ಅಂಕಣ ಸಂಗಾತಿ
ಸರಣಿ ಬರಹ
ಅರ್ಜುನ ಉವಾಚ
ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ
ದ್ವಾರಕೆಯನ್ನು ಕಂಡ ಉದ್ದಾಮ ಭೀಮ

ಹಸ್ತಿನಾವತಿಯಿಂದ ಹೊರಟ ಉದ್ದಾಮ ಭೀಮ ದ್ವಾರಕೆಯಲ್ಲಿ ಮೊದಲು ಕಂಡದ್ದು ಕಡಲನ್ನು. ಶರಧಿಯನ್ನು ಮನದಣಿಯೆ ನೋಡಿ, ಅದರ ಬಗೆಬಗೆಯ ವಿಶಿಷ್ಟತೆಗಳನ್ನು ಕಣ್ತುಂಬಿಕೊಂಡು ಮುನ್ನಡೆದವನಿಗೆ ಎದುರಾದದ್ದು ಜನಸಮೂಹವೆಂಬ ಕಡಲು. ರಾಜಮಾರ್ಗದಲ್ಲಿ ಆನೆಗಳ ನಡಿಗೆಯ ಗತ್ತನ್ನು ಕಾಣಬಹುದಿತ್ತು. ಕುದುರೆಗಳ ಓಟದ ಸೌಂದರ್ಯವನ್ನು ಸವಿಯಬಹುದಿತ್ತು. ಚಾಮರ ಬೆಳ್ಗೊಡೆಗಳು ಅರಸುಬೀದಿಗೆ ಮೆರುಗನ್ನು ತಂದಿದ್ದವು. ನೆರೆದ ಜನಸ್ತೋಮ ಎಬ್ಬಿಸುತ್ತಿದ್ದ ಕಲಕಲ ರವ ಕಿವಿಗೆ ಇಂಪನ್ನು ಕೊಡುತ್ತಿತ್ತು.
ರಾಜಮಾರ್ಗದ ಎರಡೂ ಬದಿಗಳಲ್ಲಿ ಶೋಭಿಸುವ ಉಪ್ಪರಿಗೆ ಮನೆಗಳು. ಉಪ್ಪರಿಗೆಯ ಮೇಲೆ ನಿಂತಿದ್ದ ಹೆಂಗಳೆಯರ ಕಣ್ಣಂಚಿನ ಕಾಂತಿ ಕ್ಷೀರಸಮುದ್ರದ ಅಲೆಗಳ ಮಧ್ಯೆ ಹೊಳೆಹೊಳೆವ ಮೀನಿನಂತೆ ತೋರುತ್ತಿತ್ತು. ಬಿಳಿಯ ಮೋಡಗಳ ಮಧ್ಯೆ ಆಗಾಗ ಕಾಣಿಸುವ ಮಿಂಚಿನಂತೆ ತೋರುತ್ತಿತ್ತು. ಬೆಳ್ಳಿಬೆಟ್ಟವನ್ನು ಹಾದುಹೋದ ಶುಭ್ರವಾದ ಮೋಡದಲ್ಲಿ ಮೂಡಿದ ಕಾಮನಬಿಲ್ಲಿನಂತೆ ಉಪ್ಪರಿಗೆಯ ಅಕ್ಕಪಕ್ಕದಲ್ಲಿ ಹೊಳೆಯುತ್ತಿದ್ದ ಕನಕ ನವರತ್ನ ತೋರಣಗಳು ಶೋಭಿಸುತ್ತಿದ್ದವು. ತುಂಬು ಜವ್ವನದ ನೀರಜಗಂಧಿಯರು ನಿಂತಿದ್ದರು ಸೌಧಗಳ ಅಗ್ರಭಾಗದಲ್ಲಿದ್ದ ಉಪ್ಪರಿಗೆಗಳ ಮೇಲೆ. ಅವರ ಕೊಬ್ಬಿದ ಮೊಲೆಗಳೆಡೆಗೆ ಲೇಪಿಸಿದ್ದ ಚಂದನದ ಪರಿಮಳ, ಮುಡಿಯನ್ನು ಅಲಂಕರಿಸಿದ್ದ ಮಾಲೆ ಮಲ್ಲಿಗೆಯ ಸುವಾಸನೆ ಇವುಗಳನ್ನು ಹೊತ್ತ ತಂಗಾಳಿ ದ್ವಾರಕೆಯ ರಾಜಬೀದಿಯಲ್ಲಿ ಚಾಡಿಕೋರನಂತೆ ಸುಳಿದಾಡುತ್ತಿತ್ತು.
ಮುತ್ತು ಹವಳ ರತ್ನ ಅನರ್ಘ್ಯ ಮಣಿಗಳನ್ನು ಹೊತ್ತುನಿಂತ ಅಂಗಡಿಗಳು ಅಲ್ಲಿದ್ದವು. ಪಾಪನಾಶಕ ಪರಮವಿಷ್ಣುವಿಗೆ ಭೂದೇವಿ ಶ್ರೀದೇವಿಯರೆಂಬ ಇಬ್ಬರು ಮಡದಿಯರು. ಶ್ರೀದೇವಿ ಸಂಪತ್ತಿನ ಅಧಿದೇವತೆ. ಭೂದೇವಿ ಅನರ್ಘ್ಯವಾದ ಸಂಪದಗಳನ್ನು ತನ್ನ ಗರ್ಭದಲ್ಲಿ ಇಟ್ಟುಕೊಂಡವಳು. ಈ ಕಾರಣದಿಂದಲೇ ಶ್ರೀಕೃಷ್ಣನಿದ್ದ ಆ ದ್ವಾರಕಾಪುರಿ ವಿಸ್ಮಯ ಹುಟ್ಟಿಸುವ ರೀತಿಯಲ್ಲಿ ಸಂಪದ್ಭರಿತವಾಗಿತ್ತು. ವ್ಯಾಪಾರ ನಡೆಯುತ್ತಿದ್ದ ಬಗೆ ನಯನಮನೋಹರವಾಗಿತ್ತು.
ರಸಿಕತೆಗೆ ಆಸ್ಪದವಿಕ್ಕುವ ವ್ಯವಹಾರ ಅಲ್ಲೊಂದು ಕಡೆ ನಡೆಯುತ್ತಿತ್ತು. “ಇದನ್ನು ಸವಿದರೆ ಮದನ ವಿಲಾಸವದು” ಎನ್ನುತ್ತಾ ತಾಂಬೂಲವನ್ನು ರಸಿಕ ಪುರುಷರಿಗೆ ತೋರುವವರಿದ್ದರು. ಹೊಸ ಬಗೆಯ ಸುಗಂಧ ದ್ರವ್ಯಗಳನ್ನು, ಆಕರ್ಷಣೀಯ ಪರಿಮಳದ ಕುಸುಮಗಳನ್ನು ತೋರಿ ವ್ಯಾಪಾರದೆಡೆಗೆ ಸೆಳೆವವರಿದ್ದರು. “ಸಂಗಾತಿಗಳನ್ನು ಒಲಿಸಬಲ್ಲ ಬಲವಿದೆ ಇದರಲ್ಲಿ” ಎಂದು ವಿಧವಿಧದ ಪರಿಮಳದ ಕರಡಿಗೆಗಳನ್ನು ಕಣ್ಣೆದುರು ಇಡುವವರಿದ್ದರು.
ಅಲ್ಲೊಂದು ದಿಶೆಯಲ್ಲಿ ಹೂವುಗಳನ್ನು ಮಾರುತ್ತಿದ್ದರು ಸುಂದರ ಸ್ತ್ರೀಯರು. ಅಂತಹ ಹೆಂಗಳೆಯರ ನಸುನಗೆಯೇ ಅರೆಬಿರಿದ ಮಲ್ಲಿಗೆಯ ನೆನಪನ್ನು ತರುವಂತಿತ್ತು. ಹೊಳೆವ ಹಲ್ಲು ಜಾಜಿ ಮಲ್ಲಿಗೆಯಂತಿತ್ತು. ಮುಖವು ಕಮಲದಂತಿತ್ತು. ತೋಳುಗಳಂತೂ ಬಾಗಿದ ಹೂವಿನ ಮಾಲೆಗಳಾಗಿದ್ದವು. ಮೂಗು ಸಂಪಿಗೆ ಹೂವಿನಂತೆ. ಕನ್ನೆöÊದಿಲೆ ಹೂವಿನೆಸಳಿನಂತೆ ಕಣ್ಣುಗಳು. ಕೇತಕಿ ಕುಸುಮದಂತಹ ಉಗುರುಗಳು. ಈ ಬಗೆಯ ಕುಸುಮ ಚೆಲುವಷ್ಟನ್ನೂ ಕಾಯದ ಮೇಲೆ ಆವಾಹಿಸಿಕೊಂಡು ಉಳಿದ ಹೂಗಳನ್ನು ಮಾರುವಂದದಿ ಕುಳಿತಿದ್ದರು ಚೆಲುವ ಲಲನೆಯರು. ಹೀಗೆ ಹೂವುಗಳನ್ನು ಪೋಣಿಸಿ ಮಾರುತ್ತಿದ್ದ ಮಾಲೆಗಾರ್ತಿಯರ ಕಣ್ಣಿನ ಹುಬ್ಬೇ ಮನ್ಮಥನ ಬಿಲ್ಲಾಗಿ ಕರುಳೇ ಬಿಲ್ಲಿನ ಹೆದೆಯಾಗಿ ಕಣ್ಣೇ ಬಾಣವಾಗಿ ರಸಿಕ ಹೃದಯವನ್ನು ನಾಟುತ್ತಿತ್ತು. ಹೀಗೆ ಸೌಂದರ್ಯದಿಂದಲೇ ಕೊಳ್ಳುವವರನ್ನು ಮರುಳು ಮಾಡುವ ಚಾಕಚಕ್ಯತೆಯಿತ್ತು ಈ ಚೆಲುವೆಯರಿಗೆ. ಮಲ್ಲಿಗೆಯನ್ನು ಕೆಂಪು ಜಾಜಿ ಎಂದು ಹೇಳಿ ಮಾರುತ್ತಿದ್ದರು. ಹುಚ್ಚುನಗೆಯನ್ನು ಸೂಸುತ್ತಲೇ ಕನ್ನೈದಿಲೆಯನ್ನು ತಾವರೆಯೆಂದು ನಂಬಿಸಿ ಕೊಳ್ಳುವವರ ಕೈಗಿಡುತ್ತಿದ್ದರು. ಇನ್ನೂ ಪೂರ್ಣ ಅರಳದ ಸುರಹೊನ್ನೆಯ ಮಾಲೆಯನ್ನು ಬಂದವರೆದುರು ಎತ್ತಿಹಿಡಿದು ಸುರಗಿ ಹೂವಿನ ಮಾಲೆಯಿದು ಎನ್ನುವರು. ಚೆಲ್ಲುಚೆಲ್ಲಾಗಿ ಕಣ್ಣೋಟ ಹರಿಸುತ್ತಾ ಕೆಂದಾವರೆಯನ್ನು ಬಿಳಿಯ ತಾವರೆಯೆನ್ನುವರು.
ಹೀಗೆ ದ್ವಾರಕಾ ನಗರಿಯ ಸೊಬಗನ್ನು ನೋಡುತ್ತಾ ಬಂದ ಭೀಮನಿಗೆ ಈಗ ಎದುರಾದದ್ದು ವೇಶ್ಯಾಗೃಹಗಳಿದ್ದ ಸ್ಥಳ. ಋಷಿಸದೃಶರಾಗಿದ್ದವರನ್ನೂ ಸಹ ಹೆಣ್ಣುಗಳ ನೆರವಿನಿಂದ ಬೇಟೆಯಾಡುವ ಬಗೆಯಲ್ಲಿ ಮನ್ಮಥನೇ ಬಲೆಯನ್ನು ಬೀಸಿದ ತೆರದಲ್ಲಿ ತೋರುತ್ತಿತ್ತು ಅಲ್ಲಿದ್ದ ಸದನಗಳು. ಅತಿಚೆಲುವನ್ನು ಮೈವೆತ್ತಿದ್ದ ಲಲನೆಯರು ಅಲ್ಲಿದ್ದರು. ಅವರ ಲಾವಣ್ಯಕ್ಕೆ ಸರಿಹೊಂದುವ ಸೌಂದರ್ಯವದು ಇಡಿಯ ಜಗದಲ್ಲಿ ಬೇರೆಲ್ಲೂ ಕಾಣುವಂತಿರಲಿಲ್ಲ.
ಆ ಸುಂದರಿಯರ ಪಾದಗಳೂ ಮುಖಗಳೂ ಕಮಲಗಳಂತಿದ್ದವು. ಅವರ ನಡಿಗೆ ನಾಗರಹಾವುಗಳ ಚಲನೆಯಂತಿತ್ತು. ಕೈ ಮತ್ತು ತುಟಿಗಳು ಹವಳವನ್ನು ನಾಚಿಸುವಂತಿದ್ದವು. ತೊಡೆಯು ಬಾಳೆಯ ದಿಂಡಿನಂತಿದ್ದರೆ ಹೊಳೆವ ಚುರುಕಿನ ಕಣ್ಗಳು ಮೀನುಗಳಂತಿದ್ದವು. ಸಿಂಹಕಟಿ ಅವರದ್ದಾಗಿತ್ತು.
ಊರ್ವಶಿಯ ಕ್ಷೀಣನಡುವಿಗೆ ಸಿಂಹದ ಸೊಂಟ ಸಮವಾದೀತೇ! ಮೇನಕೆಯ ಇಂಪಾದ ದನಿಗೆ ವಸಂತೋತ್ಸವದ ಕೋಗಿಲೆಯ ಸ್ವರ ಸರಿಸಾಟಿಯಾಗಬಲ್ಲುದೇ! ಕುಸುಮ ಬಾಣವದು ರಂಭೆಯ ನಯನ ನೋಟದ ಚೆಲುವಿಗೊಂದು ಎಣಿಕೆಯೇ! ಎಂದು ಬಗೆಬಗೆಯ ಹೋಲಿಕೆಯನು ನಡೆಸುತ್ತಾ ವೇಶ್ಯೆಯೊಬ್ಬಳನ್ನು ಹೊಗಳುವ ಉತ್ಸುಕತೆಯಲ್ಲಿದ್ದನೊಬ್ಬ ಅಲ್ಲಿಯ ವಿಲಾಸೀ ಪುರುಷ.
ಮೊದಲಿನ ಸ್ನೇಹದ ಅಗತ್ಯವಿನ್ನಿಲ್ಲ. ದಾಕ್ಷಿಣ್ಯವನ್ನು ಪೂರ್ಣವಾಗಿ ತೊಡೆದುಹಾಕು. ನಿನಗೆ ತೀರಾ ವಯಸ್ಸಾದಾಗ ಯಾರೂ ಕೂಡಾ ನಿನ್ನನ್ನು ನೋಡಿಕೊಳ್ಳಲಾರರು. ಕಾಲ ಸಾಗುತ್ತಲೇ ಇರುತ್ತದೆ. ಬಾಂಧವ್ಯದ ಪಾಶವನ್ನು ಕಡಿದುಹಾಕು. ಹಣವನ್ನು ಸಂಪಾದಿಸುವ ಕಡೆಗೆ ಗಮನ ಕೊಡು ಎಂದು ಬುದ್ಧಿವಾದದ ಮಾತುಗಳನ್ನು ಮಗಳಿಗೆ ಹೇಳುತ್ತಾ, ತಮ್ಮ ಬದುಕು ನಡೆಯಬೇಕಾದ ಬಗೆ ಹೇಗೆ ಎನ್ನುವುದನ್ನು ಬೋಧಿಸುತ್ತಿದ್ದಳು ಒಬ್ಬಳು ವೇಶ್ಯೆ.
ಎಲ್ಲವನ್ನೂ ಕಂಡ ಭೀಮ. ಎಲ್ಲರನ್ನೂ ಕಂಡ ಭೀಮ. ಅದೋ ಆ ಅರಮನೆ, ಶ್ರೀಕೃಷ್ಣನೆಂಬ ಕರುಣೆಯ ಅರಸನಿದ್ದ ಆ ಅರಮನೆ ಅವನನ್ನು ಕೈಬೀಸಿ ಕರೆಯತೊಡಗಿತು.
—————
ಡಾ. ವಿಶ್ವನಾಥ ಎನ್ ನೇರಳಕಟ್ಟೆ




