ಕಾವ್ಯ ಸಂಗಾತಿ
ಮೀನಾಕ್ಷಿ ಪಾಟೀಲ
“ಅವಳಿಲ್ಲದ ಊರಲ್ಲಿ”


ಅವಳಿಲ್ಲದ ಊರಲ್ಲಿ
ತಂಗಾಳಿ ಬಿಸಿಯಾಗಿ
ಬೆಂದು ಹೋಗಿದೆ ಜೀವ
ಅವಳಿಲ್ಲದ ಊರಲ್ಲಿ
ಬೆಳದಿಂಗಳು ಬಿಸಿಲಾಗಿ
ಚಂದ್ರನೇ ಬೆವರಿದ
ಅವಳಿಲ್ಲದ ಊರಲ್ಲಿ
ನೆನಪು ಮರುಕಳಿಸಿ
ಊರಲಾರದೆ ಹೆಜ್ಜೆ ಭಾರವಾಗಿದೆ
ಅವಳಿಲ್ಲದ ಊರಲ್ಲಿ
ಸುತ್ತಲೂ ಕಡೆಗಣ್ಣು
ಹುಡುಕಾಡಿದೆ ಮನ ಅವಳ ನೆರಳನ್ನು
ಅವಳಿಲ್ಲದ ಊರಲ್ಲಿ
ನಿದ್ದೆ ಕಾಣದು ಜೀವ
ಕನಸಿನಲ್ಲಿ ಅವಳದೇ ಚೆಲುವು
ಅವಳಿಲ್ಲದ ಊರಲ್ಲಿ
ಗೂಡು ಕಟ್ಟಿವೆ ಕನಸುಗಳು
ಹೇಳಲು ಬಾರದೆ ನಡುಗಿವೆ ತುಟಿಯಂಚುಗಳು
ಅವಳಿಲ್ಲದ ಊರಲ್ಲಿ
ನೋವಿನ ಬಿರುಗಾಳಿಗೆ
ನಲುಗಿದೆ ಅವಳು ನೆಟ್ಟ ಗುಲಾಬಿ
ಅವಳಿಲ್ಲದ ಊರಲ್ಲಿ
ನಿಟ್ಟುಸಿರೊಂದು ಹಾಡಾಗಿ
ಮಗುವಿನ ಕಿರುನಗೆಯೊಂದು ಸುಳಿದಿದೆ ಮೊಗದಿ
ಮೀನಾಕ್ಷಿ ಪಾಟೀಲ



