ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

                           ಕುದುರೆಗಳ್ಳನಿಗೆ ಮಣಿದ ಬೆಣ್ಣೆಗಳ್ಳ

ಅನುಸಾಲ್ವನೆಂಬವನು ಕುದುರೆಯನ್ನು ಹೊತ್ತೊಯ್ದದ್ದರ ಹಿಂದೆ ಇದ್ದುದು ಕೃಷ್ಣದ್ವೇಷ. ಈ ಮೊದಲು ಅನುಸಾಲ್ವನ ಅಣ್ಣ ಸಾಲ್ವನನ್ನು ಕೊಂದ ಶ್ರೀಕೃಷ್ಣ ಅವನ ಪೂರ್ಣ ಪುರವನ್ನು ನಾಶಪಡಿಸಿದ್ದ. ಪೂರ್ವವೈರವನ್ನೀಗ ಮುಂದಿಟ್ಟುಕೊಂಡ ಅನುಸಾಲ್ವ ಈಗ ಕುದುರೆಯನ್ನು ಹೊತ್ತೊಯ್ಯುವ ಮೂಲಕ ಶ್ರೀಕೃಷ್ಣನಿಗೆ ತಕ್ಕ ಪಾಠವನ್ನು ಕಲಿಸಲಿದ್ದೇನೆ ಎಂಬ ಭ್ರಮೆಯಲ್ಲಿದ್ದ. 

   ಹೋರಾಟಕ್ಕೆ ಸಕಲ ರೀತಿಯಲ್ಲಿಯೂ ಸನ್ನಾಹನಾಗಿಯೇ ಬಂದಿದ್ದ ಅನುಸಾಲ್ವ. ಗರುಡಾಕೃತಿಯಲ್ಲಿ ಮಹಾಸೇನೆಯನ್ನು ನಿಲ್ಲಿಸಿದ್ದ. ಹಾಗಿದ್ದ ಸೈನ್ಯದ ಮುಖಭಾಗದಲ್ಲಿ ಬಾಣದಂತಹ ಭಂಗಿಯಲ್ಲಿ ನಿಂತು ನಮ್ಮನ್ನು ಎದುರಿಸುವುದಕ್ಕೆ ಸಿದ್ಧನಾಗಿದ್ದ. ಆಪ್ತನಾಗಿದ್ದ ಸುಧಾರನಲ್ಲಿ ತನ್ನ ಮತ್ತು ಕೃಷ್ಣನ ಪೂರ್ವವೈರತ್ವವನ್ನು ಹೇಳಿಕೊಂಡ. ಬೆಣ್ಣೆಗಳ್ಳನ ಕೊಬ್ಬಿದ ಉದರಕ್ಕೆ ಸುಣ್ಣದ ನೀರನ್ನು ಸುರಿಸುತ್ತೇನೆ ಎಂಬ ಕೊಬ್ಬಿನ ಮಾತುಗಳನ್ನಾಡಿದ. ಸೇನೆ ಸದಾ ಸನ್ನದ್ಧವಾಗಿರಲಿ ಎಂಬ ಎಚ್ಚರಿಕೆಯ ಮಾತನ್ನು ಹೇಳಿದ. 

    ಅಷ್ಟಕ್ಕೇ ತೃಪ್ತನಾಗಲಿಲ್ಲ ಆತ. ಶ್ರೀಕೃಷ್ಣನನ್ನು ಕೆರಳಿಸಿ ಕದನಕ್ಕಿಳಿಸಿ ಕೊಂದುಹಾಕುವುದೇ ಅವನ ಗಮ್ಯವಾಗಿತ್ತು ಎನ್ನುವುದು ಸ್ಪಷ್ಟ. ತನ್ನ ಕಡೆಯ ಸೈನಿಕರಲ್ಲಿ ರಣೋತ್ಸಾಹ ತುಂಬುವ ಮಾತುಗಳನ್ನಾಡಿದ. “ಆ ಗೋವು ಕಾಯುವವನ ಜೊತೆಗೆ ಹೋರಾಡದವನು ನನ್ನ ಶತ್ರುವಿದ್ದಂತೆ. ಅವನೆದುರು ಯುದ್ಧಕ್ಕೆ ನಿಂತು ಶೌರ್ಯ ತೋರಿಸುವವರು ನನಗೆ ಆಪ್ತರು. ಹಿಂದೆ ನೀವೇನೇ ಅಪರಾಧ ಮಾಡಿರಿ, ಅದರ ಲೆಕ್ಕವಿಲ್ಲ. ಮುಂದೆ ಯಾವುದೇ ದ್ರೋಹ ಎಸಗಿರಿ, ಅದರ ಗಣನೆಯಿಲ್ಲ. ಅವನನ್ನು ಕೊಂದವರು ನೀವಾದರೆ ನೂರು ಗ್ರಾಮಗಳನ್ನು, ಆನೆ ಕುದುರೆ ಗೋಸಮೂಹಗಳನ್ನು, ಬಯಸಿದಷ್ಟು ಸಂಪತ್ತು, ಸುಖಿಸುವಷ್ಟು ಚೆಲುವೆಯರನ್ನು ನಿಮಗೆ ಕೊಡುತ್ತೇನೆ” ಎಂಬ ಘೋಷಣೆ ಹೊರಡಿಸಿದ. 

   ಅನುಸಾಲ್ವನ ಈ ಮಾತುಗಳನ್ನು ಸಂಪೂರ್ಣ ಸೇನಾವಲಯಕ್ಕೆ ತಲುಪಿಸಿದವನು ಅವನ ಆಪ್ತ ಸುಧಾರ. ಇದ್ದ ಸೈನಿಕರೆಲ್ಲಾ ಅನುಸಾಲ್ವ ಹೇಳಿದ್ದೆಲ್ಲವೂ ಮುಂದೆ ತಮಗೆ ಸಲ್ಲುವಂಥದ್ದೇ ಎಂಬ ಊಹೆಯಲ್ಲಿ ಜೋರಾಗಿ ಬೊಬ್ಬೆ ಹೊಡೆದರು. 

    ನಾವಿದ್ದ ಕಡೆಯಲ್ಲಿ ಅಂಜಿಕೆ, ಆತಂಕ, ಇನ್ನೇನಾಗುವುದೋ ಎಂಬ ಕಳವಳ ತುಂಬಿಕೊAಡಿತ್ತು. ಅನುಸಾಲ್ವ ಕುದುರೆಯನ್ನೆಳೆದ ರಭಸಕ್ಕೆ ಹೆಂಗಳೆಯರ ಸಮೂಹ ಚದುರಿಹೋಗಿತ್ತು. ಋಷಿಗಣ ಭೀತಿ ಹೊಂದಿತ್ತು. ಜನರು ತಲ್ಲಣಿಸಿಹೋಗಿದ್ದರು. 

    ಆಗಲೇ ಶ್ರೀಕೃಷ್ಣ ನಮ್ಮ ಕಡೆಯ ವೀರರಲ್ಲಿ ಯುದ್ಧದ ಆಸಕ್ತಿ ಮೊಳಕೆಯೊಡೆಯುವಂತಹ ಮಾತನ್ನಾಡಿದ. “ಅನುಸಾಲ್ವನನ್ನು ಗೆದ್ದು ಕುದುರೆಯನ್ನು ಬಿಡಿಸಿ ತರುವ ವೀರರಿದ್ದರೆ ಅಂಥವರು ನನ್ನ ಕೈಯ್ಯಿಂದ ರಣವೀಳ್ಯವನ್ನು ಪಡೆದುಕೊಳ್ಳಿ” ಎಂದ. 

    ಕೃಷ್ಣನ ಆಹ್ವಾನಕ್ಕೆ ಮನಗೊಟ್ಟು ಮೊದಲು ಮುಂದೆ ಬಂದವನು ಪ್ರದ್ಯುಮ್ನ. ಕೃಷ್ಣನ ಮಗ. ರಣವೀಳ್ಯವನ್ನು ತಂದೆಯ ಕೈಯ್ಯಿಂದ ಪಡೆದುಕೊಂಡವನು ಅವನ ಕಾಲಿಗೆ ನಮಸ್ಕರಿಸಿದ. ಪ್ರದ್ಯುಮ್ನನ ಹಿಂದೆಯೇ ಬಂದವನು ವೃಷಕೇತು. “ಯಾಗದ ಕುದುರೆಯನ್ನು ತಂದೊಪ್ಪಿಸದೇ ಇದ್ದರೆ ಬ್ರಹ್ಮಹತ್ಯೆ ಮಾಡಿದವನಿಗೆ ಎದುರಾಗುವ ಸ್ಥಿತಿಯದು ತನ್ನನ್ನು ಬಾಧಿಸಲಿ” ಎಂಬ ಧೈರ್ಯದ ಮಾತುಗಳನ್ನಾಡಿದ. ಈ ಬಗೆಯಲ್ಲಿ ಕೃಷ್ಣತನಯ ಮತ್ತು ಕರ್ಣತನಯರಿಬ್ಬರೂ ಅನುಸಾಲ್ವನ ಗಟ್ಟಿಯೆದೆಯನ್ನು ಮೆಟ್ಟಿನಿಲ್ಲುವ ನಿರ್ಧಾರ ಮಾಡಿದರು. 

    ಕುದುರೆ ಇಲ್ಲವಾದುದನ್ನು ಸಹಿಸದೆಯೇ ಶ್ರೀಕೃಷ್ಣನೇ ತನ್ನೆದುರು ಕದನಕ್ಕಿಳಿಯುತ್ತಾನೆ ಎಂಬ ನಿರೀಕ್ಷೆಯಲ್ಲಿದ್ದ ಅನುಸಾಲ್ವ. ಸಾಗಿಬರುತ್ತಿರುವ ರಥದೆಡೆಗೆ ದೃಷ್ಟಿ ಹಾಯಿಸಿದ. ಮತ್ಸ್ಯಧ್ವಜ ಗೋಚರವಾಯಿತು. ಹರಿರಥವದು ಗರುಡಧ್ವಜವನ್ನು ಹೊತ್ತು ಮೆರೆಯುತ್ತದೆ ಎನ್ನುವ ಅರಿವಿತ್ತು ಅವನಿಗೆ. ಮತ್ಸ್ಯಧ್ವಜವಿದ್ದ ರಥವನ್ನೇರಿ ಬರುತ್ತಿರುವವನು ಕೃಷ್ಣನ ಮಗ ಎನ್ನುವುದನ್ನು ತಿಳಿದುಕೊಳ್ಳುವುದಕ್ಕೆ ಅವನಿಗೆ ಹೆಚ್ಚೇನೂ ಸಮಯ ಬೇಕಾಗಲಿಲ್ಲ. 

    ಯುದ್ಧ ನಡೆಯಿತು. ಅನುಸಾಲ್ವ ಹೂಡಿದ ಹರಿತ ಬಾಣ ಹರಿಸುತನ ಎದೆಯ ಭಾಗಕ್ಕೆ ನಾಟಿತು. ಘಾಸಿಗೊಳಿಸಿತು. ಮೂರ್ಛೆಗೀಡುಮಾಡಿತು. ಸಾರಥಿ ರಥವನ್ನು ತ್ವರಿತದಲಿ ಓಡಿಸಿ ಶ್ರೀಕೃಷ್ಣನ ಬಳಿಯಲ್ಲಿ ತಂದು ನಿಲ್ಲಿಸಿದ. 

    ಆಗ ಶ್ರೀಕೃಷ್ಣ ತೋರಿದ ವರ್ತನೆ ಅಲ್ಲಿದ್ದ ಎಲ್ಲರನ್ನೂ ವಿಸ್ಮಯಗೊಳಿಸಿತು. ಮಗನನ್ನು ಉಪಚರಿಸಲಿಲ್ಲ. ಕನಿಕರಿಸಲಿಲ್ಲ. “ಪೌರುಷವಿಲ್ಲದವನೇ! ನಿನ್ನನ್ನೇನು ಮಾಡಲಿ!” ಎಂದು ಅಬ್ಬರಿಸುತ್ತಾ ಎಡಗಾಲ ತುದಿಯಲ್ಲಿ ತನಯನಿಗೆ ಬಲವಾಗಿ ಒದೆದ. “ದ್ವಾರಕೆಯ ಹೆಂಗಸರ ಮುಂದೆ ಹೋಗುವ ಯೋಗ್ಯತೆಯೂ ನಿನಗಿಲ್ಲ. ಅರಣ್ಯ ಸೇರಿ ಮುನಿಸಮೂಹದಲಿ ಒಂದಾಗುವ ಅರ್ಹತೆಯೂ ನಿನ್ನದಲ್ಲ. ನಿನ್ನನ್ನು ಯಾರೂ ಬಳಿ ಸೇರಿಸಿಕೊಳ್ಳಲಾರರು” ಎಂದು ಮಗನನ್ನು ಜರಿದ. 

    ಹಾಗೆ ತೆಗಳುವ ಮೂಲಕವೇ ಮಗನಲ್ಲಿ ರಣೋತ್ಸಾಹವನ್ನು ತುಂಬುವ ಯೋಚನೆ ಕೃಷ್ಣನಲ್ಲಿ ಇತ್ತೋ ಏನೋ! ಅಲ್ಲಿದ್ದವರಿಗೆಲ್ಲಾ ಕೃಷ್ಣನ ಆ ವರ್ತನೆ ಅಸಹಜವಾಗಿ ತೋರಿತು. ಅಹಂಕಾರ ಎಂದೆನಿಸಿತು. ದೈವತ್ವವನ್ನು ಕಳಚಿಕೊಂಡ ಮಾನವ ಸಾಮಾನ್ಯ ಗುಣವಿದು ಎನಿಸಿತು. 

    ಹೀಗೆ ಯುದ್ಧದ ಹಿನ್ನಡೆಗಾಗಿ ಮಗನನ್ನು ಬೈದ ಪರಮಾತ್ಮ ತಾನೇ ರಣರಂಗವನ್ನು ಹೊಕ್ಕ. ಅನುಸಾಲ್ವನಿಗೆದುರಾಗಿ ನಿಂದ. ಯುದ್ಧತಂತ್ರಗಳು ಮೊದಲ್ಗೊಂಡವು. ಅದೊಂದು ಗಳಿಗೆಯಲ್ಲಿ ಸಾಕ್ಷಾತ್ ಶ್ರೀಕೃಷ್ಣನೇ ಪ್ರಜ್ಞಾಶೂನ್ಯನಾದ. 

    “ಶೌರ್ಯದಿಂದ ಆಗ ಮಗನನ್ನು ಬೈದಿರಲ್ಲಾ! ಈಗ ಅನುಸಾಲ್ವನನ್ನು ಎದುರಿಸಲಾರದ ನಿಮ್ಮನ್ನು ಬೈಯ್ಯುವವರಾರು! ನಿಮ್ಮ ಪರಾಕ್ರಮಕ್ಕೆ ಸಮಾನರೆನಿಸುವವರು ಈ ಜಗತ್ತಿನಲ್ಲಿಯೇ ಯಾರೂ ಇಲ್ಲ ಬಿಡಿ” ಎಂದು ವ್ಯಂಗ್ಯದಿಂದ ಪತಿಪರಮಾತ್ಮನನ್ನು ಹಂಗಿಸಿದಳು ಸತ್ಯಭಾಮೆ. 

     ಶ್ರೀಕೃಷ್ಣನ ಈ ಬಗೆಯ ನೂತನ ಸ್ಥಿತಿ ಲೋಕಕ್ಕೆ ಹೊಸ ಸಂದೇಶ ಕೊಡುತ್ತಿರುವಂತೆ ತೋರಿತು. ಇನ್ನೊಬ್ಬರ ವೈಫಲ್ಯವನ್ನು ಟೀಕಿಸುವ ವ್ಯಕ್ತಿಯೇನೂ ವೈಫಲ್ಯಗಳಿಂದ ಹೊರತಾದವನಲ್ಲ. ಸೋತವನನ್ನು ಟೀಕಿಸುವ ಮೊದಲು ನಮಗೂ ಮುಂದೆ ಸೋಲು ಎದುರಾದೀತು ಎಂಬ ಮುನ್ನಂದಾಜು ನಮ್ಮಲ್ಲಿರಬೇಕು ಎಂಬ ಲೋಕಪಾಠವನ್ನು ಎಲ್ಲರೂ ಆ ಕ್ಷಣದಲ್ಲಿ ತಿಳಿಯುವಂತಾಯಿತು. 

    ಕೊನೆಗೆ ಅನುಸಾಲ್ವನನ್ನು ಸೋಲಿಸಿ ಕುದುರೆಯನ್ನು ಗೆದ್ದುಕೊಂಡು ಬಂದವನು ವೃಷಕೇತು. ಈ ಲೋಕವೇ ಹಾಗೆ. ಇಂದು ಶತ್ರುವಾಗಿದ್ದವನು ನಾಳೆ ಮಿತ್ರನಾದಾನು. ಲೋಕಚಕ್ರದ ಚಲನೆಗೆ ಎಲ್ಲವನ್ನೂ ಬದಲಾಯಿಸುವ ಶಕ್ತಿಯಿದೆ. ಒಂದು ಕಾಲಕ್ಕೆ ಕರ್ಣ ನಮ್ಮ ಪಾಲಿನ ಶತ್ರುವಾಗಿದ್ದವನು. ಆದರೆ ಅನುಸಾಲ್ವನಿಂದ ಕುದುರೆಯನ್ನು ಮರಳಿ ಪಡೆಯಲಾಗದ ಆ ಗಳಿಗೆಯಲ್ಲಿ ಕರ್ಣತನಯನೇ ನಮ್ಮ ಪಾಲಿನ ಆಪದ್ಬಾಂಧವನಾದ. 

    ಸೋಲನ್ನೊಪ್ಪಿಕೊಂಡ ಅನುಸಾಲ್ವನ ಶಿರ ಮಣಿದದ್ದು ಕೃಷ್ಣನ ಪಾದದೆಡೆಗೆ. ಸ್ತುತಿಸಲಿ ನಿಂದಿಸಲಿ, ಕೃಷ್ಣಕರುಣೆಯದು ಎನ್ನ ಕಡೆಗಿದೆ ಎಂಬ ವಿಶ್ವಾಸ ಆ ಅನುಸಾಲ್ವನ ಎದೆಯಲ್ಲಿತ್ತು. ನಿಂದನೆಯಿಂದಲೇ ದೇವನನ್ನು ಸ್ತುತಿಸುವ ಒಲಿಸುವ ಹೊಸತು ಬಗೆಯನ್ನು ಆ ಗಳಿಗೆಯಲಿ ತಿಳಿಸಿಕೊಟ್ಟವನು ಅನುಸಾಲ್ವ. ಅವನ ಹೃದಯದಲ್ಲಿದ್ದ ಕೃಷ್ಣಭಕ್ತಿ ದೇವ ಕೃಷ್ಣನನ್ನು ತಣಿಸಿತು, ಮಣಿಸಿತು.


About The Author

Leave a Reply

You cannot copy content of this page

Scroll to Top