ಕಾವ್ಯ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
ಗಜಲ್


ನಿನ್ನೊಡನಾಟದ ಕಡಲ ಹಾಯ್ ದೋಣಿಯಲಿ ವಿಹರಿಸುವಾಸೆ
ಸರಸ ಸಲ್ಲಾಪ ಸಖ್ಯ ಸವಿಯ ತೋಳ ಸೆರೆಯಲಿ ಮೈಮರೆವಾಸೆ
ಬಾಹುಬಂಧನದಿ ಬಂಧಿಯಾಗಿ ಬಯಕೆ ತೊಟ್ಟಿಲಲಿ ತೂಗುವಾಸೆ
ಓಡೋ ಮೋಡ ಮೆದ್ದೆ ಮೇಲಿಹ ಸ್ವರ್ಗ ಪಥದಲಿ ಪಯಣದಾಸೆ
ಚುಕ್ಕಿತಾರೆ ಚಂದ್ರನೂರಿಗೆ ಇಂದ್ರನ ಬೆಳ್ಳಿ ರಥದಲಿ ಹೋಗುವಾಸೆ
ಹೃದಯದ ಅರಮನೆಯ ಪುಟ್ಟ ಗರ್ಭ ಗುಡಿಯಲಿ ನಿದ್ರಿಸುವಾಸೆ
ಪಚ್ಚೆ ಮಲ್ಲಿಯ ಹಚ್ಚಹಸುರಿನ ನಿನ್ನೆದೆ ಬನದಲಿ ಹೂವಾಗುವಾಸೆ
ಶುಭ್ರ ಹೊಳಪಿನ ಹಂಸವಾಗಿ ಕಣ್ಣ ಕೊಳದಲಿ ಈಜಾಡುವಾಸೆ
ಮೇಘಮಂದಾರದ ನಾದತರಂಗ ವೀಣೆಯಲಿ ಹಾಡಾಗುವಾಸೆ
ಭೃಂಗದೊಲವಿನ ಮಕರಂದದ ಸಿಹಿ ಜೇನಿನಲಿ ಜಿನುಗುವಾಸೆ
ಹೊನ್ನಾಸೆ ಚಿತ್ತಾರದ ಬಣ್ಣ ಬಣ್ಣದೊಕುಳಿ ಬೆಡಗಲಿ ಮಿನುಗುವಾಸೆ
ಪ್ರಣಯ ಪಕ್ಷಿಗಳಂತೆ ಬಾನಂಗಳದ ಬಯಲಲಿ ಹಾರಾಡುವಾಸೆ
ಅನುಳ ಜನುಮದ ಗೆಳೆಯನೇ ತನುವ ತುಡಿತದಲಿ ಬಚ್ಚಿಡುವಾಸೆ
ಮಂಪರಿನ ಪ್ರೇಮಾಮೃತದ ಹೊನ್ನ ಗಿಂಡಿಯಲಿ ನಶೆಯಾಗುವಾಸೆ
ಡಾ ಅನ್ನಪೂರ್ಣ ಹಿರೇಮಠ



