ಕಾವ್ಯ ಸಂಗಾತಿ
ಸುಮಾ ಗಾಜರೆ
“ತಿಳಿಯಬೇಕಿದೆ ಇನ್ನೂನು!”


ಹೇಳಬೇಕಿದೆ ಮನಕೆ ಇನ್ನೇನೋ
ತಿಳಿಯಬೇಕಿದೆ ನನಗೆ ಇನ್ನೂನು ll
ಕಾಪಿಟ್ಟ ಕನಸುಗಳಲಿ
ಕರಗಿ ಹೋಗುವ ಮುನ್ನ
ಬರುವ ನಾಳೆಗಳಲಿ
ಕಳೆದು ಜಾರುವ ಮುನ್ನ
ಹೇಳಬೇಕಿದೆ ಮನಕೆ ಇನ್ನೇನೋ
ತಿಳಿಯಬೇಕಿದೆ ನನಗೆ ಇನ್ನೂನು ll
ಉಸಿರಿಗೆ ಹಸಿರಾಗಿ
ಹಚ್ಚ ಹಸಿರಾಗುವಂತೆ
ಜೀವಕ್ಕೆ ಸೆಲೆಯಾಗಿ
ಒಲವ ಒರತೆಯಂತೆ
ಹೇಳಬೇಕಿದೆ ಮನಕೆ ಇನ್ನೇನೋ
ತಿಳಿಯಬೇಕಿದೆ ನನಗೆ ಇನ್ನೂನು ll
ಎಲ್ಲ ಇಲ್ಲಗಳ ಸರಿಸಿ
ಇರುವುದನ್ನೇ ಸಂಭ್ರಮಿಸಿ
ನೋವು ನೀಗಿಸಿ ನಲಿವ ಸುರಿಸಿ
ಅಡಿಗಡಿಗು ದುಡಿವ ಮನಗಳಿಗೆ
ಹೇಳಬೇಕಿದೆ ಮನಕೆ ಇನ್ನೇನೋ
ತಿಳಿಯಬೇಕಿದೆ ನನಗೆ ಇನ್ನೂನು ll
ಬೇಕುಗಳ ಬೆನ್ನೇರಿ ಭ್ರಮೆಯಲಿ
ಬಂಧಿಯಾಗಿ ಇರುವನ್ನೆ ಮರೆತು
ನೆಮ್ಮದಿಗಾಗಿ ನಗುವ ತೊರೆದು
ಹೆಜ್ಜೆಗುರುತು ಹುಡುಕುವ ಹೃದಯಗಳಿಗೆ
ಹೇಳಬೇಕಿದೆ ಮನಕೆ ಇನ್ನೇನೋ
ತಿಳಿಯಬೇಕಿದೆ ನನಗೆ ಇನ್ನೂನು ll
ಆಂತರ್ಯವರಿತ ಮನಕೆ ಗೊತ್ತು
ಪ್ರೀತಿಯೊಂದು ಹವಳದಾ ಮುತ್ತು
ಹೊಕ್ಕು ತಿಳಿದವರಿಗಷ್ಟೇ ಸಿಕ್ಕೀತು
ಒಲವೆಂದು ಪೂಜಿಸಿದವರಿಗದು ದಕ್ಕೀತು
ಹೇಳಬೇಕಿದೆ ಮನಕೆ ಇನ್ನೇನೋ
ತಿಳಿಯಬೇಕಿದೆ ನನಗೆ ಇನ್ನೂನು ll
ಸುಮಾ ಗಾಜರೆ




