ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಚಿಕ್ಕಂದಿನಲ್ಲಿ ಮೇಲಧಿಕಾರಿ ಮತ್ತು ನಾಯಕ ಇವೆರಡರ ನಡುವಿನ ವ್ಯತ್ಯಾಸವನ್ನು ಓದಿದ್ದೆ. ಅದರಲ್ಲಿನ ಕೆಲ ವಾಕ್ಯಗಳು ನನಗೆ ತುಂಬಾ ಇಷ್ಟವಾಗಿ ನನ್ನ ಡೈರಿಯಲ್ಲಿ ಬರೆದಿಟ್ಟುಕೊಂಡಿದ್ದೆ ಕೂಡ.

 ಬಾಸ್ ಅಥವಾ ಮೇಲಧಿಕಾರಿ ಆದವನು ತನ್ನ ಸಹೋದ್ಯೋಗಿಗಳೊಂದಿಗೆ ಯಾವುದಾದರೂ ವಿಷಯವನ್ನು ಇಲ್ಲವೇ ಕೆಲಸವನ್ನು ಹೇಳಬೇಕಾದರೆ ನಾನು ಎಂದು ಆರಂಭಿಸುತ್ತಾನೆ…. ಆದರೆ ನಿಜವಾದ ಲೀಡರ್ ಅಥವಾ ನಾಯಕನಾದವನು ನಾವು ಎಂದು ಹೇಳುತ್ತಾನೆ ಎಂಬ ಮಾತುಗಳು ಮನಸ್ಸಿಗೆ ಬಹಳ ಹಿಡಿಸಿದ್ದವು.

ಇದಕ್ಕೆ ಪೂರಕವಾಗಿ ನಮ್ಮ ಮಾಜಿ ರಾಷ್ಟ್ರಪತಿ ಆಗಿರುವ ಕ್ಷಿಪಣಿ ತಜ್ಞ ಎಂದೇ ಹೆಸರಾದ  ಡಾಕ್ಟರ್ ಎಪಿಜೆ ಅಬ್ದುಲ್ ಕಲಾಮ್ ಅವರು ಹೇಳಿದ ಒಂದು ವಿಷಯವನ್ನು ನಾನು ಇಲ್ಲಿ ಪ್ರಸ್ತಾಪ ಮಾಡಲೇಬೇಕು.

ವಿಕ್ರಮ್ ಸಾರಾಭಾಯಿ ಅವರು ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಅಧ್ಯಕ್ಷರಾಗಿದ್ದಾಗ ಡಾಕ್ಟರ್ ಎ ಪಿ ಜೆ ಅಬ್ದುಲ್ ಕಲಾಂ ಮತ್ತು ಅವರ ಸಹೋದ್ಯೋಗಿಗಳ ಅವಿರತ ಪ್ರಯತ್ನದ ಫಲವಾಗಿ
ಪಿಎಸ್ಎಲ್ ವಿ ಉಪಗ್ರಹ  ಉಡಾವಣೆಯಾಯಿತು…. ಆದರೆ ಉಡ್ಡಯನಗೊಂಡ ಕೆಲವೇ ಕ್ಷಣಗಳಲ್ಲಿ ಉಪಗ್ರಹವು ಪತನವಾಯಿತು. ಇದು ದೇಶದ ಜನರ ಬೇಸರಕ್ಕೂ ರಾಜಕೀಯ ವಿರೋಧ ಪಕ್ಷಗಳ ಕೆಂಗಣ್ಣಿಗೂ ಗುರಿಯಾಯಿತು. ಕೋಟ್ಯಾಂತರ ಜನರು ಹೊಟ್ಟೆ ಹಸಿವಿನಿಂದ ಒದ್ದಾಡುತ್ತಿರುವ ಭಾರತದಂತಹ ದೇಶದಲ್ಲಿ ನೂರಾರು ಕೋಟಿಗಳಷ್ಟು ಹಣವನ್ನು ಖರ್ಚು ಮಾಡಿ ಉಪಗ್ರಹವನ್ನು ಉಡಾಯಿಸುವ ಅವಶ್ಯಕತೆ ಇದೆಯೇ ಎಂಬ ಕುರಿತು ಈಗಾಗಲೇ ಸಾಕಷ್ಟು ಪರ-ವಿರೋಧ ಚರ್ಚೆಗಳಾಗಿದ್ದವು. ಅಂತಹ ಸಮಯದಲ್ಲಿ ಉಪಗ್ರಹವು ಪತನಗೊಂಡದ್ದು ಇಸ್ರೋದ ಎಲ್ಲ ವಿಜ್ಞಾನಿಗಳಿಗೆ ಬೇಸರವನ್ನುಂಟು ಮಾಡಿದ್ದರೂ ಮುಂದಿನ ಅರ್ಧ ಗಂಟೆಯಲ್ಲಿ ಜರುಗುವ ಪತ್ರಿಕಾಗೋಷ್ಠಿಗೆ ಹಾಜರಾಗಬೇಕಾದದ್ದು ಅವಶ್ಯ ವಾಗಿತ್ತು. ಎಲ್ಲಾ ವಿಜ್ಞಾನಿಗಳು ಪತ್ರಿಕಾಗೋಷ್ಠಿಗೆ ಹೋಗಲು ಹಿಂಜರಿಯುತ್ತಿರುವಾಗ  ಸಂಸ್ಥೆಯ ನಿರ್ದೇಶಕರಾದ ವಿಕ್ರಂ ಸಾರಾಭಾಯಿ ಅವರು ತಾವೇ ಖುದ್ದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ತಮ್ಮ ಕಾರ್ಯ ವೈಖರಿಯ ಕುರಿತು ಮಾಧ್ಯಮದವರಿಗೆ ಮನದಟ್ಟು ಮಾಡಿಕೊಟ್ಟರು ಮಾತ್ರವಲ್ಲದೇ ಉಪಗ್ರಹ ಪತನದ ಹಿಂದಿನ ಎಲ್ಲಾ ಸೋಲನ್ನು ತಮ್ಮ ಮೇಲೆ ಹಾಕಿಕೊಂಡರು. ಈ ವಿಷಯ ಎಲ್ಲ ಯುವ ಬಾಹ್ಯಾಕಾಶ ವಿಜ್ಞಾನಿಗಳ ಮೇಲೆ ಸಾಕಷ್ಟು ಪ್ರಭಾವವನ್ನು ಬೀರಿತ್ತು.

ಮುಂದಿನ ಕೆಲವೇ ತಿಂಗಳುಗಳಲ್ಲಿ ಮತ್ತೊಂದು ಉಪಗ್ರಹವನ್ನು ಉಡಾಯಿಸಲು ಎಲ್ಲ ಸಿದ್ಧತೆಯನ್ನು ಮಾಡಿಕೊಂಡಿದ್ದರು ಕೂಡ ಈ ಹಿಂದಿನ ಸೋಲು ಎಲ್ಲರಲ್ಲೂ ತುಸು ಆತಂಕವನ್ನು ಸೃಷ್ಟಿ ಮಾಡಿತ್ತು. ಉಪಗ್ರಹ ಯಶಸ್ವಿಯಾಗಿ ಉದಾವಣೆಯಾಗಿ ಎಲ್ಲರ ಚಪ್ಪಾಳೆಯ ಝೇಂಕಾರ ವೀಕ್ಷಣಾ ಕೋಣೆಯನ್ನು ತುಂಬಿತ್ತು. ಈ ಯಶಸ್ಸಿನ ಕುರಿತು ಬರೆಯಲು ಪತ್ರಕರ್ತರು ಕಾಯುತ್ತಿದ್ದರು…. ಆಗ ತಮ್ಮ ಸಹೋದ್ಯೋಗಿಗಳನ್ನು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲು ಕಳುಹಿಸಿಕೊಟ್ಟ ವಿಕ್ರಂ ಸಾರಾಭಾಯಿ ತಾವು ಹಿಂದೆ ಉಳಿದರು.
ಸೋಲಿನ ಎಲ್ಲ ಭಾರವನ್ನು, ಜವಾಬ್ದಾರಿಯನ್ನು ತನ್ನ ಮೇಲೆ ಹೇರಿಕೊಳ್ಳುವ ಮತ್ತು ಗೆಲುವನ್ನು ಸಂಭ್ರಮಿಸಲು ಸಹೋದ್ಯೋಗಿಗಳಿಗೆ ಅವಕಾಶ ಮಾಡಿಕೊಟ್ಟ ವಿಕ್ರಂ ಸಾರಾಭಾಯಿಯವರ ಅಂದಿನ ನಡೆ ನಿಜವಾದ ನಾಯಕತ್ವ ಹೇಗಿರಬೇಕು ಎಂಬುದಕ್ಕೆ ಅತ್ಯುತ್ತಮ ಉದಾಹರಣೆ ಎಂದು ಕಲಾಂ ಅವರ ಈ ಅನುಭವದಿಂದ ನಾವು ತಿಳಿದುಕೊಳ್ಳಬಹುದು.

ಇದೀಗ ನಾವು ಸಣ್ಣಪುಟ್ಟ ಹಳ್ಳಿಗಳಿಂದ ಹಿಡಿದು ದಿಲ್ಲಿಯವರೆಗಿನ ಎಲ್ಲ ಭಾಗಗಳಲ್ಲಿ ಸ್ವಯಂ ಘೋಷಿತ ನಾಯಕರನ್ನು, ದೇವಮಾನವರನ್ನು ಕಾಣುತ್ತೇವೆ. ಮತ್ತು ಅವರ ಅಭಿಮಾನಿ ಸಂಘಗಳನ್ನು ಕೂಡ. ನಿಜವಾದ ನಾಯಕತ್ವ ಎಂದರೇನು ಎಂಬುದರ ಪರಿಕಲ್ಪನೆಯೇ ಇಲ್ಲದ ಸಾಕಷ್ಟು ಜನ ತಮ್ಮನ್ನು ತಾವು ನಾಯಕರೆಂದು ಹೇಳಿಕೊಳ್ಳುತ್ತಿರುವುದು ಸ್ವಯಂ ಘೋಷಿತ ನಾಯಕರ ಅಜ್ಞಾನವೋ  ಅಥವಾ ಹಾಗೆ ಹೇಳಿಕೊಳ್ಳುತ್ತಿರುವವರನ್ನು ಅತಿಯಾಗಿ ಪುರಸ್ಕರಿಸುವ ಜನರ ತಪ್ಪೋ ಎಂಬುದು ಗೊತ್ತಾಗುತ್ತಿಲ್ಲ.

ಹಾಗಾದರೆ ನಾಯಕ ಎಂದರೇನು? ನಾಯಕತ್ವದ ಲಕ್ಷಣಗಳು ಯಾವುವು ಎಂಬ ಸಂದೇಹ ನಮ್ಮಲ್ಲಿ ಕಾಡಬಹುದು ಅದಕ್ಕೆ ಉತ್ತರವನ್ನು ಹುಡುಕುವ ಒಂದು ಸಣ್ಣ ಪ್ರಯತ್ನ ಇಲ್ಲಿದೆ.

ಒಳ್ಳೆಯ ನಾಯಕ ಎಂದರೆ ಎಲ್ಲ ವಿಷಯಗಳ ಕುರಿತು ಅರಿವನ್ನು ಹೊಂದಿರುವುದು ಮತ್ತು ಎಲ್ಲ ವಿಷಯಗಳಲ್ಲಿಯೂ ಪರಿಪೂರ್ಣತೆಯನ್ನು ಹೊಂದಿರುವ ವ್ಯಕ್ತಿ  ಎಂದಲ್ಲ. ನಾಯಕತ್ವ ಎನ್ನುವುದು ನೀವು ಜನರೊಂದಿಗೆ ಯಾವ ರೀತಿ  ವರ್ತಿಸುತ್ತೀರಿ, ಯಾವ ರೀತಿ ಸಹಾಯ ಮಾಡುತ್ತೀರಿ ಮತ್ತು ನೀವು ಮಾಡುವ ಸಹಾಯ ಅವರ ಬದುಕಿನಲ್ಲಿ ಬೀರಬಹುದಾದ ಪರಿಣಾಮಗಳ ಕುರಿತು ಯೋಚಿಸುವುದು ನಾಯಕತ್ವ ಎಂದೆನಿಸಿಕೊಳ್ಳುತ್ತದೆ.

 ಕೆಳಗಿನ ಏಳು ಸರಳ ವಿಧಾನಗಳು ಉತ್ತಮ ನಾಯಕತ್ವಕ್ಕೆ ಮಾದರಿ

*ನಾಯಕನಾದವನು ದಯಾಳುವಾಗಿರಬೇಕು…. ಒಳ್ಳೆಯ ನಾಯಕನಾದ ವ್ಯಕ್ತಿ ಇತರರೊಂದಿಗೆ ಗೌರವ ಮತ್ತು ಕಾಳಜಿಯಿಂದ ವರ್ತಿಸುತ್ತಾನೆ. ದಯಾ ಗುಣವು ನಂಬಿಕೆಯನ್ನು ವೃದ್ಧಿಸುತ್ತದೆ. ವಿಶ್ವಾಸವನ್ನು ಹೊಂದಲು ಕಾರಣವಾಗುತ್ತದೆ. ಆದ್ದರಿಂದ ಒಳ್ಳೆಯ ನಾಯಕನಾದವನು ಅವರು ತನ್ನ ವಿರೋಧಿಯೇ ಇರಲಿ, ತನ್ನನ್ನು ಹೀಯಾಳಿಸುವ ವ್ಯಕ್ತಿಯೇ ಇರಲಿ ಅವರೊಂದಿಗೆ ಪ್ರೀತಿಪೂರ್ವಕವಾಗಿ ನಡೆದುಕೊಳ್ಳಬೇಕು.

* ನಾಯಕ ಮಿತ ಭಾಷಿಯಾಗಿರಬೇಕು…. ಒಳ್ಳೆಯ ನಾಯಕತ್ವ ಗುಣ ಹೊಂದಿರುವವನು ತನ್ನ ಎದುರಿಗಿರುವವರ ಮಾತನ್ನು ಗಮನವಿಟ್ಟು ಆಲಿಸುತ್ತಾನೆ. ತಾನು ಮಿತಭಾಷಿಯಾಗಿದ್ದು ತನ್ನ ಸಂಪೂರ್ಣ ಲಕ್ಷವನ್ನು ಇತರರ ಮಾತುಗಳನ್ನು ಕೇಳುವುದರಲ್ಲಿ ವಿನಿಯೋಗಿಸುವ ವ್ಯಕ್ತಿ ಒಳ್ಳೆಯ ನಾಯಕತ್ವಕ್ಕೆ ಉದಾಹರಣೆ. ಜನರಿಗೆ ನಿಜವಾಗಿಯೂ ಏನು ಬೇಕಾಗಿರುತ್ತದೆ ಎಂಬುದನ್ನು ಅರಿಯುವ ಮತ್ತು ಅದನ್ನು ಕಾರ್ಯರೂಪಕ್ಕೆ ತರುವ ವ್ಯಕ್ತಿ ನಿಜವಾದ ನಾಯಕ.

* ನಾಯಕ ಎಲ್ಲರಿಗೂ ಸಿಗುವಂತಿರಬೇಕು….. ಮಹಡಿಯ ಮೇಲೆ ನಿಂತು ಕೈ ಬೀಸುವ, ವೇದಿಕೆಗಳಲ್ಲಿ ನಮಸ್ಕರಿಸುವ ವ್ಯಕ್ತಿಗಳಿಗಿಂತ ಜನಸಾಮಾನ್ಯರ ನಡುವೆ ಬೆರೆಯುವ ಜನರ ಕಷ್ಟ ಸುಖಗಳಿಗೆ ಪ್ರತಿ ಸ್ಪಂದಿಸುವ, ಜನರ ನೋವಿಗೆ ಕಿವಿಯಾಗುವ, ಅವರ ತೊಂದರೆಗೆ ದನಿಯಾಗುವ ವ್ಯಕ್ತಿ ನಿಜವಾದ ನಾಯಕ. ಜನರು ತಮ್ಮ ನಾಯಕನ ಬಳಿ ಬಂದು ತಮ್ಮ ತೊಂದರೆಗಳನ್ನು ಮತ್ತು ಯೋಜನೆಗಳನ್ನು ಸರಳವಾಗಿ ಹಂಚಿಕೊಳ್ಳುವಂತಹ ವಾತಾವರಣವನ್ನು ಕಲ್ಪಿಸಿ ಕೊಡುವ ವ್ಯಕ್ತಿ ನಿಜವಾದ ನಾಯಕ ಎನಿಸಿಕೊಳ್ಳುತ್ತಾನೆ.

*ತನ್ನ ಸಹೋದ್ಯೋಗಿಗಳಿಗೆ, ಹಿಂಬಾಲಕರಿಗೆ ವಿಶ್ರಾಂತಿಗೆ ಅವಕಾಶ ನೀಡುವ ವ್ಯಕ್ತಿ ನಿಜವಾದ ನಾಯಕ.

*ನಿಜವಾದ ನಾಯಕ ತನ್ನ ಜೊತೆ ಕೆಲಸ ಮಾಡುವವರಿಗೆ ತಪ್ಪು ಮಾಡಿದಾಗ ಅವಹೇಳನ ಮಾಡುವುದಿಲ್ಲ… ಆತನಿಗೆ ಗೊತ್ತು ತಪ್ಪುಗಳು ಕಲಿಕೆಗೆ ಮತ್ತು ಬೆಳವಣಿಗೆಗೆ ಸಹಾಯಕ ಎಂದು. ನಾಯಕನಾದವನು ತಪ್ಪನ್ನು ತಿದ್ದಿಕೊಂಡು ಮುನ್ನಡೆಯಲು ಪ್ರೋತ್ಸಾಹಿಸುತ್ತಾನೆ.

*ನಿಜವಾದ ನಾಯಕತ್ವ ಗುಣವಿರುವ ವ್ಯಕ್ತಿ ಜನರ ಸಾಮರ್ಥ್ಯ ಗಳನ್ನು ಅರಿಯುವ ಶಕ್ತಿಯನ್ನು ಹೊಂದಿರುತ್ತಾನೆ.

*ಉತ್ತಮ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತಾನೆ. ಅವರ ಅನುಭವಕ್ಕೆ ಬೆಲೆ ನೀಡುತ್ತಾನೆ.

ನಾಯಕತ್ವ ಗುಣವನ್ನು ಹೊಂದಿರುವುದು ದೈವದತ್ತ ಕಲೆ. ಕಲಿಕೆ ಮತ್ತು ಪ್ರಯತ್ನದ ಮೂಲಕ ನಾಯಕತ್ವ ಗುಣವನ್ನು ಅಳವಡಿಸಿಕೊಳ್ಳುವ ಮೂಲಕ ಪ್ರತಿ ಮಗುವೂ ಉತ್ತಮ ನಾಯಕರಾಗಿ ಬೆಳೆಯಲಿ ಎಂಬ ಆಶಯದೊಂದಿಗೆ


About The Author

Leave a Reply

You cannot copy content of this page

Scroll to Top