ಕಾವ್ಯ ಸಂಗಾತಿ
ಎಮ್ಮಾರ್ಕೆ
ಗಜಲ್


ದೂರಾದವಳ ಮೇಲೆ ದೂರೊಂದ ನೀಡಬೇಕಿತ್ತು
ಮೌನವಾದವಳ ಜತೆ ಮಾತೊಂದ ಆಡಬೇಕಿತ್ತು
ಇಟ್ಟ ಹೆಜ್ಜೆ ಕೊಟ್ಟ ಭಾಷೆ ಅರ್ಥ ಕಳೆದುಕೊಂಡಿವೆ
ಕಟ್ಟಿದ ಕಾಲ್ಗೆಜ್ಜೆಯದು ಸದ್ದೊಂದ ಮಾಡಬೇಕಿತ್ತು
ಪ್ರಮಾಣಿಸಿ ನೋಡದುದರ ಪರಿಣಾಮ ಘೋರ
ಬರಿಗಣ್ಣಿಂದಲ್ಲ ಎದೆಯ ಕಣ್ಣಿಂದ ನೋಡಬೇಕಿತ್ತು
ಗೂಡು ತೊರೆದ ಹಕ್ಕಿಗಂತೂ ಹೇಳತೀರದ ಪಾಡು
ನೋವ ಮರೆಸುವಂತ ಹಾಡೊಂದ ಹಾಡಬೇಕಿತ್ತು
ಅವಳ ಆ ನಿಮಿಷ ಕುಂಬಾರನಿಗೆ ವರುಷವೇ ಸರಿ
ಕಳೆದ ನೆನಹು ಬಿಡದೇ ಒಂದೊಂದ ಕಾಡಬೇಕಿತ್ತು
ಎಮ್ಮಾರ್ಕೆ




