ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ತಡವಾಗಿಯಾದರೂ ಬೆಳಕು ಹರಿದಿದೆ;
ಎಚ್ಚರಗೊಳ್ಳದ ಮಬ್ಬು ಜನಗಳೇ
ಎದ್ದೇಳಿ ಬೇಗ ಎದ್ದೇಳಿ…

ಸೂರ್ಯನು ಬಂದು ಬೈದಾನು
ಚಂದ್ರನು ಕೆರಳಿ ಕೆಂಡವಾದಾನು
ಇಂದ್ರನು ಶಾಪ ಕೊಟ್ಟಾನು!

ಅರಿವಿನ ಅರಿವೆ ಕೊಳಕಾಗಿ
ಸ್ನಾನ ಮಾಡುವುದನ್ನು ಮರೆತರೆ
ಬತ್ತಿ ಹೋದೀತು ಹೊಳೆಸಾಲು,
ಒತ್ತುವರಿಯಾಗಿದೆ ಕೆರೆಯ ಬಯಲು
ಎದ್ದೇಳಿ ಬೇಗ ಎದ್ದೇಳಿ

ಚರಂಡಿಯಲ್ಲಿ ಹುಟ್ಟಿ ಬೆಳೆದ
ಸೊಳ್ಳೆಗಳಾಗದಿರಿ
ಹಂದಿಗಳಂತೆ ಹೊರಳಾಡಿ ಗಬ್ಬು ನಾತ ಹೊಡೆಯದಿರಿ

ಕಂಬಕ್ಕೆ ಕಟ್ಟಿದ ಹುಲ್ಲು ತಿನ್ನುತ
ಮುಲಾಜಿಗೆ ಬಲಿಯಾಗುವ
ಕುರಿಗಳಾಗದಿರಿ
ಹೊಂಚು ಹಾಕಿ ಸಂಚು ಹೂಡುವ
ನರಿ, ತೋಳಗಳಿಗೆ ಆಹಾರವಾಗದಿರಿ

ಬೀಜ ಮೊಳಕೆಯೊಡೆದು
ಬೆಳೆಯುವುದು ನಿಲ್ಲಿಸಿಲ್ಲ
ಅನಂತಾನಂತ ಅಂಬರದಲ್ಲಿ
ಹಕ್ಕಿಗಳ ಹಾರಾಟಕ್ಕೆ ಅಡ್ಡಿಯಿಲ್ಲ
ಗಾಳ ಹಾಕಿದರೂ, ಬಲೆ ಬೀಸಿದರೂ
ಮೀನುಗಳು ಈಜುವುದನ್ನು ಬಿಟ್ಟಿಲ್ಲ

ಪ್ರಕೃತಿ ಬೋಧಿಸುವ ಪಾಠ ಕಲಿತು
ಸಕಲ ಜೀವಾತ್ಮರಿಗೆ ಲೇಸನ್ನು ಬಯಸಿ
ವಿಶ್ವಮಾನವ ಸಂದೇಶ ಸಾರುವ
ಈಗಲಾದರೂ ಎದ್ದೇಳಿ ಬೇಗ ಎದ್ದೇಳಿ
ಅರಿವಿನ ಅರಿವೆ ಕೊಳಕಾಗದಂತೆ
ನೋಡಿಕೊಳ್ಳಿ…..


About The Author

5 thoughts on “ಮಹಾಂತೇಶ್.ಬಿ.ನಿಟ್ಟೂರು ಅವರ ಕವಿತೆ “ಅರಿವಿನ ಅರಿವೆ ಕೊಳಕಾದೊಡೆ””

Leave a Reply

You cannot copy content of this page

Scroll to Top