ್ತ ಧ್ವನಿ, ದೇವದಾಸಿ ಪದ್ಧತಿ ನಿರ್ಮೂಲನಾ ಸಂಪನ್ಮೂಲ ವ್ಯಕ್ತಿ, ಧಾರವಾಡ ಹೈಕೋರ್ಟ್ ಪೀಠ ಸ್ಥಾಪನಾ ಉಪವಾಸ ಸತ್ಯಾಗ್ರಹಿ, ಸ್ತ್ರೀ ಮೀಸಲಾತಿಯ ಸ್ವಯಂ ಸೇವಕಿ, ಲಿಂಗ ಸಂವೇದನಾ ಜಾಗೃತಿಯ ರೂವಾರಿ, ವನಿತೆಯರ ಬಹುವಿಧ ಸಮಸ್ಯೆಗಳ ನಿವಾರಕಿ, ಮಾನವೀಯ ಸಂವೇದನೆಯ ಮಾತೃಹೃದಯಿ, ಹೆಣ್ಣು ಧಾರಕ ಬೀದಿ ನಾಟಕದ ರೂಪಕಿ, ಕಾವ್ಯ ಕಮ್ಮಟ, ಅನುವಾದ ಕಮ್ಮಟ, ಪ್ರಕಾಶನ ಕಮ್ಮಟ, ಕವಿಸಂಘದ ಉಪಾಧ್ಯಕ್ಷರು, ಹೆಣ್ಣು ಭ್ರೂಣ ಹತ್ಯೆಯ ಭೇದಕಿ, ವಿಚಾರ ಸಂಕಿರಣ, ಪರಿಸರ ವ ಜಲ ಸಂವರ್ಧಕಿ, ಖ್ಯಾತ ಹಿರಿಯ ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿ ಯವರ ಧರ್ಮಪತ್ನಿ ಡಾ. ಹೇಮಾ ಸಿದ್ಧಲಿಂಗ ಪಟ್ಟಣಶೆಟ್ಟಿ ಇವರ ಸಾಮಾಜಿಕ ಸೇವೆ – ಸಾಂಸ್ಕೃತಿಕ ಅನುಸಂಧಾನಕ್ಕಾಗಿ ಕರ್ನಾಟಕ ಘನ ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 2೦24 – ೨೫ನೇ ಸಾಲಿನ ಮಹಾಶರಣೆ ‘ಅಕ್ಕಮಹಾದೇವಿ ರಾಜ್ಯ ಮಟ್ಟದ ಪ್ರಶಸ್ತಿ’ ಪುರಸ್ಕೃತರಾದ ಡಾ. ಹೇಮಾ ಸಿದ್ದಲಿಂಗ ಪಟ್ಟಣಶೆಟ್ಟಿ ಯವರಿಗೆ ಧಾರವಾಡ ಜಿಲ್ಲಾ 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದು, 30, 31 ಮಾರ್ಚ 2026ರಂದು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಆಯೋಜನೆಯಾಗಿದೆ ಸಕಾರಣ ಮಹನೀಯರ ಕನ್ನಡ ಸಾಹಿತ್ಯ ಸೇವೆ, ಸಮಾಜ ವ ಸಾಂಸ್ಕೃತಿಕ ಜೀವನ ಸಾಧನೆಯ ಮೇಲೆ ಬೆಳಕು ಚೆಲ್ಲುವ ಕಿರು ಲೇಖನ) *ಸಮತಾ ಸಮಾಜದ ಸಂಚಾಲಕಿ ಡಾ. ಹೇಮಾ ಪಟ್ಟಣಶೆಟ್ಟಿ ಅವರ ಬಾಲ್ಯ, ಶಿಕ್ಷಣ, ಪರಿವಾರ ವೃತ್ತಿ ಕುರಿತು ಕಿರು ಮಾಹಿತಿ* ವೈಚಾರಿಕ ನಿಲುವಿನ ಹೇಮಾರವರು 1954ರ ಫೆಬ್ರುವರಿ 10ರಂದು ಧಾರವಾಡದಲ್ಲಿ ಜನಿಸಿದರು. ತಂದೆ ಚಂದ್ರಶೇಖರಸ್ವಾಮಿ ಹೊನ್ನಾಪುರಮಠರವರು ವಕೀಲರಾಗಿದ್ದರು. ತಾಯಿ ಗೌರಾಂಬಿಕಾ ಪ್ರಿಂಟಿಂಗ್ ಪ್ರೆಸ್ ನಡೆಸುತ್ತಿದ್ದರು. ಸಾಹಿತ್ಯಿಕ ಪರಿವಾರದಿಂದ ಬಂದ ಹೇಮಾ ಅವರು ಎಂ. ಎ. (ಮನೋವಿಜ್ಞಾನ) ಮತ್ತು ಎಂ. ಎ. (ಕನ್ನಡ) ಸಾಧನೆಗಳ ಜೊತೆಗೆ ‘ಕನ್ನಡ ನಾಟಕಗಳಲ್ಲಿ ಸ್ತ್ರೀ ಪಾತ್ರಗಳು’ ಎಂಬ ಮಹಾಪ್ರಬಂಧ ಮಂಡಿಸಿ ಪಿ. ಎಚ್. ಡಿ ಪದವಿಗೆ ಪಾತ್ರರಾದ ಇವರು ಮಹಿಳಾ ಸಶಕ್ತಿಕರಣದ ಸಂಕೇತವಾಗಿದ್ದಾರೆ. ಡಾ. ಹೇಮಾ ಪಟ್ಟಣಶೆಟ್ಟಿ ಕನ್ನಡ ಸಾಹಿತ್ಯಲೋಕದಲ್ಲಿ ಹೆಸರಾಂತ ಲೇಖಕಿ. ಲೇಖನಗಳಲ್ಲದೆ ಅನುವಾದಕಿಯಾಗಿಯೂ, ರಂಗನಟಿಯಾಗಿಯೂ ಹಾಗೂ ಸಮಾಜ ಕಾರ್ಯಕರ್ತೆಯಾಗಿಯೂ ಪ್ರಸಿದ್ದರು. ಆರು ವರ್ಷ ಮನ:ಶಾಸ್ತ್ರದಲ್ಲೂ ನಾಲ್ಕು ವರ್ಷ ಕನ್ನಡಲ್ಲೂ ಉಪನ್ಯಾಸಕಿಯಾಗಿ ಧಾರವಾಡ ಕರ್ನಾಟಕ ಕಲಾ ಮಹಾವಿದ್ಯಾಲಯ ಮತ್ತು ಕಿತ್ತೂರಿನ ಕಾಲೇಜುಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ. ಮಂಗಳೂರಿನ ಆಕಾಶವಾಣಿಯಲ್ಲಿ ಪ್ರೊಡಕ್ಷನ್ಸ್ ಅಸಿಸ್ಟೆಂಟ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. “ಕನ್ನಡ ನಾಟಕಗಳಲ್ಲಿ ಸ್ತ್ರೀ ಪಾತ್ರಗಳು -ಸ್ತ್ರೀವಾದಿ ದೃಷ್ಟಿಕೋನ” ಎಂಬುದು ಇವರ ಸಂಶೋದನಾ ಪ್ರಬಂಧ. ನೀನಾ ಕೃತಿ ಖ್ಯಾತಿಯ ಸಿದ್ಧಲಿಂಗ ಪಟ್ಟಣಶೆಟ್ಟಿಯವರ ಧರ್ಮ ಪತ್ನಿಯಾಗಿ ಹೂವೆಂಬ ಮಗಳು ಸಮುದ್ರವೆಂಬ ಮಗನನ್ನು ಪಡೆದಿರುವ ಇವರು ಸದಾ ಮಹಿಳಾ ಕಲ್ಯಾಣ ಮತ್ತು ಸಮಾಜೋದ್ಧಾರ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ. *ಮಹಿಳಾ ದೌರ್ಜನ್ಯ ವಿಮೋಚಕಿ ಡಾ. ಹೇಮಾ ಪಟ್ಟಣಶೆಟ್ಟಿಯವರ ಅಸಾಧಾರಣ ಅಪರಿಮಿತ ಸಮಾಜಮುಖಿ ಕಾರ್ಯಕಲಾಪಗಳು* ಡಾ. ಹೇಮಾ ಪಟ್ಟಣಶೆಟ್ಟಿ ಅವರು ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಪಠ್ಯ ರಚನಾ ಸಲಹಾ ಸಮಿತಿ ಸದಸ್ಯರಾಗಿ, ಕರ್ನಾಟಕ ಸರಕಾರದ ಜಲ ಸಂವರ್ಧನೆ ಯೋಜನಾ ಸಂಘದ ಆಡಳಿತ ಮಂಡಳಿ ಸದಸ್ಯರಾಗಿ ಹೀಗೆ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ರಾಷ್ಟ್ರೀಯ – ಅಂತಾರಾಷ್ಟ್ರೀಯ ಮಹತ್ವದ ಕಥಾ ಹಾಗೂ ಕಾವ್ಯ ಸಂಪುಟಗಳಲ್ಲಿ ಇವರ ಕಥೆ, ಕವಿತೆಗಳು ಪ್ರಕಟಗೊಂಡಿವೆ. ರಾಜ್ಯಮಟ್ಟದ ಹಾಗೂ ರಾಷ್ಟ್ರಮಟ್ಟದ ಬಹುಭಾಷಾ ಲೇಖಕಿಯರ ಸಂವಾದದ ಜೊತೆಗೆ ವಿಚಾರ ಮಂಡನೆ ಮಾಡಿದ್ದಾರೆ. ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಉತ್ತರ ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿಯಾಗಿ, ಕೋಶಾಧ್ಯಕ್ಷರಾಗಿ, ಕಾರ್ಯಾಧ್ಯಕ್ಷರಾಗಿ, ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ‘ರಂಗಭೂಮಿಕಾ’ ಹವ್ಯಾಸಿ ನಾಟಕ ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಹೇಮಾ ಪಟ್ಟಣಶೆಟ್ಟಿ ಅವರು ಮಹಿಳಾ ಸಂಬಂಧೀ ಕಾರ್ಯಗಳಲ್ಲಿ ರಾಷ್ಟ್ರಮಟ್ಟದ ‘ಜಾಯಿಂಟ್ ವಿಮೆನ್ಸ್ ಪ್ರೋಗ್ರಾಂ’ ಸಂಸ್ಥೆಯ ಉತ್ತರ ಕರ್ನಾಟಕದ ಸಂಚಾಲಕರಾಗಿ, ‘ಸಾಂತ್ವನ’ ಕೌಟುಂಬಿಕ ಸಲಹೆ – ಸಹಾಯ ಕೇಂದ್ರದ ನಿರ್ದೇಶಕರಾಗಿ, ರಾಷ್ಟ್ರಮಟ್ಟದಲ್ಲಿ ಮಹಿಳೆ ಮತ್ತು ಬಾಲಕಿಯರ ಸಾಗಾಣಿಕೆ ತಡೆಗಟ್ಟುವ ಸಮಿತಿ ಸದಸ್ಯರಾಗಿ, ಮಹಿಳಾ ಜಾಗೃತಿ ವೇದಿಕೆ ಸ್ಥಾಪಕ ಕಾರ್ಯದರ್ಶಿಯಾಗಿ ಹೀಗೆ ಆನೇಕ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ದೇವದಾಸಿ ಮಹಿಳೆಯರ ಮೇಲೆ ಸರಕಾರಿ ನೀತಿ ಮತ್ತು ಯೋಜನಾ ಸೌಲಭ್ಯಗಳ ಪರಿಣಾಮ ಹಾಗೂ ಅವರ ಸ್ಥಾನಮಾನ ಕುರಿತು ಪುನರ್ಮೌಲ್ಯೀಕರಣ ಅಧ್ಯಯನ ಮಾಡಿದ್ದಾರೆ. ಪೊಲೀಸ್ ಅಧಿಕಾರಿಗಳಿಗೆ ಲಿಂಗ ಸಂವೇದನಾ ಜಾಗೃತಿ ಕಾರ್ಯಾಗಾರವನ್ನು ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ಸಂಘಟಿಸಿದ್ದಾರೆ. ಕೌಟುಂಬಿಕ ಜನತಾ ನ್ಯಾಯಾಲಯ ಆಯೋಜಿಸಿ – ಧಾರವಾಡ, ಬೆಳಗಾವ, ಅಥಣಿ – ನ್ಯಾಯಾಲಯಗಳಲ್ಲಿ ಉಳಿದು ಹೋದ ಪ್ರಕರಣಗಳಲ್ಲಿ 85 ಪ್ರಕರಣಗಳನ್ನು ಇತ್ಯರ್ಥಗೊಳಿಸಿದ್ದಾರೆ. ಅಮ್ಮಿನಭಾವಿ, ಉಪ್ಪಿನಬೆಟಗೇರಿ, ಬ್ಯಾಹಟ್ಟಿ ಗ್ರಾಮಗಳಲ್ಲಿ ಪ್ರತೀ ಗ್ರಾಮದಲ್ಲಿ 50 ಮಹಿಳೆಯರಿಗೆ ‘ಸಶಕ್ತೀಕರಣ’ದ ತರಬೇತಿಯನ್ನು 22 ತಿಂಗಳ ಕಾಲ ನೀಡಿದ್ದಾರೆ. ರಾಜ್ಯ, ರಾಷ್ಟ್ರಮಟ್ಟದ ವಿಚಾರ ಸಂಕಿರಣ, ಕಾರ್ಯಾಗಾರ, ಪ್ರತಿಭಟನಾ ಮೆರವಣಿಗೆ, ಉಪವಾಸ ಸತ್ಯಾಗ್ರಹಗಳಲ್ಲಿ ಭಾಗವಹಿ ಸಮಾಜ ಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಶ್ರಮಿಸಿದ್ದಾರೆ. *ಡಾ ಹೇಮಾರವರ ಅನನ್ಯ ಪ್ರಕಾಶನದಡಿಯಲ್ಲಿ ಜನಾರ್ಪಣೆಗೊಂಡ ಅವರ ಕೃತಿ ವೈವಿಧ್ಯ ನೋಟ* ೧೯೭೯ ರಲ್ಲಿ ‘ಅನನ್ಯ’ ಪ್ರಕಾಶನವನ್ನು ಸ್ಥಾಪಿಸಿ ಕನ್ನಡ ಖ್ಯಾತ ಲೇಖಕರ ೧೫೦ ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರು ಸಾಹಿತ್ಯಿಕ ದ್ವೈ ಮಾಸಿಕ ‘ಸಂಕಲನ’ ಪತ್ರಿಕೆಯ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಹೇಮಾ ಪಟ್ಟಣಶೆಟ್ಟಿ ಅವರು ಇದುವರೆವಿಗೂ ಸುಮಾರು 40 ಸಾಹಿತ್ಯ ಕೃತಿಗಳನ್ನು ಮೂಡಿಸಿದ್ದಾರೆ. ಮುಸುಕಿದೀ ಮಬ್ಬಿನಲಿ ಅವರ ಕಥಾ ಸಂಕಲನ. ವಿರಹೋತ್ಸವ(೧೯೮೩), ಹೊಸ ಹಾಡು(೧೯೮೬), ಕಣ್ಣುಗಳಲಿ ಕನಸು ತುಂಬಿ(೧೯೯೩), ಉಸಿರ ಬದುವಿನ ಗುಂಟ(೨೦೦೭), ಬಾಳೆ ಗರ್ಭದಲಿ (೨೦೧೧) ಅವರ ಕಾವ್ಯ ಸಂಕಲನಗಳು. ತುಂಟ ಮಕ್ಕಳ ತಂಟೆ, ಬಗಾಟ ಬಗರಿ, ಹೆಣ್ಣು ಹೆಜ್ಜೆ, ಚೆಕಾವ್ ಟು ಶಾಂಪೇನ್ ಮಕ್ಕಳ ನಾಟಕಗಳು. ಅವರ ವೈಚಾರಿಕ ಕೃತಿಗಳಲ್ಲಿ ಮರ್ಯಾದೆಯ ಮುಸುಕಿನಲ್ಲಿ, ಅನುಲೇಖ, ರಂಗದಂಗಳ, ಆಕಲನ, ಕನ್ನಡ ನಾಟಕಗಳಲ್ಲಿ ಸ್ತ್ರೀಲೋಕ, ರಂಗ ವೃತ್ತಾಂತ,ಅಕ್ಕರದ ಸುಯಿಧಾನ ಸೇರಿವೆ. ಪ್ರಸನ್ನ, ಸಾಲಿ ರಾಮಚಂದ್ರರಾಯ ಇವರು ರಚಿಸಿದ ಜೀವನ ಚರಿತ್ರೆಗಳು. ಹೊನ್ನಪುರ, ಕತೆಗಳು; ನನ್ನ ಅವ್ವ ನನ್ನ ಅಪ್ಪ -೧, ನನ್ನ ಅವ್ವ ನನ್ನ ಅಪ್ಪ-೨, ನನ್ನ ಶಾಲಾ ಗುರುಗಳು ಇವರ ಸಂಪಾದನೆಗಳು. ಡಾ. ಲೋಹಿಯ, ಅದೃಶ್ಯ ವ್ಯಕ್ತಿಯ ಆತ್ಮಹತ್ಯೆ, ವಾತ್ಸಲ್ಯ ವಿಷ, ಮಾಡು ಸಿಕ್ಕದಲ್ಲಾ, ಜಾತಿಯವನೇ ಬೇಕು, ಅಪ್ಪಾಜಿ ಕಳೆದು ಹೋಗಿದ್ದಾರೆ, ಬೆವರು! ಬೆವರು!, ಬಾಬಿ, ಸೀಗಲ್, ಪೇಶಂಟ್ ಪಾರ್ಕಿಂಗ್, ಅನಿವಾಸಿ ಭಾರತೀಯರು, ತೆಂಡುಲಕರ ಮಕ್ಕಳ ನಾಟಕಗಳು, ರಕ್ತ ಪುಷ್ಪ, ಹೋಳಿ ಮುಂತಾದವು ಇತರ ಭಾಷೆಗಳಿಂದ ಮೂಡಿ ಬಂದ ಇವರ ಅನುವಾದ ಕರತಿಗಳು. ವಿಶ್ವದ ಅನೇಕ ಭಾಗಗಳಲ್ಲಿ ಪ್ರವಾಸ ಮಾಡಿ ವಿಫುಲ ಅನುಭವ ಗಳಿಸಿದ್ದಾರೆ. *ಡಾ ಹೇಮಾರವರ ಸಂಸ್ಕೃತಿ ಚಿಂತನೆ ಮಹಿಳಾ ಹೋರಾಟ ಸಾಹಿತಿಕ ಸೇವೆಗೆ ಸಂದಿರುವ ಪ್ರಶಸ್ತಿ, ಪುರಸ್ಕಾರ, ಗೌರವಾಧಾರ, ಮಾನ – ಸನ್ಮಾನಗಳು* 2007ರಲ್ಲಿ ಡಾ. ಹೇಮಾ ಪಟ್ಟಣಶೆಟ್ಟಿ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಪ್ರೊ. ಎಸ್. ವಿ. ಪರಮೇಶ್ವರ ಭಟ್ಟ ಪ್ರಶಸ್ತಿ, ರತ್ನಮ್ಮ ಹೆಗ್ಗಡೆ ಪ್ರಥಮ ಬಹುಮಾನ (ಮುಸಕಿದೀ ಮಬ್ಬಿನಲಿ), ಮುದ್ದಣ ಕಾವ್ಯ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ, ಅಂತಾರಾಷ್ಟ್ರೀಯ ಮಹಿಳಾ ವರ್ಷದ ಪ್ರಶಸ್ತಿ (ವಿರಹೋತ್ಸವ), ಎರಡು ಸಲ ಅಂತಾರಾಷ್ಟ್ರೀಯ ಮಹಿಳಾ ವರ್ಷದ ಪ್ರಶಸ್ತಿ (ಅನುಲೇಖ), ರತ್ನಮ್ಮ ಹೆಗ್ಗಡೆ ಬಹುಮಾನ (ಹೊಸ ಹಾಡು, ಕಣ್ಣುಗಳಲಿ ಕನಸು ತುಂಬಿ, ಕನ್ನಡ ನಾಟಕಗಳಲ್ಲಿ ಸ್ತ್ರೀಲೋಕ, ಉಸಿರ ಬದುವಿನ ಗುಂಟ ಕೃತಿಗಳಿಗೆ) ಮಹಿಳಾ ಪ್ರಕಾಶಕ ಪ್ರಶಸ್ತಿ- ಕರ್ನಾಟಕ ಲೇಖಕಿಯರ ಸಂಘದ ಪ್ರೇಮಾ ಭಟ್ ಪ್ರಕಾಶಕ ಪ್ರಶಸ್ತಿ, ಮಹಿಳಾ ಸಾಧಕರ ಪ್ರಶಸ್ತಿ – ಸಾಹಿತ್ಯ ಪ್ರತಿಷ್ಠಾನ – ಬೆಳಗಾವಿ, ಸೀತಾಸುತ ಸಾಹಿತ್ಯ ಪ್ರಶಸ್ತಿ, ಕೀರಂ ಪ್ರಶಸ್ತಿ, ಹೊಸ ಹಾಡು ಕೃತಿಗೆ ೧೯೮೩ ರ ಕನ್ನಡ ಸಾಹಿತ್ಯ ಪರಿಷತ್ತಿನ ಪುರಸ್ಕಾರ ದೊರೆತಿದೆ. ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಮಕ್ಕಳ ಚಂದಿರ ಪ್ರಶಸ್ತಿ, ಶ್ರೀಮತಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಟ್ರಸ್ಟ್ ಇವರು ಕೊಡಮಾಡುವ ಅಕ್ಕ ಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ. ಧಾರವಾಡ ತಾಲ್ಲೂಕು ಸಾಹಿತ್ಯ ಸಮ್ಮೇಳನ-7 ರ ಸರ್ವಾಧ್ಯಕ್ಷತೆ, ದಸರಾ ಕವಿಗೋಷ್ಠಿ ಅಧ್ಯಕ್ಷತೆ, ಧಾರವಾಡ ಜಿಲ್ಲಾ ಉತ್ಸವ-೮ ಸಾಂಸ್ಕೃತಿಕ ಸಮಿತಿ ಅಧ್ಯಕ್ಷತೆ, ದಸರಾ ವಿಶಿಷ್ಟ ಕವಿಗೋಷ್ಠಿ ಅಧ್ಯಕ್ಷತೆ ಮುಂತಾದ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ. ಧಾರವಾಡದ ಇನ್ನರ್ ವ್ಹೀಲ್ ಕ್ಲಬ್ ಇವರಿಗೆ ಉತ್ಕೃಷ್ಟ ಸಮಾಜ ಕಾರ್ಯ ಪ್ರಶಸ್ತಿ ನೀಡಿ ಗೌರವಿಸಿದೆ. ರಾಜ್ಯ ಮತ್ತು ರಾಷ್ಟ್ರಮಟ್ಟದ ವಿಚಾರ ಸಂಕೀರ್ಣ ಕಾರ್ಯಗಾರ ಪ್ರತಿಭಟನಾ ಮೆರವಣಿಗೆ ಉಪವಾಸ ಸತ್ಯಾಗ್ರಗಳಲ್ಲಿ ಭಾಗವಹಿಸಿರುವ ಹೇಮಾ ರವರ ಸಾಧನೆ ಅವಿಸ್ಮರಣೆಯ ಅವುಗಳಲ್ಲಿ ಮುಖ್ಯವಾದವು ಬೆಳಗಾವಿ ನಮ್ಮದು – 1970, ಜೆ. ಪಿ ಚಳುವಳಿ -1975, ಧಾರವಾಡದ ಹೈಕೋರ್ಟ್ ಪೀಠ ಸ್ಥಾಪನೆಗೆ ಆಗ್ರಹಿಸಿ – 1995, 33 ಪರ್ಸೆಂಟ್ ಮಹಿಳಾ ಮಿಸಲಾತಿಗಾಗಿ ದಿಲ್ಲಿ ಸಂಸತ್ ಭವನದ ಎದುರು ಧರಣಿ – 1998, ಮಂತಾದ ಚಳುವಳಿಗಳಲ್ಲಿ ಭಾಗವಹಿಸಿ ನಾಡಿನ ಕಲ್ಯಾಣಕ್ಕಾಗಿ ಅವಿರತ ಹೋರಾಟ ಮಾಡಿದ್ದಾರೆ. ೨೦೧೩ರಲ್ಲಿ ನಡೆದ ಧಾರವಾಡ ತಾಲೂಕು ಸಾಹಿತ್ಯ ಸಮ್ಮೇಳನಾಧ್ಯಕ್ಷೆಯಾಗಿದ್ದ ಡಾ.ಹೇಮಾ ಪಟ್ಟಣಶೆಟ್ಟಿ ಅವರಿಗೆ ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಲಭಿಸಲಿ, ಇವರ ಸಾಮಾಜಿಕ ಹಾಗೂ ಸಾಹಿತ್ಯ ಸೇವೆಗೆ ಹಲವಾರು ಪ್ರಶಸ್ತಿಗಳು ಅರಸಿಬಂದಿವೆ. ಪ್ರಸ್ತುತ ಕರ್ನಾಟಕ ಘನ ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 2024 – 25ನೇ ಸಾಲಿನ ಅಕ್ಕಮಹಾದೇವಿ ರಾಜ್ಯ ಪ್ರಶಸ್ತಿಯನ್ನು 3 ಮಾರ್ಚ್ 2೦25ರಂದು ಪ್ರದಾನ ಮಾಡಿರುವುದು ಅಭಿಮಾನದ ಸಂಗತಿಯೂ ಹೌದು ಮಹಿಳಾ ಸಬಲೀಕರಣಕ್ಕೆ ಸಂಧ ಗೌರವವು ಹೌದು. ಆದಾಗ್ಯೂ ಇವರ ಸಮಾಜಮುಖಿ ಸಂಘಟನೆ, ಸಂಸ್ಕೃತಿ ಚಿಂತನೆ, ಅಮೂಲ್ಯ ಸಾಹಿತ್ಯ ಸೇವೆಗೆ ಪದ್ಮಶ್ರೀ ಗೌರವ, ನಾಡೋಜ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ಒಲಿದು ಬರಲಿ. ಗೌರವ ಡಾಕ್ಟರೇಟ್ ಪದವಿಗಳು ಸೇರಿದಂತೆ ಇನ್ನೂ ಮುಂತಾದ ಗೌರವ ಪ್ರಶಸ್ತಿ – ಪುರಸ್ಕಾರಗಳು ಇವರ ಅವಿಸ್ಮರಣೀಯ ನಾಡ ಸೇವೆಗೆ ಭೂಷಣಪ್ರಾಯವಾಗಲಿ ಎಂದು ಶುಭ ಹಾರೈಸುವೆನು. ಡಾ ಹೇಮಾ ಪಟ್ಟಣ ಶೆಟ್ಟಿಯವರ ಸಾಹಿತ್ಯ ಕೃಷಿ, ಸಮಾಜ ಸೇವೆ, ಸಂಸ್ಕೃತಿ ಸಂಘಟನೆಗಳ ಅಮೋಘ ಸೇವೆ