ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಮಯ ರಾತ್ರಿ ಹತ್ತೂವರೆ. ನಿವೃತ್ತ ಇಂಗ್ಲಿಷ್ ಉಪನ್ಯಾಸಕ ಆನಂದರಾಯರಿಗೆ ಇದು ಗಾಢ ನಿದ್ರೆಯ ಸಮಯ. ಶಿಸ್ತಿನ ಸಿಪಾಯಿಯಂತಿದ್ದ ಅವರಿಗೆ ಹತ್ತು ಗಂಟೆಯಾದರೆ ಸಾಕು, ಬಾಹ್ಯ ಪ್ರಪಂಚದ ಸಂಪರ್ಕ ಕಡಿತಗೊಳ್ಳುತ್ತಿತ್ತು. ಆದರೆ ಅಂದು ರಾತ್ರಿ ಫೋನಿನ ಕರ್ಕಶ ಶಬ್ದ ಅವರ ನಿಶ್ಯಬ್ದ ಲೋಕವನ್ನು ಸೀಳಿತು.

ನಿದ್ರೆಗಣ್ಣಿನಲ್ಲೇ ಫೋನು ಎತ್ತಿದ ರಾಯರು, ಮಂಪರಿನ ಧ್ವನಿಯಲ್ಲೇ “ಹಲೋ” ಎಂದರು.

ಅತ್ತ ಕಡೆಯಿಂದ ಸಹೋದ್ಯೋಗಿ ನಾಗರಾಜು ಮಾತಾಡುತ್ತಿದ್ದರು. “ಏನಪ್ಪಾ ಆನಂದ್.. ಮನೆಯಲ್ಲೇ ‘ಅಂಗಡಿ’ (ಬಾರ್) ತೆರೆದಿದ್ದೀಯಾ ಅನ್ಸುತ್ತೆ? ಆ ಧ್ವನಿ ಕೇಳಿದರೆ ಹಾಗೇ ಅನ್ನಿಸುತ್ತಿದೆಯಲ್ಲಪ್ಪಾ!” ಎಂದು ವ್ಯಂಗ್ಯವಾಗಿ ನಕ್ಕರು. ರಾಯರಿಗೆ ಆಘಾತವಾಯಿತು. ಅದು ಕುಡಿತದ ಅಮಲಲ್ಲ, ನಿದ್ರೆಯ ಮಂಪರು ಎಂದು ನಾಗರಾಜುಗೆ ಅನಿಸಲೇ ಇಲ್ಲ. ಬೇಸರದಿಂದಲೇ ಫೋನು ಇಟ್ಟರು.

ಕೆಲವೇ ನಿಮಿಷಗಳಲ್ಲಿ ಮತ್ತೊಂದು ಕರೆ. ಈ ಬಾರಿ ವಿಶ್ವನಾಥ್ ಎಂಬ ಇನ್ನೊಬ್ಬ ಸಹೋದ್ಯೋಗಿ. ಅದೇ ನಿದ್ರೆಯ ಧ್ವನಿಯನ್ನು ಕೇಳಿದ ವಿಶ್ವನಾಥ್ ತಕ್ಷಣ ಗಾಬರಿಗೊಂಡು, “ಆನಂದ್, ಯಾಕೋ ಧ್ವನಿ ಸರಿ ಇಲ್ಲ. ಹಲ್ಲು ನೋವೇನಾದರೂ ಇದೆಯೇ? ಸುಮ್ಮನೆ ನರಳಬೇಡ, ನಾಳೆನೇ ಒಬ್ಬ ಒಳ್ಳೆ ದಂತವೈದ್ಯರನ್ನು ಹೋಗಿ ನೋಡು” ಎಂದು ಪ್ರೀತಿಯಿಂದ ಸಲಹೆ ನೀಡಿದರು.

ಮರುದಿನ ಬೆಳಗ್ಗೆ ಪೆಟ್ರೋಲ್ ಬಂಕ್ ಹತ್ತಿರ ಆನಂದರಾಯರ ಜೀವನದ ಎರಡನೇ ಪಾಠ ಕಾದಿತ್ತು. ಬಂಕ್‌ನ ಉದ್ದನೆಯ ಸಾಲಿನಲ್ಲಿ ನಿಂತಿದ್ದಾಗ, ಒಬ್ಬ ಯುವಕ ಓಡುತ್ತಾ ಬಂದು ಅವರ ಪಾದಗಳಿಗೆ ನಮಸ್ಕರಿಸಿದ. ಆತ ಅವಿನಾಶ್.

ವರ್ಷಗಳ ಹಿಂದೆ ತೆಲುಗು ಮಾಧ್ಯಮದಿಂದ ಬಂದು ಇಂಗ್ಲಿಷ್ ಮಾತಾಡಲು ಒದ್ದಾಡುತ್ತಿದ್ದ ಆ ಹುಡುಗನಿಗೆ ರಾಯರು ಮಾರ್ಗದರ್ಶನ ನೀಡಿದ್ದರು. ಇಂದು ಆತ ಐಐಟಿ ಪದವೀಧರನಾಗಿ ಉನ್ನತ ಸ್ಥಾನದಲ್ಲಿದ್ದಾನೆ. ಕೃತಜ್ಞತೆಯಿಂದ ಹೂಗುಚ್ಛ ನೀಡಿ, “ನಾಳೆ ಮನೆಗೆ ಬಂದು ಅಮ್ಮನವರ ಆಶೀರ್ವಾದ ಪಡೆಯುತ್ತೇನೆ” ಎಂದು ವಿನಯದಿಂದ ಹೊರಟುಹೋದ.

ರಾಯರು ಗಾಡಿ ಸ್ಟಾರ್ಟ್ ಮಾಡುವಷ್ಟರಲ್ಲಿ ಮತ್ತೊಬ್ಬ ಹಳೆಯ ಶಿಷ್ಯ ತರುಣ್ ಎದುರಾದ. ಕೈಯಲ್ಲೊಂದು ಸಿಗರೇಟು, ಕಣ್ಣಿಗೆ ಕಪ್ಪು ಕನ್ನಡಕ—ಪಕ್ಕಾ ಇಂದಿನ ‘ಜುಲಾಯಿ’ ಯುವಕನಂತೆ ಕಾಣುತ್ತಿದ್ದ. ಅಂದು ತರಗತಿಯಲ್ಲಿ ಕೊನೆಯ ಬೆಂಚಿನಲ್ಲಿದ್ದು ಕಿಡಿಗೇಡಿತನ ಮಾಡುತ್ತಾ ಫೇಲ್ ಆಗುತ್ತಿದ್ದವನು ಈತ.

“ಅಂಕಲ್, ಜಂಕ್ಷನ್ ವರೆಗೆ ಲಿಫ್ಟ್ ಕೊಡ್ತೀರಾ?” ಎಂದು ತರುಣ್ ಕೇಳಿದಾಗ, ರಾಯರ ಮುಖದಲ್ಲಿ ಅಸಹ್ಯ ಮೂಡಿತು. ಏನೂ ಕೇಳದವರಂತೆ ಅವರು ಗಾಡಿ ಓಡಿಸಿ ಮುಂದೆ ಹೋದರು.

ಮನೆಗೆ ಹಿಂದಿರುಗುವಾಗ ರಾಯರ ಮನಸ್ಸಿನಲ್ಲಿ ದ್ವಂದ್ವಗಳ ಸಂತೆ. ಒಂದೇ ಧ್ವನಿಯನ್ನು ಕೇಳಿದ ಇಬ್ಬರು ಸಹೋದ್ಯೋಗಿಗಳು ಬೇರೆ ಬೇರೆಯಾಗಿ ಹೇಗೆ ಅರ್ಥೈಸಿಕೊಂಡರು? ಒಬ್ಬನೇ ಗುರುವಿನ ಹತ್ತಿರ ಓದಿದ ಇಬ್ಬರು ಶಿಷ್ಯರು ಇಷ್ಟು ವ್ಯತಿರಿಕ್ತವಾಗಿ ಹೇಗೆ ಬೆಳೆದರು? ಈ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ್ದು ಒಂದು ಕೃಷ್ಣ ಮಂದಿರದ ಹತ್ತಿರ. ಅಲ್ಲಿ ಘಂಟಸಾಲ ಅವರ ಕಂಠಸಿರಿಯಲ್ಲಿ ಭಗವದ್ಗೀತೆಯ ಶ್ಲೋಕಗಳು ಕೇಳಿಬರುತ್ತಿದ್ದವು. ‘ಶ್ರದ್ಧಾತ್ರಯ ವಿಭಾಗ’ ಯೋಗದ ಆ ಶ್ಲೋಕಗಳು ರಾಯರ ಸಂಶಯಗಳಿಗೆ ಕನ್ನಡಿ ಹಿಡಿದವು.

ಮನುಷ್ಯರು ನೋಡಲು ಒಂದೇ ರೀತಿ ಇದ್ದರೂ, ಅವರ ಆಹಾರ ಮತ್ತು ಅಭ್ಯಾಸಗಳಿಂದ ರೂಪುಗೊಳ್ಳುವ ಸಾತ್ವಿಕ, ರಾಜಸ ಮತ್ತು ತಾಮಸ ಗುಣಗಳು ಅವರ ವರ್ತನೆಯನ್ನು ನಿರ್ಧರಿಸುತ್ತವೆ ಎಂಬ ಸತ್ಯ ಅವರಿಗೆ ಹೊಳೆಯಿತು.

“ಮೆಣಸಿನ ಗಿಡಕ್ಕೆ ಎಷ್ಟು ಸಿಹಿ ನೀರು ಹಾಕಿದರೂ ಅದು ಖಾರವಾದ ಮೆಣಸಿನಕಾಯಿಯನ್ನೇ ನೀಡುತ್ತದೆ. ಮಾವು ಮತ್ತು ಸಪೋಟ ಗಿಡಗಳು ಯಾವಾಗಲೂ ಸಿಹಿಯಾದ ಹಣ್ಣುಗಳನ್ನೇ ಕೊಡುತ್ತವೆ.”

ಆನಂದರಾಯರಿಗೆ ಜ್ಞಾನೋದಯವಾಯಿತು. ಒಬ್ಬ ಗುರುವಾಗಿ ಅವರು ಎಲ್ಲರಿಗೂ ಒಂದೇ ರೀತಿಯ ಪಾಠ ಮಾಡಿದ್ದರು, ಆದರೆ ವಿದ್ಯಾರ್ಥಿಗಳು ಅವರವರ ಸ್ವಭಾವಕ್ಕೆ ತಕ್ಕಂತೆ ಅದನ್ನು ಸ್ವೀಕರಿಸಿದ್ದರು. ಸಂಶಯಗಳೆಲ್ಲಾ ಮಂಜಿನಂತೆ ಕರಗಿದವು. ಅವರು ಕೇವಲ ಇಂಗ್ಲಿಷ್ ಮೇಷ್ಟ್ರಾಗಿ ಅಲ್ಲ, ಜೀವನದ ದೊಡ್ಡ ಪಾಠವನ್ನು ಕಲಿತ ವಿದ್ಯಾರ್ಥಿಯಾಗಿ ಸಂತೋಷದಿಂದ ಮನೆಗೆ ಹೆಜ್ಜೆ ಇಟ್ಟರು.


About The Author

1 thought on ““ವೈರುಧ್ಯಗಳು” ಭಾಗವತುಲ ಕೃಷ್ಣಾರಾವು ಅವರತೆಲುಗು ಕಥೆಯ ಕನ್ನಡಾನುವಾದ‌ ಕೋಡೀಹಳ್ಳಿಮುರಳೀ ಮೋಹನ್”

  1. ಕಿರಿದಾದ ರೂಂ ಹಿರಿದಾದ ಸಂದೇಶ ನೀಡುವ ಕಥೆ. ಚೆನ್ನಾಗಿದೆ ಸರ್.

Leave a Reply

You cannot copy content of this page

Scroll to Top