ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಮೆರಿಕದ ಪ್ರಸಿದ್ಧ ಅಧ್ಯಕ್ಷರಲ್ಲಿ ಒಬ್ಬರಾದ ಅಬ್ರಹಾಂ ಲಿಂಕನ್ ಅವರ ಜೀವನ  ಸೋಲುಗಳ ಸರಮಾಲೆಯಿಂದ ಕೂಡಿತ್ತು ವ್ಯಾಪಾರದಲ್ಲಿ ನಷ್ಟ, ಪ್ರಿಯತಮೆಯ ಸಾವು, ಹನ್ನೆರಡಕ್ಕೂ ಹೆಚ್ಚು ಬಾರಿ ಚುನಾವಣೆಯಲ್ಲಿ ಸೋಲು ಕಂಡರು. ಆದರೂ,’ನನ್ನ ಆತ್ಮವಿಶ್ವಾಸ ನನ್ನನ್ನು ಕೈಬಿಡುವುದಿಲ್ಲ.’ ಎಂದು ನಂಬಿದ್ದರು. ಅವರು ಅಂತಿಮವಾಗಿ ತಮ್ಮ ೫೨ನೇ ವಯಸ್ಸಿನಲ್ಲಿ ಅಮೆರಿಕದ ಅಧ್ಯಕ್ಷರಾದರು.

ಸ್ವ ನಂಬಿಕೆ , , ,?
ಜೀವನದ ಅತೀ ದೊಡ್ಡ ಶಕ್ತಿ ಯಾವುದು ಎಂದು ಯೋಚಿಸಿದಾಗ ಸ್ವ ನಂಬಿಕೆ ಎನ್ನುವುದು ಉತ್ತರವಾಗಿ ಸಿಗುತ್ತದೆ. ಸ್ವ ನಂಬಿಕೆ ಎಂದರೆ ತನ್ನನ್ನು ತಾನು ನಂಬುವುದು. ಸ್ಪರ್ಧಾತ್ಮಕ ಪ್ರಪಂಚದಲ್ಲಿ  ಬದುಕುತ್ತಿರುವ ನಾವು ಲಿಂಕನ್‌ರoತಹ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕಿದೆ. ಸ್ವ ನಂಬಿಕೆ ಇಲ್ಲವೆಂದರೆ ಯಾವ ಸ್ಥಾನವೂ ಇಲ್ಲ. ಯಾರಲ್ಲಿ ಆತ್ಮವಿಶ್ವಾಸ ಇಲ್ಲವೋ ಅವರಲ್ಲಿ ಭಯ ಇರುತ್ತದೆ. ಮತ್ತು  ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇರುವುದಿಲ್ಲ.

ಇಲ್ಲದಿದ್ದರೆ . . .?

ವ್ಯಕ್ತಿ ಎಷ್ಟೇ ಜಾಣನಾಗಿದ್ದರೂ ಪ್ರತಿಭಾವಂತನಾಗಿದ್ದರೂ ಅವನಲ್ಲಿ ಸ್ವ ನಂಬಿಕೆ ಇಲ್ಲವೆಂದರೆ ಅವನು ಸಾಧನೆ ಮಾಡುವುದು ಅಸಾಧ್ಯ. ಸಾಧನೆಗೆ ಬೇಕಾದುದು ಎಲ್ಲವೂ ಇದ್ದು ಸ್ವ ನಂಬಿಕೆ ಇಲ್ಲದಿದ್ದರೆ ಸರಿಯಾದ ಇಂಜಿನ್ ಸ್ಟೇರಿಂಗ್ ಗಾಲಿಗಳು ಡ್ರೈವರ್
ಎಲ್ಲವೂ ಇದ್ದು ಇಂಧನವಿಲ್ಲದ ಕಾರ್ ಇದ್ದಂತೆ. ಅದು ಮುಂದಕ್ಕೆ ಚಲಿಸಲಾರದು.
‘ಜಗತ್ತಿನ ಇತಿಹಾಸವು ತನ್ನ ಮೇಲೆ ನಂಬಿಕೆ ಇಟ್ಟಿದ್ದ ಕೆಲವೇ ಕೆಲವು ವ್ಯಕ್ತಿಗಳ ಇತಿಹಾಸವಾಗಿದೆ. ಆ ನಂಬಿಕೆಯು ಒಳಗಿರುವ ದೈವತ್ವವನ್ನು ಜಾಗೃತಗೊಳಿಸುತ್ತದೆ. ನೀವು ಯಾವುದನ್ನಾದರೂ ಸಾಧಿಸಬಹುದು.’ ಎಂದಿದ್ದಾರೆ ಸ್ವಾಮಿ ವಿವೇಕಾನಂದರು.

ಆತ್ಮವಿಶ್ವಾಸವೆಂದರೆ , , ,?

ಆತ್ಮವಿಶ್ವಾಸವೆಂದರೆ ನಮ್ಮ ಮೇಲೆ ನಮಗಿರುವ ವಿಶ್ವಾಸ. ನಮ್ಮ ಸಾಮರ್ಥ್ಯ ಗುಣಗಳು ಮತ್ತು ನಿರ್ಧಾರಗಳ ಮೇಲೆ ನಮಗಿರುವ ಅಚಲವಾದ ನಂಬಿಕೆ. ಯಾವುದೇ ಕ್ಷೇತ್ರದಲ್ಲಿ ಜಯಗಳಿಸಲು ಇದೇ ಅತಿ ಮುಖ್ಯವಾದ ಅಸ್ತ್ರವಾಗಿದೆ. ಅದು ನಮ್ಮ ಆಂತರಿಕ ಶಕ್ತಿ. ಜೀವನದ ಪ್ರತಿಯೊಂದು ಹಂತದಲ್ಲೂ ನಾವು ಯಶಸ್ವಿಯಾಗಲು ಅತಿ ಮುಖ್ಯ. ಒಬ್ಬ ವ್ಯಕ್ತಿಯು ಎಷ್ಟೇ ಬುದ್ಧಿವಂತನಾಗಿದ್ದರೂ ಆತ್ಮವಿಶ್ವಾಸದ ಕೊರತೆಯಿದ್ದರೆ ಗುರಿ ತಲುಪುವುದು ಕಷ್ಟವಾಗುತ್ತದೆ.

ಕಾರಣ ಅರಿಯಿರಿ

ಆತ್ಮವಿಶ್ವಾಸ ಕಡಿಮೆ ಆಗಲು ಕಾರಣ ಹಲವಾರು ಅದರಲ್ಲಿ ಮುಖ್ಯವೆಂದರೆ; ಮನೆಯಲ್ಲಿ ಹಿರಿಯರು ಶಾಲೆಯಲ್ಲಿ ಶಿಕ್ಷಕರು ನಿನಗೇನೂ ಬರುವುದಿಲ್ಲ. ನಿನ್ನ ಕೈಯಲ್ಲಿ ಏನೂ ಆಗುವುದಿಲ್ಲ. ನೀನು ಮೂರ್ಖ. ನೀನು ದಡ್ಡ ಎಂದು ಹೇಳಿದ್ದನ್ನು ಸಬ್ ಕಾನ್ಶಿಯಸ್ ಮೈಂಡ್ ಅಚ್ಚೊತ್ತಿಕೊಂಡಿರುತ್ತದೆ. ಅದೇ ಸರಿಯೆಂದು ನಂಬಿ ಅದೇ ನಂಬಿಕೆಯಿoದ ದೊಡ್ಡವರಾಗಿರುವುದು.

ಮದ್ದು ಅರೆಯಿರಿ

‘ನಿಮ್ಮಲ್ಲಿ ಅದನ್ನು ಮಾಡುವ ಸಾಮರ್ಥ್ಯವಿದೆ ಎಂಬ ನಂಬಿಕೆ ನಿಮಗಿದ್ದರೆ, ಆರಂಭದಲ್ಲಿ ಆ ಸಾಮರ್ಥ್ಯ ಇಲ್ಲದಿದ್ದರೂ ಸಹ, ಕೆಲಸದ ಕೊನೆಯಲ್ಲಿ ಅದನ್ನು ಮಡುವ ಶಕ್ತಿಯನ್ನು ನೀವು ಖಂಡಿತವಾಗಿಯೂ ಪಡೆದುಕೊಳ್ಳುತ್ತೀರಿ.’ ಎಂದು ಹೇಳಿದ್ದಾರೆ ಗಾಂಧೀಜಿ. ಅವರ ನುಡಿಮುತ್ತಿನಂತೆ ಆತ್ಮವಿಶ್ವಾಸದ ಕೊರತೆಗೆ ಮದ್ದು ಅರೆಯಬೇಕು. ಇದುವರೆಗೂ ನಾನು ತಿಳಿದಿದ್ದು ತಪ್ಪು. ಇತರರ ತರಹ ನನ್ನಲ್ಲಿ ಅರ್ಹತೆಯಿದೆ. ನಾನು ಏನು ಬೇಕಾದರೂ ಮಾಡಬಹುದು ನನಗನಿಸಿದ್ದನ್ನು ಸಾಧಿಸಬಹುದು ಅನ್ನೋ ಮೈಂಡ್ ಸೆಟ್ ಬೆಳೆಸಿಕೊಳ್ಳಬೇಕು.

ಚಿಕ್ಕ ಗುರಿ

‘ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮ ಎಂಬುದು ‘ಅಪಜಯ’ ಎಂಬ ಕಾಯಿಲೆಯನ್ನು ಕೊಲ್ಲಲು ಇರುವ ಅತ್ಯತ್ತಮ ಔಷಧಿಯಾಗಿದೆ. ಇದು ನಿಮ್ಮನ್ನು ಒಬ್ಬ ಯಶಸ್ವಿ ವ್ಯಕ್ತಿಯನ್ನಾಗಿ ಮಾಡುತ್ತದೆ.’ ಎಂಬ ಅಬ್ದುಲ್ ಕಲಾಂಜಿ ಅವರ ಮಾತು ಶ್ರಮದ ಕುರಿತಾಗಿಯೂ ಹೇಳುತ್ತದೆ. ಆದ್ದರಿಂದ ದಿನನಿತ್ಯ ಚಿಕ್ಕ ಚಿಕ್ಕ ಗುರಿಗಳಿರುವ ಒಂದು ಪಟ್ಟಿ ಮಾಡಿ. ಅದರಲ್ಲಿ  ಐದಾರು ಗುರಿಗಳಿದ್ದರೂ ಸಾಕು.  ಹೆಚ್ಚೆಚ್ಚು  ಗುರಿಗಳನ್ನು ಬರೆದು ಅದನ್ನು ಪೂರ್ಣಗೊಳಿಸಲು ಆಗದಿದ್ದರೆ ನಿಮಗೆ ಬೇಜಾರು ಆಗುತ್ತದೆ. ಮತ್ತು ಆತ್ಮವಿಶ್ವಾಸವು ಮತ್ತಷ್ಟು ಕೆಳಕ್ಕೆ ಜಾರುತ್ತದೆ. ಆದ್ದರಿಂದ ಚಿಕ್ಕ ಗುರಿಗಳನ್ನು ದಿನವೂ ಸಾಧಿಸಲು ಯತ್ನಿಸಿ.

ತಯಾರಿ

‘ನೀವು ಅದನ್ನು ಮಾಡಬಲ್ಲಿರಿ ಎಂದು ನಂಬಿದರೂ ಅಥವಾ ಮಾಡಲು ಸಾಧ್ಯವಿಲ್ಲ ಎಂದು ನಂಬಿದರೂ ಎರಡೂ ಸಂದರ್ಭದಲ್ಲೂ ನೀವು ಸರಿಯಾಗಿಯೇ ಇರುತ್ತೀರಿ.’ ಎಂದಿದ್ದಾರೆ ಹೆನ್ರಿ ಫೋರ್ಡ್ ಯಾವುದೇ ಕೆಲಸ ನಿನ್ನ ಯೋಚನೆ ಮತ್ತು ನಿನ್ನ ನಂಬಿಕೆಯ ಮೇಲೆ ಅವಲಂಬಿತ ಎನ್ನುವುದು ಅವರ ಮಾತಿನ ಅರ್ಥ. ಗುರಿಗೆ ಗುರಿ ಇಡುವ ಮೊದಲು ಅದರ ಬಗ್ಗೆ ಸರಿಯಾದ ತಯಾರಿ ನಡೆಸಿ. ಸಂಕಷ್ಟದ ಸಮಯದಲ್ಲಿ ಎದೆಗುಂದದೆ ಮುನ್ನಡೆಯಲು ಇದು ಸಹಕಾರಿ. ಸ್ವ ನಂಬಿಕೆ ಇದ್ದಾಗ ಮಾತ್ರ ನಾವು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯ.ಸೋತಾಗ ಕುಗ್ಗದೆ, ಮಗದೊಮ್ಮೆ ಪ್ರಯತ್ನಿಸುವ ಧೈರ್ಯವನ್ನು ಇದು ತುಂಬುತ್ತದೆ.

ನಕಾರಾತ್ಮಕತೆ ಬಿಡಿ

‘ಲೈಫ್ ಹ್ಯಾಸ್ ಮೆನಿ ಪ್ರಾಬ್ಲಮ್ಸ್ ಬಟ್ ನೋ ಪ್ರಾಬ್ಲಮ್ ಲಾಸ್ಟ್ ಫಾರೆವರ್ ಸೋ ಫೇಸ್ ಚಾಲೆಂಜಿಸ್ ವಿಥ್ ಕಾನ್ಫಿಡೆನ್ಸ್. ’ನನ್ನಿಂದ ಸಾಧ್ಯವಿಲ್ಲ ಎಂಬ ಯೋಚನೆಯನ್ನು ಮೊದಲು ಕೈಬಿಡಿ. ಅದರ ಬದಲು ನಾನು ಪ್ರಯತ್ನಿಸುತ್ತೇನೆ ಎಂದು ಆಲೋಚಿಸಿ. ಸೋಲನ್ನು ಅನುಭವವಾಗಿ ಸ್ವೀಕರಿಸಿ. ಮುನ್ನಡೆಯಬೇಕು. ಸೋಲನ್ನು ವೈಫಲ್ಯವೆಂದು ಭಾವಿಸದೆ, ಕಲಿಕೆಯ ಒಂದು ಭಾಗವೆಂದು ಸ್ವೀಕರಿಸಿ ಆಗ ಸೋಲಿನ ಭಯ ಹೋಗಲಾಡುತ್ತದೆ. ಸೋಲಿನ ಭಯ ದೂರವಾಗಿ ಹೊಸ ಪ್ರಯತ್ನಗಳಿಗೆ ದಾರಿ ಮಾಡಿಕೊಡುತ್ತದೆ. ನಿಮ್ಮನ್ನು ನೀವು ಪ್ರೀತಿಸಿ. ಇತರರೊಂದಿಗೆ ಹೋಲಿಕೆ ಮಾಡಕೊಳ್ಳುವುದನ್ನು ನಿಲ್ಲಿಸಿ ನಿಮ್ಮ ವ್ಯಕ್ತಿತ್ವವನ್ನು ಗೌರವಿಸಿ.

ಗುರುತಿಸಿ

ನಿಮ್ಮ ಸಣ್ಣ ಪುಟ್ಟ ಯಶಸ್ಸನ್ನು ಗುರುತಿಸಿ. ಅವುಗಳನ್ನು ಸಂಭ್ರಮಿಸಿ. ಅದು ದೊಡ್ಡ ಸಾಧನೆಗೆ ಸ್ಪೂರ್ತಿಯಾಗುತ್ತದೆ. ನಿರಂತರ ಕಲಿಕೆಯಿರಲಿ ಅದು ಜ್ಞಾನ ಹೆಚ್ಚಿಸುತ್ತದೆ. ಜ್ಞಾನ ಹೆಚ್ಚಾದಂತೆ ಸಹಜವಾಗಿಯೇ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ಗುರಿ ಒಂದೇ ಆಗಿರಲಿ ಪ್ರಯತ್ನ ವಿಭಿನ್ನವಾಗಿರಲಿ. ನಿಮ್ಮ ಮೇಲೆ ನಿವiಗೆ ನಂಬಿಕೆಯಿರಲಿ ಇಡೀ ಜಗತ್ತೇ ನಿಮ್ಮ ಕಾಲಡಿಯಲ್ಲಿರುತ್ತದೆ. ಪ್ರಶಂಸೆ ಮತ್ತು ಟೀಕೆಗಳನ್ನು ಸಮಾನವಾಗಿ ಸ್ವೀಕರಿಸಬೇಕು. ಒಂದು ಹೂವಿನ ಗಿಡ ಸರಿಯಾಗಿ ಬೆಳೆಯಲು ಮಳೆ ಮತ್ತು ಬಿಸಿಲು ಎರಡೂ ಬೇಕು. ಅಷ್ಟಕ್ಕೂ ಪ್ರಶಂಸೆ ಮತ್ತು ಟೀಕೆಗಳು ವಾಸ್ತವವಲ್ಲ. ಅವು ಜನರ ಅಭಿಪ್ರಾಯಗಳು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

ತಿಳಿದುಕೊಳ್ಳಿ

ಈ ಜಗತ್ತಿನಲ್ಲಿ ಗೌರವದಿಂದ ಬದುಕಲು ಶ್ರೇಷ್ಠವಾದುದನ್ನು ಸಾಧಿಸಲು ನಿಮ್ಮನ್ನು ನೀವು ನಂಬಬೇಕು. ಇತರರು ನಿಮ್ಮನ್ನು ನಿರೀಕ್ಷಿಸುವ ರೀತಿಯಲ್ಲಿ ನಿಮ್ಮ ಕೆಲಸ ಕಾರ್ಯಗಳನ್ನು ಮಾಡುವುದಲ್ಲ. ನಿಮ್ಮ ಆತ್ಮವಿಶ್ವಾಸದ ಮಾತುಗಳು ಆತ್ಮವಿಶ್ವಾಸಭರಿತ ನಿಮ್ಮ ಕ್ರಿಯೆಗಳು. ಸಾಕ್ರೆಟಿಸ್ ಆಗಾಗ್ಗೆ ಜನರಿಗೆ ‘ಪರೀಕ್ಷಿಸದ ಜೀವನವು ಬದುಕಲು ಯೋಗ್ಯವಲ್ಲ.’ ಎಂದು ನೆನಪಿಸುತ್ತಿದ್ದರು. ಸ್ವ ನಂಬಿಕೆಗೆ ಮೊದಲು ನಿಮ್ಮನ್ನು ನೀವು ತಿಳಿದುಕೊಳ್ಳಬೇಕು. ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಅರ್ಥ ಮಾಡಿಕೊಳ್ಳಬೇಕು. ಇದು ಒಂದು ಸಲದ ಕೆಲಸವಲ್ಲ; ಇದು ಪ್ರಶ್ನಿಸುವ ಕಲಿಯುವ ಮತ್ತು ಸರಿಪಡಿಸುವ ದೈನಂದಿನ ಅಭ್ಯಾಸವಾಗಿದೆ.

ಬದಲಾವಣೆಗೆ ದಾರಿ

ಆಲೋಚನೆ ಮತ್ತು ಕ್ರಿಯೆ ಸ್ಥಿರವಾದಾಗ ಮಾತ್ರ ನಂಬಿಕೆ ಹೆಚ್ಚುತ್ತದೆ. ನೋವು ಮತ್ತು ಅನಿಶ್ಚಿತತೆಯನ್ನು ತಪ್ಪಿಸುವ ಮೂಲಕ ವಿಶ್ವಾಸದಿಂದ ವರ್ತಿಸುವಂತೆ ಒತ್ತಾಯಿಸುತ್ತದೆ. ಸತತ ಪ್ರಯತ್ನ ಜ್ಞಾನಾರ್ಜನೆ ಮತ್ತು ಧೈರ್ಯದಿಂದ ಇದನ್ನು ಬೆಳೆಸಿಕೊಳ್ಳಬಹುದು. ಅಂಜಿಕೆಯನ್ನು ಬಿಟ್ಟು ಹೊಸ ಸವಾಲುಗಳನ್ನು ಎದುರಿಸಿದಾಗ ಮಾತ್ರ ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ‘ನಿಮ್ಮನ್ನು ನೀವು ಗೆಲ್ಲುವುದು ಸಾವಿರ ಯುದ್ಧಗಳನ್ನು ಗೆಲ್ಲುವುದಕ್ಕಿಂತ ದೊಡ್ಡದು.’ ಜಗತ್ತು ನಿಮ್ಮನ್ನು ನಂಬುವ ಮೊದಲು ನೀವು ನಿಮ್ಮನ್ನು ನಂಬಬೇಕು.
ನೆನಪಿರಲಿ: ‘ನನ್ನಿಂದ ಸಾಧ್ಯ’ ಎಂಬ ಸಣ್ಣ ನಂಬಿಕೆ ದೊಡ್ಡ ಬದಲಾವಣೆಗೆ ದಾರಿಯಾಗುತ್ತದೆ.


About The Author

Leave a Reply

You cannot copy content of this page

Scroll to Top