ಕಾವ್ಯಸಂಗತಿ
ಜಯಶ್ರೀ .ಭ.ಭಂಡಾರಿ
“ನೀನುಬಂದ ಮೇಲೆ”


ಪತ್ರ ಬರೆಯುವ ಸಂಸ್ಕೃತಿ
ಮಾಯವಾಯಿತು
ಬರೀ ಫೋನಿನಲ್ಲಿ ಮಾತುಕತೆ
ಮುಗಿಯುವಂತಾಯ್ತು.
ಎಳ್ಳು ಬೆಲ್ಲ, ಬನ್ನಿ ಕೊಡುವ ಸಂಪ್ರದಾಯ
ಕಡಿಮೆಯಾಯಿತು
ಇವೆಲ್ಲಾ ಇಮೇಜುಗಳ ಮೂಲಕ
ವಾಟ್ಸಾಪ್ನಲ್ಲಿ ಕಾಣುವಂತಾಯಿತು.
ಮನೆ ಮನೆಗೆ ಹೋಗಿ ಆಮಂತ್ರಣ ಪತ್ರಿಕೆ
ಕೊಡ್ತಿದ್ವಿ
ಈಗ ಮೊಬೈಲ್ ನಲ್ಲಿ ಕಳಿಸಿ ಬನ್ನಿ ಅಂತ
ಕರಿತಿವಿ.
ಗ್ರಂಥಾಲಯಕ್ಕೆ ಹೋಗಿ ಪುಸ್ತಕ ಹುಡುಕಿ
ಓದುತ್ತಿದ್ವಿ
ಈಗ ಏನಿದ್ದರೂ ಗೂಗಲ್ ಸರ್ಚ್ ಮಾಡಿ
ಪಡಕೊಂತೀವಿ.
ದಿನಪತ್ರಿಕೆಗಳು ಮನೆಗೆ ತರಿಸುವದು
ಕಡಿಮೆಯಾಯಿತು
ಸಮಯ ಸಿಕ್ಕಾಗ , ತಾಳ್ಮೆ ಇದ್ದಾಗ ಮಾತ್ರ
ಮೊಬೈಲ್ ನಲ್ಲಿ ಓದುವಂತಾಗಿದೆ.
ಪಿಯಾನೋ ಪೆಟ್ಟಿಗೆ, ತಬಲಾ ತಂದು ವಾರ್ಷಿಕ ಸಮ್ಮೇಳನ
ಪ್ರಾಕ್ಟೀಸ್ ಮಾಡಸ್ತಿದ್ವಿ.
ಈಗ ಮಕ್ಕಳು ಮೊಬೈಲ. ನೋಡಿ
ಭರ್ಜರಿ ಡ್ಯಾನ್ಸ್ ಮಾಡ್ತಾರೆ.
ಒಂದು ಹೊತ್ತಿನ ಊಟ ಇರದಿದ್ದರೂ
ಜೀವನ ನಡೆದೀತು..
ಒಂದು ಕ್ಷಣ ಮೊಬೈಲು ಕೈಗೆ ಸಿಗದಿದ್ದರೆ
ಜೀವವೇ ಹೋದೀತು..
ನೀನಿಲ್ದಾಗ ಅದೆಷ್ಟು ಚಂದ ಇದ್ವಿ
ಕೂಡಿ ಬದುಕುತ್ತಿದ್ದಿ ಕೂಡಿ ಮಾತಾಡ್ತಿದ್ವಿ
ನೀ ಬಂದ್ಮೇಲೆ ನಿನ್ ಕೈಯಾಗ ಸಿಕ್ಕು
ಒದ್ದಾಡ್ತಿದ್ದೀವಿ.
ಜಯಶ್ರೀ .ಭ.ಭಂಡಾರಿ.



