ಕಾವ್ಯ ಸಂಗಾತಿ
ಡಾ. ಪಿ. ಜಿ. ಕೆಂಪಣ್ಣವರ
“ಸಗ್ಗ ಬಂದಿತು ಇಳೆಗೆ”


ಎರಳೆಗಂಗಳ ಚೆಲುವೆ
ನಗುವ ಮೋಹಕ ತಾರೆ
ನಿನ್ನ ನೋಡುತ ನಾನು ಮರುಳನಾದೆ!
ಬರಿ ಚಣದ ಬದುಕಿನಲಿ
ಒಲವ ಬಿತ್ತಿದ ನೀನು
ಬಾಳ ದಾರಿಗೆ ನಿತ್ಯ ದೀಪವಾದೆ
ಬಿರಿದ ಮಲ್ಲಿಗೆ ದಂಡೆ
ಮುಡಿದು ನೀ ಬರುತಿರಲು
ಪಿಕವು ಕೂಗಿತು ಅರಸಿ ಬಂದಳೆಂದು!
ಬದುಕ ಬಂಡಿಗೆ ಎರಡು
ಗಾಲಿ ನಾವಿರುತಿರಲು
ಹದುಳ ತುಂಬುವುದಿಲ್ಲಿ ಬಳಿಗೆ ಬಂದು!
ಬಾಳ ಪಯಣದ ತುಂಬ
ಹಸಿರು ತುಂಬಿತು ನಲ್ಲೆ
ನಿನ್ನ ಒಲುಮೆಯ ತೊರೆಯು ಹರಿಯುತಿರಲು!
ಬಂದ ಜಂಜಡವೆಲ್ಲ
ಕರಗಿ ಹೋಯಿತು ಸಖಿಯೇ
ಸಗ್ಗ ಬಂದಿತು ಇಳೆಗೆ ನೀನು ನಗಲು!
ಡಾ. ಪಿ. ಜಿ. ಕೆಂಪಣ್ಣವರ



