ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

”  ಕ್ಯೂಗೆ ನುಗ್ಗಿ ಬಂದು ಸೇರಿಕೊಳ್ಳುತ್ತಾರಲ್ಲಯ್ಯ..? ನೀನು ನೋಡಿಕೊಂಡು ಸುಮ್ಮನಿದ್ದರೆ ಹೇಗೆ? “
” ಅಲ್ಲ ಸರ್… “
” ಏನು ಅಲ್ಲ ? ಯೂನಿಫಾರಂ ಬ್ಯಾಡ್ಜ್ ಎಲ್ಲಾ ಹಾಕ್ಕೊಂಡು, ಕೋಲು ಹಿಡ್ಕೊಂಡು, ಏನ್ ಕತ್ತೆ ಕಾಯೋದಕ್ಕಾ ನಿಂತಿದ್ದೀ? ಕ್ಯೂ ಮೈನ್ಟೈನ್ ಮಾಡಕ್ಕಾಗಲ್ವಾ ?  “
” ಹೌದು ನಿಮ್ಮಂಥ ಕತ್ತೆ ಕಾಯೋಕೆ ನಾನು ನಿಂತಿರೋದು ಏನೀಗ? “
” ದೇವಸ್ಥಾನದಲ್ಲಿ ಜನರನ್ನ ಕಾಯೋದಕ್ಕೆ ನಿಂತವನಿಗೂ ಏನ್ ಪೊಗರು? “
” ಸರ್ .. ಪೊಗರು  – ಗಿಗರು ಅಂತೆಲ್ಲ ಮಾತಾಡ್ಬೇಡಿ. ವರ್ಷಕ್ಕೆ ಒಂದೆರಡು ಸಲ ಬಂದು ಇಲ್ಲಿ ಕ್ಯೂ ನಿಲ್ಲುವ ನಿಮಗೇ ಇಷ್ಟು ಕಷ್ಟ ಆಗುತ್ತೆ… ಇನ್ನು ನಾವು…. ವರ್ಷಪೂರ್ತಿ ಈ ಕೆಲಸ ಮಾಡ್ಬೇಕು,  ನಿಮ್ಮಂಥವರಿಂದ ಉಗುಸ್ಕೊಬೇಕು.. ನಮ್ಮ ಕಷ್ಟ ಎಷ್ಟಿರಬೇಡ?  ಅಷ್ಟಕ್ಕೂ  ಅವ್ರು ನನ್ನ ಪರ್ಮಿಷನ್ ಕೇಳಿ ಕ್ಯೂ ನಿಂದ ಆಚೆ ಹೋಗಿ ತಿರುಗಿ ಬಂದವರು “
” ಎಷ್ಟು ಮಾತಾಡ್ತೀಯಾ? ಬಾಯಿ ಮುಚ್ಚು “
” ನೀವೇ ಆ ಕೆಲಸ ಮಾಡಿ ನಿಮ್ಮಂಥವರನ್ನು ಪ್ರತಿದಿನ ಸಾಕಷ್ಟು ನೋಡ್ತಾ ಇರ್ತೇನೆ “

 ದೇವರ ದರ್ಶನಕ್ಕೆಂದು ಸಾಲಿನಲ್ಲಿ ನಿಂತಿದ್ದ ವ್ಯಕ್ತಿ ಮತ್ತು ಭಕ್ತಾದಿಗಳನ್ನು ಸಾಲಾಗಿ ದೇವರ ದರ್ಶನಕ್ಕೆ ಕಳುಹಿಸುತ್ತಿದ್ದವನ ನಡುವೆ ನಡೆದ ಮಾತಿನ ಚಕಮಕಿ ಇದು! ನಾಲ್ಕೈದು ಸಾಲುಗಳಲ್ಲಿ ಇದ್ದ ಅಷ್ಟೂ ಭಕ್ತಾದಿಗಳಿಗೆ  ಕಿರಿಕಿರಿ ಉಂಟುಮಾಡಿದ ಪ್ರಸಂಗವದು. ಯಾರ ಸಮಾಧಾನದ ಮಾತುಗಳಿಗೂ ಅವರ ಜಗಳ ಜಗ್ಗಲಿಲ್ಲ. ಕೊನೆಗೆ  ದೇವರ ದರ್ಶನಕ್ಕೆಂದು ಬಂದಿದ್ದ ಆ ವ್ಯಕ್ತಿ ತನ್ನ ಮನೆ ಮಂದಿಯನ್ನು ಎಳೆದುಕೊಂಡು ಬ್ಯಾರಿಕೇಡರ್ ಹತ್ತಿ ಇಳಿದು ದರ್ಶನಕ್ಕೆ ಹೋಗುವ ಕ್ಯೂನಿಂದ ಆಚೆ ಹೋಗಿಯೇ ಬಿಟ್ಟರು. ಒಂದು ರೀತಿಯಲ್ಲಿ ಅವರು ಅಲ್ಲಿಂದ ಹೋಗಿದ್ದೇ ಒಳ್ಳೆಯದಾಯಿತು. ಏಕೆಂದರೆ ಕೋಪದಿಂದ ಕುದಿಯುತ್ತಿದ್ದ ಆ ವ್ಯಕ್ತಿ ದೇವರ ಎದುರು ನಿಂತರೂ ಯಾವ ಮನಸ್ಥಿತಿಯಿಂದ ಪ್ರಾರ್ಥನೆ ಮಾಡಬಹುದು?  ಕೋಪ ಶಮನ ಮಾಡಿಕೊಂಡು ದರ್ಶನ ಪಡೆಯುವುದೇ ಒಳಿತು ಎಂದು ಅತ್ತ ಹೋದರೋ  ಏನೋ!!  ಒಟ್ಟಿನಲ್ಲಿ ಅವರು ಅತ್ತ ಹೋದ ಮೇಲೆ ವಾತಾವರಣ ಶಾಂತವಾಯಿತು.

 ಕ್ರಿಸ್ಮಸ್ ರಜೆಯಲ್ಲಿ  ಕರ್ನಾಟಕದ ಒಂದು ಪ್ರಸಿದ್ದ ಧಾರ್ಮಿಕ ಕ್ಷೇತ್ರಕ್ಕ ಹೋಗಿದ್ದಾಗ   ದೇವರ ದರ್ಶನಕ್ಕೆಂದು ನಿಂತಿದ್ದ ಸಂದರ್ಭದಲ್ಲಿ  ನನ್ನನ್ನೂ ಒಳಗೊಂಡಂತೆ  ಸರದಿಯಲ್ಲಿ ನಿಂತಿದ್ದ  ಭಕ್ತಾದಿಗಳ  ಗಮನ ಸೆಳೆದ ಜಗಳವದು. ದೇವರ ದರ್ಶನಕ್ಕೆಂದು ಯಾವ ಯಾವುದೋ ಊರಿನಿಂದ ಎಷ್ಟೋ ದೂರ ಪಯಣ ಬೆಳೆಸಿ ಹೋಗುತ್ತೇವೆ. ಅಲ್ಲಿ ಚಿಕ್ಕಪುಟ್ಟ ವಿಷಯಕ್ಕೆ ಸಹನೆ  ಸಂಯಮ ಕಳೆದುಕೊಂಡು ರೇಗಾಡಿ ದೇವಾಲಯದ ಸಾತ್ವಿಕ ವಾತಾವರಣವನ್ನು ಹದಗೆಡಿಸುತ್ತೇವೆ. ಅಲ್ಲಿ ಕ್ಯೂನಲ್ಲಿ ನಿಂತಿದ್ದ  ನಾರಿ  ಆಚೆ ಹೋಗಿ ಪುನಹ ಬರುವ ಅವಶ್ಯಕತೆ ಇರಲಿಲ್ಲ. ಅಥವಾ ನಿಂತಿದ್ದ ವ್ಯಕ್ತಿ ಅಷ್ಟೊಂದು ಕೀಳು ಮಟ್ಟದಲ್ಲಿ ಮಾತನಾಡುವ ಅಗತ್ಯ ಇರಲಿಲ್ಲ. ಕೆಲವೊಂದು ದೇವಸ್ಥಾನಗಳಲ್ಲಿ ಒಮ್ಮೆ ಲೈನ್ನಿಂದ ಆಚೆ ಹೋದರೆ ಮತ್ತೆ ಒಳಗೆ ಸೇರಿಸುವುದಿಲ್ಲ ಎಂದೇ ಹೇಳಿಬಿಡುತ್ತಾರೆ.  ಇಂತಹ ಜಗಳಗಳು ಆಗದಿರಲು ಅಂಥ ಕಟ್ಟು ನಿಟ್ಟಿನ  ಕ್ರಮವೇ ಸರಿ ಅನಿಸುತ್ತದೆ. ಇಂಥ ಸಂದರ್ಭಗಳಲ್ಲಿ  ಸರಿ ಯಾವುದು,ತಪ್ಪುಯಾವುದು ಎನ್ನುವ ಯೋಚನೆಗಳಿಗಿಂತಲೂ ಮುಖ್ಯವಾಗುವುದು  ನಾವು ಎಲ್ಲಿ ನಿಂತಿದ್ದೇವೆ? ನಿಂತಿರುವ ಉದ್ದೇಶ ಏನು? ಎಂಬುದು. ನಮ್ಮ ಜೊತೆ ಜೊತೆಯಲ್ಲಿ ಸಾಗುವವರಿಗೆ  ನಮ್ಮಿಂದ ಕಿರಿಕಿರಿ ಆಗಬಾರದು ಎಂಬ ಸಾಮಾನ್ಯ ಜ್ಞಾನ . ಆ ಸಂಯಮ ಇಲ್ಲದೇ ಹೋದರೆ ” ಇಲ್ಲಿಂದಲೇ ಕೈಮುಗಿವೆ ಅಲ್ಲಿಂದಲೇ ಹರಸು” ಎನ್ನುತ್ತಾ ಮನೆಯಲ್ಲೇ ಪ್ರಾರ್ಥನೆ ಮಾಡಬಹುದಲ್ಲವೇ ? ದೇವಸ್ಥಾನ ಎಂದ ಮೇಲೆ ಭಕ್ತರು ಪಾಲಿಸಲೇಬೇಕಾದ ಕೆಲವು ನಿಯಮಗಳಿರುತ್ತವೆ. ಆ ವಾತಾವರಣದ ಧನಾತ್ಮಕ ಅಂಶಗಳನ್ನು ಕಾಯ್ದುಕೊಳ್ಳಬೇಕಾದ ಜವಾಬ್ದಾರಿ ಭಕ್ತಾದಿಗಳಿಗಿದೆ. ಚಿತ್ತವನ್ನು ದೇವರತ್ತ ನೆಲೆಗೊಳಿಸಲು ಪ್ರಶಾಂತ ವಾತಾವರಣ ಬೇಕಲ್ಲವೇ? ದೇಗುಲದ ಪಾವಿತ್ರಕ್ಕೆ ಅಡ್ಡಿ ಬರುವಂತಹ  ಅಲ್ಲಿನ ಶಾಂತ ವಾತಾವರಣವನ್ನು ಅಶಾಂತ ಗೊಳಿಸುವ ಯಾವ ಕೆಲಸಗಳನ್ನು ನಾವು ಮಾಡಿದರೂ ನಮಗೆ ದೇವರ ಕೃಪಾಶೀರ್ವಾದ ದೊರೆಯದು. ” ಇಲ್ಲಿ ಭಾವಚಿತ್ರಗಳನ್ನು ತೆಗೆಯಕೂಡದು ” ಎಂಬ ನಾಮ ಫಲಕವಿದ್ದರೂ  ಕೆಲವರು ಅಲ್ಲಿನ ಮೇಲುಸ್ತುವಾರಿ ಮಾಡುವವರ ಜೊತೆ ಕಿತ್ತಾಟ ನಡೆಸಿ ಅಲ್ಲಿಯೇ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ. ‘ ಮೌನ  ವಹಿಸಿ ‘ ಎಂಬ ಬರಹದ ಬಳಿಯೇ ನಿಂತು ಜೋರಾಗಿ ತಿರುಚಾಡುತ್ತಾರೆ. ” ತೀರ್ಥ ಸ್ವೀಕಾರ ಮಾಡಲು ಸಾಲಿನಲ್ಲಿ ಶಿಸ್ತುಬದ್ಧವಾಗಿ ನಿಲ್ಲುವುದನ್ನು ಬಿಟ್ಟು ಎಲ್ಲರೂ  ಅರ್ಚಕರ ಮುಂದೆ ಒಟ್ರಾಸಿ ಕೈ ಚಾಚುವುದು,  ತಮ್ಮ ಕೈಗೆ ತೀರ್ಥ ಸಿಗುವುದು ಸ್ವಲ್ಪ ವಿಳಂಬ ಆದರೆ ಸಾಕು, ” ಇಲ್ಲಿ ಹಾಕಿ ” ಎಂದು ಜೋರಾಗಿ ಹೇಳುವುದು, ದೇವರ ಪ್ರಸಾದಕ್ಕೆ ಸಾಲಾಗಿ ಬನ್ನಿ”  ಎಂದರೆ  ಅಲ್ಲಿಯೂ ನೂಕುನುಗ್ಗ ಲು.. ದೇವಾಲಯದ ಆವರಣದ ಮೂರ್ತಿಗಳನ್ನು ಮುಟ್ಟಕೂಡದು ಎಂದರೆ  ಆ ಮೂರ್ತಿಗಳಿಗೆಲ್ಲ ಅರಿಶಿನ ಕುಂಕುಮ ಹಚ್ಚುವುದು. ಗಂಧ ಅಂಟಿಸಿ  ಇಡುವುದು.. ದೇವಸ್ಥಾನದ ಮೆಟ್ಟಿಲುಗಳ ಮೇಲೆಲ್ಲಾ ದೀಪ   ಹಚ್ಚಿ ಇಡುವುದು, ದೇವಸ್ಥಾನದ ಸರಳುಗಳಿಗೆ  ದಾರ ಕಟ್ಟಿ ಇಡುವುದು ಇತ್ಯಾದಿ ಅವಿಧೇಯ ವರ್ತನೆಗಳನ್ನು  ಮಾಡುವುದರಿಂದ , ಆಶಿಸ್ತಿನ ನಡವಳಿಕೆಗಳನ್ನು ತೋರುವುದರಿಂದ  ತಾನೇ ಅಲ್ಲಿ ಕೆಲಸ ಕಾರ್ಯನಿರ್ವಹಿಸುವವರು ಕೂಡ ನಮ್ಮ ಮೇಲೆ ರೇಗುವುದು? ಅವರಾದರೂ  ಎಷ್ಟು ಅಂತ ಸಹಿಸಿಯಾರು? ಯಾವ ಸ್ಥಳವೇ ಆಗಲಿ  ಅಲ್ಲಿನ ನೀತಿ ನಿಯಮಗಳನ್ನು  ಪಾಲಿಸುವುದರಲ್ಲಿಯೇ ನಮ್ಮ ವ್ಯಕಿತ್ವದ ಹಿರಿಮೆ ಇದೆ. ಶಿಸ್ತು ಪಾಲನೆ ಮತ್ತು ಸಂಯಮದ ವರ್ತನೆ  ನಮ್ಮದಾದಾಗ   ನಮ್ಮೊಳಗೂ  ಹೊರಗೂ ಶಾಂತಿ ನೆಲೆಸಲು ಸಾಧ್ಯ.ಆ ಪ್ರಬುದ್ಧತೆ ನಮ್ಮಲ್ಲಿರಲಿ.


About The Author

Leave a Reply

You cannot copy content of this page

Scroll to Top