ಕಾವ್ಯ ಸಂಗಾತಿ
ಪ್ರಭಾವತಿ ದೇಸಾಯಿ
ಗಜಲ್


ಬದುಕಿನ ಕಳವಳ ಎದೆಯ ಒಳಗೆ ಕಡೆಗೋಲು ಮಥಿಸಿತು ಇರುಳು
ಕಟ್ಟಿದ ಕರಿ ಮೋಡವು ತುಂತುರ ಹನಿಗಳ ಉದುರಿಸಿತು ಇರುಳು
ನೆನಪಿನ ಹಳೆ ಗಂಟು ಬಿಚ್ಚಿ ಕಂಗಳ ನಿದಿರೆ ಕದಿಯಿತು ಚುಕ್ಕಿ
ಹುಣ್ಣಿಮೆಯ ಚಂದಿರ ಕಿರಣ ಕೊಳದ ಮೊಗ್ಗು ಅರಳಿಸಿತು ಇರುಳು
ಗತಕಾಲದ ವೈಭವ ನೆನೆಯುತ ಮೌನದಲಿ ಜಂತಿ ಎಣಿಸಿದೆ.
ಮುತ್ತಿದ ಕತ್ತಲು ವಿರಹ ಅಗ್ನಿಯಲಿ ದೇಹ ದಹಿಸಿತು ಇರುಳು
ಕುಸುಮದಲ್ಲಿ ಕಂಡ ಕನಸುಗಳು ಉದುರಿ ಮಣ್ಣಲಿ ಸೇರಿದವು
ಹೃದಯದ ಬಯಕೆಯು ಭೂತವಾಗಿ ಕಾಡಿಸಿ ನರಳಿಸಿತು ಇರುಳು
ಅರ್ಧರಾತ್ರಿಯಲಿ ಗೊಂಬೆಗಳು ಎದ್ದು ಕುಣಿದಾಡ ತೊಡಗಿದವು
ಮೂಡಣದಲಿ ಮೂಡಿದ ಹೊನ್ನಕಿರಣ ಪ್ರಭೆ ಸರಿಸಿತು ಇರುಳು
ಪ್ರಭಾವತಿ ಎಸ್ ದೇಸಾಯಿ



