ಕಾವ್ಯ ಸಂಗಾತಿ
ಡಾ.ಸೌಮ್ಯಾ ಕೆ.
“ಒಲವಿನ ಡಿಸೆಂಬರ್”


ಈ ಡಿಸೆಂಬರನೇತಕೆ ನನ್ನಾತ್ಮಕೆ ಹತ್ತಿರ!
ಮುಂಜಾನೆ ಮರಬಳ್ಳಿಗಳು ಮತ್ತಿನಲಿ ತೊನೆದಂತೆ
ಕನಸುಗಳು ಮೃದುವಾಗಿ ಅಂಗಳಕೆ ಹರಿದಂತೆ
ಓಹ್ ಈಗ ಸೂರ್ಯನೂ ಅದೆಷ್ಟು ದಯಾಮಯಿ!
ರಾತ್ರಿಯಾಕಾಶವೂ ಕವಿತೆಯಾಗಿ ಮಿಂಚುತಿದೆ..
ಈ ಡಿಸೆಂಬರನೇತಕೆ ನನ್ನಾತ್ಮಕೆ ಹತ್ತಿರ!
ತಂಗಾಳಿ ನಯವಾಗಿ ಮುಂಗುರುಳ ನೇವರಿಸಿದಂತೆ
ಕಾಡಿನ ನಡುವೆ ಕಾಡುವ ಸಾಲೊಂದ ಗುನುಗಿದಂತೆ
ಜಗವೇ ತುಸು ತಡೆತಡೆದು
ನಿರಾಳವಾಗಿ ಉಸಿರಾಡುತಿದೆ..
ಈ ಡಿಸೆಂಬರನೇತಕೆ ನನ್ನಾತ್ಮಕೆ ಹತ್ತಿರ!
ವರುಷವಿಡೀ ಕಾದಿದ್ದ ಬೆರಗು ಬಿಚ್ಚಿಟ್ಟಂತೆ
ಗಡಿಬಿಡಿಯ ದೌಡನು ಬೆಳದಿಂಗಳು ಬರಸೆಳೆದಂತೆ
ಹೃದಯ ಉಕ್ಕೇರಿ ಬಯಸಿದ ಮಧುಶಾಲೆಯಿದು
ಎಲ್ಲ ನೋವುಗಳ ಪೊರೆ ಕಳಚಿ ಹೊಸತಿನದೇ ಪ್ರತೀಕ್ಷೆ…
ಈ ಡಿಸೆಂಬರನೇತಕೆ ನನ್ನಾತ್ಮಕೆ ಹತ್ತಿರ!
ದೀರ್ಘ ರಾತ್ರಿಗಳಲಿ ಗಜಲೊಂದು ಕೆಂದುಟಿಗಳ ನಡುವೆ ಅರಳಿದಂತೆ
ಸ್ವರ್ಗವೇ ಮೆಲ್ಲಡಿಯಿಟ್ಟು ಸನಿಹ ಬಂದಿರುವಂತೆ
ನಿನ್ನೆಗಳ ನಾಳೆಗಳ ಹಂಗಿಲ್ಲ ಇಲ್ಲೀಗ ಆತ್ಮಕೆ
ಈ ಡಿಸೆಂಬರನದಕೇ ನನ್ನಾತ್ಮಕೆ ಹತ್ತಿರ – ಹತ್ತಿರ..
ಡಾ. ಸೌಮ್ಯಾ ಕೆ.ವಿ.




