ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನನ್ನ ಹಣೆಯಲ್ಲಿ ಬರೆದಿದ್ದು ಆಗುತ್ತೆ ಒಳ್ಳೆಯದೋ ಕೆಟ್ಟದ್ದೋ ಏನೇ ಆಗಲಿ ಅದಕ್ಕೆಲ್ಲ ಹಣೆಬರಹವೇ ಕಾರಣ. ನಮ್ಮ ಕೈಯಲ್ಲಿ ಏನಿಲ್ಲ. ದೇವರು ಬರೆದ ಹಣೆಬರಹವನ್ನು  ಬದಲು ಮಾಡಲಾಗುವುದಿಲ್ಲ ಅನ್ನೋದು ಬಹುಜನರ ಬಲವಾದ ನಂಬಿಕೆ. ಏನೇ ಹೇಳಿ ಬದುಕು ಬದಲಾಯಿಸಲಾಗದು ಭವಿಷ್ಯದಲ್ಲಿ ಅದೇನಿದೆಯೋ ಆ ದೇವರಿಗೆ ಗೊತ್ತು. ಅನ್ನೋದು ಬಹುತೇಕರ ಮನದಲ್ಲಿ ಹೆಬ್ಬಂಡೆಯಂತೆ
 ಗಟ್ಟಿಯಾಗಿ ಕೂತು ಬಿಟ್ಟಿದೆ. ಅಂತಹವರನ್ನೆಲ್ಲ ನೋಡಿದಾಗ ನನಗೆ ನೆನಪಿಗೆ ಬರೋದು ಕಲಾಂಜಿಯವರು ಹೇಳಿದ ಸ್ಪೂರ್ತಿದಾಯಕ ಮಾತು.’ ಭವಿಷ್ಯವನ್ನು ನೀವು ಬದಲಾಯಿಸಲಾಗದು ಆದರೆ ನಿಮ್ಮ ಅಭ್ಯಾಸಗಳನ್ನು ಬದಲಾಯಿಸಿಕೊಳ್ಳಬಹುದು. ಬದಲಾಯಿಸಿದ ಅಭ್ಯಾಸಗಳು ಖಂಡಿತ ಭವಿಷ್ಯವನ್ನು ಬದಲಿಸಬಲ್ಲವು.’ ನಿಜ, ಎಂತಹ ಪ್ರೇರಣದಾಯಕ ನುಡಿಗಳಲ್ಲವೇ?

 ‘ನಿಮ್ಮ ದಿಕ್ಕನ್ನು ಬದಲಾಯಿಸಿ ಮತ್ತು ನಿಮ್ಮ ಹಣೆಬರಹವನ್ನು ನೀವು ಬದಲಾಯಿಸುತ್ತೀರಿ.’ ಎಂದಿದ್ದಾನೆ ಮಾರ್ಕ್ ವಿಕ್ಟರ್ ಹ್ಯಾನ್ಸೆನ್ ಪ್ರತಿಯೊಬ್ಬ ವ್ಯಕ್ತಿಯು ತನ್ನ ಕರ್ಮವನ್ನು ಬದಲಾಯಿಸುವ ಮೂಲಕ ತನ್ನ ಹಣೆಬರಹವನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿರುತ್ತಾನೆ. ಆದರೆ ಇದಕ್ಕಾಗಿ, ಭವಿಷ್ಯದಲ್ಲಿ ನಾವು ಏನನ್ನು ಅನುಭವಿಸಲು ಬಯಸುತ್ತೇವೆ ಎಂಬುದರ ಬಗ್ಗೆೆ ನಮಗೆ ಸ್ಪಷ್ಟತೆ ಇರಬೇಕು. ಜೀವನದಲ್ಲಿ ಎದುರಿಸುವ ಎಲ್ಲಾ ಸಮಸ್ಯೆಗಳನ್ನು ಜಯಿಸಲು ದೇವಿಕ ಪ್ರಜ್ಞೆಯು ನಮಗೆ ಶಕ್ತಿಯನ್ನು ನೀಡುತ್ತದೆ. ನಾವು ಅದನ್ನು ಅನುಭವಿಸಿದರೆ ತಡೆಯಲಾಗದ ಧನಾತ್ಮಕ ಬದಲಾವಣೆಗಳು ಅನುಸರಿಸುತ್ತವೆ ಎಂದು ನಮಗಿಂತ ಉತ್ತಮವಾಗಿ ಯಾರಿಗೂ ತಿಳಿದಿಲ್ಲ. ಯಾವುದೇ ಸಂದರ್ಭದಲ್ಲಿ ನಾವು ಒಬ್ಬಂಟಿಯಾಗಿಲ್ಲ ಎಂದು ಅರಿತುಕೊಳ್ಳುವುದರೊಂದಿಗೆ ಆರಂಭವಾಗುತ್ತದೆ ಎಂಬುದು  ನೆನಪಿರಲಿ.

‘ದೇವರ ಸೃಷ್ಟಿಯಲ್ಲಿ ಅದೃಶ್ಯವನ್ನು ನೋಡುವ, ನಂಬಲಾಗದ್ದನ್ನು ಕಲ್ಪಿಸುವ ಮತ್ತು ಅಸಾದ್ಯವಾದುದನ್ನು ಮಾಡುವ ಸಾಮರ್ಥ್ಯ ಹೊಂದಿರುವವರು ಮಾನವರು ಮಾತ್ರ. ಹೆಚ್ಚಿನ ಬಾರಿ ನಾವು ಯೋಚಿಸುವುದಕ್ಕಿಂತ ನಮ್ಮ ನೈಜ ಆತ್ಮವಿಶ್ವಾಸವು ಹೆಚ್ಚು ಶಕ್ತಿಶಾಲಿ ಮತ್ತು ಸಮರ್ಥವಾಗಿದೆ ಎಂದು ಗುರುತಿಸಲು ನಾವು ವಿಫಲರಾಗುತ್ತೇವೆ.’

‘ನಮ್ಮ ಹಣೆಬರಹವನ್ನು ಹಿಡಿದಿಟ್ಟುಕೊಳ್ಳುವುದು ನಕ್ಷತ್ರಗಳಲ್ಲಿ ಅಲ್ಲ ಆದರೆ ನಮ್ಮಲ್ಲಿಯೇ’ ಎನ್ನುವುದು ವಿಲಿಯಮ್ ಶೇಕ್ಸ್
ಪಿಯರ್ ನುಡಿಮುತ್ತು.

 ಪ್ರತಿಯೊಂದನ್ನು ಹಣೆಬರಹದ ಹೆಗಲಿಗೆ ಕಟ್ಟಿ ನೆಪ ಹೇಳುತ್ತ ಕೂತಿದ್ದರೆ ಆಸೆಗಳ ಮೂಟೆ ಕುಳಿತಲ್ಲಿಯೇ ಕುಳಿತುಕೊಳ್ಳುತ್ತದೆ.  ದಿನೇ ದಿನೇ ನಿರೀಕ್ಷೆಗಳ ಮಹಾಪೂರ ಹೆಚ್ಚುತ್ತ ಹೊರಟಿದೆ. ಆದರೆ ಪ್ರಯತ್ನ ಮಾತ್ರ ಶೂನ್ಯ. ಪ್ರಯತ್ನದಿಂದ ದೂರವಿರುವ ವ್ಯಕ್ತಿಗಳಿಗೆ ದುರಾದೃಷ್ಟ ಬೆನ್ನ ಹಿಂದೆ ಬೇತಾಳದಂತೆ ಕಾಡುತ್ತದೆ. ಇದರ ಫಲವಾಗಿ ಜೀವನವೇ ಜಿಗುಪ್ಸೆ ಬಂದ ಹಾಗೆ ಇರುತ್ತಾರೆ. ವಿಧಿಯನ್ನು ಶಪಿಸುತ್ತ ಬದುಕಿಗೆ ಪೂರ್ಣವಿರಾಮ ಇಡಲು ಮುಂದಾಗುತ್ತಾರೆ. ಅವಕಾಶಗಳ ಸಂಧಿಯಿಂದ
ಕಣ್ಣು ಕೀಲಿಸಿ ಹಣೆಬರಹ ಹಿಡಿದಿಟ್ಟುಕೊಳ್ಳುವುದು ಸೂಕ್ತ.

ವಿಧಿಯೆಂಬ ಚಕ್ರವ್ಯೂಹದಲ್ಲಿ ಒಳಗೆ ಹೋಗಲು ಕಲಿತು ಹೊರಗೆ ಬರುವುದನ್ನು ಕಲಿಯದಿದ್ದರೆ ಅಭಿಮನ್ಯುವಿನ ಕತೆಯಂತಾಗುತ್ತದೆ. ನಿರಂತರ ಪ್ರಯತ್ನದಿಂದ ಕಷ್ಟಗಳೆಲ್ಲ ದೂರವಾಗಿ ಸುಖದ ಜೀವನ ಅಪ್ಪಿಕೊಳ್ಳುತ್ತದೆ. ಆದರೆ ಇಲ್ಲಿ ತಾಳ್ಮೆ ಬಹಳ ಮುಖ್ಯವಾಗುತ್ತದೆ. ತಾಳ್ಮೆ ವಹಿಸುವುದು ಅತ್ಯಂತ ಸವಾಲಿನ ಕೆಲಸ. ಪ್ರಯತ್ನದಿಂದ ಎಲ್ಲವೂ ಸಾಧ್ಯ. ಇದು  ಜೀವನವನ್ನು ಸುಲಭಗೊಳಿಸುತ್ತದೆ. ‘ಎಲ್ಲರೂ ಹುಟ್ಟುತ್ತಾ ತಮ್ಮೊಳಗೆ ದೈವಿಕ ಜ್ಯೋತಿ ಹೊಂದಿರುತ್ತಾರೆ. ನಮ್ಮ ಪ್ರಯತ್ನಗಳೇ ಆ ಜ್ಯೋತಿಯನ್ನು ಮತ್ತಷ್ಟು ಉಜ್ವಲಗೊಳಿಸುತ್ತವೆ. ಆ ಮೂಲಕ ಅದರ ಬೆಳಕು ವಿಶ್ವದಾದ್ಯಂತ ವ್ಯಾಪಿಸುತ್ತದೆ.’ ಎನ್ನುವ ಅಬ್ದುಲ್ ಕಲಾಂಜಿಯವರ ಪ್ರೇರಣಾದಾಯಕ ನುಡಿ ನಮ್ಮನ್ನು ಪ್ರಯತ್ನ ವಲಯದತ್ತ ಸಾಗಲು ಸಹಕರಿಸುತ್ತದೆ.

ಕೈ ಚೆಲ್ಲಿ ಕೂರದಿರಿ
ಸಾಧಕರಿಗೆ ಮತ್ತು ತಮ್ಮ ಸೋಲನ್ನು ಹಣೆಬರಹದ ಹಣೆಗೆ ಕಟ್ಟಿದವರಿಗೆ ವ್ಯತ್ಯಾಸವೇನೆಂದರೆ ಸಾಧಕರು ನಿರಂತರವಾಗಿ ಪ್ರಯತ್ನ ಮಾಡುತ್ತಾರೆ. ಹಣೆಬರಹ ನಂಬಿದವರು ಕೈ ಚೆಲ್ಲಿ ಕೂರುತ್ತಾರೆ. ಯಾವತ್ತೂ ಇಲ್ಲದುದರ ಕುರಿತು ಅಲವತ್ತುಕೊಳ್ಳುತ್ತಾರೆ. ಬೇಕು ಬೇಡಗಳನ್ನು ಹೇಳುತ್ತಾರೆಯೇ ಹೊರತು ಅವುಗಳನ್ನು ಪೂರೈಸಿಕೊಳ್ಳುವತ್ತ ಚಿತ್ತ ಹರಿಸುವುದೇ ಇಲ್ಲ. ಪ್ರಯತ್ನವಾದಿಗಳು ಹಣೆಬರಹಕ್ಕೆ ಜೋತುಬೀಳದೇ ಸೋಲೆಂಬ ಅನುಭವಗಳ ಗುಚ್ಛವನ್ನು ಹಿಡಿದುಕೊಂಡೇ ಅದ್ಭುತ ರೀತಿಯಲ್ಲಿ ಬದುಕನ್ನು ಕಟ್ಟುವ ರೀತಿ ಅದ್ಭುತವಾದುದು.ಇಂತಹ ಸಾಧಕರ  ಸಾಧನೆಯ ಹೂಗಳು ನಾನಾ ಛಾಯೆಗಳಲ್ಲಿ ಬಿರಿದು ನಗೆ ಚೆಲ್ಲುತ್ತಿವೆ.

ನೊಬೆಲ್ ಪ್ರಶಸ್ತಿ ವಿಜೇತ ಗೆಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ತನ್ನ ಆತ್ಮಕಥೆಯಲ್ಲಿ (ಲಿವಿಂಗ್ ಟು ಟೆಲ್ ದ ಟೇಲ್ ಅಂದರೆ ಬದುಕುಳಿದವರ ಕಥೆ ಹೇಳುವುದು.) ಆತ ಪುಸ್ತಕದ ಆರಂಭದಲ್ಲಿ ಒಂದು ಮಾತನ್ನು ಬರೆಯುತ್ತಾನೆ ‘ಜೀವನವೆಂದರೆ ನಾವು ಅನುಭವಿಸಿದ ಸಂಗತಿಗಳ ಮೊತ್ತವಲ್ಲ ಬದಲಾಗಿ ನಾನು ಏನನ್ನು ನೆನಪಿಟ್ಟುಕೊಂಡಿದ್ದೇನೆ ಮತ್ತು ಅದನ್ನು ಮರಳಿ ಹೇಳುವಾಗ ಹೇಗೆ ನೆನಪಿಗೆ ತಂದುಕೊಳ್ಳುತ್ತೇನೆ ಎನ್ನುವುದು.’ ಮಾರ್ಕ್ವೆಜ್‌ನ ಮಾತುಗಳು, ಸಂಗತಿಗಳು ಮುಖ್ಯವಲ್ಲ ಅವುಗಳನ್ನು ನೆನಪಿಟ್ಟ  ರೀತಿ ಬದುಕಿನಲ್ಲಿ ಏನೆಲ್ಲ ಬದಲಾವಣೆ ತಂದಿತು ಎನ್ನುವುದು ಮುಖ್ಯ ಎಂಬುದನ್ನು ಹೇಳುತ್ತವೆ. ಸನ್ನಿವೇಶವೆನ್ನುವುದು ಒಂದು ದೊಡ್ಡ ಅವಕಾಶ. ಶ್ರಮ ಎಷ್ಟು ನೋಯಿಸುತ್ತದೆಯೋ ಅಷ್ಟೇ ಒಳ್ಳೆಯದನ್ನು ಮಾಡುತ್ತದೆ.

ಅನೇಕ
ಸಮಸ್ಯೆಗಳಿಗೆ ಶಿಸ್ತಿನ ಕೊರತೆಯೇ ಕಾರಣವೆಂಬುದು ಅರ್ಥವಾಗದೇ ಅದೃಷ್ಟವನ್ನು ಹಳಿಯುತ್ತ ಜೀವನವಿಡೀ ಅಸಂತುಷ್ಟರಾಗಿರುತ್ತೇವೆ. ಜೀವನದಲ್ಲಿ ಯಶಸ್ವಿಯಾಗಬೇಕೆಂದರೆ ಶ್ರಮ ಮತ್ತು ಶಿಸ್ತನ್ನು ಬೆಳೆಸಿಕೊಳ್ಳಬೇಕು.ಶ್ರಮ ಮತ್ತು ಶಿಸ್ತುಗಳು ಹಣೆಬರಹವನ್ನು ಬೈಯ್ಯದಂತೆ ಮಾಡುತ್ತವೆ. ನಾವು ಯಾವುದನ್ನೇ ಕಳೆದುಕೊಂಡರು ಬದುಕಬಹುದು ಆದರೆ ಉತ್ತೇಜನ ಮತ್ತು ಉತ್ಸಾಹವನ್ನು ಕಳೆದುಕೊಳ್ಳಬಾರದು. ಇದನ್ನೇ ರಾಲ್ಫ್ ವಾಲ್ಡೋ ಎಮರ್‌ಸನ್ ಹೀಗೆ ಹೇಳಿದ್ದಾನೆ.’ ಯಾವುದೇ ಮಹತ್ಕಾರ್ಯವೂ ಉತ್ತೇಜನ ಉತ್ಸಾಹವಿಲ್ಲದೇ ಸಾಧಿಸಲಾಗಿಲ್ಲ. ಉತ್ಸಾಹ ಉತ್ತೇಜನವಿಲ್ಲದೇ ಕೆಲಸ ಮಾಡಲು ಹೋದರೆ ಪ್ರಯತ್ನಗಳೆಲ್ಲ ಮುರಿದು ಹೋಗುತ್ತವೆ. ಹೀಗಾದಾಗ ಊಹೆಯಲ್ಲೇ ಬದುಕಬೇಕಾಗುತ್ತದೆ.
ನಿಮ್ಮಿಷ್ಟದಂತೆ
ಬದುಕನ್ನು ವಿಧಿಯಾಟಕ್ಕೆ ಒಪ್ಪಿಸಿ, ಅಜ್ಞಾನದಿಂದ ಶ್ರಮದ ಸಾಂಗತ್ಯವನ್ನು ಬಯಸದೇ ಕಾಲಹರಣ ಮಾಡುವುದು ಶುದ್ಧ ತಪ್ಪು. ಕೆಲವರು ವಿಧಿಯಲ್ಲಿ ಅದೆಷ್ಟು ಆಳ ಹೋಗುವರೆಂದರೆ ಆಚೆ ಬರದಷ್ಟು ಆಳ. ಕಡೆಗೆ ಆ ಆಳದಲ್ಲಿ ಹೊರದಾರಿ ಕಾಣದೇ ವಿಧಿಯಾಟದಲ್ಲಿ ಸಿಲುಕಿ ದಿಕ್ಕಿಲ್ಲದ ಪರಿಸ್ಥಿತಿ ತಲುಪುತ್ತಾರೆ.

ಕೊನೆ ಹನಿ

ಉತ್ತಮ ಆರಂಭ ಉತ್ತಮ ಮುಕ್ತಾಯಕ್ಕೆ ನಾಂದಿ. ಹಾಗಾದರೆ ತಡವೇಕೆ
ಇಂದಿನಿಂದಲೇ ನಿಮ್ಮ ಹಣೆಬರಹವನ್ನು ನಿಮ್ಮಿಷ್ಟದಂತೆ  ನೀವೇ ಬರೆದುಕೊಳ್ಳಿ!


About The Author

1 thought on ““ನಿಮ್ಮ ಹಣೆಬರಹ ನೀವೇ ಬರೆದುಕೊಳ್ಳಿ !”ಜಯಶ್ರೀ.ಜೆ. ಅಬ್ಬಿಗೇರಿ”

  1. “ನಿಮ್ಮ ಹಣೆಬರಹ ನೀವೇ ಬರೆದುಕೊಳ್ಳಿ ” ಲೇಖನವು ತುಂಬಾ ಚೆನ್ನಾಗಿದೆ, ಜಯಶ್ರೀ ಅಬ್ಬಿಗೇರಿ ಮೇಡಮ್ ರವರಿಗೆ ಧನ್ಯವಾದಗಳು..

Leave a Reply

You cannot copy content of this page

Scroll to Top