ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

“ಒಂದು ಸದಭಿರುಚಿಯ ಚಿತ್ರ – ಡಿ.ಎನ್.ಎ.” ಪ್ರಶಾಂತ್‌ ಬೆಳತೂರು

ಸಿನಿ ಸಂಗಾತಿ ಪ್ರಶಾಂತ್‌ ಬೆಳತೂರು ಮನುಷ್ಯನ ಭಾವಂತಃಕರಣದ ಸಹಜ ತೊಳಲಾಟಗಳ ಒಂದು ಸದಭಿರುಚಿಯ ಚಿತ್ರ – ಡಿ.ಎನ್.ಎ. ಇತ್ತೀಚಿನ ಮುಕ್ಕಾಲು ಪಾಲು ತಳಬುಡವಿಲ್ಲದ ಕನ್ನಡ ಸಿನಿಮಾಗಳನ್ನು ಕಂಡು ಬೇಸತ್ತು ತಮಿಳು ಮತ್ತು ಮಲಯಾಳಂ ಚಿತ್ರಗಳನ್ನು ಆಗಾಗ್ಗೆ ಬಿಡುವಿನ ವೇಳೆಯಲ್ಲಿ ನೋಡುತ್ತಿದ್ದ ನಾನು ಆರಂಭದಲ್ಲಿ ಈ ಡಿ.ಎನ್.ಎ. ಚಿತ್ರಗಳ ಪೋಸ್ಟರ್ ಅನ್ನು ಹಾಗೂ ಇದರ ಯುಟ್ಯೂಬ್ ವಿಡಿಯೋ ಲಿಂಕ್ ಅನ್ನು ನೋಡಿಯು ನೋಡದಂತೆ ನಿರ್ಲಕ್ಷ್ಯ ವಹಿಸಿದ್ದೆ. ತೀರಾ ಇತ್ತೀಚೆಗೆ ತಮಿಳಿನಲ್ಲೂ ಹಾಗೂ ಮಲಯಾಳಂನಲ್ಲೂ ಇದೇ ಡಿಎನ್ಎ ಹೆಸರಿನ ಚಿತ್ರಗಳು ಬಂದಿದ್ದರಿಂದ ಪ್ರಾಯಶಃ ಇದರ ಕಥಾಹಂದರವೂ ಇದೇ ಇರಬೇಕೆಂಬ ನನ್ನ ಪೂರ್ವಾಗ್ರಹ ಪೀಡಿತ ತಿಳವಳಿಕೆಯಿಂದಾಗಿ ಈ ಚಿತ್ರದ ಕಡೆ ಒಂದು ದಿವ್ಯ ನಿರ್ಲಕ್ಷ್ಯ ವಹಿಸಿಬಿಟ್ಟಿದೆ. ಆದರೆ ಸ್ವತಃ ಇದರ ನಿರ್ದೇಶಕರಾದ ಪ್ರಕಾಶ್ ರಾಜ್ ಮೇಹು ಅವರು ನಿನ್ನೆ ತಮ್ಮ ಡಿಎನ್ಎ ಚಿತ್ರದಯೂಟ್ಯೂಬ್ ಲಿಂಕ್ ಅನ್ನು ಕಳುಹಿಸಿದ್ದರಿಂದ ಕುತೂಹಲಗೊಂಡು ಅದನ್ನು ತೆರೆದು ಚಿತ್ರವನ್ನು ನೋಡಲು ಶುರು ಮಾಡಿದೆ.ನೀನಾಸಂ ಸತೀಶ್ ಮತ್ತು ಯೋಗರಾಜ್ ಭಟ್ ಅವರ ಹಾಡಿನ ಧ್ವನಿಯ ಹಿನ್ನೆಲೆಯಲ್ಲಿನ ಸಾಹಿತ್ಯವನ್ನು ಅರ್ಥೈಸುತ್ತಾ ಇದರ ಕಥಾ ತಿರುಳನ್ನು ಕ್ರಿಯಾಶೀಲ ನಿರ್ದೇಶಕನೊಬ್ಬ ಹೇಗೆ ಆರಂಭದಲ್ಲಿ ನೋಡುಗನಿಗೆ ತನ್ನ ಕತೆಯ ಅಂತ್ಯವನ್ನು ಸುಲಭವಾಗಿ ಬಿಟ್ಟು ಕೊಡದೆ ಸೂಕ್ಷ್ಮವಾಗಿ ಹೇಳುವ ರೀತಿ ನನ್ನೊಳಗೆ ಆಸಕ್ತಿ ಹುಟ್ಟಿಸಿತು.! ಡಿಎನ್ಎ ಎಂದರೆ ಇಲ್ಲಿ  ಡಿಯೋಕ್ಸಿರೈಬೋ ನ್ಯೂಕ್ಲಿಕ್ ಆಮ್ಲವೆಂಬ ನಮ್ಮ ಸಾಮಾನ್ಯ ವಿಜ್ಞಾನದ ತಿಳವಳಿಕೆಗಳನ್ನು ಬದಿಗೊತ್ತಿ  ಒಡೆದು ಹಾಕುವ ಕತೆಗಾರ ಧ್ರುವ, ನಕ್ಷತ್ರ, ಆಕಾಶಗಳೆಂಬ ತನ್ನ ಕತೆಯ ಪಾತ್ರಗಳನ್ನು ಹಾರಲು ಬಿಡುವ ಮೂಲಕ ಪ್ರೇಕ್ಷಕನನ್ನು ಭದ್ರವಾಗಿ ಹಿಡಿದಿಕೊಳ್ಳುತ್ತಾನೆ ಎಂದು ಅನಿಸದೆ ಇರದು. ಕತೆಯ ಎಳೆ ಮೇಲ್ನೋಟಕ್ಕೆ ತೀರಾ ಸಾಧಾರಣವೆನ್ನುವಂತೆ ಕಂಡರೂ ಭಾವಂತಃಕರಣದ ತೊಳಲಾಟದ ಗಾಳಗಳಲ್ಲಿ ಸಿಲುಕಿಕೊಳ್ಳುವ ಎರಡು ಅಪರಿಚಿತ ವಿಭಿನ್ನ ಕುಟುಂಬಗಳ ಪರಿಚಯವನ್ನು ತೋರಿಸಲು ಒಂದು ಸಿದ್ದ ಮಾದರಿಯನ್ನು ಎಲ್ಲೂ ಬೇಸರವಾಗದಂತೆ ತೋರಿಸಿರುವ ನಿರ್ದೇಶಕರ ಕಲಾತ್ಮಕತೆ ವಿಶಿಷ್ಟವೆನಿಸುತ್ತದೆ.ಎಲ್ಲೂ ಜಾತಿಯ ಹೆಸರನ್ನು ಬಳಸದೆ ಹೆಸರುಗಳ ಸೂಚಕಗಳಿಂದಲೇ ಒಂದು ಶುದ್ಧ ಬ್ರಾಹ್ಮಣ ಕುಟುಂಬ ಮತ್ತೊಂದು ಶೂದ್ರ ಗೌಡರ ಕುಟುಂಬ ಎಂಬ ಅರಿವನ್ನು ಪ್ರೇಕ್ಷಕನಿಗೆ ಸುಲಭದಲ್ಲಿ ದಾಟಿಸಿಬಿಡುವ ಪ್ರಯತ್ನದಲ್ಲಿ ನಿರ್ದೇಶಕನ ಹೆಚ್ಚುಗಾರಿಕೆ ಕಾಣುತ್ತದೆ. ಆರು ವರ್ಷಗಳ ನಂತರ ಮಗು ಅದಲು ಬದಲಾದ ವಿಷಯವನ್ನು ಪ್ರಸ್ತಾಪಿಸುತ್ತಾ ಬೆಂಗಳೂರಿನ ಸಿಟಿ ಆಸ್ಪತ್ರೆಯೊಂದಕ್ಕೆ ಹೆಂಡತಿಯೊಡನೆ ಭಾವಾವೇಶದಿಂದ ಕಾಲಿರಿಸುವ ಪ್ರಶಾಂತ್ ಗೌಡನ ಪಾತ್ರದ ಮೂಲಕ ಕಾಣಿಸಿಕೊಳ್ಳುವ ಅಚ್ಯುತ್ ಕುಮಾರ್ ಅವರ ನಟನೆ ಮನೋಜ್ಞವಾಗಿದೆ. ಪ್ರಾಯಶಃ ಈ ಸಿನಿಮಾ ಒಬ್ಬ ವೀಕ್ಷಕನಿಗೆ ತೀರಾ ಗಂಭೀರವಾಗಿ ಅವನೆದುರು ತೆರೆದುಕೊಳ್ಳುವುದು ಇಲ್ಲಿಯೇ.! ಮನುಷ್ಯನ ಭಾವಂತಃಕರಣದ ಸಹಜ ತೊಳಲಾಟಗಳು ಗಟ್ಟಿ ಸಂಭಾಷಣೆಯ ಮೂಲಕ ಭಾವಗಳ ಲೋಕದಲ್ಲಿ ವಿಹರಿಸುತ್ತಾ ಹೋಗುತ್ತದೆ. ದೇವನೂರು ಮಹಾದೇವ ಅವರ ಕುಸುಮಬಾಲೆಯ ಸಂಬಂಜ ಅನ್ನದು ದೊಡ್ಡದು ಕನಾ ಎಂಬ ಮಾತುಗಳ ತತ್ವದಲ್ಲಿಯೇ ಕತೆಗಾರ ಈ ಕತೆಯನ್ನು ವಿಶಿಷ್ಟ ರೂಪದಲ್ಲಿ ಹೆಣೆಯಲು ಪ್ರಯತ್ನಿಸಿದ್ದಾನೆ ಎಂದು ಎನಿಸಿತು.ಕರುಳಿನ ರಕ್ತ ಸಂಬಂಧ ಮತ್ತು ಒಂದು ಪರಿಸರದಲ್ಲಿ ಹುಟ್ಟಿ ಬೆಳೆವಾಗ ಅದು ಬೆಳೆಸಿಕೊಳ್ಳುವ ಭಾವ ಸಂಬಂಧಗಳನ್ನು ಮುಖಾಮುಖಿಯಾಗಿಸುವ ಕತೆಗಾರ ಮನುಷ್ಯನ ಬದುಕಿನ ತತ್ವಗಳ ಮೂಲವನ್ನು ಓರೆಗೆ ಹಚ್ಚುತ್ತಾನೆ. ನದಿಯ ಹುಟ್ಟು ಮುಖ್ಯವೋ? ಅಥವಾ ಅದು ಎಲ್ಲಿಗೆ ಸೇರುತ್ತದೆ ಎನ್ನುವುದು ಮುಖ್ಯವೋ? ಎಂಬ ಸಹಜ ಪ್ರಶ್ನೆಗಳು ಎದುರಾದಾಗ ದ್ವಂದ್ವಗಳು ಸಹಜವಾಗಿ ಮನುಷ್ಯನೊಳಗೆ ಬೆಳೆಯುತ್ತಾ ಹೋಗುತ್ತದೆ. ಹರಿಯುವ ನದಿಗೆ ಅಡ್ಡಲಾಗಿ ಅಣೆಕಟ್ಟೆಯನ್ನು ಕಟ್ಟಬಹುದು, ಅದರ ದಿಕ್ಕನ್ನು ಬದಲಿಸಬಹುದು ಆದರೆ ಆ ನೀರಿನ ಗುಣವನ್ನು ಬದಲಿಸಿಲಾದಿತೇ? ಎಂಬ  ತರ್ಕಬದ್ಧವಾದ ಪ್ರಶ್ನೆಯನ್ನು ಕರುಳಿನೊಂದಿಗಿನ ಭಾವಸಂಬಂಧಗಳನ್ನು ಎದುರುಬದುರಾಗಿಸಿ ತಾಕಲಾಟಕ್ಕೆ ದೂಡಿಕೊಳ್ಳುವ ತಂದೆ- ತಾಯಿ ಹಾಗೂ ಮಕ್ಕಳ ಭಾವಗಳನ್ನು ಬದುಕಿನ ದ್ವಂದ್ವಗಳ ತೊಯ್ದಾಟದಲ್ಲಿ ಅಷ್ಟು ಪಾತ್ರಗಳನ್ನು ಅಚ್ಚುಕಟ್ಟಾಗಿ ಅದರಲ್ಲಿ ಮಿಂದೇಳಿಸಿದ್ದಾರೆ.ಹಾಗೆಯೇ  ಅಲ್ಲಲ್ಲಿ ನಿರ್ದೇಶಕ ತಮ್ಮ ನೆಚ್ಚಿನ ನಟರಾದ ರಾಜಕುಮಾರರ ಪ್ರಸಿದ್ಧ ಸಿನಿಮಾ ಸಂಭಾಷಣೆಗಳನ್ನು ಭಾವಾಭಿನಯಗಳನ್ನು ಮೂಲ ಕತೆಗೆ ಚ್ಯುತಿಯಾಗದಂತೆ ಹಾಸ್ಯ ರೂಪದಲ್ಲಿ ನವಿರಾಗಿ ಬೆರೆಸಿರುವುದು ಕೂಡ ನೋಡುಗನಿಗೆ ಇಷ್ಟವಾಗುತ್ತದೆ.ಚಿತ್ರದ ಕೊನೆಯ ಹಂತಕ್ಕೆ ಕುಸುಮಬಾಲೆಯ ಆರಂಭದಲ್ಲಿ ಬರುವ  ಅಲ್ಲಮ ಪ್ರಭುವಿನ  ವಚನದ  ಸಮುದ್ರದೊಳಗಣ ಉಪ್ಪಿಗೂ ಬೆಟ್ಟದ ನೆಲ್ಲಿಕಾಯಿಗೂ , ಗುಹೇಶ್ವರ ಲಿಂಗಕ್ಕೂ ಮತ್ತು ತನಗೂ ಎತ್ತಣಿಂದೆತ್ತ ಸಂಬಂಧವಯ್ಯಾ ಎಂಬ ಭಾವ ತಂತುಗಳನ್ನು ಮೀಟುತ್ತಲೇ ಕರುಳ ಸಂಬಂಧವನ್ನು ಮೀರಿ ಬೆಳೆಯುವ ಮಗುವೊಂದು ಕುವೆಂಪು ಅವರ ವಿಶ್ವಮಾನವ ರೂಪ ತಾಳುವಲ್ಲಿಗೆ ಬಂದು ನಿಲ್ಲುತ್ತದೆ..! ಇದು ನಿಜವಾದ ಸೃಜನಶೀಲ ನಿರ್ದೇಶಕನೊಬ್ಬನ ಕಲಾತ್ಮಕತೆಯ ಜೊತೆಗೆ ಆತನ ಸೈದ್ಧಾಂತಿಕ ಬದ್ಧತೆಯ ಮಾನವೀಯ ನಿಲುವುಗಳನ್ನು ಚಿತ್ರವೊಂದರಲ್ಲಿ ಹೇಗೆ ಸಾಮಾನ್ಯರಿಗೆ ಮನಮುಟ್ಟುವಂತೆ ಕಟ್ಟಬಹುದು ಎಂಬುದಕ್ಕೆ ಈ ಚಿತ್ರ ಖಂಡಿತ ಸಾಕ್ಷಿಯಾಗಿದೆ.! ಒಟ್ಟಿನಲ್ಲಿ ತುಂಬಾ ವರ್ಷಗಳ ನಂತರ ಕನ್ನಡದಲ್ಲಿ ನಾನು ಹೀಗೊಂದು ಅರ್ಥಪೂರ್ಣ ಕಲಾತ್ಮಕ ಚಿತ್ರವನ್ನು ನೋಡಿದ ಖುಷಿಯಂತೂ ನನ್ನ ಪಾಲಾಯಿತು..! ಮೂರು ವರ್ಷಗಳ ಹಿಂದೆಯೇ ಇಂತಹ ಚಿತ್ರವೊಂದು ಬಿಡುಗಡೆಗೊಂಡರು ನಾನು ನೋಡದೆ ಹೋದೆನಲ್ಲ ಎಂಬ ಕಸಿವಿಸಿಯು ಕೂಡ ಮನಸಿನೊಳಗೆ ಮೂಡಿತು..! ಕನ್ನಡದಲ್ಲಿ ದುನಿಯಾ ಸೂರಿಯ ನಿರ್ದೇಶನವೆಂದರೆ ಒಂದಷ್ಟು ಥಿಯೇಟರಿನತ್ತ ಹೆಜ್ಜೆ ಹಾಕುವ ಮನಸು ಮಾಡುತ್ತಿದ್ದ ನಾನು ಇನ್ಮುಂದೆಪ್ರಕಾಶ್ ರಾಜ್ ಮೇಹು  ಅವರ ಮುಂದಿನ ನಿರ್ದೇಶನಗಳ ಸಿನಿಮಾಗಳಿಗಾಗಿಯೂ ಕುತೂಹಲದಿಂದ ಕಾದು ನೋಡಬಹುದು ಎಂದೆನಿಸಿದ್ದು ಮಾತ್ರ ಸುಳ್ಳಲ್ಲ..! ಒಂದೊಳ್ಳೆಯ ಸದಭಿರುಚಿಯನ್ನು ನೋಡಲು ಕಾರಣವಾದ ಪ್ರಕಾಶ್ ರಾಜ್ ಮೇಹು ಅವರಿಗೆ ಈ ಮೂಲಕ ನನ್ನ ಪ್ರೀತಿಪೂರ್ವಕ ಧನ್ಯವಾದಗಳು..! ಅವರಿಂದ ಮತ್ತಷ್ಟು ಒಳ್ಳೆಯ ಕಲಾತ್ಮಕತೆಯ ಚಿತ್ರದ ಜೊತೆ‌ ಜೊತೆಗೆ ಕನ್ನಡದ ನೆಲಕ್ಕೆ ಒಗ್ಗುವಂತೆ ಹದವಾಗಿ ಬೆರೆತ ಕಮರ್ಷಿಯಲ್ ಹಿಟ್ ಸಿನಿಮಾಗಳ ಕತಾ ಪ್ರಯೋಗಗಳನ್ನು ಕೂಡ ಅವರು ಯಶಸ್ವಿಯಾಗಿ ಮಾಡುವಂತಾಗಲೆಂದು ಪ್ರೀತಿಯಿಂದ ಹಾರೈಸುವೆ ಪ್ರಶಾಂತ್‌ ಬೆಳತೂರು

“ಒಂದು ಸದಭಿರುಚಿಯ ಚಿತ್ರ – ಡಿ.ಎನ್.ಎ.” ಪ್ರಶಾಂತ್‌ ಬೆಳತೂರು Read Post »

ಕಾವ್ಯಯಾನ

ಶಂಕರ್ ಪಡಂಗ ಕಿಲ್ಪಾಡಿ “ಮುಟ್ಟಿದರೆ ಮುನಿ”

ಕಾವ್ಯ ಸಂಗಾತಿ ಶಂಕರ್ ಪಡಂಗ ಕಿಲ್ಪಾಡಿ “ಮುಟ್ಟಿದರೆ ಮುನಿ” ಮುಟ್ಟಿದರೆ ಮುನಿಯಾರು ಹೆಸರ ಇಟ್ಟರುನಿನಗೆ  ,ಲಜ್ಜಾವತಿಯಲ್ಲವೆ ನೀನು?ಹೆಜ್ಜೆ ಸಪ್ಪಳಕೆ ನಾಚುತ್ತಾಮುದುಡುವ ನೀನುಲಜ್ಜಾವತಿ ಎಂದರೆತಪ್ಪೇನು…?ಮುಂಜಾನೆಯ ರವಿಕಿರಣಕ್ಕೆ ಹೊಳೆಯುವನಿನ್ನ ಹೂವಿನಂದವನೋಡುವುದೇ ಸೊಗಸು ,ಸುಗಂಧ ಇಲ್ಲದಿದ್ದರೂಚೆಲುವಿಗಿಲ್ಲ ಬರ ,ಆದರೂ ದೇವರಮುಡಿಗೇರಲಿಲ್ಲ ,ಮಾನಿನಿಯರೂ ದೂರಬಲು ದೂರ ,ಯಾಕಿಷ್ಟು ಕೋಪ ನಿನ್ನಲ್ಲಿ  ?ನೀರು,ಗೊಬ್ಬರ ನೀಡದಿದ್ದರೂನೀ ಬೆಳೆವೆ ಹುಲುಸಾಗಿಯಾರ ಹಂಗಿಲ್ಲದೆ ,ಮದ್ದಿನರಮನೆ ನೀನುಕಿತ್ತೊಗೆಯುವರುಉಪಕಾರ ಸ್ಮರಣೆಇಲ್ಲದ ಜನರು,ನಿನ್ನ ನಿಜಗುಣವಮರೆತಿಹರು ಎಪ್ಟಾದರೂತಾಮಸಿಗರಲ್ಲವೇ..? ಶಂಕರ್ ಪಡಂಗ ಕಿಲ್ಪಾಡಿ

ಶಂಕರ್ ಪಡಂಗ ಕಿಲ್ಪಾಡಿ “ಮುಟ್ಟಿದರೆ ಮುನಿ” Read Post »

ಕಾವ್ಯಯಾನ

ಮಧುಮಾಲತಿ ರುದ್ರೇಶ್ ಕವಿತೆ ಅಕ್ಷರ ಮಾತೆ

ಕಾವ್ಯ ಸಂಗಾತಿ ಮಧುಮಾಲತಿ ರುದ್ರೇಶ್ ಕವಿತೆ ಅಕ್ಷರ ಮಾತೆ ಅಕ್ಷರದವ್ವ ನೀವು ಮಾತೆ ಸಾವಿತ್ರಿಬಾಯಿˌˌˌಎಲೆ ಮರೆಯ ಗಿಣಿಯಂತಿದ್ದ ತ್ಯಾಗಮಯಿˌˌ ನಿನ್ನ ಸೇವೆಗೆ ಸಾಟಿ ಬೇರಿಲ್ಲ ಯಾರು ˌˌˌಬೇಡುವೆವು ನಿನಗೆ ಬರಲಿ ಜನ್ಮ ನೂರುˌˌ ಬಾಲೆಯರ ಶಿಕ್ಷಣದ ಆಶಾಜ್ಯೋತಿ ನೀವುˌˌˌಅಕ್ಷರದ ದೀಪ ಬೆಳಗಿದಿರಿ ಸಮಾಜದಿ ತಾವುˌˌ ಮೌಢ್ಯತೆಯ ಮೆಟ್ಟಿನಿಂತ ಧೀಮಂತ ನಾರಿˌˌˌಸಹಿಸಿದಿರಿ ನೂರೆಂಟು ಅಪಮಾನದ ದಳ್ಳುರಿˌˌˌ ಹೆಣ್ಣುಮಕ್ಕಳ ಶಿಕ್ಷಣಕ್ಕೆ ನಾಂದಿ ಹಾಡಿದಿರಿ ಅಂದುˌˌˌನೀವು ಹೊತ್ತಿಸಿದ ಹಣತೆಗೆ ತೈಲವೆರೆವೆವು ಇಂದುˌˌ ಪತಿ ಫುಲೆಯ ಪ್ರೋತ್ಸಾಹವೇ ನಿಮ್ಮ ಶಕ್ತಿಯುˌˌˌಆದರ್ಶ ಶಿಕ್ಷಕಿ ನಿಮ್ಮ ಜೀವನವೆ ಸ್ಫೂರ್ತಿಯುˌˌˌ ನಿಮ್ಮ ನಿಸ್ವಾರ್ಥ ಸೇವೆಗೆ ಲೋಕವೇ ಬೆರಗುˌˌಧನ್ಯತಾಭಾವ “ಪ್ರಥಮ ಶಿಕ್ಷಕಿ” ಎಂಬ ಬಿರುದಿಗೂˌˌˌˌ ನಿಮ್ಮ ಪಡೆದ ಭಾರತಾಂಬೆ ತಾನೆಂದೂ ಮಾನ್ಯಳುˌˌಅಮರವೇ ಎಂದಿಗೂ ನಿಮ್ಮ ಆದರ್ಶಗಳುˌˌˌ ———– ಮಧುಮಾಲತಿ ರುದ್ರೇಶ್

ಮಧುಮಾಲತಿ ರುದ್ರೇಶ್ ಕವಿತೆ ಅಕ್ಷರ ಮಾತೆ Read Post »

You cannot copy content of this page

Scroll to Top