ಕಾವ್ಯ ಸಂಗಾತಿ
ಶಂಕರ್ ಪಡಂಗ ಕಿಲ್ಪಾಡಿ-
“ಕವಿತೆ ಹುಟ್ಟಿದ್ದು ಹೇಗೆ?”


ನನ್ನೊಳಗಿನ ಕವಿತೆಯನ್ನು
ಬಡಿದೆಬ್ಬಿಸಿದವರು
ತಿದ್ದಿ ತೀಡಿದವರು ಯಾರು..?
ಅಕ್ಷರದ ,ಹಿಡಿತ, ತುಡಿತ, ಮಿಡಿತಗಳ
ಅರಿವಿಲ್ಲದಿದ್ದರೂ,
ಪಡುವಣದ ಶರಧಿಯಜೊತೆ
ಲಲ್ಲೆಗರೆಯುವ
ಚಂದಿರನ ನೋಡಿ
ನನ್ನೊಳಗಿನ ಕವಿತೆಯ ಹುಟ್ಟು ,
ಜೀವನದ ಅರ್ದ ಸತ್ಯದ ಬವಣೆಯ ನೆನೆದು,
ಪೊಳ್ಳು ಭರವಸೆಯ ನೋಡಿ
ಹುಟ್ಟಿತ್ತು ಕವಿತೆ.
ನೀರುಣಿಸದೆ ಬೆಳೆದ
ಹೆಮ್ಮರಗಳ ಕತ್ತರಿಸಿದರೂ,
ಹಠ ಬಿಡದ ತ್ರಿವಿಕ್ರಮನಂತೆ
ಮತ್ತೆ ಮತ್ತೆ ಚಿಗುರಿ,
ಹಕ್ಕಿಗಳಿಗಾಸರೆಯ
ನೀಡುವುದ ನೋಡಿ ,
ಹುಟ್ಟಿತ್ತು ಕವಿತೆ.
ಅಂತಸತ್ವವ ಮರೆತಂತೆ
ಜೀವಿಸುವವರ ನೋಡಿ,
ಬದುಕೆಲ್ಲ ಸವೆಸಿದರೂ
ತೃಪ್ತಿ ಇಲ್ಲದ ಜನರ ನೋಡಿ,
ಹುಟ್ಟಿತ್ತು ಕವಿತೆ.
ಬದುಕು ಬಂಧುರವಾಗಲು
ನಿನ್ನನ್ನು ಅಪ್ಪಿಕೊಂಡೆ,
ಒಪ್ಪಿಕೊಂಡೆ ಈಗ
ನೀ ನನ್ನ ಜೀವಾಳವಾದೆ.
ಶಂಕರ್ ಪಡಂಗ ಕಿಲ್ಪಾಡಿ




