ಕಾವ್ಯ ಸಂಗಾತಿ
ಪ್ರಶಾಂತ್ ಬೆಳತೂರು
“ಅವ್ವನಂತಹ ಹುಡುಗಿ”


pic̲:gemini
ಇವಳ ಕುರಿತು
ಹೆಚ್ಚೇನೂ ಹೇಳಬೇಕಿಲ್ಲ…!
ಅವ್ವನಂತಹ ಹುಡುಗಿ
ಕಣ್ಣ ಬೊಗಸೆ ತುಂಬಾ
ಪ್ರೀತಿ ಹೊತ್ತು ನಿಂತಿರುತ್ತಾಳೆ…!
ಬೆಳ್ಳಂಬೆಳಗ್ಗೆ ಅವ್ವನೇ
ಎಲ್ಲರಿಗಿಂತ ಮೊದಲೆದ್ದು
ಮನೆಯ ಉಸಾಬರಿ ವಹಿಸಲು
ಹಾಜರಾಗುವಂತೆ
ರೂಮಿನ ಬಾಗಿಲು ತೆರೆದಾಗೆಲ್ಲಾ
ಕಣ್ಮುಂದೆ ಕಾಣಿಸಿಕೊಳ್ಳುತ್ತಾಳೆ
ಒಂಟಿ ದೋಣಿಯೊಂದು
ಯಾವುದೋ ದೂರ ತೀರಕೆ
ಹಾತೊರೆದು ಹರಿಯುತ್ತಿರುವಂತೆ..!
ನನ್ನೆದೆಯೊಳಗೂ
ಒಮ್ಮೆಲೇ ರಭಸವಾಗಿ ನುಗ್ಗಿ ಬಿಡುತ್ತಾಳೆ
ಅವ್ವನ ಪ್ರತಿರೂಪದಂತಾಗಿ
ಹರಿದಾಡುತ್ತಾಳೆ
ಮುಗ್ಧತೆಯಲ್ಲಿ ಮೂಗು ತಿರುವುತ್ತಾ
ಒಳಗೊಳಗೆ ಅಸಹನೆಯಲ್ಲಿ
ಉಕ್ಕುವ ಅಲೆಗಳಂತೆ ಸಿಡುಕಿ
ತನ್ನಷ್ಟಕ್ಕೆ ತಾನೇ ತಣ್ಣಗಾಗುತ್ತಾಳೆ
ಪ್ರೇಮಮಯಿ ಆಗಿಬಿಡುತ್ತಾಳೆ..!
ಸಂತೈಸುತ್ತದೆ ನನ್ನನ್ನು
ಅವಳ ಒಂದು ನಿಷ್ಕಲ್ಮಶ ಮುಗ್ಧ ನಗು..!
ಅವ್ವ ಮಗಳಾಗಿ ಬಂದಳೇನೋ ಎಂಬ
ಅಚ್ಚರಿಯೊಂದು ಗೊತ್ತಾಗದಂತೆ
ಹೃದಯದ ಭಾವವನ್ನು
ಲಯ ತಪ್ಪದಂತೆ
ಮಧುರ ದನಿಯಲ್ಲಿ ಹೊತ್ತಿಸಿ ಬಿಡುತ್ತಾಳೆ..!
ಅದ್ಯಾವ ಕಾಲದಲ್ಲಿ
ಮಣ್ಣಲ್ಲಿ ಮಣ್ಣಾದ ನನ್ನವ್ವ
ಈ ಅಪರಿಚಿತ ಹುಡುಗಿಯ ಕಂಗಳಲಿ
ಮಳೆಯಾಗಿ ಜಿನುಗಿಬಿಟ್ಟಳು..!
ತುಸು ಹಸುರಾಗಿ
ಹೀಗೆ ಅರಿಯದ
ಒಲವೊಂದನ್ನು ಚಿಗುರಿಸಿಬಿಟ್ಟಳು..!
ತಿಳಿಯುತ್ತಿಲ್ಲ..
ಇವಳ ಕುರಿತು ಹೆಚ್ಚೇನೂ..!
ಆದರೆ
ಅವ್ವನಂತಹ ಹುಡುಗಿ
ಮೊನ್ನೆ
ಮತ್ತೆ ತಿರುಗಿ ಬಂದಿದ್ದಳು..!
ಬದುಕಿನ ಯುಗಾದಿಗಳೆಲ್ಲಾ
ಮಂಕು ಕವಿದು
ಮುಗಿದು ಹೋಗುತ್ತಿರುವಾಗ
ಬೆಳಕಾಗುವ
ನನ್ನವ್ವನ ನೆನಪುಗಳನ್ನೆಲ್ಲಾ
ಮರುಕಳಿಸುವಂತೆ
ತನ್ನ ಹೋಳಿಗೆಯ ಡಬ್ಬಿಯಲ್ಲಿ
ಜತನವಾಗಿ ತುಂಬಿ
ಅಕ್ಕರೆಯಿಂದ ಕೈಗಿರಿಸುತ್ತಾ
ತಾಯೊಡಲಿನ ಕನಸೊಂದು
ನಿಜವಾದಂತೆ
ನಗುತ್ತಾ..
ಅವ್ವನಾಗಿ ನಿಂತುಬಿಟ್ಟಿದ್ದಳು..!
ಪ್ರಶಾಂತ್ ಬೆಳತೂರು




Super prashant
Tqsm sir for writing this to me ಧನ್ಯವಾದಗಳು ಸರ್ from, Aishwarya
You are super sir