ಕಾವ್ಯ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
ಗಜಲ್


ನನ್ನೆದೆಯ ಖಾಲಿ ಪುಟದ ಮೇಲೆ ಬರೆದೆ ನೋವಿನ ಶಾಯರಿ
ಹೃದಯದಾ ಗೋಡೆಯ ಮೇಲೆ ಕೊರೆದೆ ನೋವಿನ ಶಾಯರಿ
ಪುಟಿದೇಳುವ ಭಾವಗಳ ಸಲುಹಲಾರದೆ ನೆಚ್ಚಿದೆ ಮಧುಶಾಲೆ
ಮನದಂಗಳ ರಂಗವಲ್ಲಿ ತುಂಬಾ ಹಾಸಿದೆ ನೋವಿನ ಶಾಯರಿ
ನೆನಪಿನಲೆ ಅಪ್ಪಳಿಸೋ ವೇಗಕೆ ತುಟಿಗಂಟಿತು ಮಧುಬಟ್ಟಲು
ತಲ್ಲಣಿಸೋ ದೇಹಧರೆ ಮೇಲೆಲ್ಲಾ ಹೊಸೆದೆ ನೋವಿನ ಶಾಯರಿ
ಪ್ರೇಮದೋಲೆಯ ಅಕ್ಷರಗಳು ಕಾಣದಂತೆ ಕುಡಿದೆ ಮಧುಪಾಕ
ಸಂತಸದ ಸರಸದಲೆಯ ಅಬ್ಬರಕೆ ಬೆಸೆದೆ ನೋವಿನ ಶಾಯರಿ
ತನು ಒಲವ ಒಸುಗೆಯ ಕಸಿವಿಸಿಯಲಿರೆ ಸುರೆ ಒಳಗೆ ಸುರಿದೆ
ಜೀವ ತರಂಗದ ಆಲಾಪಕೆ ಕಲ್ಲಂತೆ ಎಸೆದೆ ನೋವಿನ ಶಾಯರಿ
ಆ ಸಮ್ಮಿಲನ ಸಲುಗೆಗಳ ನೆನೆನೆನೆದು ಮಧಿರೆಯ ಬೆನ್ನತ್ತಿರುವೆ
ತೋಂ ತನನನ ರಾಗ ತಾಳಕೆ ಹೊದಿಸಿದೆ ನೋವಿನ ಶಾಯರಿ
ಅನು ಹುಚ್ಚೆದ್ದಾಸೆಗಳ ತಣಿಸಲಾರದೆ ನಂಜು ಗುಟುಕಿಸಿದಳು
ಸವಿ ಸಲ್ಲಾಪದ ಅಂದದ ಚಿತ್ರಕೆ ಅಂಟಿಸಿದೆ ನೋವಿನ ಶಾಯರಿ
ಡಾ ಅನ್ನಪೂರ್ಣ ಹಿರೇಮಠ



