ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅವಳೊಳಗಿನ ಇನಿಯಳು
ನೋಡುವಳು…
ನೋಡುತ್ತಲೇ ಇರುವವಳು
ರನ್ನಗೆನ್ನೆಯ ಸನ್ನೆಯಿಂದಲೇ
ಸವಿದೂರದಲ್ಲಿ ನಿಲ್ಲುವಳು.
ನೋಡಿದರೆ ,
ಕಣ್ರೆಪ್ಪೆಗಳು ಕದಲಿದರೆ
ನಿಂತು ಕುಂತು ನಾಚಿ
ತನಿಪನಿಯಂತೆ ನೀರಾಗುವಳು….

ಮತ್ತೊಮ್ಮೆ…….
ಒಳಗಿನ ಇಂಪುಕಂಪಿನ
ನೆನಪಿನ ಕೂಗಿಗೆ
ಧ್ವನಿಯ ಇಂಚರವಾಗುವಳು.
ಪ್ರೇಮದವರತೆಯ ಅವಲೋಕಿಸಿದ
 ಅವಲೋಕಿನಿಯಂತೆ,
ಅಬ್ಬರಿಸಿ, ಹುಬ್ಬೇರಿಸಿ
ರಮ್ಯಖುಷಿಗೈಯುವಳು

ಹಿತಮಿತ ಪಯಣವನ್ನೇ
ಹಿಗ್ಗಿಸಿ ಕುಗ್ಗಿಸಿ ಒಗ್ಗಿಸಿ ಜಗ್ಗಿಸಿ
ರಾಗಿಣಿಯಂತೆ ಅನುರಾಗಿಸುವ
ಅರೆದ್ವಂದ್ವದ ಅರ್ತಿಯ
 ಅರಗಿಣಿಯಾಗುವಳು…
ಏಕಾಂತದಲ್ಲಿಯೂ
 ಕಾಂತಧ್ಯಾನಸ್ಥೆಯಾಗಿ,
ವಿರಾಗಿಣಿ ಊರ್ಮಿಳೆಯಂತೆ.
ಪ್ರೇಮದಿಂದ ರಾಮನನ್ನು  
 ಆರಾಧಿಸುವ ಜಾನಕಿಯಂತೆ
ಸದಾ ಜೊತೆಯಾಗಿರುವ
ಅಂಟಿದ ನಂಟಿನ ನವತಾರೆಯಿವಳು

ಚಿಕ್ಕ ಚಿಕ್ಕ ಸಂಗತಿಗಳಿಗೆ
ಸದಾ ಸಂಗಾತಿಯಾಗಿ
ಶುದ್ಧ ಸಂಭ್ರಮೆಯಾಗಿ
ಗೆದ್ದಾಗ ಗೆಲುವಿಗೆ
ಕೇಕೆ ಹಾಕಿ,
ಸೋತಾಗ ಸಾಂತ್ವನಕ್ಕೆ
ಸಖಿಯಾಗಿ ಜೊತೆಯಾಗಿ
ಬಿಗಿದಪ್ಪಿ ಬಿಕ್ಕಿದವಳು.

ಕಂಡರೂ ಕಾಣದಿದ್ದರೂ
ಸದ್ದಿನ ಚಪ್ಪಾಳೆಗಳ
 ಸುರಿಮಳೆಗೈಯವಳು.
ಅರೆತೆರೆಮರೆಯಲ್ಲಿದ್ದರೂ
ಕಾವಲಿನ ಕಾಯದವಳು
ಕಾಳಜಿಯ ಕರುಣೆಯವಳು.
ಹೇ ಮಧುರಪ್ರೇಮದ ಸಾಕಿ
ಏನೇ ನಿನ್ನ ಉಸಿರಿನ ಹೆಸರು..
 *ಯಾರೇ ನೀ ಅಭಿಮಾನಿ?*
ಜಗವೇ ಮೆಚ್ಚುವ ಮಾನಿನಿ.

———

About The Author

17 thoughts on ““ಯಾರೇ ನೀ ಅಭಿಮಾನಿ?”ತಾತಪ್ಪ.ಕೆ.ಉತ್ತಂಗಿ”

  1. ಸುಂದರವಾದ ಭಾವನೆಗಳನ್ನು ಒಳಗೊಂಡಿರುವ ಕವಿತೆ
    Amazing story sir

  2. ಪದಗಳೇ ಸಾಲುತ್ತಿಲ್ಲ ನಿಮ್ಮ ಕವಿತೆಯನ್ನು ವರ್ಣಿಸಲು..
    ಓದಲು ಸುಂದರ ವಾಗಿರುವ ಸಾಲುಗಳು…
    ಆ ಸಾಲುಗಳಲ್ಲಿರುವ ಸುಂದರ
    ಭಾವನೆ ಮನ ಮುಟ್ಟುವಂತಿದೆ…

Leave a Reply

You cannot copy content of this page

Scroll to Top