ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಇದ್ಯಾವ ಸಂಬಂಧಗಳ ಉಳಿಸುವಿಕೆ ಬಗ್ಗೆ ನಾ ಹೇಳಲು ಹೊರಟಿದ್ದೀನಿ ಇಂದಿನ ಅಂಕಣದಲಿ ಅಂತ ಆಶ್ಚರ್ಯಪಡದಿರಿ.ನಮ್ಮನು ಹೊಗಳಿದಂತೆ ಮಾಡಿ ನಮಗೇ ಗೊತ್ತಾಗದಂತೆ ತೆಗಳುವ,ತೆಗಳಿದರೂ ಅದನೇ ಸರಿಯೆಂದು ಸಮರ್ಥಿಸಿಕೊಳ್ಳುವ ಅದೇ ನಮ್ಮ ಹತ್ತಿರದ ನೆಂಟರ ಬಗ್ಗೆ ಕಣ್ರಿ…

ಈಗಿನ ನಮ್ಮ ಕಾಲಮಾನದಲಿ ನಮ್ಮೆಲ್ಲರ ನೆಂಟರ ಜೊತೆಗಿನ ಸಂಬಂಧ ನಿಧಾನವಾಗಿ ಕಳೆಗುಂದುತಾ ಇರೋದು ನಿಮ್ಮೆಲ್ಲರ ಗಮನಕೂ ಬಂದಿರಬಹುದು.ಇದರ ಕಾರಣ  ಏನಿರಬಹುದು ಅಂತ ಒಮ್ಮೆ ವಿಚಾರ ಮಾಡಿದರೆ ತಿಳಿಯುತ್ತದೆ.ಮೊದಲನೆಯ ಕಾರಣ ಪ್ರತಿಯೊಬ್ಬರಿಗೂ ನೆಂಟರ ಜೊತೆ ಕಳೆಯಲು ಸಮಯ ಹೊಂದಾಣಿಕೆಯಾಗದಿರುವುದು.ಯಾರಾದ್ರೂ ನೆಂಟರು ಮನೆಗೆ ಬರ್ತಾರೆಂದರೆ ನಾವು ಮೊದಲು ಯೋಚಿಸುವುದೇ ಅವರಿಗೆ ನಾವು ಸಾಕಷ್ಟು ಸಮಯ ಕೊಡಲಾಗುವುದೇ ಆತಿಥ್ಯ ಮಾಡಲು ಹಾಗೂ ಅವರ ವಸತಿಗೆಲ್ಲ ಸರಿಯಾಗಿ ವ್ಯವಸ್ಥೆ ಮಾಡಲಾದೀತೇ ಎಂದು.
ಎಲ್ಲರೂ ಹೀಗಿರುತ್ತಾರೆಂದು ಹೇಳಲಾಗದು.ನೆಂಟರೆಂದರೆ ಇಷ್ಟಪಡುವ ಮಂದಿಯೂ ಸಹ ಹೆಚ್ಚಾಗಿ ಇರುತ್ತಾರೆ.

ಇನ್ನೊಂದು ಕಾರಣವೆಂದರೆ ಕೆಲವರಿಗೆ ನಂಟರು ಬರುತ್ತಾರೆಂದರೆ ಇರಿಸುಮುರಿಸು ಉಂಟಾಗುವುದು ಏಕಂದರೆ ಕೆಲವು ನೆಂಟರಿಗೆ ಅಲ್ಲಿಂದಿಲ್ಲಿಗೆ ಚಾಡಿಮಾತು ಹೇಳಿ ಜಗಳ ತಂದು ಹಾಕುವ ಸ್ವಭಾವಿರುತ್ತದೆ,ಆ ಸ್ವಭಾವದವರನ್ನು ದೂರವಿರಿಸುವ ಅಭ್ಯಾಸ ಆತಿಥ್ಯ ನೀಡುವವರಿಗೆ ಇರುತ್ತದೆ ಹಾಗಾಗಿ ಅಂತಹ ನೆಂಟರು ತಮ್ಮ ಮನೆಗೆ ಬರದಂತೆ ಕಾರಣ ಹುಡುಕುತ್ತಾರೆ.ಒಂದುವೇಳೆ ಬಂದರೂ ಮರ್ಯಾದೆಯಿಂದಲೇ ಚೆನ್ನಾಗಿ ಆತಿಥ್ಯ ಮಾಡಿ ಕಳಿಸುತ್ತಾರೆ.

 ಇನ್ನು ಹಲವರಿಗೆ ತಮ್ಮ ಆಫೀಸ್ ಹಾಗೂ ಮನೆಯ ಕೆಲಸಗಳ ಮಧ್ಯೆಯೂ ಅವರೆಲ್ಲರ  ಇಷ್ಟಾನುಸಾರವಾಗಿ ನೆಂಟರ ಬೇಕು ಬೇಡಗಳನು ಪೂರೈಸಲಾದೀತೇ ಅನ್ನುವ ಆತಂಕ ಮನಸಲಿ‌ ಕಾಡುತ್ತದೆ.ಪಾಪ ಚೆನ್ನಾಗಿ ಆತಿಥ್ಯ ಮಾಡಿ ಕಳಿಸಿದರೂ ಸಹ ಅದೇ ನೆಂಟರು ಹೊರಗೆ ಬಂದಾಗ ತಮ್ಮ ಬಗ್ಗೆ ಹಾಗೂ ತಮ್ಮ ಆತಿಥ್ಯದ ಬಗ್ಗೆಯೇ ಕೊಂಕು ಅಥವಾ ವ್ಯಂಗ್ಯದ ಮಾರಾಡುತ್ತಾರೆನ್ನುವ ಆತಂಕದಲಿ ದಿನ ದೂಡುತ್ತಾರೆ…
ಹಾಗಾಗಿ ನೆಂಟರ ಬರುವಿಕೆ ಇಂದಿನ ದಿನಗಳಲಿ ಬಲು ಅಪರೂಪವಾಗಿದೆ ಅಂತಲೇ ಹೇಳಬಹುದು.ಅವರವರ ದೃಷ್ಟಿಕೋನದಲ್ಲಿ ನೋಡಿದಾಗ  ಇದರಲಿ ಯಾರದೂ ತಪ್ಪಿಲ್ಲವೆಂತಲೂ ಅನಿಸುವುದು.ಆದರೂ ಮನೆಗೆ ನೆಂಟರ ಆಗಮನ ಚೈತನ್ಯದಾಯಕವೂ ಹೌದು ಜೊತೆಗೆ ಹಲವು ವಿಚಾರಗಳ ವಿನಿಮಯವಾಗುವಿಕೆ ಮನಸಿನ ಏಕಾತಾನತೆಗೆ ಒಳ್ಳೆಯ ಮದ್ದು ಆಗುವುದಂತೂ ಸತ್ಯ.

ನೆಂಟಸ್ತನವನು ಉಳಿಸುವ ನಡೆಯನು ವಿವರಿಸುತಾ ಹೀಗೂ ಯೋಚಿಸಬಹುದು..ನೆಂಟರು ಒಂದು ಮದುವೆಯ ಸಮಾರಂಭದಲ್ಲೊ ಅಥವಾ ಒಂದು ಹೋಮ- ಹವನದ ಕಾರ್ಯಕ್ರಮದಲ್ಲೋ  ಸೇರಿದಾಗ ಎಲ್ಲರಿಗೂ ತಮ್ಮ ಕುಟುಂಬದ ಈ ಐಕ್ಯತೆಯನು ಕಂಡು ಸಂತಸವಾಗುತ್ತದೆ.
ಕುಟುಂಬದ ಹೊಸ ಸದಸ್ಯರನು ಹಳೆಯ ತಲೆಮಾರಿನವರು ತಮ್ಮ‌ ಕಾಲವಿನ್ನು ಮುಗಿಯಿತಪ್ಪಾ ಎನ್ನುತಾ ತುಂಬು ಮನಸಿಂದ ಅವರೆಲ್ಲರ ಪರಿಚಯ ಮಾಡಿಕೊಡುವುದನು ಕಂಡು ಒಮ್ಮೆಗೇ ಮನಸು ಭಾವುಕವಾಗುತ್ತದೆ. ಮುಂದೊಂದಿನದ  ಸಮಾರಂಭದಲಿ ಈ ಹಿರಿಯ ತಲೆಮಾರಿನವರು ಕಣ್ಮರೆಯಾಗದಿದ್ರೆ ಸಾಕು ಅಂತಲೂ ಮನಸು ಹಾರೈಸುತ್ತದೆ.

ಜೊತೆಗೆ ನೆಂಟಸ್ತನ ಕುಂಠಿತವಾಗುವಿಕೆಯ ಮತ್ತೊಂದು ಮುಖ್ಯ ಕಾರಣವೆಂದರೆ..ಮೊಬೈಲ್ ಚಟ ಹಾಗೂ ಸಾಮಾಜಿಕ ತಾಣವೆನ್ನಬಹುದು. ಇತ್ತೀಚೆಗಿನ ಮೊಬೈಲಿನ YouTube Shorts ವೀಕ್ಷಣೆಯ ಮಟ್ಟ ಯಾವ ಯಾವ ರೀತಿಯಲಿ ಏರಿದೆಯೆಂದರೆ ಇಂದಿನ ಯುವಜನತೆ,ಹದಿಹರೆಯದ ಮಕ್ಕಳು,ಮಧ್ಯೆ ವಯಸ್ಸಿನ ಹೆಂಗಸರು, ಅರ್ಧ ಶತಕದ ಅಂಚಲಿರುವ ಗಂಡಸರೆನ್ನುವ
ಭೇಧಭಾವವಿಲ್ಲದೆ ಈ ಚಟ ಆವರಿಸಿಕೊಂಡು ಬಿಟ್ಟಿದೆ. ಇದಕ್ಕೆ ದಾಸರಾಗಿರೊದರಿಂದ  ಮನೆಗೆ ಯಾರು ಬಂದರೂ ಅಥವಾ ಯಾವ ಫಂಕ್ಷನ್ ಗೆ ಹೋಗಬೇಕೆಂದರೂ ಇದಕೆ ಅಡ್ಡಿಯಾದೀತೆಂಬ ನೆಪವೊಡ್ಡಿ ಹೋಗದೇ ಇದ್ದುಬಿಡುತ್ತಾರೆ.ಇಂತಹ ಚಟದಿಂದ ಹೊರ ಬಂದರೆ ಮಾತ್ರ ಸಂಬಂಧಗಳ ಉಳಿಯುವಿಕೆ ಸಾಧ್ಯವಾಗುತ್ತದೆ.ಇಲ್ಲದಿದ್ರೆ ತಾವಾಯ್ತು ತಮ್ಮ ಪಾಡಾಯ್ತು ಅನ್ನುವ ಸ್ಥಿತಿಗೆ ಈ Gen Z ಹೋಗುವುದರಲಿ ಹೆಚ್ಚು ಕಾಲ ಉಳಿದಿಲ್ಲ ಅನ್ನಬಹುದು.

ಒಟ್ಟಾರೆಯಾಗಿ ಹೇಳುವುದಾದರೆ ಸಮಾಜದಲಿ ಒಳ್ಳೆಯ ಮನಸ್ಸಿರುವ ಎಲ್ಲರ ಜೊತೆಗೆ ಅದರಲೂ ತಮ್ಮ ಕುಟುಂಬದ ತೀರ ಹತ್ತಿರದ ನೆಂಟರಿಷ್ಟರ ಜೊತೆಯಲಿ ಬೆರೆತಾಗ ಮಾತ್ರ ಸಾಮರಸ್ಯದಿಂದ ಬಾಳು ಸಾಗುತಾ ನಮ್ಮೆಲ್ಲರ ಬಾಳ್ವೆ ಸುಂದರವೆನಿಸುತ್ತದೆ.ಇಲ್ಲವಾದರೆ ಏಕಾತಾನತೆಯ ಏಕಾಂತ ಕಾಡಿ,ಬೇರೆ ಯಾರ ಬಗ್ಗೆಯೂ ಯೋಚಿಸದಂತಹ ಸ್ವಾರ್ಥದತ್ತ ಮನಸು ಸಾಗುತ್ತದೆ.

ನಮ್ಮ ಬದುಕು ಇವೆರಡು ದೃಷ್ಟಿಕೋನದಲಿ ನೋಡಿದಾಗ ಅದು  ಹೇಗಿರಬೇಕು ಅನ್ನುವ ಆಯ್ಕೆ ನಮ್ಮದೇ!


About The Author

1 thought on ““ನೆಂಟಸ್ತನದ ಸಂಬಂಧಗಳ ನಡೆ” ವಿಶೇಷ ಲೇಖನ ಸುಮನಾ ರಮಾನಂದ”

  1. ಇಂದಿನ ಜನರ ಯೋಚನೆ ಆಲೋಚನೆಗಳು ನೆಂಟರ ಬಗ್ಗೆ ಇರುವುದು ನಿಜ ಮೇಡಂ ಅದರ ಬಗ್ಗೆ ತುಂಬಾ ವಿವರವಾಗಿ ಚೆನ್ನಾಗಿ ಲೇಖನವನ್ನು ಬರೆದಿರುವಿರಿ. ಮತ್ತು ಸಹಬಾಳ್ವೆ , ಸಾಮರಸ್ಯ ಅತಿ ಮುಖ್ಯ.

Leave a Reply

You cannot copy content of this page

Scroll to Top