ಜೀವನ ಸಂಗಾತಿ
ಜಿ. ಎಸ್. ಶರಣು
“ಕೀಳರಿಮೆ ಎಂಬ ಮಾನಸಿಕ
ಸಂಕೋಲೆಯನ್ನು ಕಳಚಿ ಹಾಕಿ”


ಕೀಳರಿಮೆ ಎಂಬ ಮಾನಸಿಕ ಸಂಕೋಲೆಯನ್ನು ಕಳಚಿ ಹಾಕಿ, ನಿಮ್ಮ ಬಗ್ಗೆ ಹೆಮ್ಮೆ ಪಟ್ಟುಕೊಳ್ಳಿ.
ಈ ಜಗತ್ತಿನಲ್ಲಿ ಪ್ರಕೃತಿ ಸೃಷ್ಟಿಸಿರುವ ಕೋಟಿ ಕೋಟಿ ಜೀವಿಗಳಲ್ಲಿ, ಒಬ್ಬರ ಬೆರಳಚ್ಚಿನಂತೆ ಮತ್ತೊಬ್ಬರ ಬೆರಳಚ್ಚು ಇರುವುದಿಲ್ಲ. ಪ್ರಕೃತಿಯ ಈ ನಿಯಮವೇ ಸಾರಿ ಹೇಳುತ್ತದೆ, ಪ್ರತಿಯೊಬ್ಬ ವ್ಯಕ್ತಿಯೂ ಅನನ್ಯ ಮತ್ತು ಅದ್ಭುತ ಎಂದು. ಆದರೂ ವಿಪರ್ಯಾಸವೆಂದರೆ, ನಾವು ಈ ಸತ್ಯವನ್ನು ಮರೆತು, ನಮ್ಮನ್ನು ನಾವು ಬೇರೆಯವರೊಂದಿಗೆ ಹೋಲಿಸಿಕೊಳ್ಳುತ್ತಾ, ನಮ್ಮ ಬಗ್ಗೆ ನಾವೇ ಕೀಳಾಗಿ ಕಾಣಲು ಆರಂಭಿಸುತ್ತೇವೆ. “ನಾನು ಅವನಿಗಿಂತ ದಡ್ಡ, ನಾನು ಅವಳಷ್ಟು ಸುಂದರವಾಗಿಲ್ಲ, ನನ್ನ ಬಳಿ ಏನೂ ಇಲ್ಲ” ಎಂಬ ಕೀಳರಿಮೆ ಎಂಬುದು ನಮ್ಮ ಮನಸ್ಸನ್ನು ಕೊರೆಯುವ ಗೆದ್ದಲು ಹುಳುವಿನಂತೆ. ಅದು ನಿಧಾನವಾಗಿ ನಮ್ಮ ಆತ್ಮವಿಶ್ವಾಸ ಮತ್ತು ವ್ಯಕ್ತಿತ್ವವನ್ನೇ ನಾಶಮಾಡಿಬಿಡುತ್ತದೆ.
ಕೀಳರಿಮೆ ಬೆಳೆಯಲು ಮುಖ್ಯ ಕಾರಣವೇ ಹೋಲಿಕೆ. ನಾವು ಯಾವಾಗಲೂ ನಮ್ಮ ಜೀವನದ ಕಷ್ಟದ ಪುಟಗಳನ್ನು, ಬೇರೆಯವರ ಜೀವನದ ಹೈಲೈಟ್ಸ್ ಜೊತೆ ಹೋಲಿಕೆ ಮಾಡುತ್ತೇವೆ. ಸಾಮಾಜಿಕ ಜಾಲತಾಣಗಳಲ್ಲಿ ಯಾರೋ ನಗುತ್ತಿರುವ ಫೋಟೋ ಹಾಕಿದ ತಕ್ಷಣ, ಅವರ ಬದುಕು ಪರಿಪೂರ್ಣವಾಗಿದೆ ಮತ್ತು ನಮ್ಮ ಬದುಕು ಹಾಳಾಗಿದೆ ಎಂದು ತೀರ್ಮಾನಕ್ಕೆ ಬರುತ್ತೇವೆ. ಆದರೆ ನೆನಪಿಡಿ, ಸೂರ್ಯ ಮತ್ತು ಚಂದ್ರ ಇಬ್ಬರೂ ಆಕಾಶದಲ್ಲೇ ಇದ್ದಾರೆ ಮತ್ತು ಇಬ್ಬರೂ ಹೊಳೆಯುತ್ತಾರೆ. ಆದರೆ ಅವರಿಬ್ಬರ ಸಮಯ ಬೇರೆ ಬೇರೆ. ಸೂರ್ಯನ ಜೊತೆ ಚಂದ್ರನನ್ನು ಹೋಲಿಸಿ, “ಚಂದ್ರ ಸೂರ್ಯನಷ್ಟು ಹೊಳೆಯುವುದಿಲ್ಲ” ಎಂದು ಹೀಯಾಳಿಸುವುದು ಎಷ್ಟು ತಪ್ಪೋ, ನಮ್ಮ ಬದುಕನ್ನು ಬೇರೆಯವರ ಬದುಕಿನೊಂದಿಗೆ ಹೋಲಿಸಿಕೊಂಡು ಕೊರಗುವುದು ಅಷ್ಟೇ ತಪ್ಪು. ಪ್ರತಿಯೊಬ್ಬರಿಗೂ ಅವರದ್ದೇ ಆದ ಸಮಯ, ಅವರದ್ದೇ ಆದ ದಾರಿ ಮತ್ತು ಅವರದ್ದೇ ಆದ ಯುದ್ಧವಿರುತ್ತದೆ.
ನಿಮ್ಮ ಬಗ್ಗೆ ನಿಮಗೆ ಹೆಮ್ಮೆ ಇರಬೇಕು ಎಂದರೆ, ನೀವು ಜಗತ್ತನ್ನೇ ಗೆದ್ದು ಬರಬೇಕಿಲ್ಲ. ನೀವು ಬೆಳಿಗ್ಗೆ ಎದ್ದು, ನಿಮ್ಮ ಜವಾಬ್ದಾರಿಗಳನ್ನು ನಿಭಾಯಿಸಿ, ಕಷ್ಟದ ದಿನವೊಂದನ್ನು ಯಶಸ್ವಿಯಾಗಿ ಮುಗಿಸಿದ್ದೀರಿ ಎಂದರೆ, ಅದುವೇ ಹೆಮ್ಮೆ ಪಡುವ ವಿಷಯ. ನೀವು ಎಷ್ಟೋ ಸೋಲುಗಳನ್ನು ಕಂಡಿದ್ದರೂ, ಇಂದಿಗೂ ಛಲ ಬಿಡದೆ ಬದುಕುತ್ತಿದ್ದೀರಿ ಎಂದರೆ, ಅದು ನಿಮ್ಮ ಶಕ್ತಿ. ನಿಮ್ಮ ನಡಿಗೆ ನಿಧಾನವಾಗಿರಬಹುದು, ಆದರೆ ನೀವು ನಿಂತಿಲ್ಲವಲ್ಲ, ಅದು ಮುಖ್ಯ. ಕೀಳರಿಮೆ ಬರುವುದು ನಾವು ಏನನ್ನು ಹೊಂದಿಲ್ಲ ಎಂಬುದರ ಕಡೆಗೆ ಗಮನ ಕೊಟ್ಟಾಗ, ಆದರೆ ಹೆಮ್ಮೆ ಬರುವುದು ನಾವು ಏನನ್ನು ಹೊಂದಿದ್ದೇವೆ ಮತ್ತು ನಾವು ಎಂತಹ ವ್ಯಕ್ತಿಯಾಗಿದ್ದೇವೆ ಎಂಬುದನ್ನು ಗಮನಿಸಿದಾಗ.
ಇಲ್ಲಿ ಒಂದು ಸೂಕ್ಷ್ಮವಾದ ಗೆರೆ ಇದೆ. ಹೆಮ್ಮೆ ಪಡುವುದು ಎಂದರೆ ಅಹಂಕಾರ ಪಡುವುದಲ್ಲ. “ನಾನೇ ಶ್ರೇಷ್ಠ” ಎನ್ನುವುದು ಅಹಂಕಾರ, ಇದು ಪತನಕ್ಕೆ ದಾರಿ. ಆದರೆ “ನಾನು ಅನನ್ಯ, ನನ್ನ ಸಾಮರ್ಥ್ಯದ ಮೇಲೆ ನನಗೆ ನಂಬಿಕೆ ಇದೆ” ಎನ್ನುವುದು ಸ್ವಾಭಿಮಾನ. ಕೀಳರಿಮೆ ನಿಮ್ಮನ್ನು ಒಂದು ಕತ್ತಲ ಕೋಣೆಯಲ್ಲಿ ಕೂಡಿ ಹಾಕಿದರೆ, ಸ್ವಾಭಿಮಾನ ನಿಮಗೆ ಜಗತ್ತನ್ನು ಎದುರಿಸುವ ಧೈರ್ಯ ನೀಡುತ್ತದೆ. ನೀವು ಕುಳ್ಳಗಿರಲಿ, ಬಡವರಾಗಿರಲಿ ಅಥವಾ ಹೆಚ್ಚು ಓದಿಲ್ಲದಿರಲಿ, ಇವು ಯಾವುವೂ ನಿಮ್ಮ ಮೌಲ್ಯವನ್ನು ನಿರ್ಧರಿಸುವುದಿಲ್ಲ. ನಿಮ್ಮ ಮೌಲ್ಯವನ್ನು ನಿರ್ಧರಿಸುವುದು ನಿಮ್ಮ ಪ್ರಾಮಾಣಿಕತೆ, ನಿಮ್ಮ ಶ್ರಮ ಮತ್ತು ನಿಮ್ಮ ಒಳ್ಳೆಯತನ ಮಾತ್ರ.
ಒಂದು ಮೀನು ಮರದ ಮೇಲೆ ಹತ್ತಲು ಸಾಧ್ಯವಿಲ್ಲ ಎಂದು ಕೊರಗುತ್ತಾ ಕುಳಿತರೆ, ಅದು ತನ್ನ ಜೀವನವಿಡೀ ತಾನು ಮೂರ್ಖ ಎಂದು ಭಾವಿಸಿ ಸಾಯುತ್ತದೆ. ಮೀನಿನ ಹೆಮ್ಮೆ ಇರುವುದು ಈಜುವುದರಲ್ಲಿ, ಮರದ ಮೇಲೆ ಹತ್ತುವುದರಲ್ಲಲ್ಲ. ನೀವೂ ಅಷ್ಟೇ, ನಿಮ್ಮ ಕ್ಷೇತ್ರ ಬೇರೆ, ನಿಮ್ಮ ಪ್ರತಿಭೆ ಬೇರೆ. ಬೇರೆಯವರು ಮಾಡಿದ್ದನ್ನು ನೀವು ಮಾಡಲು ಆಗುತ್ತಿಲ್ಲ ಎಂದು ಕೀಳರಿಮೆ ಪಟ್ಟುಕೊಳ್ಳಬೇಡಿ. ನಿಮಗಿರುವ ಶಕ್ತಿಯನ್ನು ಗುರುತಿಸಿ. ನಿಮ್ಮ ನ್ಯೂನತೆಗಳನ್ನು ಒಪ್ಪಿಕೊಳ್ಳಿ, ಏಕೆಂದರೆ ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ. ತಪ್ಪು ಮಾಡುವುದು ಮನುಷ್ಯ ಸಹಜ ಗುಣ, ಅದನ್ನು ತಿದ್ದಿಕೊಂಡು ಮುನ್ನಡೆಯುವವನೇ ಸಾಧಕ.
ನಿಮ್ಮ ಬೆನ್ನು ತಟ್ಟಲು ಬೇರೆ ಯಾರೋ ಬರಬೇಕಿಲ್ಲ. ಕನ್ನಡಿ ಮುಂದೆ ನಿಂತು, ನಿಮ್ಮ ಕಣ್ಣಲ್ಲಿ ಕಣ್ಣಿಟ್ಟು, “ನಾನು ಎಷ್ಟೇ ಕಷ್ಟ ಬಂದರೂ ಇಲ್ಲಿಯವರೆಗೆ ಬಂದು ನಿಂತಿದ್ದೇನೆ. ನಾನು ನನ್ನ ಬಗ್ಗೆ ಹೆಮ್ಮೆ ಪಡುತ್ತೇನೆ” ಎಂದು ಹೇಳಿಕೊಳ್ಳಿ. ನೀವು ನಿಮ್ಮನ್ನು ಗೌರವಿಸಲು ಕಲಿತಾಗ ಮಾತ್ರ, ಜಗತ್ತು ನಿಮ್ಮನ್ನು ಗೌರವಿಸಲು ಆರಂಭಿಸುತ್ತದೆ. ತಲೆ ತಗ್ಗಿಸಿ ನಡೆಯಬೇಡಿ, ಏಕೆಂದರೆ ನೀವು ಈ ಭೂಮಿಯ ಮೇಲೆ ಇರಲು ಅರ್ಹರು. ಕೀಳರಿಮೆ ಎಂಬ ಭಾರವನ್ನು ಇಳಿಸಿ, ಆತ್ಮವಿಶ್ವಾಸದ ಕಿರೀಟವನ್ನು ಧರಿಸಿ. ನೀವು ನಿಮ್ಮ ಕಥೆಯ ಹೀರೊ ನೀವೇ ಆಗಿದ್ದೀರಿ. ಏಕೆಂದರೆ, ನೀವು ಯಾವುದೋ ಪರೀಕ್ಷೆಯಲ್ಲಿ ಪಾಸಾಗಿದ್ದಿರಿ, ನೀವು ದುಡಿದು ತಿನ್ನುತ್ತಿದ್ದಿರಿ, ನಿಮಗೆ ಸ್ವಾಭಿಮಾನ ಇದೆ, ನಿಮಗೆ ವಾಸವಿರಲು ಸ್ಥಳ ಇದೆ. ಆದರೆ ನೀವು ಮುಟ್ಟಬೇಕಾದ ನಿಮ್ಮ ಗುರಿಯನ್ನು, ಬೇರೆಯವರ ಗುರಿಯನ್ನಲ್ಲ, ನಿಮ್ಮ ಬಗ್ಗೆ ನಿಮಗೆ ಹೆಮ್ಮೆ ಇರಲಿ. ಕೀಳರಿಮೆ ಅಲ್ಲ.
ಜಿ. ಎಸ್. ಶರಣು



