ಕಾವ್ಯ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
“ನಮ್ಮ ಹಳ್ಳಿ”

ಊರ ಮುಂದಿನ ತ್ವಾಟ ಐತಿ ಬಾಳ ಮಾಟ
ಬರ್ತೀ ಏನ ನೀ ಊಟಕ್ಕ//ಪ//
ನೀ ಬರ್ತೀ ಅಂದ್ರ ಸಜ್ಜಿ ರೊಟ್ಟಿ
ಹಿಟ್ಟಿನ ಚಕ್ಳಿ ಶೇಂಗಾ ಗುರೆಳ್ಳು ಚಟ್ನಿ
ಹುಳಿಬಾಣ ಮಾದೇಲಿ ಮಾಡಿ
ಬುತ್ತಿ ಕಟ್ಟಿಕೊಂಡ ಬರ್ತೀನಿ
ತೋಪ್ ಸೆರಿಗಿನ ಕಡ್ಡಿ ಸೀರಿ ಉಟ್ಕೊಂಡ
ಗಾಡಿ ನತ್ತ ಇಟ್ಕೊಂಡ ಬರ್ತೀನಿ//
ಎತ್ತಿಗೆ ಸಿಂಗಾರ ಮಾಡ್ಕೊಂಡ
ಕೊರಳಿಗೆ ಹುರಿಗೆಜ್ಜೆ ಕಟ್ಟಿ
ಬಂಡಿಗೆ ಕೊಲಾರಿ ಕಟ್ಟಿಕೊಂಡ
ಸಜ್ಜ ಮಾಡಿಕೊಂಡ ಬಿಡ
ಹೊತ್ತಾರೆ ಎದ್ದ ಹೋಗೋಣ
ಉಂಡ ತಿಂದ ಸುತ್ತಾಡಿ ಬರೋಣ //
ನನ್ನವ್ವನ ಹೊಲದಾಗ ಏನಿಲ್ಲ ಏನ ಐತಿ
ಕೇಳ್ತಿ ಏನ ನೀ ಕಿವಿಗೊಟ್ಟ
ಎಳೆನೀರ ಬೇಕಾದ ಹಣ್ಣ ಹಂಪಲ
ಗೋದಿ ಕಡ್ಲಿ ಹುಣಸಿ ಮಾವು
ಉಳ್ಳಾಗಡ್ಡಿ ಮೆಂತ್ಯೆ ಮೂಲಂಗಿ
ನೆರಳಿಗೆ ಕೊಂಡ್ರಾಕ ಅಲ್ಲಲ್ಲಿ ಬೇವಿನ ಗಿಡ//
ಬಾಜು ಜುಳು ಜುಳು ಹರಿಯೋ ಹಳ್ಳ
ಮೂಲಿಗೊಂದ ಭಾವಿ ಸುತ್ತೆಲ್ಲಾ ಬೇಲಿ
ಹೋಗಾಕೈತಿ ಎನ್ ಹೆಚ್ ಫೋರ್ ರಸ್ತಾ
ನಮ್ಮೂರಾಗ ಏನ ಕೊಂಡ್ರು ಸಸ್ತಾ
ಎಲ್ಲಾ ಮಸ್ತ್ ಮಸ್ತ್ ಹಂಗಂತ
ಬಾಳ ಸುತ್ತಿ ಆಗಬ್ಯಾಡ ನೀ ಸುಸ್ತ//
ಗಾಣಿಗ್ಯಾರ ಹೊಲ್ದಾಗ ಸಿಹಿ ಕಬ್ಬ
ಹಳಬರ ಹೊಲ್ದಾಗ ಪ್ಯಾರಲ ಹಣ್ಣ
ಮತ್ತಿಕೊಪ್ಪದಾರಲ್ಲೇ ಸವಿಜೇನ ಐತಿ
ಸಾವಕಾರ ಹೊಲ್ದಾಗ ನೋರೊಂದ ದಿನಸ
ಎಲ್ಲಿಲ್ಲ ನೋಡ ನಮ್ಮ ಹಳ್ಳಿ ಅಂತ ಹಳ್ಳಿ
ನಮ್ಮಣ್ಣನ ಪಾಲಿಗೆ ಇದ ಕನ್ನಡದ ಕಾಶ್ಮೀರ//
ಡಾ ಅನ್ನಪೂರ್ಣ ಹಿರೇಮಠ



