ಕಾವ್ಯ ಸಂಗಾತಿ
ಡಾ. ಹೆಚ್. ನಟರಾಜ್ ಆರ್ಯ
“ಮೌನ ಸರೋವರ”


ಬಾಲ್ಯದ ಬೆಳಗಿನ ಹೊತ್ತಿನಲ್ಲಿ
ನೀಲಿ ನೀರಿನ ನಿಶ್ಶಬ್ದ,
ಪ್ರಶ್ನೆಯೇ ಅರಳದ ದಿನಗಳು,
ಉತ್ತರವೇ ಕೇಳದ ಕಾಲ.
ಆಕಾಶ ತಬ್ಬಿದ ಸರೋವರ,
ಆಟದ ಕಲ್ಲು ಬಿದ್ದರೂ
ನಗು ತೇಲಿ ಹೋದಿತು
ಮಸುಕು ಮನದವರೆಗೂ ತಲುಪಲಿಲ್ಲ.
ಕಾಲ ನಡೆದು ದಾರಿಯಾದಂತೆ
ಹೆಜ್ಜೆಗಳು ಬಂತು ಹಲವು,
ಕೆಲವು ನೀರು ತಂದವು,
ಕೆಲವು ಮಣ್ಣು ಸುರಿದವು.
ನೋವುಗಳು ಇಳಿದವು
ನೀರಿನ ಆಳದೊಳಗೆ,
ಮಾತಿಲ್ಲದೆ ಕುಳಿತವು
ಸರೋವರದ ಹೃದಯದಲ್ಲಿ.
ಭೇದದ ಮೊದಲ ಸ್ಪರ್ಶ
ಅಲೆ ಎಬ್ಬಿಸಿತು,
ಹೊರಗೆ ಕದಲಿಕೆ,
ಒಳಗೆ ಮೌನ ಗಾಯ.
ಸರೋವರ ಮಾತಾಡಲಿಲ್ಲ,
ಮೌನವೇ ಅದರ ನಾಡಿ,
ಧ್ವನಿಯಿಲ್ಲದ ನೋವೇ
ನೀರಿನ ಭಾಷೆ.
ಸಮಾಜ ಬಂದು ನಿಂತು
ಬಣ್ಣ ಮಾತ್ರ ನೋಡಿತು,
ಆಳ ಕೇಳದೆ ತೀರ್ಪು
ನೀರಿನ ಮೇಲೆ ಬರೆದಿತು.
ಬಿರುಗಾಳಿ ಬೀಸಿದರೂ
ನೀರನ್ನೇ ತಪ್ಪೆಂದರೂ,
ಮೇಲ್ಮೈ ಕದಡಿದರೂ
ಆಳ ಮಾತ್ರ ನಿಂತಿತು.
ಸಂಧ್ಯದ ಹೊತ್ತಿನಲ್ಲಿ
ನೀರು ಕಡಿಮೆಯಾಯಿತು,
ಆಳ ಹೆಚ್ಚಾಯಿತು,
ಅರ್ಥಗಳು ಗಾಢವಾದವು.
ಅಲೆಗಳು ಮೌನವಾಯಿತು,
ಹೇಳದ ಕಥೆಗಳು
ನೀರಿನೊಳಗೆ
ನೆಲೆಯಾದವು.
ಆಕಾಶ ಬಿದ್ದರೆ ಹಿಡಿಯುವೆ,
ಹೂ ಬಿದ್ದರೆ ಕಾಪಾಡುವೆ,
ಕಲ್ಲು ಬಿದ್ದರೂ
ನೀರಾಗಿಯೇ ಇರುವೆ.
ಮೌನ ಸರೋವರ
ಕಲ್ಲುಗಳನ್ನು ಕ್ಷಮಿಸಿದ ನೀರು,
ಬಿರುಗಾಳಿಗೆ ಸಾಕ್ಷಿಯಾದ ಆಳ,
ತೋರಿಸದೆ ಹೊತ್ತ ನೋವು.
ಮಾತಿಲ್ಲದೆ ಉಳಿದ ಸಹನೆ,
ಒಡೆಯದೆ ನಿಂತ ಶಕ್ತಿ
ಅದೇ ಬದುಕಿನ
ಮೌನ ಸಾರ.
ಡಾ. ಹೆಚ್. ನಟರಾಜ್ ಆರ್ಯ.




Very meaningful poem sir.
ಮುಗ್ದತೆಯ ಬಾಲ್ಯದ ನಲಿವುಗಳು ಬೆಳೆದಂತೆಲ್ಲ ಅರ್ಥವಾಗುವ ನೋವುಗಳು ಆಳದಲ್ಲಿ ಹುದುಗಿರುವ ಜಟಿಲ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುತ್ತ ಮೌನಕ್ಕೆ ಜಾರಿದ ಮನಸ್ಸು ಹೃದಯಗಳು
ಪ್ರಸ್ತುತ ಸನ್ನಿವೇಶಗಳಿಗೆ ಜ್ವಲಂತ ಸಾಕ್ಷಿ ಈ ಕವನ
ಅದ್ಬುತವಾಗಿದೆ ಬ್ರದರ್..
ಸಾಗಲಿ ನಿರಂತರವಾಗಿ ನಿಮ್ಮ ಬರವಣಿಗೆ
ಮುಗ್ದತೆಯ ಬಾಲ್ಯದ ನಲಿವುಗಳು ಬೆಳೆದಂತೆಲ್ಲ ಅರ್ಥವಾಗುವ ನೋವುಗಳು ಆಳದಲ್ಲಿ ಹುದುಗಿರುವ ಜಟಿಲ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುತ್ತ ಮೌನಕ್ಕೆ ಜಾರಿದ ಮನಸ್ಸು ಹೃದಯಗಳು
ಪ್ರಸ್ತುತ ಸನ್ನಿವೇಶಗಳಿಗೆ ಜ್ವಲಂತ ಸಾಕ್ಷಿ ಈ ಕವನ
ಅದ್ಬುತವಾಗಿದೆ ಬ್ರದರ್..
ಸಾಗಲಿ ನಿರಂತರವಾಗಿ ನಿಮ್ಮ ಬರವಣಿಗೆ