ಜೀವನ ಸಂಗಾತಿ
ವನಜ ಮಹಾಲಿಂಗಯ್ಯ
“ಸಂಬಂಧಗಳನ್ನುಉಳಿಸಿಕೊಳ್ಳಿ”


ಈಗ ಆಗಿರತಕ್ಕಂತ ಪ್ರಕೃತಿ ವಿಪತ್ತನ್ನು ನೋಡಿದರೆ ಈ ಜಗತ್ತು ಬೇಗ ನಾಶವಾಗುವುದರಲ್ಲಿ ಅನುಮಾನವೇ ಇಲ್ಲ. ಇಷ್ಟೆಲ್ಲ ಆದರೂ ನಮ್ಮ ಜನಗಳಿಗೆ ಬುದ್ಧಿ ಬರುತ್ತಿಲ್ಲ. ಉದಾಹರಣೆ ಯಾರನ್ನು ಯಾರೂ ಮಾತನಾಡಿಸುತ್ತಿಲ್ಲಾ, ಯಾರ ಬಗ್ಗೆಯೂ ಯಾರು ತಲೆ ಕೆಡಿಸಿಕೊಳ್ಳುತ್ತಿಲ್ಲ ,ಸಂಬಂಧಗಳಿಗೆ ಬೆಲೆ ಇಲ್ಲ, ನಾವೇ ಮೊದಲು ಮಾತನಾಡಿಸಿದರೆ ಅವರ ಮುಂದೆ ನಾವು ಸಣ್ಣವರಾಗಿ ಬಿಡುತ್ತೇವೆನು ಅನ್ನುವ ಅಹಂ,ಮತ್ತು ಈ ಮೊಬೈಲ್ಗಳ ಹಾವಳಿ ಮೊಬೈಲ್ ಗಳನ್ನು ಹಿಡಿದು ಮನೆಯಲ್ಲಿರುವ ನಾಲ್ಕು ಜನ ನಾಲ್ಕು ಮೂಲೆಯಲ್ಲಿ ಕುಳಿತು ವೀಕ್ಷಣೆ ಮಾಡುತ್ತಿರುತ್ತಾರೆ. ಮನೆಯಲ್ಲಿಯೇ ಇದ್ದರೂ ಮನೆಯ ಒಳಗೆ ಏನಾದರೂ ಗೊತ್ತಾಗದೆ ಇರುವಂತಹ ಪರಿಸ್ಥಿತಿ. ಎಲ್ಲಿಗೆ ಹೋಗ್ತಾ ಇದೆ ನಮ್ಮ ಕುಟುಂಬಗಳು ಏನಾಗ್ತಾ ಇದೆ ಸಮಾಜದಲ್ಲಿ ಇದನ್ನೆಲ್ಲ ನೋಡಿದ್ರೆ ಈಗಾಗಿರುವಂತಹ ಪ್ರಕೃತಿ ವಿಕೋಪ ಜಗತ್ತನ್ನ ನಾಶ ಮಾಡಿ ಹೊಸದಾಗಿ ಜಗತ್ತು ಸೃಷ್ಟಿಯಾಗಬಹುದೇನೋ? ನಿಜಕ್ಕೂ ಮನುಷ್ಯರಲ್ಲಿ ಯಾವ ಭಾವನೆಗಳು ಇಲ್ಲದಂತಾಗುತ್ತದೆ .ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗುವುದಿಲ್ಲ ಒಬ್ಬರು ಮುಂದೆ ಬಂದರೆ ಅವರನ್ನು ಹೇಗೆ ಹಿಂದಕ್ಕೆ ಎಳೆಯಬೇಕೆಂಬುವ ಯೋಚನೆಯಲ್ಲಿಯೇ ಇರುತ್ತಾರೆ.. ಇಂದು ಸಮಾಜದಲ್ಲಿ ನಡೆಯುತ್ತಿರುವ ಕೊಲೆ ದರೋಡೆ ಅತ್ಯಾಚಾರಗಳು ಇವೆಲ್ಲವೂ ಅಂಗೈಯಲ್ಲಿರುವ ಪ್ರಪಂಚದ ಎಲ್ಲಾ ಆಗುಹೋಗುಗಳಲ್ಲದೆ ಕೆಟ್ಟ ಸಂದೇಶಗಳನ್ನು ಹಾಗೂ ಚಿತ್ರಣಗಳನ್ನು ತೋರಿಸುತ್ತಿರುವ ಮೊಬೈಲ್ ಬಳಕೆಯಿಂದ ಆಗುತ್ತಿದೆ ಎಂದರೇ ತಪ್ಪಾಗಲಾರದು. ಮೊಬೈಲ್ ಬಳಕೆ ಮಕ್ಕಳಿಂದ ದೊಡ್ಡವರವರೆಗೂ ಒಳ್ಳೆಯದಕ್ಕಿಂತ ಕೆಟ್ಟದ್ದಕ್ಕೆ ಜಾಸ್ತಿ ಬಳಕೆಯಾಗುತ್ತಿದೆ. ಕಾರಣ ಈ ಸಮಾಜ ಯಾವ ದಿಕ್ಕಿನಲ್ಲಿ ಸಾಗುತ್ತಿದೆಯೋ ದೇವರೇ ಕಾಪಾಡಬೇಕು. ಜನರು ಇನ್ನು ಮುಂದೆಯಾದರೂ ತಾವು ಬದುಕಿರುವ ತನಕ ತಮ್ಮವರು ಸಂಬಂಧಿಕರು ಎಂದು ವಿಚಾರಿಸುವುದು, ಮಾತನಾಡಿಸುವುದು, ಹೋಗಿ ಬಂದು ಅವರ ಆರೋಗ್ಯವನ್ನು ವಿಚಾರಿಸುವುದು ಮಾಡುವ ಮನಸ್ಸು ಮಾಡಬೇಕಾಗಿದೆ .ಯಾರ ಮನೆಯಲ್ಲಿಯೇ ಆಗಲಿ ಒಂದು ಮದುವೆ ಗೃಹಪ್ರವೇಶ ಇದ್ದರೆ ವಾಟ್ಸಪ್ ನಲ್ಲಿ ಪತ್ರಿಕೆ ಕಳಿಸಿದರೆ ಸಾಕು ಮನೆಯಲ್ಲಿರುವ ಎಲ್ಲರೂ ಕಾರ್ಯಕ್ರಮಕ್ಕೆ ಹೋಗುತ್ತೇವೆ ಆದರೆ ಯಾರ ಮನೆಯಲ್ಲಿ ಕಷ್ಟ ನೋವು ಸಾವು ಬಂತು ಎಂದರೆ ಏಕೆ ಬರುವುದಿಲ್ಲ ?ಅದರಲ್ಲೂ ಯಾರಾದರೂ ಸತ್ತರೆಂದು ಸುದ್ದಿ ಬಂದರೆ ಸಾಕು ಯಾರಾದರೂ ಒಬ್ಬರು ಹೋಗಿ ಹಾರ ಹಾಕಿ ಬನ್ನಿ ಎಲ್ಲರೂ ಹೋಗುವುದೇಕೆ ಎಂದು ಹೇಳುವ ಜನಕ್ಕೆ ಸತ್ತ ವ್ಯಕ್ತಿಯ ಮುಖ ಮತ್ತೆ ನೋಡಲಾಗುವುದಿಲ್ಲ ಎನ್ನುವ ಸತ್ಯ ಗೊತ್ತಾಗುವುದಿಲ್ಲ. ನಿಜಕ್ಕೂ ಜಮೀನನ್ನು ಕೊಳ್ಳಬಹುದು ಮನೆಯನ್ನು ಕಟ್ಟಿಸಬಹುದು ಆದರೆ ತಂದೆ ತಾಯಿ ರಕ್ತ ಸಂಬಂಧಗಳನ್ನು ಯಾರು ಖರೀದಿ ಮಾಡಲು ಸಾಧ್ಯವಿಲ್ಲ. ನಿಜಕ್ಕೂ ಇದನ್ನು ಬರೆಯುವಾಗ ಇತ್ತೀಚೆಗೆ ಆಗುತ್ತಿರುವ ಅನಾಹುತವನ್ನು ನೋಡಿ ಅನಾಹುತಗಳಲ್ಲಿ ಕುಟುಂಬದ ಎಲ್ಲರನ್ನೂ ಕಳೆದುಕೊಂಡಿರುವ ಒಬ್ಬೊಬ್ಬರೇ ಉಳಿದುಕೊಂಡಿರುವ ಅವರನ್ನು ನೋಡಿದರೆ ನಾವು ಬಟ್ಟೆ ಆಹಾರ ಹಣ ಏನಾದರು ಕೊಡಬಹುದು ಕುಟುಂಬದವರನ್ನು ಕೊಡಲು ಸಾಧ್ಯವೇ ಎಂದು ಯೋಚಿಸುತ್ತಾ ಬರೆದಿರುವೆ.
ವನಜ ಮಹಾಲಿಂಗಯ್ಯ ಮಾದಾಪುರ



