ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕೃತಿ: *ಎಂಥಾ ಮೋಜಿನ ಕುದುರಿ!* ಕಿರು ಕಾದಂಬರಿ
ಲೇಖಕರು; ಬಿ. ಆರ್. ಲಕ್ಷ್ಮಣರಾವ್
ಬೆಲೆ: 60 ರೂ
ದೂರವಾಣಿ:9845693614

*ರಸಗವಳ  ಎಂಥಾ ಮೋಜಿನ ಕುದುರಿ!*

                 ಪ್ರೇಮಕವಿ ಎಂದೇ ಚಿರಪರಿಚಿತರಾದ ಶ್ರೀ ಬಿ.ಆರ್. ಲಕ್ಷ್ಮಣ ರಾವ್ ಅವರ ಸಾಹಿತ್ಯ ಸೃಜನಶೀಲತೆ ಸದಾ ಭಾವಲೋಕವನ್ನು ಆಳವಾಗಿ ತಟ್ಟುವ ಶಕ್ತಿಯನ್ನು ಹೊಂದಿದೆ. ಅವರ ಕವಿತೆಗಳು ಹಾಗೂ ಭಾವಗೀತೆಗಳು ಓದುಗರ ಮನಸ್ಸಿನಲ್ಲಿ ಪ್ರೀತಿಯ ಸೂಕ್ಷ್ಮತೆಯನ್ನು ಮೂಡಿಸುವಂತೆ, ಅವರ ಕಿರು ಕಾದಂಬರಿ “ಎಂಥಾ ಮೋಜಿನ ಕುದುರಿ” ಕೂಡ ಕಲ್ಪನೆ, ರಸಿಕತೆ ಹಾಗೂ ಮನೋವೈಜ್ಞಾನಿಕ ವಿಶ್ಲೇಷಣೆಯ ಮೂಲಕ ವಿಭಿನ್ನ ಅನುಭವವನ್ನು ನೀಡುತ್ತದೆ.
ಶೀರ್ಷಿಕೆ ಸೂಚಿಸುವಂತೆ ” ಎಂಥಾ ಮೋಜಿನ ಕುದುರಿ!” ಹಲವು ದಿಕ್ಕುಗಳಲ್ಲಿ ತನ್ನ ಪಯಣವನ್ನು ವಿಸ್ತರಿಸುತ್ತದೆ.
ಈ ಕಾದಂಬರಿಯ ಕಾಲಯಂತ್ರದ  ಕೇಂದ್ರಬಿಂದು ‘ಮನಸ್ಸು’ ಆಗಿದೆ. ಆ ಮನಸ್ಸಿಗೆ ಕಡಿವಾಣ ಹಾಕಲು ಯತ್ನಿಸುತ್ತಾ, ಅನೇಕ ಅವಘಡಗಳನ್ನು ಎದುರಿಸುವ ಮೂಲಕ ಕಾಲಯಂತ್ರದ ಅನುಭವ ಮತ್ತು ಸಂಕಷ್ಟಕರ ಪರಿಸ್ಥಿತಿಗಳನ್ನು ಲೇಖಕರು ಓದುಗರ ಮುಂದೆ ತೆರೆದಿಟ್ಟಿದ್ದಾರೆ.

ಭೌತಶಾಸ್ತ್ರಜ್ಞ ಪ್ರೊಫೆಸರ್ ನರಸಿಂಗರಾಯರ ಕಾಲಯಂತ್ರ ಎಂಬ ಕಲ್ಪನೆಯೇ ಕಾದಂಬರಿಯ ಪ್ರಮುಖ ಆಧಾರ. ಈ ಕಾಲಯಂತ್ರ ಕೇವಲ ವೈಜ್ಞಾನಿಕ ಉಪಕರಣವಷ್ಟೇ ಅಲ್ಲದೆ, ಕಥಾನಾಯಕನ ಅಂತರಂಗದ ಮನೋಯಾನಕ್ಕೆ ದಾರಿ ಮಾಡಿಕೊಡುತ್ತದೆ. ಕಾದಂಬರಿಯ ಪ್ರತಿಯೊಂದು ತಿರುವು ಓದುಗರಲ್ಲಿ ‘ಮುಂದೇನು?’ ಎಂಬ ಕುತೂಹಲವನ್ನು ಜೀವಂತವಾಗಿಡುತ್ತದೆ.
               ಸುಂದರ ಮೈಮಾಟದ ಲಲನೆಯರನ್ನು ಕಂಡಾಗ ಚಂಚಲಗೊಳ್ಳುವ ಮನಸ್ಸು, ಪ್ರೀತಿಸಿದ ಹುಡುಗಿ ‘ಮಿನಿ’ಯ ನೆನಪು ಬಂದಾಗ ಅವಳ ಪ್ರೀತಿಗೆ ತನ್ನನ್ನು ತಾನೇ ನಿಯಂತ್ರಿಸುವ ಕಥಾನಾಯಕನ ಯತ್ನ, ಮಾನವ ಮನಸ್ಸಿನ ಸಹಜ ದ್ವಂದ್ವವನ್ನು ಸುಂದರವಾಗಿ ಅನಾವರಣಗೊಳಿಸುತ್ತದೆ. ಕಾಮಕ್ಕಿಂತ ಪ್ರೀತಿಗೆ ಹೆಚ್ಚಿನ ಗೌರವ ನೀಡುವ ಕಥಾನಾಯಕನ ಶೀಲ, ಕೃತಿಗೆ ನೈತಿಕ ಘನತೆಯನ್ನು ನೀಡುತ್ತದೆ.
ಕಾದಂಬರಿಯಲ್ಲಿನ ಪ್ರತಿಯೊಂದು ಘಟನೆಯಲ್ಲಿ ಹೆಣ್ಣಿನ ಭಾವೋದ್ರೇಕದ ಮನಸ್ಸು ಸೂಕ್ಷ್ಮವಾಗಿ ಚಿತ್ರಿತವಾಗಿದೆ. ಹಳ್ಳಿಯಿಂದ ಪಟ್ಟಣದವರೆಗೆ, ಅಲ್ಲಿಂದ ಪುರಾಣದ ಸುರ -ಅಸುರರ ಆಸ್ಥಾನಗಳವರೆಗೆ ಕಥೆ ಸಾಗಿದರೂ, ಎಲ್ಲೆಡೆಯೂ ಹೆಣ್ಣಿನ ಮನಸ್ಸಿನ ಹರೆಯದ ಭಾವನೆಗಳು ಹಾಗು ಅವಳ ಮನಸ್ಸಿನ ಹಳಹಳಿಕೆ, ಕಾಮ ದಹನಕೆ ಸೂಕ್ತ ವ್ಯಕ್ತಿಯ ತಡಕಾಟದಲ್ಲಿ  ಸಾಗುತ್ತಾ  ಕಥಾ ನಾಯಕನೇ ಬಲಿಪಶುವಾಗುವುದು. ರೋಮಾಂಚನ ನೀಡುವ ಈ ರಸಮಯ ಕ್ಷಣಗಳು  ಖುಷಿ ಕೊಟ್ಟರು, ಕ್ಷಣದಲ್ಲಿ ಜಾಗೃತನಾಗುತ್ತ ಮೂಲ ಸ್ಥಿತಿಗೆ ಮರಳುವುದು  ಹೀಗೆಯೇ ಕಾದಂಬರಿಯ  ಉದ್ದಕ್ಕೂ  ನಾಯಕನ ಸೂತ್ರದಾರಿಕೆಯಲ್ಲಿ ಕಥೆ ಸಾಗುತ್ತದೆ.  
ಈ ಕೃತಿ ಕೇವಲ ಕಾಲಯಾನ ಕಥೆಯಾಗದೆ, ಮಾನವ ಮನಸ್ಸಿನ ಅಧ್ಯಯನವಾಗುತ್ತದೆ.

      ಕಾಲತಂತ್ರವೆಲ್ಲಾ ಕಲ್ಪನೆಯೇ ಎಂಬ ಅರಿವು ಇದ್ದರೂ, ಕಥಾನಾಯಕನಲ್ಲಿ ಮೂಡುವ ತೃಪ್ತಭಾವ ಗಮನಾರ್ಹ. ಭ್ರಮಾಲೋಕದಲ್ಲಿ ವಿಹರಿಸಿದ ಹನ್ನೆರಡು ತಾಸುಗಳು ಹಲವಾರು ದಿನಗಳಂತೆ ಅನುಭವವಾಗುವುದು ಕಾಲದ ಅನಿಶ್ಚಿತತೆಯ ಭಾವವನ್ನು ಮೂಡಿಸುತ್ತದೆ. ಕಾಲ್ಪನಿಕ ವೈಜ್ಞಾನಿಕ ತಂತ್ರ ವಾಸ್ತವ ಬದುಕಿನಲ್ಲಿ ಅಸ್ತಿತ್ವಕ್ಕೆ ಬಂದರೆ ಜೀವನ ಹೇಗಿರಬಹುದು? ಎಂಬ ಪ್ರಶ್ನೆಯನ್ನು ಕಾದಂಬರಿ ಓದುಗರ ಮುಂದಿಡುತ್ತದೆ. ಹಾಗು ಓದುಗನಿಗೂ ಆ ಕ್ಷಣಗಳು ರೋಮಾಂಚನಗೊಳಿಸುತ್ತದೆ.
ಈ ಕಿರು ಕಾದಂಬರಿ ಸರಳವಾದರೂ ಅರ್ಥಪೂರ್ಣವಾದ ಭಾಷಾಶೈಲಿ, ಕಾದಂಬರಿಯನ್ನು ಒಂದೇ ಉಸಿರಲ್ಲಿ ಓದಿಸಿಕೊಳ್ಳುವ ಶಕ್ತಿಯನ್ನು ಹೊಂದಿದೆ.
ಒಟ್ಟಿನಲ್ಲಿ “ಎಂಥಾ ಮೋಜಿನ ಕುದುರಿ!”  
ಕಿರು ಕಾದಂಬರಿಯು ಭ್ರಮಾ ಲೋಕಕ್ಕೆ  ಸೆಳೆದೊಯ್ದು ಮನಸ್ಸಿನ ಮೇಲೆ ಆಳವಾದ ಪ್ರಭಾವ ಬೀರುತ್ತಾ ಮನ   ಮುದಗೊಳಿಸುವ ಕೃತಿ. ಚಂಚಲ ಮನಸ್ಸನ್ನು ಹತ್ತೋಟಿ ಇಡುವುದರಲ್ಲಿಯು  ಕಥಾನಾಯಕ ಗೆದ್ದಿದ್ದಾನೆ.  ಕಾಲ್ಪನಿಕವಾದ ಈ ಕಾದಂಬರಿ  ಓದುಗರ ಮನಸ್ಸಿನಲ್ಲಿ ಬೆಚ್ಚನೆಯ ತಾಪವನ್ನುಂಟುಮಾಡಿ,   ನಂತರ ತಂಪಾಗಿ ನೆಲೆಸುವ ಕೃತಿ.  
ತಮಗೆ ಅಭಿನಂದನೆಗಳು ಸರ್


About The Author

Leave a Reply

You cannot copy content of this page

Scroll to Top