ಪುಸ್ತಕ ಸಂಗಾತಿ
ಜಗದೀಶ ಹಾದಿಮನಿ
“ಅಬುಚಾ ..! ಅಬುಚಾ..!”
ಒಂದು ಅವಲೋಕನ
ಶಂಕರಾನಂದ ಹೆಬ್ಬಾಳ
ಅಬುಚಾ ಅಬುಚಾದ ಬೆನ್ನೇರಿ….



ಪುಸ್ತಕ : ಅಬುಚಾ ..! ಅಬುಚಾ..!
ಲೇಖಕರು : ಜಗದೀಶ ಹಾದಿಮನಿ
ಕಥಾ ಸಂಕಲನ
ಪ್ರಕಾಶನ: ಪಂಚಮಿ ಪ್ರಕಾಶನ
ನಾಡಿನ ಹೆಮ್ಮೆಯ ಕಥೆಗಾರ ಜಗದೀಶ ಹಾದಿಮನಿ ಅವರ ಅಬುಚಾ ಅಬುಚಾ ಕಥಾ ಸಂಕಲನ ಕಥಾ ಸಾಹಿತ್ಯಕ್ಕೆ ವಿಶೇಷ ಕೊಡುಗೆ. “ಮತಿದರ್ಪಣೆ ಕವಿನಾಂ ವಿಶ್ವಂ ಪ್ರತಿಫಲತಿ” ಎಂಬ ಕವಿವಾಣಿಯಂತೆ ಕವಿಯ ಮತಿಯೆಂಬ ಕನ್ನಡಿಯಲ್ಲಿ ಇಡಿ ವಿಶ್ವವೆ ಗೋಚರಿಸುತ್ತದೆ.ಅಂತಹ ಜ್ಞಾನನಿಧಿಯಾದ ಕಥೆಗಾರ ಸಹೋದರ ಜಗದೀಶ ಹಾದಿಮನಿ ಈ ನಿಟ್ಟಿನಲ್ಲಿ ಒಳ್ಳೆಯ ಹೃದ್ಯಮಯ ಕಥೆಗಳನ್ನು ಕಟ್ಟಿಕೊಟ್ಟಿದ್ದಾರೆ. ವಾಸ್ತವಿಕತೆಯ ತಲ್ಲಣಗಳನ್ನು, ನಿತ್ಯ ನಡೆಯುವ ಘಟನೆಗಳನ್ನು ಹೃದ್ಯಮಯವಾಗಿ ಹೆಣೆದು ಓದುಗರಿಗೆ ಮುಟ್ಟಿಸುವ ಶೈಲಿ ನಿಜಕ್ಕೂ ಶ್ಲಾಘನೀಯ.
ಮೊದಲನೆ ಹೆಜ್ಜೆಯಲ್ಲಿ ಅಬುಚಾ ಅಬುಚಾ….ಕಥೆಯಲ್ಲಿ ಚಿಕ್ಕ ಮಗುವಿನ ಹಠ ಸ್ವಭಾವ ಎಂತೆಂಥಾ ಸಮಸ್ಯೆಗಳನ್ನು ತಂದೊಡ್ಡಿತು ಹಾಗೂ ಇಡಿ ಊರನ್ನೆ ತಲ್ಲಣಗೊಳಿಸಿತು ಎಂಬುದನ್ನು ಸ್ವತಃ ಕಥೆಗಾರರೆ ದಾಖಲಿಸಿದ್ದಾರೆ.ಇದು ಗೋರೂರರ ಕಥೆಯೊಂದನು ನೆನಪಿಸುತ್ತದೆ. ಮಗುವಿನ ಹಠಕ್ಕೆ ಕಾರಣವೇನು ಎಂದು ಹುಡುಕುವಲ್ಲಿ ಇಡಿ ಮನೆ ಹಾಗೂ ಊರಿಗೆ ಊರೆ ವಿಫಲವಾಗುತ್ತದೆ. ಮಗುವಿಗೆ ಹೊಟ್ಟೆ ಹಸಿದಿರಬಹುದು ಎಂದು ವೈದ್ಯರ ಹತ್ತಿರ ಕರೆದುಕೊಂಡು ಹೋಗುವಾಗ ಮಗುವಾಗುವ ಬದಲು “ಸಿಡಿಗುಂಡನು ಎತ್ತಿಕೊಂಡು ” ಎಂದು ರೂಪಕವನ್ನು ಬಳಸುತ್ತಾರೆ ಕಾರಣ ಆ ಅತಿರೇಕದ ಅಬುಚಾದ ಹಠಕ್ಕೆ ಬೇಸತ್ತಿತ್ತು.ಕೊನೆಗೆ ಹುಡುಗಿಯ ಅಣ್ಣ ಅದರ ಸಾಂತ್ವನಕ್ಕೆ ಮುಂದಾಗುತ್ತಾನೆ, ಎಲ್ಲೈತಮ್ಮ ತೋರ್ಸು ಎಂದಾಗ ಕಾಟಾದ ಮೂಲೆಯನ್ನು ತೋರಿಸಿತು. ಕೊನೆಯಲ್ಲಿ ಕಸದ ರಾಶಿಯಲ್ಲಿ ಸಿಕ್ಕ ಚಮಚದಿಂದ ನೆಮ್ಮದಿ ಸಿಗುವ ಅಬುಚಮ್ಮಳ ಕಥೆ ಓದುಗರ ಮನ ಗೆಲ್ಲುತ್ತದೆ.
ಕಾವೇರಮ್ಮ ಸರಳ ಸುಂದರ ಕಥೆಯಾಗಿದ್ದು ನಿತ್ಯ ಜೀವನದಲ್ಲಿ ನಡೆಯುವ ಘಟನೆಯೆ ಆಗಿದ್ದು ಕಾವೇರಮ್ಮನ ಮಗ ವೃತ್ತಿಯಿಂದ ಪೋಲಿಸ ಅಧಿಕಾರಿಯಾಗಿದ್ದಾನೆ. ಮಗನೆಂದರೆ ಮಮಕಾರ ಆ ತಾಯಿಗೆ. ಆ ಊರಿಗೆ ಅವನೊಬ್ಬನೆ ನೌಕರಸ್ಥ ಎಂಬುದನ್ನು ಕಥೆಗಾರ ಎಚ್ಚರಿಸುವ ಸಂದೇಶ ಹಳ್ಳಿಗಳಲ್ಲಿಯೂ ಕೂಡಾ ವಿದ್ಯಾವಂತರಿದ್ದಾರೆ ಎಂಬುದನ್ನು ತೋರಿಸಿಕೊಡುತ್ತದೆ.
ಕಾವೇರಮ್ಮನ ಮಗನಿಗೆ ಮದುವೆಯಾಗಿ ನಂತರ ಆತ ಊರನ್ನೆ ಮರೆಯುತ್ತಾನೆ.ತಾಯಿಯು ಆಗಾಗ ಹೋಗಿ ಬರುವುದು ,ಮಗನ ಅಕ್ಕರೆಯಿಂದ ತಾಯಿ ವಂಚಿತಳಾಗಿ ಕೊನೆಗೆ ಮಗನ ಹತ್ತಿರ ಹೋಗಲೆ ಬಾರದೆಂಬ ಧೃಡನಿರ್ಧಾರಕ್ಕೆ ಬಂದರೂ ಮೊಮ್ಮಕ್ಕಳ ಬಾಂಧವ್ಯ ಆ ಕಡೆ ಎಳೆಯುತ್ತದೆ.ಅತ್ತೆಯನ್ನು ಮನೆಯ ಕೆಲಸದವಳಂತೆ ನೋಡಿಕೊಂಡ ಸೊಸೆಯು ಕೊನೆಯಲ್ಲಿ ಊರು ಸುತ್ತುವ ನೆಪದಲ್ಲಿ ಅತ್ತೆಯನ್ನು ನಂಬಿಸಿ ಧನ್ನೂರು ಹೊಳೆಯಲ್ಲಿ ತಳ್ಳಿ ಜಾರಿ ಬಿದ್ದಳೆಂದು ನಂಬಿಸುವ ಕಪಟತನವನ್ನು ಮಗುವಿನ ಮಾತಿನಲ್ಲಿ ಎತ್ತಿ ತೋರಿಸುವ ಜಾಣ್ಮೆ ಅಸಾಮಾನ್ಯ ಕಥೆಗಾರರಿಗೆ ಮಾತ್ರ ಸಾಧ್ಯವಾಗುತ್ತದೆ.
ಮಾತಿನಬೆನ್ನು ಹತ್ತಿ ಕಥೆಯಲ್ಲಿ ಹೆರಿಗೆಗಾಗಿ ತವರಿನಲ್ಲಿ ರೇವತಿ ಗಂಡನಿಗಾಗಿ ಕಾಯುವ ಹಪಾಹಪಿ,ಹೊಲದ ಕೆಲಸದಲ್ಲಿ ಮಗ್ನನಾಗಿ ಕೊನೆಗೆ ಬರುತ್ತೆನೆ,ಬರುತ್ತೆನೆ ಎಂದು ದಿನ ತಳ್ಳಿ ಬರುವಾಗ ಆಕಸ್ಮಾತ ಅಪಘಾತವಾಗಿ ಸಾಯುವ ದುಃಸ್ಥಿತಿ ಎದುರಾಯಿತು. ಇತ್ತ ಅವಳಿಗೆ ಪ್ರಸವ, ಸೂಲಗಿತ್ತಿಯ ನಂಜಮ್ಮನ ನಗೆಚಾಟಿಕೆಯಲ್ಲಿ ತೇಲುತ್ತ ತನ್ನನ್ನೆ ತಾ ಮರೆತಿದ್ದಾಳೆ.ಗಂಡ ಅವಸರದಲ್ಲಿ ಬರುವಾಗ ಇಹಲೋಕ ತ್ಯೆಜಿಸಿದ್ದು ಆಕಗೆ ಗೊತ್ತಿಲ್ಲದೆ ಹೋದದ್ದು ಎಂತಹ ವಿಪರ್ಯಾಸ.
ಕಣ್ಣುಗಳು ಅವಳನ್ನೆ ತುಂಬಿಕೊಳ್ಳುತ್ತಿದ್ದವು ಕಥೆ ಪ್ರೇಮದ ಪರಿಯನ್ನು ಬಿಚ್ಚಿಡುತ್ತದೆ. ಕಥೆಯಲ್ಲಿ ನಾಯಕಿ ಐಎಎಸ್ ಅಧಿಕಾರಿ ನಾಯಕ ಅರೆಹುಚ್ಚ, ಹೈಸ್ಕೂಲ ಟೀಚರ ಆದಾಗಿನಿಂದ ಆಕೆಯನ್ನು ಮನಸಾರೆ ಪ್ರೀತಿಸಿ ಕೊನೆಗೆ ಕೈಗೆ ಸಿಗದೆ ಆಕೆ ಬೇರೊಬ್ಬನನ್ನು ಇಷ್ಟಪಟ್ಟು ಮದುವೆಯಾಗಿ ಕೊನೆಗೆ ಇತನೆ ಅವಳನ್ನು ಹುಡುಕಿಕೊಂಡು ಮಾತನಾಡಿಸಿ ಹೋಗುವ ಸ್ಥಿತಿ ಓದುಗರಿಗೆ ಕಂಬನಿ ಉಕ್ಕಿಸುತ್ತದೆ. ಅಲ್ಲಿಂದ ಏನು ಕೊಟ್ಟರೂ ಬೇಡವೆನ್ನುವ ಆತ ಹಾಗೆ ನಿರ್ಗಮಿಸುತ್ತಾನೆ.
ಹೊರಗಡೆ ದಾರಿಯಲ್ಲಿ ಗಿಡದ ಹತ್ತಿರ ಕುಳಿತಾಗ ಪೋಲಿಸರ ಈತನ ಬಳಿಗೆ ಬಂದು ಇನ್ನೊಬ್ಬ ಎಲ್ಲಿ…? ಎಂಬ ಪ್ರಶ್ನೆ ಕೇಳಿ ಶೂಟ್ ಮಾಡುವ ದೃಶ್ಯ ಎದೆ ಝಲ್ಲೆನಿಸುತ್ತದೆ.ಆಗಲೂ ಕಣ್ಣುಗಳು ಅವಳನ್ನೆ ತುಂಬಿಕೊಳ್ಳುತಿದ್ದವೆಂಬ ಅಸಹನೀಯ ದನಿಯಲ್ಲಿ
ಅಮಾಯಕನ ಮನಸಿನ ನುಡಿಗಳನ್ನು ವರ್ಣಿಸುವ ಪರಿ ಅದ್ಬುತ.
ಭೂಮಿ ಇದೊಂದು ಮಹಿಳಾಪರ ಕಥೆಯಾಗಿದ್ದು ಗಂಡು ಸಂತಾನಕ್ಕಾಗಿ ಸಿದ್ದಮ್ಮ ಮತ್ತು ಗಿರೆಪ್ಪ ಹುಟ್ಟಿದ ಹೆಣ್ಣು ಮಕ್ಕಳನೆಲ್ಲ ಒಂದೊಂದಾಗಿ ಕರುಣೆಯಿಲ್ಲದೆ ಕೊಲ್ಲುವುದು ಒಂದು ಪ್ರವೃತ್ತಿಯಂತೆ, ಮೊದಮೊದಲು ನಿಧಿ ಹುಡುಕುವ ನೆಪದಲ್ಲಿ ಮಗಳನ್ನು ಕರೆದೊಯ್ವ ತಂದೆ ಕೊನೆಗೆ ತೋಡಿದ ಗುಂಡಿಯಲ್ಲಿ ಮಗಳನ್ನೆ ಮುಚ್ಚುವ ಕ್ರೂರವೃತ್ತಿಗೆ ಇಳಿವಲ್ಲಿ
ಓದುಗನಿಗೆ ಛೇ…ಹೀಗಾಗಬಾರದಿತ್ತು? ಎನ್ನುವ ಭಾವ ಮೂಡುತ್ತದೆ. ಗಂಡು ಮಗುವಿಗಾಗಿ ಈ ಸಮಾಜ ಏನೆಲ್ಲ ಮಾಡಿಸುತ್ತದೆ ಎನ್ನುವುದನ್ನು ಸುಂದರ ಕಥೆಯ ಮೂಲಕ ಹೆಣೆದು ಕೊಟ್ಟಿದ್ದಾರೆ.
ನಿಮ್ಮೊಳಗಿನ ಕಥೆಯಲ್ಲಿ ಮೋಹನ ಎಂಬ ಕಥಾಕಾರರ ಅಭಿಮಾನಿಯಾಗಿದ್ದ ರೂಪಾ ಹುಡುಕಿ ಹೊರಡುವ ಕಥೆ ಮುಂದೆ ಸಂಭಾಷಣೆಗಿಳಿದು ತನ್ನ ಸಾಹಿತ್ಯ ಜೀವನದ ಬಿಚ್ಚುತ್ತ ಕೊನೆಗೆ ಅವಳನ್ನು ಕೈಸವರುವ ಜಾಯಮಾನಕ್ಕಿಳಿವ ಸಂಗತಿ ಎದುರಾಗುತ್ತದೆ. ರೂಪಾ ” ನಾನಂತ ಹೆಣ್ಣಲ್ಲ ” ಎನ್ನುತ್ತ ಹೊರಡುತ್ತಾಳೆ. ನೀನಿನ್ನು ನನ್ನ ಮರೆತಿಲ್ಲ ಎನ್ನುವಲ್ಲಿ ರೂಪಾಳಿಗೆ ನನ್ನ ಮಗನ ಹಾಗೂ ಮನೆಯ ಹೆಸರು ಮೋಹನ ಎಂದಿಟ್ಟಿರುವೆ ನಿನ್ನೊಳಗಿನ ಕಾಮುಕನನ್ನು ನಾ ಮರೆಯಲು ಅಸಾಧ್ಯವೆಂದು,ಹೇಳುವ ಕಥೆಗಾರರು ಒಂಟಿಯಾಗಿ ಸಿಕ್ಕ ಸಮಯದಲ್ಲಿ ಮನಸು ಕೈಜಾರಬಾರದೆನ್ನುವ ಸಂದೇಶ ಕೊನೆಯಲ್ಲಿ ಕೊಟ್ಟಿದ್ದಾರೆ.
ಸೇಡು ಕಥೆಯಲ್ಲಿ ಸಿದ್ದವ್ವ ಮತ್ತು ಬೈರನ ಸುಂದರ ಸಂಸಾರದಲ್ಲಿ ಬೈರನನ್ನು ತೊರೆದು ಎಮ್ಮಿಯನ್ನು ಸಾಕಿ ಹಾಲು,ಮೊಸರು, ತುಪ್ಪ ಮಾರಿ ಗಟ್ಟಿಗಿತ್ತಿಯಂತೆ ಬದುಕಿದ ಸಿದ್ದವ್ವಳನ್ನು ಬಲಾತ್ಕಾರ ಮಾಡಿದ ಸಂಗಪ್ಪಗೌಡನನ್ನು ಕುಡಗೋಲಿಂದ ಕೊಚ್ಚಿ ಕೊಲ್ಲುವ ಪ್ರಸಂಗವನ್ನು ಬಹಳ ಸೊಗಸಾಗಿ ಚಿತ್ರಿಸಿದ್ದಾರೆ, ಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿ ಎನ್ನುವ ಚಿತ್ರಣವನ್ನು ಸೇಡು ಕಥೆಯಲ್ಲಿ ಬಿತ್ತರಿಸಿದ್ದಾರೆ.
ಜೀವನ್ಮುಕ್ತಿ ಕಥೆಯಲ್ಲಿ ಪ್ರೀತಿಯನ್ನುನಂಬಿ ಹೊರಟವಳಿಗೆ ಸಿಕ್ಕಿದ್ದು ವೇಶ್ಯೆಯಂಬ ಪಟ್ಟ ಅಲ್ಲಿಂದ ಹೊರಗೆ ಬರಲು ಮಾಡಿದ ಪ್ರಯತ್ನ ಕೊನೆಗೆ ಹರಿಚಂದನಯೆಂಬ ವ್ಯೆಕ್ತಿಯಿಂದ ಹೊರಬಂದು ತಾನಿದ್ದ ಸ್ಥಳಕ್ಕೆ ಹೋದಾಗ ಆಕೆ ಪಡುವ ವ್ಯಥೆ, ಒಳಗಿನ ಹೇಳತೀರದ ಸಂಕಟ , ಕರುಳು ಹಿಚುಕುತ್ತವೆ ಸ್ವತಃ ತಮ್ಮನಾದವನೆ ಅವಳ ನೇಣು ಹಾಕುವ ಸಂದರ್ಬವೆದುರಾಗಿ ಕೊನೆಗೆ ಜೀವ ಕಳೆದುಕೊಳ್ಳುವ ಕ್ಷಣದಲ್ಲಿ ಮತ್ತೆ ಜೀವ ಚಿಗುರಿತು ಅದು ಕೇವಲ ಕ್ಷಣಿಕ ಅಷ್ಟೆಯೆಂಬ ನಿದರ್ಶನದೊಂದಿಗೆ ಮನೆಬಿಟ್ಟು ಹೋದವಳ ದುರಂತ ಕಥೆಯನ್ನು ಜೀವನ್ಮುಕ್ತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
ಉಯಿಲು ಕಥೆಯು ಇದಕ್ಕೆ ಹೊರತಾಗಿಲ್ಲ ಹಣ ,ಆಸ್ತಿ, ಸಂಪತ್ತು ಎಲ್ಲರನ್ನೂ ಏನು ಬೇಕಾದರೂ ಮಾಡಿಸುವ ಜಗತ್ತು. ಶಿವಶಂಕರಗೌಡರ ಕಾಲದಿಂದಲೂ ತಿಮ್ಮಣ್ಣ ಆಳಾಗಿ ದುಡಿಯುತ್ತಿದ್ದವನು, ಅವನ ಹೆಸರಿಗೆ ಎಂಟುನೂರು ಕೋಟಿ ಆಸ್ತಿ ಉಯಿಲು ಬರೆದದ್ದು ಗೌಡರ ಮಗನಿಗೆ ಒಳಗೊಳಗೆ ಖೇದವಿತ್ತು, ಇದಕ್ಕಾಗಿ ತಿಮ್ಮಣ್ಣ ಅದರ ಮೇಲೆ ಎಳ್ಳಷ್ಟು ಆಸೆಯಿರದೆ ಅವನಿಗೆ ಒಪ್ಪಿಸಿ, ನಮ್ಮ ಕುಟುಂಬವನ್ನೆ ನಾಶಮಾಡಿದ ಈ ಆಸ್ತಿ ನಮಗೆ ಬೇಡವೆಂದು ಮರಳಿ ನೀಡುವ ನಾವು ಹೀಗೆ ಇರುತ್ತೇವೆ ಎನ್ನುವ ಉದಾರತನ ಎತ್ತಿ ತೋರುತ್ತಾನೆ.
ಬದುಕು ಕಥೆಯಲ್ಲಿ ದಿನನಿತ್ಯ ಸೂಜಿ,ಪಿನ್ನು ,ಡಬ್ಬಣ ಮಾರುವವರ ಕಥೆಯನ್ನು ತುತ್ತು ಅನ್ನಕ್ಕಾಗಿ, ಪುಡಿಗಾಸಿಗಾಗಿ ಪರದಾಡುವ ಸ್ಥಿತಿ ಅವರ ನೋವು ನಲಿವುಗಳನ್ನು ಬಿಚ್ಚಿಡುತ್ತಾರೆ. ಕೊನೆಗೆ ಅವರ ಹದಿನಾರು ವರ್ಷದ ಮಗನ ಕಿಡ್ನಿ ಆಪರೇಶನಗೆ ಹಣ ಹೊಂದಿಸಲಾಗದೆ ಕಳೆದುಕೊಳ್ಳುವ ಹೃದಯ ಹಿಂಡುವ ಚಿತ್ರಣ ಎದುರಾಗುವ ಸನ್ನಿವೇಶ ಕಣ್ಣಲ್ಲಿ ನೀರು ತುಂಬಿಸುತ್ತದೆ. ಹತ್ತಿಪ್ಪತ್ತು ದುಡಿವವರಿಗೆ ದೊಡ್ಡ ರೋಗ ಬಂದರೆ ಏನಾಗುತ್ತದೆನ್ನುವ ವಾಸ್ತವತೆಯಲ್ಲಿ ಕವಿ ಕಥೆ ಹೆಣೆದಿದ್ದಾರೆ.
ವಿಧಿ ಕಥೆಯಲ್ಲಿ ಹೊಯ್ಸಳೇಶ್ವರನ ಚರ್ಮ ಸುಲಿಯುವ ಘಟನೆ ಸುಲ್ತಾನನ ಕರಾಳ ಮುಖವನ್ನು ಓದುಗನಿಗೆ ಬಿಚ್ಚಿಡುತ್ತದೆ. ಪರಸ್ಪರ ಸಂಧಾನ ಮಾಡಿಕೊಂಡು ಕೊನೆಗೆ ದೊಪ್ಪನೆ ಎರಗಿ ಹೊಯ್ಸಳರ ಸೈನ್ಯವನ್ನೆ ದಿಕ್ಕಾಪಾಲು ಮಾಡುವ ಸಂಚು ಬಲ್ಲಾಳನಿಗೆ ಗೊತ್ತಾಗದೆ ಕೊನೆಗೆ ಸುಲ್ತಾನನ ಕ್ರೌರ್ಯವೆ ವಿಜೃಂಭಿಸುತ್ತದೆ. ಬಹುಶಃ ಇದು ವಿಧಿಲಿಖಿತ ಎನ್ನುವಷ್ಟರ ಮಟ್ಟಿಗೆ ಕವಿ ಕಥೆ ಕಟ್ಟುವಲ್ಲಿ ಯಶಸ್ವಿಯಾಗಿದ್ದಾನೆ.
ಒಟ್ಟಿನಲ್ಲಿ ಅಬುಜಾ ಅಬುಜಾ ಕಥೆ ಓದುಗರನ್ನು ಮತ್ತೊಂದು ಲೋಕಕ್ಕೆ ಕರೆದೊಯ್ಯುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಇಲ್ಲಿನ, ಸಿದ್ದಮ್ಮ, ಕೌಶಲ್ಯಬಾಯಿ, ತಿಮ್ಮಣ್ಣ,ದೇವಪ್ಪ, ಗಿರೆಪ್ಪ,ಧರಣೀಶ, ಹರಿಚಂದನ್ ಇವರೆಲ್ಲ ಜೀವಂತ ಪಾತ್ರಗಳಾಗಿ ಕಣ್ಮುಂದೆ ನಿತ್ಯವೂ ಓಡಾಡುವಂತೆ ಭಾಸವಾಗುತ್ತದೆ. ಈ ಕಥಾಸಂಕಲನ ನಾಡಿನ ಇನ್ನಷ್ಟು ಓದುಗರ ಮನಗೆಲ್ಲಲಿ ಎಂದು ಆಶಿಸುತ್ತೇನೆ…
ಶಂಕರಾನಂದ ಹೆಬ್ಬಾಳ




