ಕಾವ್ಯ ಸಂಗಾತಿ
ಎಮ್ಮಾರ್ಕೆ
“ಸದ್ದಿಲ್ಲದ ಬಂದೈತಿ”


ಸದ್ದಿಲ್ಲದ ಬಂದೈತಿ ಈ ಸಂಕ್ರಾಂತಿ
ತರಲಿ ಪ್ರತಿ ಜೀವಿಗೂ ಸುಖಶಾಂತಿ
ಬನ್ನಿ ನೂಕೋಣ ನಮ್ಮೆಲ್ಲ ನೋವ
ಪ್ರತಿ ಮನದಾಗೂ ಅರಳಲಿ ಹೂವ
ಎಳ್ಳು ಬೆಲ್ಲವ ಸವಿಯೋಣ ಕೂಡಿ
ನಾಕು ಒಳ್ಳೊಳ್ಳೆ ಮಾತುಗಳ ಆಡಿ
ಸುಗ್ಗಿ ಮಾಡೋಣ ಹಿರಿ ಹಿರಿ ಹಿಗ್ಗಿ
ಹೊಟ್ಟ್ತುಂಬ ಉಣ್ಣೋಣ ಹಾಲ್ಹುಗ್ಗಿ
ನೇಸರ ಬದಲಿ ಮಾಡ್ಯಾನೋ ದಿಕ್ಕ
ಬಲ್ಲವರಾರಯ್ಯ ಆ ದೇವರ ಲೆಕ್ಕ
ಈ ಸಂಕ್ರಾಂತಿ ಕರಿಯ ಕಟ್ಟು ಹಬ್ಬ
ನೋಡಬೇಕ ಮ್ಯಾಲೇರಿಸಿ ಹುಬ್ಬ
ಹಳ್ಳಿಯ ಹಾದಿ-ಬೀದೆಲ್ಲ ಸಿಂಗಾರ
ಬಿತ್ತಿ ಬೆಳೆದಾರೋ ಬಗಸಿ ಬಂಗಾರ
ಮನಿ ಮುಂದ ಬಿಡಿಸಿ ರಂಗೋಲಿ
ಮೈ ಮರೆತಾರ ಖುಷಿಯ ಗುಂಗಲ್ಲಿ
ಬನ್ನಿ ಕುಣಿಯೋಣ ಮೈ ಚಳಿ ಬಿಟ್ಟ
ಭಗವಂತನ ಮ್ಯಾಲ ನಂಬಿಕಿ ಇಟ್ಟ
ನೋಡಲಾಕತ್ಯಾನು ಕುಂತ ಮ್ಯಾಲ
ಅವಗ ಒಪ್ಪಿಸಿವ್ನಿ ನನ್ನೆರಡು ಸಾಲ
ಎಮ್ಮಾರ್ಕೆ



