ಮಹಿಳಾ ಸಂಗಾತಿ
ವೀಣಾ ಹೇಮಂತ್ ಗೌಡ ಪಾಟೀಲ್
ಒಂಟಿ ಧ್ವನಿಗೆ… ಜಂಟಿಯಾದ ನೂರಾರು ಧ್ವನಿಗಳು
(ಶಾ ಬಾನು ಹಾಗೂ ತೀನ್ ತಲಾಕ್ ಮೊಕದ್ದಮೆ )


ಒಂಟಿ ಧ್ವನಿಗೆ… ಜಂಟಿಯಾದ ನೂರಾರು ಧ್ವನಿಗಳು
(ಶಾ ಬಾನು ಹಾಗೂ ತೀನ್ ತಲಾಕ್ ಮೊಕದ್ದಮೆ )
ನನಗೆ ವಯಸ್ಸಾಗಿರಬಹುದು ಆದರೆ ನನ್ನ ಧ್ವನಿ ಉಡುಗಿಲ್ಲ…. ಎಂದು ಆಕೆ ಹೇಳಿದಾಗ ಆಕೆಯ ದುರ್ಬಲವಾದ ಕೈಗಳು ನಡುಗುತ್ತಿದ್ದರೂ ಧ್ವನಿಯಲ್ಲಿ ಹರಿತವಾದ ಪ್ರಖರತೆ ಇತ್ತು ಕಾರಣ… ಆಕೆಯ ಉದ್ದೇಶ ಅತ್ಯಂತ ಸ್ಥಿರವಾಗಿತ್ತು.
ಇಂದೋರ್ ನ ಆ ಹೆಣ್ಣು ಮಗಳ ವಯಸ್ಸು 62 ವರ್ಷವಾಗಿದ್ದು ತನ್ನ ಬದುಕಿನ ಬಹು ಭಾಗವನ್ನು ಮನೆಯ ನಾಲ್ಕು ಗೋಡೆಗಳ ಒಳಗೆ ಆಕೆ ಕಳೆದಿದ್ದಳು. ಮದುವೆಯಾಗಿ ಹಲವಾರು ದಶಕಗಳ ನಂತರ ಆಕೆಯ ಪತಿ ಆಕೆಗೆ ವಿಚ್ಛೇದನ ನೀಡಿದ್ದಲ್ಲದೆ ಆಕೆಗೆ ಯಾವುದೇ ರೀತಿಯ ಸಹಾಯವನ್ನು ನೀಡಲು ನಿರಾಕರಿಸಿದನು. ಆಕೆಯ ಮನದ ಮೂಲೆಯಲ್ಲಿನ ಅಗೋಚರ ಭಾವವೊಂದು ಮಿಸುಕಿತ್ತು. ದಾಂಪತ್ಯದ ಹಲವಾರು ದಶಕಗಳನ್ನು ಕಳೆದ ಆಕೆ ಅತಿಯಾದ ತಿರಸ್ಕಾರದ ಭಾವದಿಂದ ನೊಂದು ತನ್ನ ಕಾಲ ಕೆಳಗಿನ ನೆಲವೇ ಕುಸಿದು ಹೋದಂತೆ ಭಾಸವಾಗಿ ಒದ್ದಾಡಿದಳು.
ತನ್ನ ಬದುಕಿನಲ್ಲಿ ಒಂದು ದಿನ ತಾನು ನ್ಯಾಯಾಲಯದ ಕಟ-ಕಟೆಯಲ್ಲಿ ನಿಲ್ಲಬಹುದು, ನ್ಯಾಯಾಧೀಶರ ಮುಂದೆ ಮೈಕ್ರೋಫೋನ್ ಗಳ ಮುಂದೆ ತನ್ನ ಅಹವಾಲನ್ನು ಮಂಡಿಸುತ್ತೇನೆ ಎಂಬ ಯೋಚನೆಯನ್ನೇ ಆಕೆ ಮಾಡಿರಲಿಲ್ಲ.ತನ್ನ ಹೆಸರು ಮನೆಯ ನಾಲ್ಕು ಗೋಡೆಗಳ, ತಾನಿರುವ ಪರಿಸರದ ಆಚೆಗೆ ದೇಶದ ಮೂಲೆ ಮೂಲೆಯನ್ನು ತಲುಪಬಹುದು ಎಂದು ಆಕೆ ಖಂಡಿತವಾಗಿಯೂ ಭಾವಿಸಿರಲಿಲ್ಲ.
ಆದರೆ ಹಸಿವಿಗೆ ಎಲ್ಲರನ್ನೂ, ಎಲ್ಲವನ್ನು ನಡುಗಿಸುವ ಶಕ್ತಿ ಇದೆ. ಬಡತನಕ್ಕೆ ಅದರದ್ದೇ ಆದ ಅಂತಃಶಕ್ತಿ ಇದೆ.
ಆಕೆಯ ಬಳಿ ಹಣವಿರಲಿಲ್ಲ, ಭದ್ರತೆ ಇರಲಿಲ್ಲ ಹಾಗೂ ಒಬ್ಬಳೇ ದುಡಿದುಕೊಂಡು ತಿಂದು ಬದುಕಬಲ್ಲೆ ಎಂದು ಹೇಳಲು ಸಾಧ್ಯವಾಗುವ ದೈಹಿಕ ಶಕ್ತಿಯಂತೂ ಮೊದಲೇ ಇರಲಿಲ್ಲ.
ಆದ್ದರಿಂದಲೇ ಆಕೆ ತನ್ನ ತಲೆಮಾರಿನ ಜನರು ಯೋಚಿಸಲು ಸಾಧ್ಯವಾಗದ ರೀತಿಯಲ್ಲಿ ಪ್ರತಿಕ್ರಿಯಿಸಿದಳು… ಆಕೆ ತನ್ನ ಹಕ್ಕಿಗಾಗಿ ಹೋರಾಡಿದಳು.
ತನ್ನ ಕುಟುಂಬದ ನಿರ್ವಹಣೆಗಾಗಿ ಅದರಲ್ಲೂ ಮುಖ್ಯವಾಗಿ ತನ್ನ ಔಷಧಿಯ ಖರ್ಚಿಗಾಗಿ ಪ್ರತಿ ತಿಂಗಳು ತನಗೆ ಇಂತಿಷ್ಟು ಹಣವನ್ನು ದೊರಕಿಸಿಕೊಡಿ ಎಂದು ಆಕೆ ನ್ಯಾಯಾಲಯದ ಮೊರೆ ಹೋದಳು. ತನ್ನ ವೃದ್ದಾಪ್ಯದ ವಯಸ್ಸಿನಲ್ಲಿ ದುಡಿಯಲು ಸಾಧ್ಯವಿಲ್ಲದ ಕಾರಣ ಗೌರವಯುತವಾಗಿ ಬದುಕಲು ಅತ್ಯವಶ್ಯಕವಾದ ಆರ್ಥಿಕ ಅನುಕೂಲವನ್ನು ಮಾತ್ರ ಆಕೆ ಬಯಸಿದ್ದಳು.. ಆದರೆ ಆಕೆಯ ಈ ಬಯಕೆ ಇಡೀ ದೇಶದ ಸಮಾಜದ ಹೆಣ್ಣು ಮಕ್ಕಳ ಅಸ್ತಿತ್ವದ ಪ್ರಶ್ನೆಯಾಗಿ ಬದಲಾಯಿತು. ಆಕೆಯ ಕೌಟುಂಬಿಕ ನಿರ್ವಹಣೆಯ ಪ್ರಶ್ನೆ ಇಡೀ ಭಾರತ ದೇಶದ ರಾಷ್ಟ್ರೀಯ ವಿಷಯವಾಗಿ ಬದಲಾಯಿತು.
ಆಕೆಯ ಕೇಸ್ ಸುಪ್ರೀಂ ಕೋರ್ಟ್ ನ ಮೆಟ್ಟಿಲನ್ನು ಏರಿತು. ಪ್ರತಿಯೊಂದು ಪತ್ರಿಕೆಯಲ್ಲಿಯೂ ಆಕೆಯ ಹೆಸರು ಹಾಗೂ ಕೇಸಿನ ವಿವರಗಳು ಪ್ರಕಟವಾದವು. ರಾಜಕೀಯ ನೇತಾರರು ಆಕೆಯ ಬದುಕು ತಮಗೆ ಸಂಬಂಧಿಸಿದ ವಿಷಯ ಎಂಬಂತೆ ಆಕೆಯ ಕುರಿತು ಮಾತನಾಡಿದರು. ಮಾಧ್ಯಮಗಳಲ್ಲಿ ಚರ್ಚೆಗಳು, ವಾಗ್ವಾದಗಳು ಕಾಳ್ಗಿಚ್ಚಿನಂತೆ ಹರಡಿದವು. ಇದೆಲ್ಲದರ ಹಿಂದೆ ಇದ್ದ ವ್ಯಕ್ತಿ ಕೇವಲ ತನಗೆ ಸಾಮಾಜಿಕ ನ್ಯಾಯವನ್ನು ದೊರಕಿಸಿಕೊಡಲು ಕೇಳಿಕೊಂಡಿದ್ದಳು
ಶಾ ಭಾನು ಎಂಬ ಆಕೆ ಅತ್ಯಂತ ಸ್ಥಿತಪ್ರಜ್ಞತೆಯಿಂದ ತನ್ನ ಸುತ್ತ ಹರಡುತ್ತಿದ್ದ ಈ ಎಲ್ಲ ವಿದ್ಯಮಾನಗಳನ್ನು ಗಮನಿಸುತ್ತಿದ್ದಳು… ದಿಗ್ಬ್ರಮೆಗೊಂಡ, ದಣಿದ ಮನಸ್ಥಿತಿಯಲ್ಲೂ ಕೂಡ ಆಕೆ ಹಿಂದೇಟು ಹಾಕಲಿಲ್ಲ. ಆಕೆ ತನ್ನ ಮನೆಯ ಕಿಟಕಿಯಲ್ಲಿ ಕುಳಿತುಕೊಂಡು ಪಕ್ಕದಲ್ಲಿಯೇ ಹರಡಿರುವ ನ್ಯಾಯಾಲಯದ ಕಾಗದ ಪತ್ರಗಳನ್ನು ಆಗಾಗ ನಿರುಕಿಸುತ್ತಿದ್ದ ಆಕೆ ತನಗೆ ತಾನೇ ಹೇಳಿಕೊಳ್ಳುತ್ತಿದ್ದುದು ಕೇವಲ ಒಂದೇ ಒಂದು ಮಾತು ಈಗ ನಾನು ಮಾತನಾಡದಿದ್ದರೆ, ನನ್ನಂತಹ ಹೆಣ್ಣು ಮಕ್ಕಳ ಪರವಾಗಿ ಮತ್ತಿನ್ನಾರು ಮಾತನಾಡಲು ಸಾಧ್ಯ ಎಂದು.
ಹಲವಾರು ವರ್ಷಗಳ ಕಾಲ ವಾದ ವಿವಾದಗಳು ನಡೆದು ಅಂತಿಮವಾಗಿ ಆಕೆಯ ಪರವಾಗಿ ಸುಪ್ರೀಂ ಕೋರ್ಟ್ ನಲ್ಲಿ ತೀರ್ಪು ಬಂತು. ವಿಚ್ಛೇದನದ ನಂತರವೂ ಕೂಡ ಆಕೆಯ ಪೋಷಣೆಯ ಜವಾಬ್ದಾರಿಯನ್ನು ಆಕೆಯ ಪತಿ ತೆಗೆದುಕೊಳ್ಳಬೇಕು ಎಂಬ ಸುಪ್ರೀಂ ಕೋರ್ಟ್ ನ ನಿರ್ಣಯವನ್ನು ಅತ್ಯಂತ ಸ್ತಬ್ದವಾಗಿ ಇಡೀ ದೇಶದ ಜನರು ಆಲಿಸಿದರು. ಓರ್ವ ವೃದ್ಧ, ಅಸಹಾಯಕ ಮುಸ್ಲಿಂ ಹೆಣ್ಣು ಮಗಳು ಹೆಣ್ಣು ಮಕ್ಕಳ ಸಂಭಾಷಣೆಯ, ಮಾತುಕತೆಯ ದಿಕ್ಕನ್ನೇ ಬದಲಾಯಿಸಿ ಹೆಣ್ಣು ಮಕ್ಕಳ ಹಕ್ಕುಗಳ ಹೋರಾಟದ ರಕ್ಷಕಿಯಾಗಿ ನಿಂದಳು.
ತನ್ನ ವೈಯುಕ್ತಿಕ ಆರ್ಥಿಕ ನಿರ್ವಹಣೆಯ ಕುರಿತಾಗಿ ಆಕೆ ಹಚ್ಚಿದ ಪುಟ್ಟದೊಂದು ಕಿಡಿ ಬೆಂಕಿಯಾಗಿ ಪ್ರಜ್ವಲಿಸಿತ್ತು. ಬಹಳಷ್ಟು ಜನ ಇದನ್ನು ವಿರೋಧಿಸಿದರು. ಧಾರ್ಮಿಕ ಮುಖಂಡರು ಒಂದೆಡೆ ಸೇರಿ ಭಾಷಣಗಳನ್ನು ಮಾಡಿದರು. ಸರ್ಕಾರವು ಕೂಡ ಒತ್ತಡದಲ್ಲಿ ಸಿಲುಕಿತು ಆದರೆ ಇನ್ನೇನು ಗೆಲುವು ಆಕೆಯ ಕೈಗೆ ದೊರಕಿತು ಎಂಬಷ್ಟರಲ್ಲಿ ಅದು ಆಕೆಯ ಕೈಯಿಂದ ನುಣುಚಿಕೊಳ್ಳಲಾರಂಭಿಸಿತು
ತನ್ನ ಮನೆಯ ಪುಟ್ಟ ಕೋಣೆಯಲ್ಲಿ ಶಾ ಬಾನು ಅತ್ಯಂತ ಮೌನವಾಗಿ ಕುಳಿತಿದ್ದ ಸಮಯದಲ್ಲಿ ಇಡೀ ಜಗತ್ತು ಆಕೆಯ ಬದುಕಿನ ಕುರಿತು ಚರ್ಚೆಯಲ್ಲಿ ತೊಡಗಿತು. ಯಾರೊಬ್ಬರೂ ಆಕೆಯ ಕಣ್ಣಲ್ಲಿ ಕಣ್ಣಿಟ್ಟು ಆಕೆಯ ನೋವು ಏನಿರಬಹುದು ಎಂಬುದನ್ನು ಅರಿಯುವ ಪ್ರಯತ್ನ ಮಾಡಲಿಲ್ಲ. ತಾನು ಒಬ್ಬಂಟಿ ಮೋಸ ಹೋದ ಹಾಗೂ ಭಯ ಪಟ್ಟ ಏಕೈಕ ಹೆಣ್ಣುಮಗಳು ಎಂಬ ಭಾವ ಮಾತ್ರ ಆಕೆಯನ್ನು ಸತಾಯಿಸುತ್ತಿತ್ತು…. ಇದೇ ಸಮಯದಲ್ಲಿ ಚಮತ್ಕಾರದ ರೀತಿಯಲ್ಲಿ ಇಡೀ ಭಾರತ ದೇಶದಾದ್ಯಂತ ಹಿಂದೂ ಮಹಿಳೆಯರ ಗುಂಪುಗಳು ಆಕೆಯನ್ನು ಬೆಂಬಲಿಸಲು ಆರಂಭಿಸಿದವು.
ಶಿಕ್ಷಕರು, ಸಾಮಾಜಿಕ ಕಾರ್ಯಕರ್ತರು, ನ್ಯಾಯವಾದಿಗಳು, ಕಾಲೇಜ್ ವಿದ್ಯಾರ್ಥಿನಿಯರು ಹೀಗೆ ಆಕೆ ಎಂದೂ ಭೇಟಿಯಾಗದ ನೂರಾರು ಸಾವಿರಾರು ಸಂಖ್ಯೆಯ ಮಹಿಳೆಯರು ಆಕೆಯ ಬೆಂಬಲಕ್ಕೆ ನಿಂತರು. ಬೇರೊಂದು ಧರ್ಮದ, ಬೇರೊಂದು ಜಗತ್ತಿನ ಹೆಣ್ಣು ಮಕ್ಕಳು ಆಕೆಯ ಚಿತ್ರವನ್ನು ಅಂಟಿಸಿದ ಭಿತ್ತಿ ಪತ್ರಗಳನ್ನು ಹಿಡಿದು ಆಕೆಯ ಪರವಾಗಿ ಘೋಷಣೆ ಕೂಗಿದರು. ಕೋರ್ಟ್ ನಲ್ಲಿ ಪಿಟಿಷನ್ ಕರೆಯಲಾಯಿತು ಹಾಗೂ ಸಾಮೂಹಿಕ ನಡಿಗೆಯ ಮೂಲಕ ತಾಲೂಕಿನ ತಹಸೀಲ್ದಾರ್ ಕಚೇರಿಗಳಲ್ಲಿ ಆಕೆಯ ಪರವಾಗಿ ನ್ಯಾಯ ದಾನ ಮಾಡಲು ಕೇಳಿಕೊಳ್ಳಲಾಯಿತು. ಆಕೆಯ ಹೆಸರಿನಲ್ಲಿ ಜಾತಾಗಳನ್ನು ಹಮ್ಮಿಕೊಳ್ಳಲಾಯಿತು. ಆಕೆಯ ಪರವಾಗಿ ನ್ಯಾಯದ ಹೋರಾಟ ನಡೆಯಿತು. ಮೊಟ್ಟ ಮೊದಲ ಬಾರಿ ತಿಂಗಳುಗಟ್ಟಲೆ ಏಕಾಂತ ವಾಸದ ನಂತರ ಕೂಡ ಶಾ ಬಾನು ತಾನು ಒಬ್ಬಂಟಿ ಎಂಬ ಭಾವವನ್ನು ತೊರೆದು ಹಾಕಲು ಜನರ ಈ ಸಂಘಟಿತ ಪ್ರಯತ್ನ ಕಾರಣವಾಯಿತು.
ಅದೊಮ್ಮೆ ತನ್ನನ್ನು ಭೇಟಿಯಾಗಲು ಬಂದ ವ್ಯಕ್ತಿಗೆ ಆಕೆ ಹೇಳಿದ್ದು ಹೀಗೆ ನಾನು ನನ್ನ ವೈಯುಕ್ತಿಕ ನ್ಯಾಯಕ್ಕಾಗಿ ಹೋರಾಡಲು ಕಾರಣ ನನಗೆ ಬೇರೆ ಯಾವುದೇ ಆಯ್ಕೆಗಳು ಇರಲಿಲ್ಲ… ಯಾವೊಬ್ಬ ವ್ಯಕ್ತಿಯು ಕೂಡ ಹೋರಾಟದಲ್ಲಿ ಹಿಂದೆ ಉಳಿಯಬಾರದು ಎಂಬ ಕಾರಣಕ್ಕಾಗಿ ಅವರೆಲ್ಲರೂ ಮಹಿಳೆಯಾದರೂ ಕೂಡ ನನ್ನನ್ನು ಬೆಂಬಲಿಸಿದರು…. ಉಳಿಯುವಿಕೆಗಾಗಿನ ನನ್ನ ಹೋರಾಟಕ್ಕಿಂತ, ನನ್ನ ಉಳಿಯುವಿಕೆಗಾಗಿ ಅವರು ಮಾಡಿದ ಹೋರಾಟ ದೊಡ್ಡದು ಎಂದು ಆಕೆ ಹೇಳಿದಳು.
ಧರ್ಮ, ಜಾತಿ, ರಾಜಕೀಯಗಳಿಂದ ವಿಭಾಗಿಸಲ್ಪಟ್ಟ ಭಾರತ ದೇಶದಲ್ಲಿ ಆಕೆಗೆ ಪರಿಚಯವೇ ಇಲ್ಲದ ಅಪರಿಚಿತ ಜನರ ಗುಂಪು ಮಾನವೀಯ ಪ್ರಜ್ಞೆಯಿಂದ
ಆಕೆಯ ರಕ್ಷಣೆಗಾಗಿ ಮಂಚೂಣಿಯಲ್ಲಿ ನಿಂತದ್ದು ಆಕೆಗೆ ಹೆಮ್ಮೆಯ ವಿಷಯವಾಗಿ ತೋರಿತು. ಅವರಾರೂ ಆಕೆಯ ರಕ್ತ ಹಂಚಿಕೊಂಡು ಹುಟ್ಟಿದ ಒಡಹುಟ್ಟಿದವರಲ್ಲ, ಆಕೆಯ ಭಾಷೆಯನ್ನು ಅರಿಯದವರು ಆಕೆಯ ಸಂಸ್ಕೃತಿಯ ಗಂಧ ದಾಳಿ ತಿಳಿಯದವರು ಹಾಗೂ ಆಕೆಯ ಪ್ರಾರ್ಥನೆಯ ಅರಿವನ್ನು ಹೊಂದಿರದ ಆದರೆ ಆಕೆಯ ಮೂಕವೇದನೆಯನ್ನು ಅತ್ಯಂತ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಲ್ಲ ಶಕ್ತಿ, ಸಾಮರ್ಥ್ಯಗಳು ಅವರಲ್ಲಿತ್ತು. ಕೆಲವೊಮ್ಮೆ ಯಾವುದೇ ಕಾನೂನಿಗೆ ಸಾಧ್ಯವಾಗದ ಅತ್ಯಂತ ಬಲವಾದ ಬಂಧವನ್ನು ಮಾನವೀಯ ಬಂಧನ ಉಂಟುಮಾಡುತ್ತದೆ ಎಂಬುದಕ್ಕೆ ಇದುವೇ ಸಾಕ್ಷಿ.
ತಾನಂದುಕೊಂಡ ರೀತಿಯಲ್ಲಿ ಶಾ ಬಾನು ಗೆಲ್ಲಲಿಲ್ಲ ನಿಜ ಕಠಿಣ ಕಾನೂನುಗಳು ಬದಲಾಗುವುದಿಲ್ಲ. ಆಕೆಯ ಸಾಮಾಜಿಕ ಗೆಲುವು ಮುಂದಿನ ದಿನಗಳಲ್ಲಿ ಮತ್ತೆ ಹಿಂತೆಗೆದುಕೊಳ್ಳಲಾಯಿತು… ಆದರೆ ಶಾಶ್ವತವಾಗಿ ಉಳಿದದ್ದು ಆಕೆ ಸೋಲದಂತೆ ಆಕೆಯ ವಾದವನ್ನು ಎತ್ತಿ ಹಿಡಿಯಲಾಗಿದ್ದು.
ಇಂದೋರ್ ನಂತಹ ಪುಟ್ಟ ಶಹರದಲ್ಲಿ ವಾಸಿಸುತ್ತಿರುವ ಓರ್ವ ವೃದ್ಧ ಹೆಣ್ಣು ಮಗಳು ತನ್ನ ಅಚಲ ವಿಶ್ವಾಸದಿಂದ ಇಡೀ ದೇಶದ ಕಾನೂನನ್ನು ಪ್ರಶ್ನಿಸಬಲ್ಲಳು ಎಂಬ ಸಂದೇಶ ಇಡೀ ಜಗತ್ತಿಗೆ ಸಾರಲ್ಪಟ್ಟಿತು. ಅದಷ್ಟೇ ಏಕೆ ? ಹುಟ್ಟಿ ಬೆಳೆದ ಆಕೆಯದ್ದೇ ಧರ್ಮದ ಸಮಾಜವು ಆಕೆಯನ್ನು ಮೌನವಾಗಿರಿಸಲು ಪ್ರಯತ್ನಿಸಿ ಆಕೆಯ ಮೇಲೆ ಒತ್ತಡವನ್ನು ಹೇರಿದರೂ ಕೂಡ ಇಡೀ ಜಗತ್ತಿನ ಮಹಿಳೆಯರು ಆಕೆಯ ಬೆಂಬಲಕ್ಕೆ ನಿಂತದ್ದು ಮಾನವೀಯ ಮೌಲ್ಯಗಳ ಪುನರುತ್ಥಾನಕ್ಕೆ ಕಾರಣವಾಯಿತು.
ಹಲವಾರು ವರ್ಷಗಳ ನಂತರ ಇಂದಿಗೂ ಕೂಡ ಆಕೆಯ ಕುರಿತು ತರಗತಿಯ ಕೋಣೆಗಳಲ್ಲಿ ನ್ಯಾಯಾಲಯದ ಚರ್ಚೆಗಳಲ್ಲಿ ಮಹಿಳೆಯರ ಹಕ್ಕುಗಳ ಕುರಿತಾದ ಸಭೆಗಳಲ್ಲಿ ಮಾತನಾಡಲಾಗುತ್ತದೆ.. ಇದಕ್ಕೆ ಕಾರಣ ಆಕೆ ಮಹಿಳೆಯರ ಹಕ್ಕುಗಳ ಕುರಿತಾಗಿ ಮಾತನಾಡಿದ್ದಲ್ಲ ಅದೆಷ್ಟೇ ತೊಂದರೆಯಾದರೂ ಕೂಡ ಒಬ್ಬಂಟಿಯಾಗಿ ನಿಂತು ಆಕೆ ಈ ಸಮಾಜವನ್ನು ಎದುರಿಸಿದ್ದು.
ರಾಜಕೀಯದ ಗಂಧ ಕೂಡ ಸೋಕದ ಇಂದೋರ್ ನ ಪುಟ್ಟ ಮನೆಯಲ್ಲಿ ಕುಳಿತಿದ್ದ ಆ ವೃದ್ಧ ಹೆಣ್ಣು ಮಗಳು
ತನ್ನ ಎರಡು ಕೈಗಳನ್ನು ಜೋಡಿಸಿ ಅತ್ಯಂತ ಸೌಮ್ಯವಾಗಿ ಹೇಳಿದ್ದಳು “ನ್ಯಾಯಾಲಯದಲ್ಲಿ ನಾನು ಸಂಪೂರ್ಣವಾಗಿ ಗೆಲುವನ್ನು ಸಾಧಿಸಿಲ್ಲ ನಿಜ ಆದರೆ ನಾನು ಸೋತಿಲ್ಲ ಕೂಡ ” ಎಂದು.
ನೋಡಿದಿರಾ ಸ್ನೇಹಿತರೆ, ಪ್ರತಿಯೊಂದು ನದಿಯು ತನ್ನ ಉಗಮದಲ್ಲಿ ಪುಟ್ಟ ಝರಿಯಾಗಿ ಇರುತ್ತದೆ. ಅಂತೆಯೇ ಪ್ರತಿ ಸೂರ್ಯೋದಯವೂ ಕೂಡ ಚಿಕ್ಕದೊಂದು ಕಿರಣದ ಹರಡುವಿಕೆಯಿಂದ ಆರಂಭವಾಗುತ್ತದೆ ಅಂತೆಯೇ ಪ್ರತಿಯೊಂದು ದೊಡ್ಡ ಹೋರಾಟಕ್ಕೆ ಚಿಕ್ಕದೊಂದು ನೋವಿನ, ಅಸಮಾನತೆಯ ಕುರಿತಾದ ಅಸಹಾಯಕ ಅತೃಪ್ತಿಯ ಕಿಡಿ ಕಾರಣವಾಗುತ್ತದೆ. ಇಂದಿಗೂ ಕೂಡ ನಮ್ಮ ಸಮಾಜದಲ್ಲಿ ಶಾ ಬಾನುವಿನಂತಹ ನೂರಾರು ಸಾವಿರಾರು ಜನರನ್ನು ನಾವು ಕಾಣುತ್ತಿದ್ದೇವೆ. ಒಂದಷ್ಟು ಪರಿಹಾರದ ಹಣವನ್ನು ನೀಡಿ ಕೈ ತೊಳೆಯುವ ಇಲ್ಲವೇ ಕೇಸನ್ನು ಮುಚ್ಚಿ ಹಾಕುವ ಮುನ್ನ ಸಾಮಾಜಿಕ ನ್ಯಾಯವನ್ನು ನಿರೀಕ್ಷಿಸುವ ಪ್ರತಿಯೊಬ್ಬರಿಗೂ ಅವರವರ ಧಾರ್ಮಿಕ, ಸಾಮಾಜಿಕ ನ್ಯಾಯಗಳು ದೊರೆಯಲೇಬೇಕು ಎಂಬ ಆಶಯದೊಂದಿಗೆ
ವೀಣಾ ಹೇಮಂತ್ ಗೌಡ ಪಾಟೀಲ್



