ಪ್ರವಾಸ ಸಂಗಾತಿ
ಡಾ.ಸುಮತಿ ಪಿ
“ಪ್ರವಾಸದ ಹೊಸ ಅನುಭವದಿಂದ ಬದಲಾವಣೆ”


ಪ್ರವಾಸವೆಂದರೆ ತಮ್ಮ ವಾಸಸ್ಥಾನದಿಂದ ಅಥವಾ ದೈನಂದಿನ ಚಟುವಟಿಕೆಯ ಸ್ಥಾನದಿಂದ ಬೇರೆ ಊರಿಗೆ ಅಥವಾ ಬೇರೆ ಸ್ಥಳಗಳಿಗೆ ಭೇಟಿ ನೀಡುವುದು. ದೈನಂದಿನ ಚಟುವಟಿಕೆಗಳ ಏಕತಾನತೆಯಿಂದ ಮನಸ್ಸನ್ನು ಪುನರ್ಚೇತನಗೊಳಿಸಲು ಪ್ರವಾಸದ ಯೋಜನೆಯನ್ನು ಹಾಕಿಕೊಂಡು ಪ್ರವಾಸ ಹೋಗುತ್ತಾರೆ. ಜೊತೆಗೆ ಅಧ್ಯಯನ ಪ್ರವಾಸ ಕೂಡ ಮಾಡುತ್ತಾರೆ.
ಪ್ರವಾಸದಿಂದ ಹೊಸ ಅನುಭವ ಆಗುವುದರ ಜೊತೆಗೆ ಮನರಂಜನೆ ಕೂಡ ಸಿಗುತ್ತದೆ. ಪ್ರವಾಸದ ಸಮಯದಲ್ಲಿ ಉಂಟಾದ ಹೊಸ ಅನುಭವದಿಂದ ವ್ಯಕ್ತಿಯ ದೈನಂದಿನ ಬದುಕಿನಲ್ಲಿ ಕೆಲವೊಂದು ಬದಲಾವಣೆಗಳು ಆಗಲು ಸಾಧ್ಯವಿದೆ.
“ದೇಶ ಸುತ್ತು ಕೋಶ ಓದು”ಎಂಬ ಗಾದೆ ಮಾತಿದೆ. ಅದರಲ್ಲೂ ಪುಸ್ತಕದ ಜ್ಞಾನಕ್ಕಿಂತಲೂ ಪ್ರತ್ಯಕ್ಷ ಅನುಭವದ ಜ್ಞಾನ ಮನುಷ್ಯನ ಬದುಕಿನ ಮೇಲೆ ಹೆಚ್ಚಿನ ಪರಿಣಾಮ ಬೀರಬಲ್ಲದು.
ಬೇರೆ ಊರುಗಳಿಗೆ ಪ್ರವಾಸಕ್ಕೆ ಹೋದಾಗ ಅಲ್ಲಿಯ ದೇವಸ್ಥಾನಗಳು, ಜನಜೀವನ,ಕಲೆ, ವಾಸ್ತುಶಿಲ್ಪ, ಜನರ ಸಂಸ್ಕೃತಿ ಇವೆಲ್ಲವನ್ನು ಗಮನಿಸುವಾಗ ನಮ್ಮ ದೇಶದ ಸಂಸ್ಕೃತಿಯ ಅರಿವಾಗುವುದರ ಜೊತೆಗೆ ಅಲ್ಲಿ ಏನು ಹೊಸತಿದೆ ಎಂಬುದು ಮನಸ್ಸಿಗೆ ಮುಟ್ಟುತ್ತದೆ.ಪ್ರವಾಸದ ಸಮಯದಲ್ಲಿ ಅದ್ಭುತವಾದಂತಹ ಕಟ್ಟಡಗಳು,ಪ್ರಕೃತಿ ಸೌಂದರ್ಯ, ಉದ್ಯಾನವನಗಳು,ಎತ್ತರದಿಂದ ಧುಮುಕುವ ಜಲಪಾತಗಳು ಇವುಗಳನ್ನೆಲ್ಲ ನೋಡುವಾಗ ಮನಸ್ಸಿಗೆ ಖುಷಿಯಾಗಿ ಎಲ್ಲವನ್ನು ಮರೆತು, ಸಂತೋಷದಿಂದ ಇರಲು ಸಾಧ್ಯವಾಗುತ್ತದೆ ಅದು ಮಾನಸಿಕ ನೆಮ್ಮದಿಯನ್ನು ನೀಡುತ್ತಾ ನಮ್ಮ ಆರೋಗ್ಯದ ಮೇಲು ಪ್ರಭಾವ ಬೀರುತ್ತದೆ ಈ ಕಾರಣದಿಂದಲೇ ಇರಬಹುದು ವರ್ಷವಿಡಿ ದುಡಿಯುವ ನೌಕರರು ಕೆಲವೊಂದು ದಿನಗಳ ಬಿಡುವು ಮಾಡಿಕೊಂಡು ಪ್ರವಾಸ ಹೋಗುತ್ತಾರೆ.
ಪ್ರವಾಸ ಹೇಗಿರಬೇಕು
ಪ್ರವಾಸಕ್ಕೆ ನಿರ್ದಿಷ್ಟವಾದ ಉದ್ದೇಶವಿರಬೇಕು.ಅದು ಮನರಂಜನೆಗೆ ಅಥವಾ ವಿಹಾರಕ್ಕಾಗಿ ಮಾಡುವ ಪ್ರವಾಸ ವಿರಬಹುದು, ಅಥವಾ ಶಿಕ್ಷಣದ ಉದ್ದೇಶದಿಂದ ಮಾಡುವ ಪ್ರವಾಸವಿರಬಹುದು ಅಥವಾ ಸಾಂಸ್ಕೃತಿಕ ಸ್ಥಿತಿಗತಿ ಅಧ್ಯಯನದ ಬಗ್ಗೆ ಪ್ರವಾಸ ಇರಬಹುದು. ಹೀಗೆ ಒಂದು ಉದ್ದೇಶವಿಟ್ಟುಕ್ಕೊಂಡು ಮಾಡುವುದೇ ಪ್ರವಾಸ. ಪ್ರವಾಸ ಮಾಡುವ ಮೊದಲು ಅದರ ಉದ್ದೇಶಕ್ಕೆ ಅನುಗುಣವಾಗಿ ಯೋಚನೆ ಮಾಡಿ,ಯೋಜನೆ ಹಾಕಿಕೊಂಡು ಮುನ್ನಡೆದರೆ ಎಲ್ಲವೂ ಹಾಕಿಕೊಂಡ ಯೋಚನೆಯಂತೆ ನಡೆದರೆ ಅಂತಹ ಪ್ರವಾಸ ಒಳ್ಳೆಯ ಪ್ರತಿಫಲವನ್ನು ನೀಡಬಲ್ಲದು. ಪ್ರವಾಸ ಯಾವುದೇ ಇರಲಿ ಅದರ ಉದ್ದೇಶ ಈಡೇರಬೇಕು.
ಪ್ರವಾಸದಿಂದ ಉಂಟಾಗುವ ಹೊಸ ಅನುಭವ
ಪ್ರವಾಸವು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ, ಒತ್ತಡವನ್ನು ಕಡಿಮೆ ಮಾಡಿ ಮನಸ್ಸಿಗೆ ಶಾಂತಿ ನೀಡುತ್ತದೆ. ಇದು ಹೊಸ ಸಂಸ್ಕೃತಿಗಳು, ಭಾಷೆಗಳು ಮತ್ತು ಸ್ಥಳಗಳನ್ನು ಪರಿಚಯಿಸುವುದರಿಂದ ಸೃಜನಶೀಲತೆ ಹಾಗೂ ಜ್ಞಾನ ವೃದ್ಧಿಸುತ್ತದೆ. ಜೊತೆಗೆ, ಆತ್ಮವಿಶ್ವಾಸ ಹೆಚ್ಚಿಸಿ, ಜೀವನಪೂರ್ತಿ ನೆನಪಿನಲ್ಲಿ ಉಳಿಯುವ ಅನುಭವಗಳನ್ನು ಒದಗಿಸುತ್ತದೆ.
ಮನುಷ್ಯನ ಬದುಕಿನಲ್ಲಿ ಪ್ರತಿಯೊಂದು ದಿನವು ಹೊಸ ದಿನವೆಂಬಂತೆ ಕೈಗೊಳ್ಳುವ ಯಾವುದೇ ರೀತಿಯ ಪ್ರವಾಸದಿಂದ ಹೊಸತಾದ ಅನುಭವ ಆಗಿಯೇ ಆಗುತ್ತದೆ ಅಂತಹ ಹೊಸ ಅನುಭವ ಬದುಕಿನಲ್ಲಿ ರೋಚಕತೆಯನ್ನು ಉಳಿಸಿಕೊಂಡು ಹೊಸ ಬದಲಾವಣೆಯನ್ನು ತರಲು ಸಾಧ್ಯವಿದೆ ಉದಾಹರಣೆಗೆ ಯಾವುದೋ ಒಂದು ಹೊಸ ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲಿಯ ಜನರ ಜೀವನ ಕ್ರಮ ನಮಗೆ ಇಷ್ಟವಾಗಬಹುದು ಆಗ ಆ ಜೀವನ ಕ್ರಮವನ್ನು ನಮ್ಮ ಊರಲ್ಲಿ ಬಂದು ನಾವು ಅನುಸರಿಸಿದರೆ ನಮ್ಮಲ್ಲಿ ಬದಲಾವಣೆಯಾಗಲು ಸಾಧ್ಯ. ಇದೇ ರೀತಿಯಲ್ಲಿ ನಾವು ಪ್ರವಾಸಕ್ಕೆ ಹೋದಾಗ ಕಂಡುಕೊಂಡಂತಹ ವಿಶೇಷತೆಗಳು ಅಲ್ಲಿನ ಜನರ ಸಭ್ಯತೆ ಇರಬಹುದು ಅಥವಾ ಆಹಾರ,ಆಚಾರ ವಿಚಾರ ಇರಬಹುದು ವ್ಯವಹಾರ ಇರಬಹುದು ಜೀವನ ಕ್ರಮ ಇರಬಹುದು ಇವುಗಳೆಲ್ಲ ಪ್ರವಾಸಿಗರ ಮನಸಲ್ಲಿ ಅಚ್ಚಳಿಯದೆ ಉಳಿಯುವಂತಹ ಕೆಲವೊಂದು ಅಂಶಗಳು ಪ್ರವಾಸಕ್ಕೆ ಹೋದಾಗ ಅಲ್ಲಿಯ ಜನರ ಜೀವನ ಕ್ರಮ ಪದ್ಧತಿಗಳನ್ನು ನೋಡುವಾಗ ನಮ್ಮ ಜೀವನ ಪ್ರಕ್ರಮ ಪದ್ಧತಿಯ ನೆನಪು ನಮಗಾಗುತ್ತದೆ ಮನಸ್ಸು ತನ್ನಂತಾನೆ ಸಾಮ್ಯತೆಯನ್ನು ಚಿಂತನೆ ಮಾಡುತ್ತದೆ ಯಾವುದು ಒಳ್ಳೇದು ಎಂಬುದನ್ನು ಆಲೋಚಿಸುತ್ತದೆ ಮನಸ್ಸಿಗೆ ಖುಷಿಯಾದರೆ ಅದನ್ನು ಅಳವಡಿಸುವ ಕೆಲಸವು ನಡೆಯುತ್ತದೆ
ಒಟ್ಟಿನಲ್ಲಿ ಪ್ರವಾಸದಿಂದ ಹೊಸ ಅನುಭವ ಮಾತ್ರ ಸಿಗುತ್ತದೆ ಎನ್ನಲಾಗದು. ಪ್ರವಾಸದಿಂದ ಅನೇಕ ರೀತಿಯ ಪ್ರಯೋಜನಗಳು ಆಗುತ್ತವೆ ಎಲ್ಲಕ್ಕಿಂತಲೂ ಮಿಗಿಲಾಗಿ ನಮ್ಮಲ್ಲಿ ನಾವು ಬದಲಾವಣೆಯನ್ನು ತರುವುದಕ್ಕೆ ಸಾಧ್ಯವಾಗುತ್ತದೆ. ಕೂಪ ಮಂಡೂಕದಂತಿರುವ ಮನುಷ್ಯರು ಪ್ರವಾಸಕ್ಕೆ ಹೋಗಿ ಬಂದ ನಂತರ ಮನಸ್ಸು ವಿಶಾಲವಾಗುತ್ತದೆ ಬದಲಾವಣೆಯನ್ನು ಅವರು ಸ್ವೀಕರಿಸುತ್ತಾರೆ.
ಹೊಸ ಪರಿಸರ ಮತ್ತು ಸಂಸ್ಕೃತಿಯು ಮೆದುಳನ್ನು ಸಕ್ರಿಯಗೊಳಿಸುತ್ತದೆ.ದೈನಂದಿನ ಜಂಜಾಟದಿಂದ ವಿರಾಮ ನೀಡಿ, ಮನಸ್ಸನ್ನು ಶಾಂತಗೊಳಿಸುತ್ತದೆ ಹೊಸ ಚೈತನ್ಯ ನೀಡುತ್ತದೆ.
ವಿಭಿನ್ನ ಆಹಾರ ಪದ್ಧತಿ, ಸಂಪ್ರದಾಯ ಮತ್ತು ಜೀವನಶೈಲಿಯನ್ನು ಅರ್ಥಮಾಡಿಕೊಳ್ಳುವ ಅವಕಾಶ ಸಿಗುತ್ತದೆ.ಒಟ್ಟಾರೆಯಾಗಿ, ಪ್ರವಾಸವು ಬದುಕಿನ ಬದಲಾವಣೆಗೆ,ವ್ಯಕ್ತಿತ್ವ ವಿಕಸನಕ್ಕೆ ಮತ್ತು ಬದುಕಿನ ದೃಷ್ಟಿಕೋನವನ್ನು ವಿಸ್ತರಿಸಲು ಸಹಕಾರಿಯಾಗಿದೆ.
ಡಾ.ಸುಮತಿ ಪಿ



