ವಿಶ್ವಾಸ್ ಗೌಡ ಅವರ ಕೃತಿ “ನೆಮ್ಮದಿಯ ವಿಳಾಸವೆಲ್ಲಿದೆ?”ಒಂದು ಅವಲೋಕನ, ಮಧು ಮಾಲತಿ
ಪುಸ್ತಕ ಸಂಗಾತಿ ವಿಶ್ವಾಸ್ ಗೌಡ ಅವರ ಕೃತಿ “ನೆಮ್ಮದಿಯ ವಿಳಾಸವೆಲ್ಲಿದೆ?” ಒಂದು ಅವಲೋಕನ, ಮಧು ಮಾಲತಿ ಪತ್ರಕರ್ತ ˌ ಸಾಹಿತಿ ಹಾಗೂ ಅಂಕಣಕಾರರಾದ ಶ್ರೀ ವಿಶ್ವಾಸ್ ಡಿ ಗೌಡರ “”ನೆಮ್ಮದಿಯ ವಿಳಾಸವೆಲ್ಲಿದೆ”” ಕೃತಿಯನ್ನು ಖಂಡಿತಾ ಒಂದೊಮ್ಮೆ ಓದಲೇಬೇಕು .ಈ ಕೃತಿಯ ಶೀರ್ಷಿಕೆಯೇ ಬಹಳ ಆಪ್ತವಾಗುತ್ತದೆ. ಏಕೆಂದರೆ ಪ್ರತಿಯೊಬ್ಬರೂ ಸಹ ಎಷ್ಟೇ ಸುಖಿಯಾಗಿದ್ದರೂ ಈ ನೆಮ್ಮದಿಯನ್ನು ಕ್ಷಣವೂ ಅರಸುವವರೇ .ಈ ನೆಮ್ಮದಿಯ ವಿಳಾಸವ ಹುಡುಕಿ ಹುಡುಕಿ ಸೋತವರೇ ಹೆಚ್ಚು. ಅದರ ವಿಳಾಸವನ್ನು ಅರಸುವವರಿಗಾಗಿಯೇ ವಿಶ್ವಾಸ್ ಗೌಡರು ಈ ಕೃತಿಯನ್ನು ಬರೆದಿರಬಹುದು. ಏಕೆಂದರೆ ಇಲ್ಲಿರುವ ಪ್ರತಿ ಕಥೆಯು ಮನಸ್ಸಿಗೆ ತುಂಬಾ ಹತ್ತಿರವಾದಂತೆ ತೋರುತ್ತದೆ .ಪ್ರತೀ ಕಥೆಯಲ್ಲೂ ಓದುಗ ತನ್ನನ್ನೇ ಅಲ್ಲಿ ಬಿಂಬಿಸುತ್ತ ಹೋದಂತಿದೆ. ಇಲ್ಲಿರುವ ಪ್ರಸಂಗಗಳು ಒಂದಿಲ್ಲೊಂದು ರೀತಿಯಲ್ಲಿ ಎಲ್ಲರ ಜೀವನದಲ್ಲೂ ಘಟಿಸಿಯೇ ಇರುತ್ತದೆ .ಇಂತಹ ಘಟನೆಗಳನ್ನೇ ಕಥೆಯ ಜೀವಾಳವಾಗಿಸಿಕೊಂಡು ಸರಳ ಸುಂದರವಾಗಿ ಹೆಣೆಯುತ್ತಾ ಓದುಗನೆದೆಗೆ ಶಾಶ್ವತವಾಗಿ ಇಳಿಸುವಲ್ಲಿ ವಿಶ್ವಾಸ್ ಗೌಡರ ಪ್ರಭುದ್ಧತೆ ಎದ್ದು ಕಾಣುತ್ತದೆ.ಇಲ್ಲಿ ಬರುವ ಅಪ್ಪ ಮಕ್ಕಳ ಭಾವನಾತ್ಮಕ ಸಂಬಂಧಗಳ ಬರಹಗಳು ಓದುಗನ ಕಣ್ಣೆವೆಗಳನ್ನು ತುಂಬದೇ ಇರಲಾರದು .ಮಗಳಿಗಾಗಿ ಜೀವನವನ್ನೇ ಮುಡಿಪಿಡುವ ಅಪ್ಪ ˌಇಹಲೋಕ ತ್ಯಜಿಸಿಯು ಮಗನ ನೌಕರಿಗಾಗಿ ಅದೃಶ್ಯದಲ್ಲೂ ದೃಶ್ಯದಂತೆ ಗೋಚರಿಸಿ ಕಚೇರಿಗೆ ಅಲೆವ ಅಪ್ಪ ˌಖಾಯಿಲೆಯಿಂದ ಮೂಗನಾದ ಮಗನಿಗಾಗಿ ಮಾತಿದ್ದರೂ ಮೌನಕೋಟೆಯೊಳಗೆ ಬಂಧಿಯಾಗಿ ಜೀವಮಾನವಿಡೀ ಮೂಗನಾಗಿ ಬದುಕಿದ ಅಪ್ಪ ಹೀಗೆ ಅಪ್ಪನ ವ್ಯಕ್ತಿತ್ವ ಪ್ರತೀಕಥೆಯಲ್ಲೂ ಹಿಮಾಲಯಕ್ಕಿಂತ ಎತ್ತರದ ಸ್ಥಾನದಲ್ಲೇ ನಿಲ್ಲುತ್ತದೆ.ಈ ಕಾರಣಗಳಿಗಾಗಿ ಈ ಕೃತಿ ಮತ್ತಷ್ಟು ಆಪ್ತವಾಗುತ್ತಾ ಸಾಗುತ್ತದೆ .ಪ್ರೇಮ ಪ್ರಸಂಗಗಳ ಕಥೆಗಳಿಗೆ ಒಳಹೊಕ್ಕರೆ ಪ್ರೀತಿಯ ಶರಧಿಯಲ್ಲಿ ಮಿಂದೆದ್ದವರೇ ನಾವೆಲ್ಲರೂ. ಅತೀ ನವಿರಾದ ನಾಜೂಕಾದ ಪದಪುಂಜಗಳು ಮತ್ತೆ ಮತ್ತೆ ಸೆಳೆಯುತ್ತವೆ . ಪ್ರತೀ ಓದುಗನೂ ಓದುತ್ತಿದ್ದಂತೆ ತನ್ನದೇ ಪ್ರೇಮ ಕಥೆ ಎಂಬಷ್ಟು ಅಲ್ಲಿ ಕಳೆದು ಹೋಗುತ್ತಾನೆ. ಇಲ್ಲಿ ಬರುವ ಪ್ರೀತಿಯ ಸೆಳೆತಗಳು ˌ ಮೊದಲ ಪ್ರೇಮ ˌ ಪ್ರೇಮ ನಿವೇದನೆಗೆ ತಲ್ಲಣ ಗೊಳ್ಳುವ ಮನಸ್ಸು ˌಸಿಕ್ಕಿಯೂ ಸಿಗದ ಪ್ರೇಮ ಇವೆಲ್ಲದರ ನಡುವೆ ಒಂದಷ್ಟು ಹೊತ್ತು ಓದುಗ ಪ್ರಭು ತನ್ನ ಜೀವನವನ್ನೇ ಅಲ್ಲಿ ಪ್ರತಿಬಿಂಬಿಸಿಕೊಳ್ಳುತ್ತಾನೆ. ಓದುತ್ತಾ ಓದುತ್ತಾ ಆಧ್ರಗೊಳ್ಳುತ್ತಾನೆ . ನೆಮ್ಮದಿಯ ವಿಳಾಸವನ್ನು ಅರಸುತ್ತ ಅರಸುತ್ತ ಮತ್ತೆ ಮತ್ತೆ ಕೃತಿಯ ಮೇಲೆ ಕಣ್ಣಾಡಿಸುವಷ್ಟು ಬರಹಗಳು ಸೆಳೆಯುತ್ತವೆ.ಎಂದೋ ಅನುಭವಿಸಿದ ನೋವು ˌನಲಿವು ˌ ಸಂಕಟಗಳು ˌ ನಮ್ಮವರನ್ನೇ ಅರಿಯಲಾಗದ ಸ್ಥಿತಿ ˌ ದಕ್ಕಿಯೂ ದಕ್ಕದ ಪ್ರೀತಿ ಇವೆಲ್ಲವುಗಳ ಸುತ್ತ ನಮ್ಮ ಬದುಕು ಗಿರಕಿ ಹೊಡೆಯುತ್ತಿರುತ್ತದೆ .ಇಂತಹ ಘಟನೆಗಳೇ ವಿಶ್ವಾಸ್ ಗೌಡರ ಬರಹದ ಕೇಂದ್ರ ಬಿಂದು. ಸುಮ್ಮನೇ ಕೈಗೊತ್ತಿಕೊಂಡರೂ ಕೃತಿಯನ್ನು ಸಂಪೂರ್ಣ ಓದುವವರೆಗೂ ಅದು ತನ್ನತ್ತ ಸೆಳೆಯುತ್ತಲೇ ಇರುತ್ತದೆ. ಸಾಹಿತ್ಯದಲ್ಲಿ ಅಭಿರುಚಿ ಇರುವವರು ಒಮ್ಮೆಯಾದರೂ ಈ ಕೃತಿಯನ್ನು ಪಡೆದು ಓದಲೇಬೇಕೆನ್ನುವಷ್ಟು ಕೃತಿ ಸಿದ್ಧಗೊಂಡಿದೆ .ಈ ಮೂಲಕ ವಿಶ್ವಾಸ ಡಿ ಗೌಡರಿಗೆ ಶುಭಾಶಯಗಳನ್ನು ಕೋರುತ್ತಾ ಓದುವೆಡೆಗೆ ಸಾಗೋಣ. ಮಧು ಮಾಲತಿ ರುದ್ರೇಶ್
ವಿಶ್ವಾಸ್ ಗೌಡ ಅವರ ಕೃತಿ “ನೆಮ್ಮದಿಯ ವಿಳಾಸವೆಲ್ಲಿದೆ?”ಒಂದು ಅವಲೋಕನ, ಮಧು ಮಾಲತಿ Read Post »



