ವ್ಯಕ್ತಿ ಸಂಗಾತಿ
ಜಯಲಕ್ಷ್ಮಿ ಕೆ
“ಹಾಸ್ಯ ಕವಿ ಬೀಚಿ…ಸವ್ಯಸಾಚಿ”


“ಇಂದು ಬಾಳಿಗೆ ಸ್ವಾಗತ, ನಾಳೆ ಸಾವಿಗೂ ಸ್ವಾಗತ ” ಇದು ತಮ್ಮ ಬಯೋಗ್ರಫಿಯಲ್ಲಿ ಬೀಚಿಯವರು ಬರೆದ ಮಾತು. “ಯಾರೊಬ್ಬನ ಬಾಳು ಕೂಡ ಬದುಕಲಿಕ್ಕೇ ಆಗದಷ್ಟು ಕಠಿಣವೂ ಅಲ್ಲ, ಲೀಲಾಜಾಲವಾಗಿ ಸಾಗುವ ಸುಲಲಿತ ಯಾನವೂ ಅಲ್ಲ. ಏನೇ ಕಷ್ಟ ಬಂದರೂ ನಾವು ವಾರದಲ್ಲಿ ಮೂರು ದಿನಗಳಾದರೂ ನಗುತ್ತಾ ಇರಬೇಕು. ಅದು ನಿನ್ನೆ ಇವತ್ತು ಮತ್ತು ನಾಳೆ”. ಹೀಗೆ ಹೇಳುತ್ತಲೇ ಹಾಸ್ಯ ಬರಹದ ಮೂಲಕ ಜನರ ಬದುಕಿನಲ್ಲಿ ಸದಾ ಭರವಸೆ ತುಂಬುತ್ತಿದ್ದ ಹಾಸ್ಯ ಕವಿ ಬೀಚಿಯವರು ಮರೆಯಾಗಿ ಇಂದಿಗೆ 45 ವರ್ಷಗಳು ಉರುಳಿವೆ. ಆದರೆ ಅವರ ನವಿರಾದ ಹಾಸ್ಯ ನಮ್ಮೆಲ್ಲರ ಮನದಲ್ಲಿ ಜೀವನೋತ್ಸಾಹ ತುಂಬುತ್ತಾ ಸದಾ ಜೀವಂತವಾಗಿದೆ. ಹಾಸ್ಯ ಎಂದರೆ ಬೀಚಿ, ಬೀಚಿ ಎಂದರೆ ಹಾಸ್ಯ. ಒಂದೇ ನಾಣ್ಯದ ಎರಡು ಮುಖಗಳು!!
1913ರಲ್ಲಿ ಹರಪನಹಳ್ಳಿಯ ಶ್ರೀನಿವಾಸರಾವ್ ಮತ್ತು ಭಾರತಮ್ಮನವರ ಪುತ್ರನಾಗಿ ಜನಿಸಿದ ರಾಯಸಂ ಭೀಮಸೇನರಾವ್ ‘ಬೀಚಿ’ ಎಂದೇ ಪ್ರಸಿದ್ಧರು. “ಹಾಸ್ಯ ಬ್ರಹ್ಮ” ಬೀಚಿಯವರು ಕನ್ನಡದ ಮೊದಲ ಹಾಸ್ಯ ಕವಿಯಲ್ಲದಿದ್ದರೂ ಹಾಸ್ಯವನ್ನೇ ತಮ್ಮ ಕೃತಿಗಳ ಪ್ರಮುಖ ಮಾಧ್ಯಮವನ್ನಾಗಿಸಿಕೊಂಡ ಕವಿಗಳಲ್ಲಿ ಇವರು ಮೊದಲಿಗರು. ನಗುವಿನ ಬಗೆಗಿನ ಅವರ ಸಿದ್ಧಾಂತ ಬಹಳ ಶುದ್ಧವಾದದ್ದು. ನಗುವಿನ ಸಂದರ್ಭಗಳಲ್ಲಿ ನಗು ಸಹಜವಾಗಿ ಹೊರ ಹೊಮ್ಮುತ್ತದೆ. ಆದರೆ ನೋವಿನ ಸನ್ನಿವೇಶಗಳಲ್ಲಿ ಕೂಡ ಮೊಗದಲ್ಲಿ ನಗುವನ್ನು ಅರಳಿಸುವುದು ಕಷ್ಟದ ಮಾತು. ಆದರೆ ಆ ಶಕ್ತಿ ಬೀಚಿಯವರ ಸಾಹಿತ್ಯಕ್ಕೆ ಇದೆ. ಸರ್ವರ ಸಮ್ಮುಖದಲ್ಲಿಯೂ ಹಂಚಿಕೊಳ್ಳಬಹುದಾದ ನವಿರಾದ ಹಾಸ್ಯದ ತುಣುಕುಗಳು ಸಾಹಿತ್ಯ ಲೋಕಕ್ಕೆ ಇವರಿತ್ತ ಅಪೂರ್ವ ಕೊಡುಗೆ.
ಹುಟ್ಟುವಾಗಲೇ ತಂದೆಯನ್ನು ಕಳೆದುಕೊಂಡ ಬೀಚಿಯವರು ತಮ್ಮ ಆರನೇ ವಯಸ್ಸಿನಲ್ಲಿ ತಾಯಿಯನ್ನು ಕೂಡ ಕಳೆದುಕೊಂಡರು. ಅವರೇ ಹೇಳುವಂತೆ ” ಬಡತನವೋ ಸಿರಿತನವೋ ಭೂಮಿಗೆ ಬಂದ ಮಗು ಆಯುಸ್ಸಿದ್ದರೆ ಯಾರದೋ ಆಸರೆಯಲ್ಲಿ ಬೆಳೆದೇ ಬೆಳೆಯುತ್ತದೆ. ಹಾಗೆ ಅವರಿಗೂ ಆಸರೆ ಸಿಕ್ಕಿತು. ಅದು ಅವರ ಸೋದರ ಮಾವನ ಆಸರೆ. ಬಡತನದಲ್ಲಿಯೂ ಅತ್ತೆ ಮಾವ ಅಕ್ಕರೆಯ ಆರೈಕೆಗೇನೂ ಕಡಿಮೆ ಮಾಡಲಿಲ್ಲ. ಅವರು ಓದಿದ್ದು ತೆಲುಗುಮಯವಾಗಿದ್ದ ಅಂದಿನ ಬಳ್ಳಾರಿಯಲ್ಲಿ. ಅಲ್ಲಿ ಒಂದೆರಡು ವರ್ಷ ಕನ್ನಡ ಕಲಿತದ್ದು ಬಿಟ್ಟರೆ ಉಳಿದಂತೆ ಶಿಕ್ಷಣಾಭ್ಯಾಸವೆಲ್ಲ ನಡೆದದ್ದು ಇಂಗ್ಲಿಷ್ ಮತ್ತು ತೆಲುಗು ಭಾಷೆಯಲ್ಲಿ. ಆದರೆ ಅಪ್ರತಿಮ ಸಾಹಿತ್ಯ ಸೃಷ್ಟಿಸಿ ಹೆಸರು ಗಳಿಸಿದ್ದು ಮಾತ್ರ ಕನ್ನಡದಲ್ಲಿ!! ಬಡತನದಲ್ಲಿಯೇ ಸೀತಾಬಾಯಿಯವರೊಡಗೂಡಿ ಬಾಳ ದೋಣಿಯನ್ನು ಸಾಗಿಸಿದ ಭೀಮಸೇನರಾವ್ ಅವರು ತಮ್ಮ ಇಬ್ಬರು ಗಂಡು ಮಕ್ಕಳನ್ನೂ ಚೆನ್ನಾಗಿ ಓದಿಸಿದರು. ಆದರೆ ಪದವಿ ಮುಗಿಸಿದ ಕಿರಿಯ ಮಗ ರವೀಂದ್ರನನ್ನು ಟೈಫಾಯಿಡ್ ಜ್ವರ ಬಲಿ ತೆಗೆದುಕೊಂಡುಬಿಟ್ಟಿತ್ತು. “ಕತ್ತಲಿನ ಬಸಿರಲ್ಲಿ ಬೆಳಕು ಹುಟ್ಟಿತು: ಬೆಳಕಿನ ಫಲವೂ ಮತ್ತೆ ಕತ್ತಲು “… ಬೀಚಿ ದಂಪತಿಗಳಿಗೆ ಅತೀವ ವೇದನೆಯನ್ನು ತಂದೊಡ್ಡಿದ ಘಟನೆ ಇದು.
ಬೀಚಿಯವರ ಮೊದಲ ಲೇಖನ ಪ್ರಕಟವಾದದ್ದು ಪ್ರಜಾವಾಣಿಯಲ್ಲಿ. ಅ. ನ ಕೃ ರವರ ಹಾಸ್ಯರಾಗ ಇವರ ಮೇಲೆ ಪರಿಣಾಮ ಬೀರಿದ ಮೊದಲ ಕೃತಿ. ‘ ಗರುಡ ಪುರಾಣ ‘, ‘ ನಾನೇ ಸತ್ತಾಗ ‘, ‘ ರೇಡಿಯೋ ನಾಟಕಗಳು ‘ ಮೊದಲಾದ ಹಲವಾರು ಅಪೂರ್ವ ಕೃತಿಗಳನ್ನು ಇವರು ಬರೆದಿದ್ದಾರೆ.
” ನಿನ್ನಂತೆ ನೀನಾಗು, ನಿನ್ನ ನೀ ಅರಿ ಮೊದಲು
ಚೆನ್ನೆಂದು ದೊಡ್ಡವರ ಅನುಕರಿಸಬೇಡ
ಏನಾಯ್ತು ಮರಿ ಕತ್ತೆ?
ಚೆಲುವಿತ್ತು, ಮುದ್ದಿತ್ತು,
ತನ್ನಪ್ಪನಂತಾಗಿ ಹಾಳಾಯ್ತೊ ತಿಂಮ್ಮ… “
ಯಾವುದೇ ಬರಹಗಾರನ ವೈಯಕ್ತಿಕ ಪ್ರತಿಭೆ ಅನುಕರಣೆಯ ಮರಳಿನಲ್ಲಿ ಹೂತು ಹೋಗಬಾರದು ಎನ್ನುವುದು ಅವರ ನಿಲುವಾಗಿತ್ತು. ‘ರೈತವಾಣಿ’ ವಾರಪತ್ರಿಕೆಯಲ್ಲಿ ನಿರಂತರವಾಗಿ ‘ ಬೇವಿನಕಟ್ಟೆ ತಿಮ್ಮ ‘ ಎಂಬ ಸ್ಥಿರ ಶೀರ್ಷಿಕೆಯಲ್ಲಿ ಬರೆಯುತ್ತಿದ್ದ ಇವರ ಬರಹಗಳು ಕನ್ನಡ ಸಾಹಿತ್ಯ ಲೋಕದಲ್ಲಿ ಒಂದು ವಿಶೇಷ ಸ್ಥಾನವನ್ನು ಪಡೆದಿವೆ. ‘ತಿಂಮ್ಮನ ತಲೆ ‘ ಹಲವು ಬಾರಿ ಮುದ್ರಣ ಕಂಡಿದೆ. ‘ದಾಸ ಕೂಟ ‘ ಕನ್ನಡಕ್ಕೆ ಇವರು ನೀಡಿದ ಮೊತ್ತ ಮೊದಲ ಹಾಸ್ಯ ಪ್ರಧಾನ ಕಾದಂಬರಿ. ” ಮಗಳನ್ನು ಬೆಂಗಳೂರಿಗೆ ಕೊಟ್ಟಿದ್ದೇವೆ “.. ಎಂದವರಿಗೆ, ಹಾಂ!!! ಇಡೀ ಬೆಂಗಳೂರಿಗಾ!!! ” ಎಂದು ಹಾಸ್ಯ ಚಟಾಕಿ ಹಾರಿಸುತ್ತಿದ್ದ ಬೀಚಿಯವರಿಗೆ ” ಮಗಳನ್ನಾಗಲೀ, ಮತವನ್ನಾಗಲಿ, ಅಯೋಗ್ಯರಿಗೆ ಕೊಡಬಾರದು ಎನ್ನುವ ಪ್ರಬುದ್ಧ ಚಿಂತನೆ ಇತ್ತು. ಇವರ ಹಲವಾರು ಚುಟುಕುಗಳಲ್ಲಿ, ಹನಿ ಕವನಗಳಲ್ಲಿ, ಮೇಲ್ನೋಟಕ್ಕೆ ಹಾಸ್ಯ ಕಂಡರೂ, ಒಳಾರ್ಥದಲ್ಲಿ ಸಮಾಜದ ಸ್ಥಿತಿಗತಿಗಳ ಬಗೆಗಿನ ಟೀಕೆಯಿದೆ, ಸಮಾಜಮುಖಿ ಚಿಂತನೆಗಳಿವೆ.
” ಮಗುವಿಗೆ ಅಳು
ಹೆಣ್ಣಿಗೆ ನಗು
ಅವಿವೇಕಿಗೆ ಧೈರ್ಯ
ಅಪ್ರಾಮಾಣಿಕನಿಗೆ ರಾಜಕಾರಣ
ಅತ್ಯುತ್ತಮ ಆಯುಧಗಳು ”
ಎಂದು ನಿರ್ಭೀತಿಯಿಂದ ಬರೆದವರು ಬೀಚಿ. ‘ ಕೋಳಿ ರುಚಿ ಕಂಡವನು ಹೋಳಿಗೆ ತಿನ್ನಲಾರ. ಹಾಗೆಯೇ ಸಾರ್ವಜನಿಕ ಹಣದ ರುಚಿ ಕಂಡವನು ದುಡಿದು ತಿನ್ನಲಾರ ಎನ್ನುವ ಬೀಚಿ ಸಮಾಜದಲ್ಲಿ ನಡೆಯುವ ಅನ್ಯಾಯ ಭ್ರಷ್ಟಾಚಾರ ವಂಚನೆ ಎಲ್ಲದರ ಬಗೆಗಿನ ತಮ್ಮ ನಿಲುವನ್ನು ಕೇವಲ ನಾಲ್ಕು – ಆರು ಸಾಲುಗಳಲ್ಲಿಯೇ ಸ್ಪಷ್ಟಪಡಿಸಬಲ್ಲ, ಅನ್ಯಾಯವನ್ನು ಪ್ರತಿಭಟಿಸಬಲ್ಲ ಅಪ್ರತಿಮ ಬರಹಗಾರರಾಗಿದ್ದರು. ‘ ತಾಳಿ ಕದ್ದವನಿಗೆ ಕಠಿಣ ಶಿಕ್ಷೆ, ತಾಳಿ ಕಟ್ಟಿದವನಿಗೆ ಜೀವಾವಧಿ ಶಿಕ್ಷೆ ಎಂದು ನವಿರಾದ ಹಾಸ್ಯವನ್ನು ಬಿಂಬಿಸುತ್ತಿದ್ದ ಅವರು ಗೊಡ್ಡು ಸಂಪ್ರದಾಯಗಳನ್ನು ಕಟುವಾಗಿ ಟೀಕಿಸಿ ಬರೆದದ್ದೂ ಇದೆ.
” ಹೆಣ್ಣು ಚಿನ್ನವನ್ನು
ರಾಜಕಾರಣಿ ಅಧಿಕಾರವನ್ನು
ಒಲ್ಲೆ ಎಂದ ದಿನವೇ ಪ್ರಳಯವಾಗುತ್ತದೆ ”
ಎನ್ನುವ ಬೀಚಿಯವರ ಬರಹ ಪ್ರಳಯದ ಬಗೆಗಿನ ಹೊಸ ವ್ಯಾಖ್ಯಾನವೆನಿಸಿದರೂ ಅಲ್ಲೊಂದು ಸತ್ಯ ನಿಷ್ಟುರತೆಯಿದೆ. ಜನಜೀವನದ ಎಲ್ಲ ಮುಖಗಳು ಅವರ ಲೇಖನಿಯ ಮೂಲಕ ಹೊರಹೊಮ್ಮಿವೆ. ನ್ಯಾಯ ನಿಷ್ಠುರದ ಮಾತುಗಳನ್ನು ಅಲ್ಲದವರಿಗೆ ಅವರ ಬರಹಗಳು ಕಹಿ ಎನಿಸಿದರೂ ಕವಿಯ ಭಾವನೆಗಳು ಮಾತ್ರ ನಿರ್ಭೀತಿಯಿಂದ ಕೃತಿ ರೂಪ ತಾಳಿವೆ. ಸತ್ಯ, ನ್ಯಾಯ, ಧರ್ಮ, ಸಮಾನತೆಯ ಸೋಗು ಹಾಕಿ ಅವುಗಳ ವಿರುದ್ಧ ಹಾದಿಯನ್ನು ಕ್ರಮಿಸುವವರಿಗೆ ಕರೆಗಂಟೆಯಂತೆ ಎಚ್ಚರಿಸುವ ಅವರ ಬರಹಗಳು ಸಾಮಾಜಿಕ ಮೌಲ್ಯಗಳನ್ನು ಸಾರುವ ನಿತ್ಯನೂತನ ಸಾಲುಗಳಾಗಿವೆ. ವಾಸ್ತವಿಕತೆಯನ್ನು ಆಳವಾದ ಹಾಸ್ಯದೊಂದಿಗೆ ಜನಮನಕ್ಕೆ ತಲುಪಿಸುವ ವಿಶಿಷ್ಟ ಶೈಲಿಯನ್ನು ರೂಢಿಸಿಕೊಂಡಿದ್ದ ಕವಿ ಬೀಚಿ ಕನ್ನಡ ಸಾಹಿತ್ಯ ಲೋಕದ, ಹಾಸ್ಯ ಪ್ರಪಂಚದ ಸವ್ಯಸಾಚಿ.
ಜಯಲಕ್ಷ್ಮಿ ಕೆ,





Wow.. excellent work madam