ಗಾದೆ ಮಾತು-ʻಆನಿಗೆ ಆನಿ ಹೋಗತೈತಿ, ಬಾಲಕ್ಕೆ ಯಾಕೆ ಸ್ಯಾಣೇತನ?ʼ ಶರಣಪ್ಪ ತಳ್ಳಿ ಕುಪ್ಪಿಗುಡ್ಡ
ಗಾದೆ ಸಂಗಾತಿ ಗಾದೆ ವಿಶ್ಲೇಷಣೆ ಶರಣಪ್ಪ ತಳ್ಳಿ ಕುಪ್ಪಿಗುಡ್ಡ ʻಆನಿಗೆ ಆನಿ ಹೋಗತೈತಿ, ಬಾಲಕ್ಕೆ ಯಾಕೆ ಸ್ಯಾಣೇತನ?ʼ ಕನ್ನಡ ಜನಪದ ಸಾಹಿತ್ಯವು ಜೀವನದ ದೊಡ್ಡ ಸತ್ಯಗಳನ್ನು ಅತ್ಯಂತ ಸರಳ ರೂಪದಲ್ಲಿ ನಮಗೆ ಉಣಬಡಿಸುತ್ತದೆ. ಇಂತಹ ಮುತ್ತಿನಂತಹ ಗಾದೆಗಳಲ್ಲಿ “ಆನಿಗೆ ಆನಿ ಹೋಗತೈತಿ, ಬಾಲಕ್ಕೆ ಯಾಕೆ ಸ್ಯಾಣೇತನ” ಎಂಬುದು ಪ್ರಮುಖವಾದ ಮಾತು.ನಮ್ಮೆಲ್ಲರಿಗೂ ನಮ್ಮದೇ ಆದ ಒಂದು ಸ್ವಂತಿಕೆಯ ವ್ಯಕ್ತಿತ್ವವಿದೆ.ನಮ್ಮತನ ಎಂಬುದು ನಮ್ಮೊಳಗೆ ಅಡಗಿದ್ದರೂ ಸಹ ಅದನ್ನು ಸದ್ವಿನಿಯೋಗ ಮಾಡಿಕೊಳ್ಳಲಾಗದೆ,ನಾವು ನಾವೇ ಸಣ್ಣದಿರುವ ವಿಷಯವನ್ನು ಬಹು ಗಂಭೀರವಾಗಿ ತೆಗೆದುಕೊಂಡು ಎಲ್ಲೋ ಕಳೆದು ಹೋದೆವು ಎಂದು ಗೋಳಾಡಿಬಿಡುತ್ತೇವೆ.ನಮ್ಮಂತೆ ಪ್ರಾಣಿಗಳು ಬದುಕುತ್ತವೆಯೆ?ಅದಕ್ಕೆ ಎರಡು ಮಾತಿಲ್ಲ.,ಹಠವಿಲ್ಲ,ಭರದಲ್ಲಿ ಬದುಕಬೇಕೆಂಬುದಿಲ್ಲ,ಉಲ್ಟಾ ಪಲ್ಟಾ ಮಾಡಬೇಕೆಂಬುದಿಲ್ಲ,ಎಲ್ಲಾ ಪ್ರಾಣಿಗಳಿಗಿಂತ ಭಿನ್ನವಾಗಿ ಬಾಳಬೇಕೆಂಬುದಿಲ್ಲ.ಅದರ ಇಚ್ಛಾಶಕ್ತಿ ಏನೆಂದರೆ ಹೊಟ್ಟೆ ತುಂಬಿಸಿಕೊಳ್ಳುವುದು ಮಾತ್ರವಾಗಿದೆ.ಹೊಟ್ಟೆ ತುಂಬಿದರೆ ಸಾಕು ಮಲಗುವುದೆ ಅದರ ಕೆಲಸ.ಆದರೆ ಈ ಮನುಷ್ಯರಾದ ನಾವುಗಳು ಪರಿವರ್ತನೆಯನ್ನು ಮರೆತು, ಎಂಥ ಕೆಲಸ ಮಾಡಿಬಿಟ್ಟರು?,ಅದೇಕೆ ಹಾಗೆ ಅವರು ಮಾಡಬೇಕಿತ್ತು?, ಮನೆತನವೆ ಹಾಳು ಮಾಡಲು ಅನ್ಯಾಯ ಮಾಡಿದರು?;ಹೀಗೆಲ್ಲಾ ಬೈದಾಡಿ,ರೇಗಾಡಿಬಿಡುತ್ತೇವೆ.ಅವರ ತಪ್ಪಲ್ಲ.ಮೇಲ್ನೋಟಕ್ಕೆ ಕೆಲವು ನಿರ್ಧಾರಗಳು ನಮಗೆ ಹಾಗೆ ಕಾಣುವುದು ಸತ್ಯ.ಆದರೆ ನಿಜವಾದ ಸಂಗತಿ ಹಾಗಿರುವುದಿಲ್ಲ.ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಕೆಲವೊಮ್ಮೆ ಕೆಲ ಕಹಿ ನಿರ್ಧಾರಗಳನ್ನು ತೆಗೆದುಕೊಂಡು ಬಿಡುತ್ತೇವೆ.ಈ ಗಾದೆಯ ಮಾತಿನಂತೆ,ಇಲ್ಲಿ ‘ಆನಿ’ ಎಂದರೆ ಆನೆ ಅಥವಾ ದೊಡ್ಡ ವಸ್ತು.ಬಹುದೊಡ್ಡದಾದ ಮೊತ್ತ ಎಂದರ್ಥ. ಈ ಗಾದೆಯು ಮನುಷ್ಯನ ಜಿಪುಣತನ, ಆದ್ಯತೆಗಳ ತಪ್ಪು ನಿರ್ಧಾರ ಮತ್ತು ವಿವೇಕಹೀನತೆಯನ್ನು ಮಾರ್ಮಿಕವಾಗಿ ಟೀಕಿಸುತ್ತದೆ. ಒಬ್ಬ ವ್ಯಕ್ತಿ ಸಾವಿರಾರು ರೂಪಾಯಿ ಬೆಲೆಬಾಳುವ ಆನೆಯನ್ನೇ ಕಳೆದುಕೊಂಡಾಗ ಅಥವಾ ತನ್ನ ಮನಸಾರೆ ದಾನ ಮಾಡುತನಕ ಸುಮ್ಮನಿದ್ದು, ಕೇವಲ ಒಂದು ಪುಕ್ಕಟೆ ಸಿಗುವ ಅದರ ಕೊರಳಿಗೆ ಕಟ್ಟಿದ ಗಂಟೆಗೆ ಕ್ಯಾತೆ ತೆಗೆಯುತ್ತಾನೆ ಎಂದರೆ ಆತನು ಧರ್ಮದಿಂದ ದಾನ ಮಾಡಿಲ್ಲ. ಅಥವಾ ಅತ್ಯಂತ ಕಡಿಮೆ ಬೆಲೆಯ ಆನೆಯ ‘ಬಾಲ’ದ ವಿಷಯಕ್ಕೆ ಬಂದಾಗ ಜಾಣತನ (ಸ್ಯಾಣೇತನ) ಪ್ರದರ್ಶಿಸುವುದು ಅಥವಾ ಲೆಕ್ಕಾಚಾರ ಮಾಡುವುದು ಎಷ್ಟು ಮೂರ್ಖತನ ಎಂಬುದು ಇದರ ನೇರ ಅರ್ಥ. ಅಂದರೆ, ದೊಡ್ಡ ನಷ್ಟ ಅಥವಾ ದೊಡ್ಡ ನಿರ್ಧಾರಗಳ ಮುಂದೆ ಕ್ಷುಲ್ಲಕ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳುವುದು ವ್ಯರ್ಥ. ಹಣಕಾಸು ಮತ್ತು ವ್ಯವಹಾರದ ವಿಷಯ ಬಂದಾಗನಾವು ಜೀವನದಲ್ಲಿ ಲಕ್ಷಾಂತರ ರೂಪಾಯಿಗಳನ್ನು ಐಷಾರಾಮಿ ವಸ್ತುಗಳಿಗೆ ಅಥವಾ ಅನಗತ್ಯ ಖರ್ಚುಗಳಿಗೆ ಲಕ್ಕವಿಲ್ಲದಂತೆ ಸುರಿಯುತ್ತೇವೆ. ಆದರೆ ಹಲವು ಬಡ ವ್ಯಾಪಾರಿಗಳು ಮನೆ ಮುಂದೆ ತರಕಾರಿ ಮಾರುವವರ ಜೊತೆ, ಹಣ್ಣು ಹಂಪಲು ಮಾರುವವರ ಬಳಿ ತಕರಾರು,ಆಟಿಕೆ ಸಾಮಾನು ಮಾರುವವರ ಜೊತೆ ಒಂದು,ಎರಡು ರೂಪಾಯಿಗಳಿಗೆ ಚೌಕಾಸಿ ಮಾಡುತ್ತೇವೆ. ಆನೆಯಂತಹ ದೊಡ್ಡ ಖರ್ಚನ್ನು ಒಪ್ಪಿಕೊಂಡ ಮೇಲೆ, ಬಾಲದಂತಹ ಸಣ್ಣ ಮೊತ್ತಕ್ಕೆ ಜಾಣತನ ತೋರಿಸುವುದು ನಮ್ಮ ವ್ಯಕ್ತಿತ್ವದ ಸಣ್ಣತನವನ್ನು ತೋರಿಸುತ್ತದೆ. ದೊಡ್ಡ ಗುರಿಯನ್ನು ಹೊಂದಿದವರು ಸಣ್ಣಪುಟ್ಟ ನಷ್ಟಗಳಿಗೆ ಕುಗ್ಗಬಾರದು.ಸಂಬಂಧ ಮತ್ತು ಜೀವನದ ಮೌಲ್ಯಗಳಲ್ಲೂ ನಮ್ಮ ಮನಸ್ಸು ಹಾಗೆನೆ.ಒಂದು ಸುಂದರವಾದ ಸಂಬಂಧವನ್ನು ಉಳಿಸಿಕೊಳ್ಳಲು ನಾವು ಎಷ್ಟೋ ತ್ಯಾಗಗಳನ್ನು ಮಾಡಿರುತ್ತೇವೆ (ಇದು ಆನೆಯನ್ನು ಕೊಟ್ಟಂತೆ). ಆದರೆ, ಯಾವುದೋ ಒಂದು ಸಣ್ಣ ತಪ್ಪು ಅಥವಾ ಒಂದು ಮಾತಿನ ವಿಷಯಕ್ಕೆ ಜಗಳವಾಡಿ ಆ ಸಂಬಂಧವನ್ನೇ ಮುರಿದುಕೊಳ್ಳುತ್ತೇವೆ (ಇದು ಬಾಲಕ್ಕೆ ಜಾಣತನ ತೋರಿಸಿದಂತೆ). ಇಡೀ ಆನೆಯೇ ಹೋದ ಮೇಲೆ ಬಾಲದ ಬಗ್ಗೆ ಹಠ ಹಿಡಿಯುವುದು ಸಂಬಂಧಗಳಲ್ಲಿ ಬಿರುಕು ತರುತ್ತದೆ ಎಂಬುದ ಅರಿವಿಗೆ ಬರಬೇಕು.ಸಮಯ ಮತ್ತು ಶ್ರಮದ ಪ್ರತಿಫಲದಲ್ಲೂ ಅಷ್ಟೆ.ಯಾರೋ..ಬಡವರು ಬೆಳಿಗ್ಗೆಯಿಂದ ಸಂಜೆಯವರೆಗೆ ಹೊಟ್ಟೆಪಾಡಿಗಾಗಿ ಕೆಲಸ ಮಾಡಿರುತ್ತಾರೆ.ಅಂತವರಿಗೆ ತಕ್ಕ ಪ್ರತಿಫಲ ನೀಡುವುದಿಲ್ಲ.ಆದರೆ ಯಾರೋ ಇನ್ನೊಬ್ಬ ಗರ್ಧಿಗಮ್ಮತ್ತಿನಿಂದ, ಜಾಣತನದಿಂದ ಮಾತಾಡಿ ಅರ್ಧಗಂಟೆಯ ಕೆಲಸ ಮಾಡಿದರೆ ಹೆಚ್ಚು ಹಣ ನೀಡಿ ಬಿಡುತ್ತಾರೆ. ಜಿಪುಣತನ ಇರಬಾರದು ಅಂತಲ್ಲ.ಇರಬೇಕು ನಿಜ.ಎಷ್ಟಿರಬಾರದೆಂದರೆ ದೀನತೆಯನ್ನು ಮರೆತು ಹೋಗುವಷ್ಟಿರಬಾರದು.ಒಂದು ದೊಡ್ಡ ಕೆಲಸವನ್ನು ಮಾಡುವಾಗ ಅಥವಾ ಸಾಧನೆಯ ಹಾದಿಯಲ್ಲಿರುವಾಗ ನಮಗೆ ದೊಡ್ಡ ಸವಾಲುಗಳು ಎದುರಾಗುವುದು ಸರ್ವೆ ಸಾಮಾನ್ಯ.ಆ ಸವಾಲುಗಳನ್ನು ಎದುರಿಸಿ ಗೆದ್ದ ನಂತರ, ತೀರಾ ಸಣ್ಣ ವಿಷಯಗಳಲ್ಲಿ ಸೋಲು ಒಪ್ಪಿಕೊಳ್ಳುವುದು ಅಥವಾ ಅಲ್ಲಿ ಜಿಪುಣತನ ತೋರುವುದು ಸರಿಯಲ್ಲ. ಮನೆ ಕಟ್ಟಲು ಲಕ್ಷಾಂತರ ಹಣ ಖರ್ಚು ಮಾಡಿ,ಗೃಹ ಪ್ರವೇಶದ ದಿನ ಉಂಡ ಎಲೆಗಳ ತೆಗೆದು,ಅಂಗಳದಲ್ಲಿ ಚೆಲ್ಲಿದ ಅನ್ನವನ್ನು ಬಳಿದು ಹಾಕುವವರ ಜೊತೆ ಅಷ್ಟೇ ತಗೊ…ಇಷ್ಟೆ ತಗೋ..ಎನ್ನಬಾರದು. ಕೇವಲ ಕೆಲವು ರೂಪಾಯಿಗಳ ಉಳಿತಾಯಕ್ಕಾಗಿ ಅವರನ್ನು ಬೈದಾಡುವುದು ಸಭ್ಯತೆಯಾಗಲಾರದು.ಶುಭವಾಗಲಿ ಎನ್ನದೆ ಹಾಳಾಗಿ ಹೋಗು ಎಂದು ಬೈದು ಹೋಗುತ್ತಾರಷ್ಟೆ.ಇವತ್ತಿನ ದಿನ ನಾವು ದೃಶ್ಯ ಮಾಧ್ಯಮಗಳಲ್ಲಿ,ಸಾಮಾಜಿಕ ಜಾಲತಾಣದಲ್ಲಿ,ಕಣ್ಣೆದುರಿನ ಸಮಾಜದಲ್ಲಿ ನಿತ್ಯವೂ ನೋಡುತ್ತೇವೆ, ದೊಡ್ಡ ದೊಡ್ಡ ಹಗರಣಗಳು ರಾಜಕೀಯದಲ್ಲಿ ನಡೆದಾಗ ಮೌನವಾಗಿರುವ ವ್ಯವಸ್ಥೆ, ಒಬ್ಬ ಸಣ್ಣ ನೌಕರ ಸಾಮಾನ್ಯ ಮನುಷ್ಯ ಸಣ್ಣ ತಪ್ಪು ಮಾಡಿದಾಗ ಕಾನೂನಿನ ಎಲ್ಲಾ ಪಟ್ಟುಗಳನ್ನು ಬಳಸಿ ಆತನನ್ನು ಶಿಕ್ಷಿಸಲು ಇವತ್ತು ಮೋಬೈಲ್ ನಲ್ಲಿ ದೃಶ್ಯವನ್ನು ಸೆರೆಹಿಡಿದು ಅಧಿಕಾರಿಗಳಿಗೆ ತೋರಿಸಿ ಆತನಿಗೆ ಶೀಕ್ಷೆ ಕೊಡಿಸಲು ಮುಂದಾಗುತ್ತಾರೆ.ಆದರೆ ಅಧಿಕಾರಿ ದೊಡ್ಡ ಹಡಗವನ್ನೆ ನುಂಗಿದ್ದು ಗೊತ್ತಾಗುವುದಿಲ್ಲ.ಇದು ಇವತ್ತಿನ ನಮ್ಮ ವ್ಯವಸ್ಥೆ. “ಆನೆ ಹೋದರೂ ಪರವಾಗಿಲ್ಲ, ಬಾಲ ಮಾತ್ರ ಸಿಗಬೇಕು” ಎನ್ನುವ ವಿಪರ್ಯಾಸದಂತಿದೆ. ನಮ್ಮ ಜಾಣತನವು ದೊಡ್ಡ ಬದಲಾವಣೆಗಳಿಗೆ ಬಳಕೆಯಾಗಬೇಕೇ ಹೊರತು, ಸಣ್ಣತನದ ಪ್ರದರ್ಶನಕ್ಕಲ್ಲ.”ಸಣ್ಣ ವಿಷಯಗಳ ಬಗ್ಗೆ ಅತಿಯಾಗಿ ಯೋಚಿಸುವವರು ದೊಡ್ಡ ವಿಷಯಗಳಲ್ಲಿ ಸೋಲುತ್ತಾರೆ.” ಆನೆಯನ್ನು ನಿರ್ವಹಿಸುವ ಶಕ್ತಿ ಇರುವವನಿಗೆ ಬಾಲದ ಬಗ್ಗೆ ಚಿಂತೆ ಇರಬಾರದು. ನಮ್ಮ ಬದುಕು ಉದಾತ್ತವಾಗಿರಬೇಕು. ದೊಡ್ಡ ಗುರಿಯನ್ನು ತಲುಪುವ ಹಾದಿಯಲ್ಲಿ ಸಣ್ಣಪುಟ್ಟ ಅಡೆತಡೆಗಳು ಅಥವಾ ನಷ್ಟಗಳು ಸಹಜ. ಅವುಗಳನ್ನು ನಿರ್ಲಕ್ಷಿಸಿ ಮುಂದೆ ಸಾಗುವುದೇ ನಿಜವಾದ ‘ಸ್ಯಾಣೇತನ’ (ಜಾಣತನ).ಕೇವಲ ಲಾಭ-ನಷ್ಟದ ಲೆಕ್ಕಾಚಾರದಲ್ಲಿ ಬಾಲಕ್ಕೆ ಗಂಟು ಬೀಳುವ ಬದಲು, ಆನೆಯಂತಹ ವಿಶಾಲ ಮನೋಭಾವವನ್ನು ಬೆಳೆಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ಶರಣಪ್ಪ ತಳ್ಳಿ ಕುಪ್ಪಿಗುಡ್ಡ
ಗಾದೆ ಮಾತು-ʻಆನಿಗೆ ಆನಿ ಹೋಗತೈತಿ, ಬಾಲಕ್ಕೆ ಯಾಕೆ ಸ್ಯಾಣೇತನ?ʼ ಶರಣಪ್ಪ ತಳ್ಳಿ ಕುಪ್ಪಿಗುಡ್ಡ Read Post »


